ವಚನ ನಿರ್ವಚನ: ಅಂತರಂಗದ ಅರಿವು ಆಚರಣೆಗೆ ಬರಲಿ

ಗುಳೇದಗುಡ್ಡ:

ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವು ಪ್ರೇಮಾ ಗುರಪ್ಪ ಚಿಂದಿ ಅವರ ಮನೆಯಲ್ಲಿ ಶನಿವಾರ ನಡೆಯಿತು.

ವಚನ ಚಿಂತನೆಗಾಗಿ ಆಯ್ದುಕೊಂಡ ಚೆನ್ನಬಸವಣ್ಣ ತಂದೆಗಳ ವಚನ ಹೀಗಿದೆ –

ಅಂತರಂಗದಲ್ಲಿ ಅರಿವಾದಡೇನಯ್ಯಾ
ಬಹಿರಂಗದಲ್ಲಿ ಕ್ರೀ ಇಲ್ಲದನಕ್ಕ?
ದೇಹವಿಲ್ಲದಿರ್ದಡೆ ಪ್ರಾಣಕ್ಕಾಶ್ರಯವುಂಟೆ?
ಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೆ?
ಸಾಕಾರ ನಿರಾಕಾರ ಏಕೋದೇವ
ನಮ್ಮ ಕೂಡಲ ಚೆನ್ನಸಂಗಯ್ಯನು.

ಪ್ರತಿವಾರದಂತೆ ವಚನದ ಚಿಂತನೆಯನ್ನು ಆರಂಭದಲ್ಲಿ ಪ್ರೊ. ಶ್ರೀಕಾಂತ ಮ. ಗಡೇದ ಅವರು ನಿರ್ವಚನಗೈಯುತ್ತ ಚಿಂತನೆಯಲ್ಲಿ ತೊಡಗಿದರು.  ಕಾಯಕ ಮಾಡುವವರಿಗೆ ಒಂದು ಘನಯುತವಾದ ಮೌಲ್ಯವನ್ನು ತಂದುಕೊಟ್ಟವರು ಶರಣರು. ಬಹಿರಂಗಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟಿರುವದರಿಂದ ನಾವೆಲ್ಲರೂ ಅಜ್ಞಾನದಲ್ಲಿ ಬಿದ್ದಿರುತ್ತೇವೆ.

ಅಂತರಂಗದ ಶುದ್ಧಿಗೆ ಅರಿಷಡ್ವರ್ಗಗಳನ್ನು ಕಳೆದುಕೊಳ್ಳಬೇಕು.  ಬಹಿರಂಗದ ಕ್ರೀಯಿಂದ ಅಂತರಂಗ, ಅಂತರಂಗದಿಂದ ದೇಹಶುದ್ಧಿಗೆ ಕಾರಣವಾಗುತ್ತದೆ. ಕಾಯಕ/ಶೋಷಿತ ವರ್ಗದವರಿಗೆ ಅಕ್ಷರ ಜ್ಞಾನ, ದೈವಿಕ  ಕ್ರಿಯೆಗಳಿಗೆ ಅವಕಾಶ ಇಲ್ಲದ ಕಾಲಘಟ್ಟದಲ್ಲಿ ಅವರಿಗಾಗಿ ಚಿಂತನ-ಮಂಥನಗಳಿಂದ ಪರ್ಯಾಯ ವ್ಯವಸ್ಥೆಯನ್ನು ಕಟ್ಟಿಕೊಡಲು ಪ್ರಾರಂಭಿಸಿದ ಕಾಲ 11-12ನೇ ಶತಮಾನದ ಶರಣರ ಕಾಲ.

ನಿರಾಕಾರದ ದೇವನನ್ನು ಕಂಡುಕೊಳ್ಳಲಿಕ್ಕೆ ಇರತಕ್ಕಂತ ವಸ್ತುವೇ ದೇವನ (ಮೂಲ ಸ್ಥಿತಿ) ಸಾಕಾರವೇ ಇಷ್ಟಲಿಂಗ.  ದೇಗುಲಗಳಿಗೆ ಪರ್ಯಾಯವಾಗಿ ಸಾಕಾರದಿಂದ ನಿರಾಕಾರ ದೇವನ ಸ್ಥಿತಿಯನ್ನು ಇಷ್ಟಲಿಂಗದ ಮೂಲಕ ಕಂಡುಕೊಂಡ ಮಾರ್ಗವೇ (ವ್ಯವಸ್ಥೆ) ಶಿವಯೋಗ.

