ಚಿತ್ರದುರ್ಗ :
ಜಾಗತಿಕ ಲಿಂಗಾಯತ ಮಹಾಸಭಾದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ಘಟಕದ ಪದಾಧಿಕಾರಿಗಳು ಹೊರತಂದಿರುವ ೨೦೨೬ರ ತೂಗು ದಿನದರ್ಶಿಕೆ (ಕ್ಯಾಲೆಂಡರ್)ಯನ್ನು ಇಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಲಿಂಗಾಯತ ಧರ್ಮ, ಅದರ ಉದ್ಧೇಶ, ಅದರಿಂದಾಗುವ ಉಪಯೋಗ ಸೇರಿದಂತೆ ವೈಚಾರಿಕ ನಿಲುವುಗಳ ವಿಶೇಷ ಮಾಹಿತಿ ಇದೆ ಎಂದು ತಿಳಿಸಿ ಸ್ವಾಮೀಜಿ ದಿನದರ್ಶಿಕೆ ಬಿಡುಗಡೆಗೊಳಿಸಿ ನುಡಿದರು.
ಈ ದಿನದರ್ಶಿಕೆಯಲ್ಲಿ ೧೨ ತಿಂಗಳ ದಿನಾಂಕ ಸಾಂಕೇತಿಕವಾಗಿದ್ದು, ರಾಷ್ಟ್ರೀಯ ಹಾಗೂ ರಾಜ್ಯದ ಹಬ್ಬಗಳು ಹಾಗೂ ಶರಣ ಜಯಂತಿಗಳು ಅಷ್ಟೇ ನಮೂದಿಸಲಾಗಿದೆ. ಉಳಿದಂತೆ ಜನವರಿ ತಿಂಗಳಲ್ಲಿ ಬಸವಸಂಸ್ಕೃತಿ ಅಭಿಯಾನದ ಉದ್ಧೇಶಗಳಾದ ಸ್ತ್ರೀ-ಪುರುಷ ಸಮಾನತೆ, ಬಸವಣ್ಣನವರ ಜಾತ್ಯಾತೀತ ಭಾರತದ ಕಲ್ಪನೆ, ದಾಸೋಹತತ್ತ್ವ ಹಾಗೂ ಕಾಯಕವೇ ಕೈಲಾಸ ವಿಚಾರಗಳ ಬಗ್ಗೆ ಮಾಹಿತಿ ಇದೆ.
ಫೆಬ್ರವರಿ ತಿಂಗಳಲ್ಲಿ ಬಸವಾದಿ ಶರಣರ ದೃಷ್ಟಿಯಲ್ಲಿ ದೇವರು ಎಂದರೆ ಯಾರು? ಅವರು ಸ್ಥಾವರವನ್ನು ಏಕೆ ಕೈಬಿಟ್ಟು ಇಷ್ಟಲಿಂಗಕ್ಕೆ ಮಹತ್ವ ಕೊಟ್ಟರೆಂಬ ವಿಚಾರ, ಮಾರ್ಚ್ ತಿಂಗಳಲ್ಲಿ ಲಿಂಗಾಯತ ಧರ್ಮದ ಬಗ್ಗೆ ಉಲ್ಲೇಖವಿದೆ.
ಎಪ್ರಿಲ್‌ನಲ್ಲಿ ೧೨ನೇ ಶತಮಾನದಲ್ಲಿ ಬಸವಾದಿ ಶರಣರು ತಳಸಮುದಾಯವನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ ವಿಚಾರವಿದೆ. ಮೇ ತಿಂಗಳಲ್ಲಿ ೧೨ನೇ ಶತಮಾನದ ಎಲ್ಲರ ಪ್ರೀತಿಯ ಮತ್ತು ಚುಂಬಕ ಶಕ್ತಿಯಾಗಿ ಕಲ್ಯಾಣಕ್ಕೆ ನಾಡಿನೆಲ್ಲೆಡೆಯಿಂದ ಕರೆಯಿಸಿಕೊಂಡ ಬಸವಣ್ಣನವರ ಬಗ್ಗೆ ಮಾಹಿತಿ, ಜೂನ್ ತಿಂಗಳಲ್ಲಿ ಬಸವಣ್ಣನವರು ದೇವರೇ, ಪವಾಡ ಪುರುಷರೆ? ಹೀಗೆ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲುವ ವಿವರವಿದೆ.
