ಕುಷ್ಟಗಿಯ ನಾಗರಾಳ ಗ್ರಾಮದಲ್ಲಿ ನಿಜಾಚರಣೆಯ ಗುರುಪ್ರವೇಶ

ಕುಷ್ಟಗಿ:

ತಾಲೂಕಿನ ನಾಗರಾಳ ಗ್ರಾಮದಲ್ಲಿ ಶರಣ ಯಮನೂರಪ್ಪ ಮಾಟಲದಿನ್ನಿ ಅವರ ನೂತನ ಮನೆಯ ಗುರುಪ್ರವೇಶ ಬಸವತತ್ವದ ನಿಜಾಚರಣೆಯಂತೆ ನಡೆಯಿತು.

ಗುಳೆ ಗ್ರಾಮ ರಾಷ್ಟ್ರೀಯ ಬಸವ ದಳದ ನೇತೃತ್ವದಲ್ಲಿ ವಚನ ಸಾಹಿತ್ಯ ಪಠಣದೊಂದಿಗೆ, ಕುಟುಂಬ ಸದಸ್ಯರು ಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನಗ್ರಂಥದೊಂದಿಗೆ ಮನೆ ಪ್ರವೇಶ ಮಾಡಿದರು. ಮನೆಯಲ್ಲಿ ಇಷ್ಟಲಿಂಗ ಶಿವಯೋಗ ನಡೆಯಿತು. ನಂತರ ಅನುಭಾವ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಸವನಗೌಡ ಪೋಲಿಸಪಾಟೀಲ ಅನುಭಾವ ನೀಡುತ್ತ, ಈ ನಾಗರಾಳ ಗ್ರಾಮದಲ್ಲಿ ಗೃಹಪ್ರವೇಶ ಕಾರ್ಯಕ್ರಮನ್ನು ಮೌಢ್ಯಾಚರಣೆ ಇಲ್ಲದೆ, ವಿನೂತನವಾಗಿ ನಿಜಚರಣೆಯ ಮೂಲಕ ಗುರುಪೂಜೆ, ಇಷ್ಟಲಿಂಗ ಶಿವಯೋಗ ಮತ್ತು ವಚನ ಪಠಣ ಮಾಡುವುದರ ಮೂಲಕ ಮನೆಯನ್ನು ದೈವೀಕರಿಸುವ ಕಾರ್ಯ ಮಾಡಿರುವುದು ಅತ್ಯಂತ ಶ್ಲಾಘನೀಯವಾದದ್ದು.

ಸಾರ ಸಜ್ಜನರ ಸಂಘ ಲೇಸು ಕಂಡಯ್ಯ, ದೂರ ದುರ್ಜನರ ಸಂಘ ಭಂಗವಯ್ಯ ಎನ್ನುವ ಗುರು ಬಸವಣ್ಣನವರ ವಾಣಿಯಂತೆ ಶರಣರ ಸಂಘದೊಂದಿಗೆ ಕೂಡಿಕೊಂಡು, ನಿತ್ಯ ಮತ್ತು ಸತ್ಯದ ಕೃಷಿ ಕಾಯಕ ಮಾಡಿ ಜೀವನ ಸಾಗಿಸುತ್ತಿರುವ ಯಮನೂರಪ್ಪ ಮಾಟಲದಿನ್ನಿ ಅವರು, ಭಯವೇ ಧರ್ಮದ ಮೂಲವಯ್ಯ ಎನ್ನುವುದನ್ನು ದಿಕ್ಕರಿಸಿ, ದಯವೇ ಧರ್ಮದ ಮೂಲವಯ್ಯ ಎನ್ನುವ ಬಸವಾದಿ ಶಿವಶರಣರ ನುಡಿಗಳನ್ನ ಮೈಗೂಡಿಸಿಕೊಂಡು ಕಾರ್ಯಕ್ರಮ ನಡೆಸಿದ್ದಾರೆ.