ವಚನದ ನಿರ್ದೇಶನದಂತೆ ದೇಹದ ಮೂಲಕ ಅಂತರಂಗದ ಅರಿವನ್ನು ಕ್ರೀಯೆಯ ಮೂಲಕ ಜೀವ ಸಾಕಾರದಿಂದ ನಿರಾಕಾರ ದೇವನನ್ನು ಕಂಡಾಂಗ ಜೀವ ಏಕೋದೇವ ಆಗುತ್ತದೆ ಎಂದು ಪ್ರೊ. ಶ್ರೀಕಾಂತ ಅವರು ಹೇಳಿದರು.

ತದನಂತರದಲ್ಲಿ ಮಾತನಾಡಿದ ಚಿಂತನಕಾರ ಮಹಾಂತೇಶ ಸಿಂದಗಿ ವಚನವನ್ನು ನಿರ್ವಚನಗೈಯಲು ತೊಡಗಿದ ಅವರು – ಶರಣರ ಕಾಲದಲ್ಲಿ ಮಹಾಮನೆಯ ದುರ್ಬಳಕೆ ಮಾಡಿಕೊಳ್ಳುವ ಜನರಿಗೆ ಅರಿವು/ಎಚ್ಚರಿಕೆ ಮಾಡಿಕೊಡುವ ವಚನ ಇದಾಗಿದೆ.

ಅಂತರಂಗದ ಅರಿವು ಆಚರಣೆಗೆ ಬಂದರೆ ಮಾತ್ರ ಸಾಕಾರ ನಿರಾಕಾರ ಏಕೋದೇವನಾಗಿ ಕಾಣುತ್ತದೆ.  ಮಹಾಮನೆಯಲ್ಲಿಯ ಅನುಭಾವಿಗಳ ಸಂಗದಿಂದ ಅವಗುಣಗಳನ್ನು ಕಳೆದುಕೊಳ್ಳಲು ಕಾರಣವಾಗಬಹುದು.

ಪ್ರಾಣಕ್ಕೆ (ನಿರಾಕಾರ) ದೇಹ (ಸಾಕಾರ) ಆಶ್ರಯವಾದಂತೆ, ನಿರಾಕಾರ ಪ್ರಾಣ ಸಾಕಾರದಿಂದ ಪ್ರಕಟವಾಗಿದೆ. ಹೀಗೆ ಸಾಕಾರ ನಿರಾಕಾರ ಒಂದೇ ಆಗಿರುತ್ತದೆ.  ಆ ದೇವನ ಲಕ್ಷಣಗಳನ್ನು ನಾವು ಅಳವಡಿಸಿಕೊಂಡರೆ ನಿರಾಕಾರ ಸಾಕಾರ ಏಕೋದೇವನಾಗುತ್ತಾನೆ.

ಸಗುಣಗಳನ್ನು ನಿರ್ಗುಣಗಳನ್ನಾಗಿ ಮಾಡಿಕೊಂಡಾಗ ಸಾಕಾರ ನಿರಾಕಾರ ಏಕೋದೇವನಾಗುತ್ತಾನೆ, ಅಂದರೆ ಸಾಧಕ ಮೂಲ ವಸ್ತುವೆ ಆಗುತ್ತಾನೆ.

ಬಸವಯೋಗದಿಂದ ಸಗುಣಗಳು ನಿರ್ಗುಣಗಳನ್ನಾಗಿ ಮಾಡಿ ನಮ್ಮನ್ನು ನಾವು ಕಳೆದುಕೊಂಡು ದೇವನ ಅವಸ್ಥೆಯನ್ನು ತಲಪುತ್ತೇವೆ ಎಂದು ಸಿಂದಗಿಯವರು ತಮ್ಮ ನಿರರ್ಗಳವಾದ ಚಿಂತನೆಗಳ ಮೂಲಕ ಅನುಭಾವ ನೀಡಿದರು. 

ಕೊನೆಯಲ್ಲಿ ಸಮಾರೋಪ ಮಾಡುತ್ತ ಅನುಭವವನ್ನು ಉಣಬಡಿಸಲು ಪ್ರಾರಂಭಿಸಿದ ಡಾ. ಗಿರೀಶ ಮ. ನೀಲಕಂಠಮಠ ಅವರು – ಬಹಿರಂಗದಲ್ಲಿಯ ಕ್ರೀಯೆಯಿಂದ ಅಂತರಂಗದ ಅರಿವು ಪ್ರಕಟವಾಗುತ್ತದೆ.  ಹೀಗೆ ಅರಿವು ಪ್ರಕಟವಾದರೆ ಸಾರ್ಥಕ ಇಲ್ಲದಿದ್ದರೆ ವ್ಯರ್ಥ.

ನಾದ ಬಿಂದು ಕಳಾತೀತ ಸ್ಥಿತಿಯೇ ಅರಿವು (ಶರಣ) ಅಂದರೆ ನಿರಾಕಾರ ದೇವ ಸ್ಥಿತಿ.  ಸಾಕಾರ ದೇಹ (ಸಕಲ ವಸ್ತುಗಳು) ಆಗಿದೆ. ನಿರಾಕಾರ ದೇವನ ವರ್ತನೆಯಂತೆ ಸಾಕಾರದಲ್ಲಿ ವರ್ತಿಸುವುದರಿಂದ ವ್ಯಕ್ತವಾದ ಸ್ಥಿತಿಯೇ ಏಕೋದೇವ.