ಜುಲೈ ತಿಂಗಳಲ್ಲಿ ಲಿಂಗಾಯತ ಧರ್ಮದ ಅಡಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡುತ್ತಿರುವ ಬಗ್ಗೆ, ಆ ಬಗ್ಗೆ ಪ್ರಯೋಜನ, ಸೌಲಭ್ಯ ಹಾಗೂ ಧಾರ್ಮಿಕ ವಿಚಾರವಾಗಿ ವಿವರ ನೀಡಲಾಗಿದ್ದು, ಆಗಸ್ಟನಲ್ಲಿ ದೇವರ ಹೆಸರಲ್ಲಿ ಪ್ರಾಣಿಬಲಿ ಕೊಡುವುದು ಎಷ್ಟು ಸರಿ ಎಂಬುದಿದೆ.
ಸೆಪ್ಟೆಂಬರ್‌ನಲ್ಲಿ ಕೆಲಮಾನವರು ತಾವು ನಂಬಿರುವ ತಮ್ಮ ಸುಖ ದುಃಖಗಳಿಗೆ ಗ್ರಹಗಳ ಪ್ರಭಾವ ಕಾರಣವೆ? ಎಂಬ ಬರಹವಿದೆ. ಅಕ್ಟೋಬರ್‌ನಲ್ಲಿ ರಾಶಿ ಚಕ್ರದ ಬಗ್ಗೆ ವೈಜ್ಞಾನಿಕ ವಿವರಣೆಯೂ ಇದೆ. ನವೆಂಬರ್ ತಿಂಗಳಲ್ಲಿ ವಾಸ್ತು ಎಂಬ ವಿಚಾರವಾಗಿ ಎನ್. ಶಂಕರಪ್ಪ ಅವರ ವಿಚಾರವಿದೆ. ಇನ್ನು ಡಿಸೆಂಬರ್‌ನಲ್ಲಿ ಕಾಯಕ ಆಧಾರಿತ ಲಿಂಗಾಯತ ಧರ್ಮದ ೧೦೨ ಪಂಗಡಗಳ ಪಟ್ಟಿ ಮುದ್ರಿಸಲಾಗಿದೆ. ದಿನದ ದಿನಾಂಕದ ಜತೆಗೆ ಒಂದು ಉಪಯುಕ್ತ ಮಾಹಿತಿ ನೀಡಿ ಮಾಹಿತಿ ತಿಳಿದುಕೊಳ್ಳಲು ಸಹಕಾರಿಯಾಗಿದೆ.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಜೆ. ಮಲ್ಲೇಶ ರೇಷ್ಮೆ ರಾಜ ಉಪಾಧ್ಯಕ್ಷರಾದ ಚಂದ್ರಪ್ಪ, ಪ್ರಧಾನ ಕಾರ‍್ಯದರ್ಶಿ ಎಂ. ರಂಗನಾಥ್, ಖಜಾಂಚಿ ಮುರುಘೇಶ, ನಿರ್ದೇಶಕರಾದ ಬಸವರಾಜ, ಮಹಾಲಿಂಗಪ್ಪ, ಮಂಜುನಾಥ, ಜಗದೀಶ್ವರಪ್ಪ ಸೇರಿದಂತೆ ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಬಸವರಾಜ ಕಟ್ಟಿ ಹಾಗೂ ಜಿ.ಟಿ. ನಂದೀಶ ಉಪಸ್ಥಿತರಿದ್ದರು.

ಈ ದಿನದರ್ಶಿಕೆಯನ್ನು ಹೇಗೆ ಪಡೆಯುವುದು?