ಕೂಡಲಸಂಗಮ :
ಅಧಿಕಾರಶಾಹಿ ವ್ಯವಸ್ಥೆಯ ದುರಾಡಳಿತ ಹಾಗೂ ಬಸವತತ್ವ ವಿರೋಧಿಗಳಿಂದಾಗಿ ಕೂಡಲಸಂಗಮ ಬಸವ ಅಂತಾರಾಷ್ಟ್ರೀಯ ಕೇಂದ್ರದ ಕಾಮಗಾರಿ ಹಿಂದೆ ಬಿದ್ದಿರುವುದನ್ನು ಮಾಜಿ ಸಚಿವ ಎಸ್.ಆರ್.ಪಾಟೀಲ ಖಂಡಿಸಿದರು.
ಕೂಡಲಸಂಗಮ ಬಸವ ಧರ್ಮ ಪೀಠ ಆವರಣದಲ್ಲಿ ಬುಧವಾರ ನಡೆದ ೩೯ನೇ ಶರಣ ಮೇಳದ ಲಿಂಗಾಯತ ಧರ್ಮ ಸಂಸ್ಥಾಪನ ದಿನ ಹಾಗೂ ಬಸವ ಕ್ರಾಂತಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಿಂದೆ ಹಾಗೂ ಇಂದು ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯನವರಿಗೆ, ಅಂದು ನಾನು ಒತ್ತಡ ತಂದು ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಬಸವ ಅಂತಾರಾಷ್ಟ್ರೀಯ ಕೇಂದ್ರ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಒತ್ತಡ ತಂದು ೧೩೯ ಕೋಟಿ ಅನುದಾನ ಬಿಡುಗಡೆ ಮಾಡಿದೆವು.
ಅಂದು ಸರ್ಕಾರ ಕೊಟ್ಟ ಹಣವನ್ನು ಅಧಿಕಾರಿಶಾಹಿ ವ್ಯವಸ್ಥೆ, ಬಸವತತ್ವ ವಿರೋಧಿಗಳ ಕುತಂತ್ರದಿಂದಾಗಿ ಕಾಮಗಾರಿ ಮುಗಿಯುತ್ತಿಲ್ಲ. ಶೇ ೧೦ರಷ್ಟು ಮಾತ್ರ ಕೆಲಸ ಆಗಿದೆ. ನಾವೆಲ್ಲರೂ ಸರ್ಕಾರದ ಗಮನಕ್ಕೆ ತಂದು ಬೇಗನೆ ಕಾಮಗಾರಿ ಮುಗಿಸುವಂತೆ ಮಾಡಬೇಕು. ಈ ಕೇಂದ್ರ ನಿರ್ಮಾಣದಿಂದ ಶರಣರ ತತ್ವಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪುತ್ತವೆ.

ಶರಣರ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶರಣ ಮೇಳ ಮಾದರಿಯಾಗಿದೆ. ಬಹುದೇವತಾರಾಧನೆಯನ್ನು ಅಲ್ಲಗಳೆದು ಏಕದೇವೋಪಾಸನೆ ಜಾರಿಗೆ ತಂದು, ಜಾತಿ ಪದ್ದತಿ ನಿರ್ಮೂಲನೆ ಮಾಡಿದರು. ಅಂದು ಶರಣರು ಸಮಸಮಾಜದ ಕಲ್ಯಾಣ ಚಿಂತನೆ ಮಾಡಿದರು.
ಇಂದು ನಾವು ಕುಟುಂಬ, ಜಾತಿ ಚಿಂತನೆ ಮಾಡುವ ಮೂಲಕ ಸಂಕುಚಿತರಾಗಿರುವುದು ದುರಂತ. ವಚನ ಸಾಹಿತ್ಯ ಅಧ್ಯಯನದ ಮೂಲಕ ವಿಶಾಲ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದರು.

ಲಿಂಗಾನಂದ ಸ್ವಾಮೀಜಿಯವರ ಸ್ಮರಣಾರ್ಥ ನೀಡುವ ೨೦೨೬ರ ಸ್ವಾಮೀ ಲಿಂಗಾನದ ಶ್ರೀ ಪ್ರಶಸ್ತಿಯನ್ನು ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಅವರಿಗೆ ನೀಡಿ ಸತ್ಕರಿಸಲಾಯಿತು. ಪ್ರಶಸ್ತಿಯು ಒಂದು ಲಕ್ಷ ರೂ. ಹಣ, ಸ್ಮರಣ ಫಲಕ ಹೊಂದಿದೆ. ಪ್ರಶಸ್ತಿ ಸ್ವೀಕರಿಸಿ ಗೊರುಚ ಮಾತನಾಡಿ, ಇಂದು ಸನಾತನ ವೈದಿಕ ಮನಸ್ಸುಗಳು ಹಾಕುವ ಪ್ರಶ್ನೆಗಳಿಗೆ ಅಂದೆಯೇ ಬಸವಣ್ಣ ಉತ್ತರ ನೀಡಿದ್ದಾನೆ.
ಇಲ್ಲಿ ನಡೆಯುತ್ತಿರುವುದು ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನ ವಿಚಾರಗಳನ್ನು ಅನುಷ್ಠಾನಗೊಳಿಸುವ ಜಾಗೃತ ಶರಣರ ಮೇಳವೇ ಶರಣ ಮೇಳ, ಕುಂಬ ಮೇಳ ಅಲ್ಲ.
ಬಸವ ಧರ್ಮ ಪೀಠ ಸ್ಥಾಪನೆಗೂ ಮುಂಚೆ, ನಂತರ ಅನೇಕ ಸಂಘ ಸಂಸ್ಥೆಗಳು ಹುಟ್ಟಿವೆ. ಕೆಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೂ ಕೆಲವು ಅಂತ್ಯ ಖಂಡಿವೆ. ಬಸವಧರ್ಮ ಪೀಠ ಅಂದಿನಿಂದ ಇಂದಿನವರೆಗೂ ತತ್ವ ಸಿದ್ದಾಂತದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ, ಶರಣರ ತತ್ವಗಳನ್ನು ನಾಡಿಗೆ ಪರಿಚಯಿಸುತ್ತಿದೆ.

ಇಂದು ಆಧ್ಯಾತ್ಮಿಕ ಕೊರತೆಯಿಂದ ಸಮಾಜದಲ್ಲಿ ಹಲವು ಅನಾಹುತಗಳು ಆಗುತ್ತಿವೆ. ಅವುಗಳನ್ನು ತಡೆಯಲು ವಚನ ಸಾಹಿತ್ಯ ಅಧ್ಯಯನ ಅಗತ್ಯ. ಮುಗ್ದ ಜನರು ದ್ರೋಹ, ಮೋಸ ಮಾಡಲ್ಲ. ಕಲಿತವರಿಂದಲೇ ಮೋಸ ಅಧಿಕವಾಗುತ್ತಿದೆ ಎಂದರು.
ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಮಾತನಾಡಿ, ಸನಾತನವಾದಿಗಳ ಒತ್ತಡದಿಂದ ಕೂಡಲಸಂಗಮ ಬಸವ ಅಂತಾರಾಷ್ಟ್ರೀಯ ಕೇಂದ್ರದ ಕಾಮಗಾರಿ ಮುಗಿಯದೆ ಇರುವುದು ದುರಂತ. ೨೫ ವರ್ಷದಿಂದ ನಡೆದಿರುವ ಕಾಮಗಾರಿ ಮುಕ್ತಾಯಗೊಳ್ಳುವುದು ಯಾವಾಗ? ಮುಖ್ಯಮಂತ್ರಿಗಳು ಪರಿಶೀಲಿಸಿ, ಬೇಗನೆ ಕಾಮಗಾರಿ ಮುಗಿಸಿ, ಜನರಿಗೆ ಮುಕ್ತಗೊಳಿಸುವ ಕಾರ್ಯ ಮಾಡಬೇಕು ಎಂದರು.

ಸಮಾರಂಭದಲ್ಲಿ ಬೆಂಗಳೂರು ಸ್ಕೌಟ್ಸ್ ಮತ್ತು ಗೈಡ್ಸ ಕೇಂದ್ರದ ಆಯುಕ್ತೆ ಮುಕ್ತಾ ಕಾಗಲೆ ಅವರಿಗೆ ವಿಶೇಷ ಸತ್ಕಾರ ನಡೆಯಿತು. ಬೆಂಗಳೂರು ಜನಸ್ನೇಹಿ ಚಾರಿಟೆಬಲ್ ಟ್ರಸ್ಟನ ಸಂಸ್ಥಾಪಕ ಯೋಗೇಶ್ ಅವರಿಗೆ ಕಾಯಕ ಕಲಿ ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಪತ್ರಕರ್ತ ರಹಮತ್ ಕಂಚಗಾರ, ಬಸವ ಧರ್ಮ ಪೀಠದ ಮಹದೇಶ್ವರ ಸ್ವಾಮೀಜಿ, ಹುಲಸೂರು ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಮಾತೆ ವಿಜಯಾಂಬಿಕೆ ಮುಂತಾದವರು ಇದ್ದರು. ಸಹಸ್ರಾರು ಶರಣ ಬಳಗ ಸೇರಿತ್ತು.