ನಿರಾಕಾರದ ಶಿವ, ಕ್ರೀಯೆಯಿಂದ ದೇಹ. ಕ್ರೀ ಇಲ್ಲದ ನಿರಾಕಾರ ರೂಪ ಸಾಕಾರದ ಶವ (ಜಡ). ಅರಿವು ಇಲ್ಲದ ಆಚಾರ ಜಡ. ಕ್ರಿಯೆ ಇಲ್ಲದ ಅರಿವು ಭ್ರಾಂತಿ.  ಜ್ಞಾನವಿಲ್ಲದ ಕ್ರೀಯೆ ಜಡ ಎಂದು ಡಾ. ಗಿರೀಶ ಅವರು ಅನೇಕ ದೃಷ್ಟಾಂತ, ಉಪಮೆಯಗಳ ಮೂಲಕ ವಚನದ ಅತ್ಯಂತಿಕ ಅರಿವನ್ನು ಕೇಳುಗರಿಗೆಲ್ಲರಿಗೂ ಮನ ಅರಿಯುವಂತೆ, ಸ್ಮೃತಿ ಪಟಲದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂತೆ ಅನುಭವ ನೀಡಿದರು. ಕೇಳುಗರೆಲ್ಲರಲ್ಲಿಯೂ ಧನ್ಯತಾ ಭಾವ ಮೂಡುವಂತೆ ಮಾಡಿದರು. ಕೂಡಿದ ಜನರು ಅವರಿಗೆ ಸಂತಸವನ್ನು  ವ್ಯಕ್ತಪಡಿಸಿದರು.

ಭಾಗವಹಿಸಿದ ಸದಸ್ಯರು ಕೊನೆಯಲ್ಲಿ ಕೇಳಿದ ತಮ್ಮ ಮನದ ಚಿಂತನೆಯ ಪ್ರಶ್ನೆ – ಮನದ ಭಾವ ನಿರ್ಭಾವ ಹೇಗೆ? ಎಂಬುದಕ್ಕೆ ಡಾ. ಗಿರೀಶ ಮತ್ತು ಮಹಾಂತೇಶ ಸಿಂದಗಿ ಅವರು ಸಮರ್ಪಕವಾಗಿ ಸಮರ್ಥವಾಗಿ ಉತ್ತರಿಸಿ ಕೇಳಿದವರ ದುಗುಡವನ್ನು ತೊಲಗಿಸಿದರು.

ಒಟ್ಟಿನಲ್ಲಿ ಕಾರ್ಯಕ್ರಮವು ದೀರ್ಘ ಸಮಯದವರೆಗೆ ಸಾಗಿ ಮಹಾಮನೆಯಲ್ಲಿ ನೆರೆದಂತವರು ಬಹಳ ಸಂತಸ ವ್ಯಕ್ತಪಡಿಸಿದರು. ಸಮಯ ಕಳೆದು ಹೋಗಿದ್ದೇ ಗೊತ್ತಾಗದಂತೆ ಅನುಭವನ್ನು ಅನುಭವಿಸಿ ಹರ್ಷಿತರಾದರು.

ಜಯಶ್ರೀ ಬ. ಬರಗುಂಡಿಯವರಿಂದ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶರಣರ ವಚನ ಮಂಗಲದೊಂದಿಗೆ ಮುಕ್ತಾಯವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆಯನ್ನುಗೈದರು.

ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಬಸಯ್ಯ ಕಂಬಾಳಿಮಠ,  ಕುಮಾರ ಅರುಟಗಿ, ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಶ್ರೀದೇವಿ ಶೇಖಾ, ವಿಶಾಲಕ್ಷೀ ಗಾಳಿ, ದಾಕ್ಷಾಯಣಿ ತೆಗ್ಗಿ, ಬಸವರಾಜ ಖಂಡಿ, ಬಸವರಾಜ ಕಲ್ಯಾಣಿ, ಈರಣ್ಣ ಶಿವಪ್ಪ ಚಾರಖಾನಿ, ಗಣೇಶ ಅರುಟಗಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ಪಂ. ನೀಲಕಂಠಮಠ, ಪ್ರೊ. ಚಂದ್ರಶೇಖರ ಹೆಗಡೆ, ಬಸಯ್ಯ ಭಂಡಾರಿ, ಡಾ. ಸಣ್ಣವೀರಣ್ಣ ದೊಡ್ಡಮನಿ, ಶ್ರೀಮತಿ ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *