ವಚನಗಳಂತೆ ಮುನ್ನಡೆದರೆ ಜೀವನ ಸಾರ್ಥಕ
ಹುನಗುಂದ:
ಧರ್ಮದ ಅರಿವು ಇಲ್ಲದವರು ಬಸವಣ್ಣನವರ ಬಗ್ಗೆ ಮಾತನಾಡುತ್ತಾರೆ. ಬಸವಣ್ಣನವರ ವಚನಗಳನ್ನು ಅರ್ಥ ಮಾಡಿಕೊಂಡು ಮುನ್ನಡೆದಾಗ ಜೀವನ ಸಾರ್ಥಕವಾಗುತ್ತದೆ ಎಂದು ಧಾರವಾಡ ಜಿಲ್ಲೆಯ ಸತ್ತೂರಿನ ಸೂಫಿ ಸಂತ ಅಬ್ದುಲ್ ರಜಾಕ್ ಖಾದ್ರಿ ಹೇಳಿದರು.
ಬುಧವಾರ ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಹತ್ತಿರ ಹೂವನೂರು ಗ್ರಾಮದ ಬಸವಾತ್ಮಜೆ ವೇದಿಕೆಯಲ್ಲಿ ಆಯೋಜಿಸಿದ್ದ ನಾಲ್ಕನೇ ಸ್ವಾಭಿಮಾನಿ ಶರಣ ಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕೆಲವರು ಧರ್ಮ-ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ನಾನು ಮುಸ್ಲಿಂ ಆಗಿದ್ದರೂ ಸಹ ಬಸವಣ್ಣನವರ ವಿಚಾರಗಳನ್ನು ಗೌರವಿಸುತ್ತೇವೆ. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುತ್ತೇನೆ. ಮಹಾತ್ಮರ ಒಂದೊಂದು ಮಾತುಗಳಲ್ಲಿ ಒಂದೊಂದು ಸಂದೇಶವಿದೆ. ಮನಸ್ಸಿನಲ್ಲಿರುವ ಕೆಟ್ಟ ವಿಚಾರಗಳು ಹೋಗುವವರೆಗೂ ಒಳ್ಳೆಯದು ಪ್ರಾಪ್ತಿಯಾಗುವುದಿಲ್ಲ ಎಂದರು.
ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಮನುಷ್ಯರಲ್ಲಿ ಮಾನವೀಯತೆ ಬಹಳ ಮುಖ್ಯ. ಎಲ್ಲ ಧರ್ಮಗಳೊಂದಿಗೆ ಬೆರೆತು ಮುನ್ನಡೆಯಬೇಕು ಎಂದರು.

ಶರಣ- ಶರಣೆಯರು ಸಾಮೂಹಿಕವಾಗಿ ವಚನ ಪಠಣ ಮಾಡಿದರು. ತರಂಗಿಣಿ ಹಾಗೂ ಪ್ರಾರ್ಥನಾ ವಚನ ನೃತ್ಯ ಮಾಡಿದರು.
ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ, ಬ್ಯಾಲಹಳ್ಳಿ ಪ್ರಭುಲಿಂಗ ಸ್ವಾಮೀಜಿ, ಚಳ್ಳಕೆರೆ ಗುರು ಸ್ವಾಮೀಜಿ, ಹೂವನೂರಿನ ಲಿಂಗಾರೂಢ ಸ್ವಾಮೀಜಿ, ಮಾತೆ ವಚನಶ್ರೀ, ಹೈಕೋರ್ಟ್ ವಕೀಲ ಅಶೋಕ ಮಾನೂರೆ, ಶಿವರಾಜ ಪಾಟೀಲ ಅತಿವಾಳ, ಭೀಮರಾವ ಬಿರಾದಾರ, ಬಾಬುರಾವ ಟೆಂಗಸಾಲ, ಸಂಜಯ ಪಾಟೀಲ ಸಂಗಣ್ಣ ಬ್ಯಾಕೋಡ, ಶಿವಶರಣಪ್ಪ ಪಾಟೀಲ, ಮಲ್ಲಿಕಾರ್ಜುನ ಜೈಲರ್ ಹಾಗೂ ಸಾವಿರಾರು ಶರಣ ಶರಣೆಯರು ಉಪಸ್ಥಿತರಿದ್ದರು.