ತಮ್ಮ ಮನೆಯಲ್ಲಿ ಬರುವಂತ ಎಲ್ಲಾ ಧಾರ್ಮಿಕ ಕಾರ್ಯಕ್ರಮವನ್ನು ಗುರು ಬಸವಣ್ಣನವರ ವಚನ ಸಾಹಿತ್ಯದಂತೆ ಆಚರಿಸುತ್ತಿರುವುದು ಜನ ಸಮುದಾಯದ ಪರಿವರ್ತನೆಗೆ ಮಾದರಿಯಾಗಿದೆ.

ಜಗವ ಸುತ್ತಿಪ್ಪುದು ನಿನ್ನ ಮಾಯೆ ಎನ್ನುವಂತೆ,

ಈ ಭೂಮಿಯ ಮೇಲೆ ನಿಂತು ನೋಡಿದರೆ ಚಂದ್ರ ಬೆಳ್ಳಿಯಂತೆ ಹೊಳೆಯುತ್ತಾನೆ, ತಾರೆಗಳು ಕಣ್ಣು ಮಿಟುಕಿಸುತ್ತವೆ, ಸೂರ್ಯ ಮುಂಜಾನೆ ಮತ್ತು ಮುಸ್ಸಂಜೆಗೆ ಕಿತ್ತಳೆಯ ಚೆಂಡಾಗುತ್ತಾನೆ. ಆದರೆ ಭೂವಲಯ ದಾಟಿ ಬಾಹ್ಯಾಕಾಶದಲ್ಲಿ ನಿಂತು ನೋಡಿದರೆ ಈ ಯಾವ ರಂಗುರಂಗಿನ ದೃಶ್ಯಾವಳಿಗಳೂ ಕಾಣುವುದಿಲ್ಲ.

ಅಲ್ಲಿ ಎಲ್ಲ ಆಕಾಶ ಕಾಯಗಳೂ ಒಂದೇ, ಅದೇರೀತಿ ಈ ಜಗತ್ತಿನ ಇರುವ ಎಂಭತ್ತಾರು ಕೋಟಿ ಜೀವರಾಶಿಗಳಿಗೆ ದೇವನೊಬ್ಬ  ನಾಮಗಳು ಹಲವು ಆಗಿವೆ. ನಮ್ಮ ಅಂತರಾತ್ಮದಲ್ಲಿ ದೇವನಿದ್ದಾನೆ ಎಂಬುದನ್ನು ಅರಿತುಕೊಳ್ಳದೆ, ಆಡಂಬರದ ಮಾರಿ ಮಸಣಿಗಳಿಗೆ ಜನ ಮಾರು ಹೋಗುತ್ತಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದರು.

ಗುರು ಬಸವಣ್ಣನವರ ಆಗಮನಕ್ಕಿಂತ ಮೊದಲು ದುಡಿಯುವ ವಗ೯ವನ್ನು ಕಡೆಗಣಿಸಿ ದುಡಿಯದೆ ಇರುವ ಅನುತ್ಪಾದಕ ಸೋಮಾರಿಗಳನ್ನು ಶ್ರೇಷ್ಠವೆಂದು ಪರಿಗಣಿಸುವ ವ್ಯವಸ್ಥೆಯಿತ್ತು. ಆದರೆ ಬಸವಣ್ಣನವರು ಕೃಷಿಕೃತ್ಯ ಕಾಯಕ ಮಾಡುವವನ ಪಾದವ ತೋರಯ್ಯ ಎಂದು ಕಾಯಕಕ್ಕೆ ದೈವತ್ವ ತೋರಿ ಕಾಯಕವೇ ಕೈಲಾಸ ಎಂದರು.

ಅಂತೆಯೇ ಕಾಯಕವ ಕಲಿಸುದದಕ್ಕೆ ನಾಯಕನು ಬಸವಣ್ಣ ಎಂದು ಜನಪದ ಸಾಹಿತ್ಯದಲ್ಲಿ ಕಾಣಬಹುದು. ಈ ನಾಡಿನ ಮನುಕುಲಕ್ಕೆ ಗುರು ಬಸವಣ್ಣನವರು ಕೊಟ್ಟಂತ ವಚನ ಸಾಹಿತ್ಯದ ಕೊಡುಗೆ ಅತ್ಯಂತ ಮಹತ್ವದ್ದಾಗಿದ್ದು, ಅವರು ಹೇಳಿರುವುದನ್ನು ಮನವರಿಕೆ ಮಾಡಿಕೊಂಡು ಮೌಲ್ಯಯುತವಾದ ಜೀವನ ಕಳೆಯಬಹುದಾಗಿದೆ.

ಅದಕ್ಕಾಗಿ ನಾವು ಈ ಮಾಯಾ ಪ್ರಪಂಚದ ಮರ್ಮ ಅರಿತುಕೊಳ್ಳಬೇಕಾದರೆ ಶರಣರ ಸಂತರ ಮಹಾತ್ಮರ ಸಂಘದೊಡಗೂಡಿ ಬಾಳಿ ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಪೋಲಿಸಪಾಟೀಲ ಮಾರ್ಮಿಕವಾಗಿ ಹೇಳಿದರು.

  ಕಾರ್ಯಕ್ರಮದಲ್ಲಿ ಗೃಹ ಪ್ರವೇಶದ ಕೈಂಕರ್ಯವನ್ನು ಬಸವರಾಜ ಹೂಗಾರ ಅವರು ಇಷ್ಟಲಿಂಗ ಶಿವಯೋಗ ಮತ್ತು ವಚನ ಪಠಣ ನೇರವೇರಿಸಿದರು. ಷಟಸ್ಥಲ ಧ್ವಜಾರೋಹಣವನ್ನ ನಾಗರಾಳ ಗ್ರಾಮದ ಬಸವರಾಜ ಗಂಗನಾಳ ಹಾರ್ಮೋನಿಯಂ ಮಾಸ್ತರ ನೆರವೇರಿಸಿದರು.

    ಕುಟುಂಬದ ಸದಸ್ಯರಾದ ಮಹಾದೇವಪ್ಪ ಮಾಟಲದಿನ್ನಿ, ಬಸವರಾಜ, ಶರಣಪ್ಪ, ನಿರುಪಾದೀಶ್ವರ ಮತ್ತು ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳಾದ ಲಿಂಗನಗೌಡ ದಳಪತಿ, ಪಕೀರಪ್ಪ ಮಂತ್ರಿ, ಬಸಣ್ಣ ಹೊಸಳ್ಳಿ ಗಿರಿಮಲ್ಲಪ್ಪ ಪರಂಗಿ, ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷರಾದ ದೇವಪ್ಪ ಕೋಳೂರು, ಶಿವಣ್ಣ ಕರುವಿನ, ಯಮನೂರಪ್ಪ ಕೋಳೂರು, ಶರಣಪ್ಪ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ದೇವೇಂಪ್ಪ ಆವಾರಿ, ಹನಮೇಶ ಹೊಸಳ್ಳಿ, ಸೋಮಣ್ಣ ಮಂತ್ರಿ, ಬಸವಂತಪ್ಪ ಮಂತ್ರಿ, ಶಿವಪುತ್ರಪ್ಪ ಉಚ್ಚಲಕುಂಟಿ, ಮಲ್ಲಿಕಾರ್ಜುನ ಹೊಸಳ್ಳಿ, ಬಸವರಾಜ ಹೊಸಳ್ಳಿ, ಗ್ರಾಮದ ಬಸವರಾಜಪ್ಪ ಅಂಗಡಿ, ಮುದಿಯಪ್ಪ ಕಟಗಿಹಳ್ಳಿ, ಹಾಗು ಗ್ರಾಮ ಪಂಚಾಯತ ಸದಸ್ಯರಾದ ಬಸವರಾಜ ಇನ್ನಿತರರು ಪಾಲ್ಗೊಂಡ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *