ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯ ಹಾರ್ದಿಕ ಶುಭಾಶಯಗಳು
ಉಚ್ಚೆಯ ಬಚ್ಚಲಲ್ಲಿ ಬಂದವರೆಲ್ಲಾ ,
ನಾ ಹೆಚ್ಚು, ನೀ ಹೆಚ್ಚು ಎಂಬುತಿಹರು.
ಇಂತಿವರನ್ನು ಹಿತ್ತಲಿನ ಬಚ್ಚಲಿಗೊಯ್ದು
ಮಚ್ಚಿ-ಮಚ್ಚಿಲೇ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣ.
ಜಾತಿ ತಾರತಮ್ಯ ವಿಚಾರವಾಗಿ ಈ ಮಟ್ಟದಲ್ಲಿ ಅತ್ಯಂತ ಕಟುವಾಗಿ ವಿಮರ್ಷಣೆ ಮಾಡುವ ಅಂಬಿಗರ ಚೌಡಯ್ಯನವರು ಕ್ರಿ.ಶ. ೧೨ ನೇ ಶತಮಾನದ ಕಾಲಮಾನದವರು. ಇವರು ಈಗಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡದಾನಪುರ (ಶಿವಪುರ) ಎಂಬ ಗ್ರಾಮದವರು. ಹಾಗೂ ಕೆಲವು ಸಂಶೋಧನೆಗಳ ಪ್ರಕಾರ ಇವರು ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಚೌಡಾಪೂರದವರು ಎಂಬ ಮಾಹಿತಿಯೂ ಇದೆ.
ಇವರು ವಿಶ್ವಗುರು ಬಸವಣ್ಣನವರ ವೈಚಾರಿಕ ವಚನ ಚಳುವಳಿಯ ಪ್ರಮುಖ ಪಾಲುದಾರರು. ಇವರು ಅಂದಿನ ಶರಣರಿಂದ ಲಿಂಗದೀಕ್ಷೆ ಹೊಂದಿ ಲಿಂಗಾಯತದ ಗಣಾಚಾರಿ ತತ್ವವನ್ನು ನೀಡುವಲ್ಲಿ ಇವರದು ಪ್ರಮುಖ ಪಾತ್ರವು ಇದೆ. ಇವರು ನದಿಯಲ್ಲಿ ದೋಣಿ ನಡೆಸುವ ಕಾಯಕವನ್ನು ಕೈಗೊಂಡಿದ್ದರು.
ಇವರು ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಬಹಳಷ್ಟು ಜ್ಞಾನವನ್ನು ಪಡೆದು ನಂತರದಲ್ಲಿ ತಮ್ಮ ಸ್ವಗ್ರಾಮದಲ್ಲೇ ಶರಣತತ್ವ ಪ್ರಸಾರ ಮಾಡುತ್ತಾ ಅಲ್ಲಿಯೇ ಐಕ್ಯರಾದರು.
ಅಂದಿನ ದಿನಗಳಲ್ಲಿನ ಮನುವಾದಿಗಳು ಚಾಲ್ತಿಯಲ್ಲಿಟ್ಟಿದ್ದ ಮೂಢಾಚಾರ, ಅತ್ಯಾಚಾರ, ಡಂಭಾಚಾರ ಮತ್ತು ದೇವರ ಹೆಸರಿನಲ್ಲಿ ನಡೆಸುತ್ತಿದ್ದ ಅನಾಚಾರಗಳನ್ನು ಯಾರ ದಯಾದಾಕ್ಷಿಣ್ಯ ಇಲ್ಲದೇ, ಯಾರ ಮುಲಾಜಿಗೂ ಬೀಳದೇ ಎಗ್ಗಿಲ್ಲದೇ ಕಟುವಾಗಿ ಟೀಕಿಸುವ ಮೂಲಕ ಸ್ಥಾಪಿತ ವ್ಯವಸ್ಥೆಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಶ್ನಿಸಿ ಮುಗ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ.
ಕಂತೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯಿ ಮೇಲೆ
ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟಕನೆ
ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ
“ಶರಣನ ಅವಗುಣಕ್ಕೆ ಮುನಿವನಲ್ಲದೇ ಪ್ರಾಣಕ್ಕೆ ಮುನಿಯ” ಎಂಬ ವಚನಸೂಕ್ತಿಯಂತೆ ಅಂದಿನ ಕಾಲದ ಢಾಂಬಿಕ ಬಾಹ್ಯಾಚರಣೆಯ ಗುರು-ಜಂಗಮರನ್ನು ಕೂಡ ತರಾಟೆಗೆ ತೆಗೆದುಕೊಂಡು ಅವರಲ್ಲಿರುವ ಅವಗುಣಗಳನ್ನು ಕಳೆದುಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ಸ್ಪೂರ್ತಿಯಾಗುತ್ತಾರೆ.
“ಜನಕ್ಕಂಜಿ ನಡೆಯದೇ ಮನಕ್ಕಂಜಿ ನಡೆ” ಎನ್ನುವಂತೆ ಇವರ ಕೆಲವು ವಚನಗಳನ್ನು ಗಮನಿಸಿದರೆ ಆಧ್ಯಾತ್ಮದ ಕಡೆ ಕೂಡ ಆಂತರಿಕವಾಗಿ ಬಹಳ ಉನ್ನತಿ ಪಡೆದುಕೊಂಡವರು ಕೂಡ ಎಂದು ನಿಚ್ಛಳವಾಗಿ ಹೇಳಬಹುದು.
ಇವರ ಸ್ಮರಣಾರ್ಥ ಕರ್ನಾಟಕ ಸರಕಾರವು ಪ್ರತಿ ವರ್ಷ ಜನವರಿ-೨೧ ನೇ ತಾರಿಖಿನಂದು ಇವರ ಹೆಸರಿನಲ್ಲಿ ಜಯಂತಿಯನ್ನು ಆಚರಿಸುವಂತೆ ಅಧಿಕೃತ ಅದೇಶ ಹೊರಡಿಸುವ ಮೂಲಕ ಅವರ ಶರಣತತ್ವದ ಉದ್ದೇಶಗಳನ್ನು ಇಂದಿನ ನಾಗರಿಕ ಸಮಾಜಕ್ಕೆ ತಿಳಿಸಲು ಅವಕಾಶ ಒದಗಿಸಿದೆ.
12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನೆರವೇರಿದ ಸಮಾನ ಮನಸ್ಕರ ಅತಂರಜಾತಿ ವಿವಾಹವಾಗಿದ್ದ ಕಾರಣ ಕಲ್ಯಾಣದ ಶರಣರನ್ನು ಹತ್ಯೆ ಮಾಡುತ್ತಿದ್ದ ಸಮಯದಲ್ಲಿ ಅಂದಿನ ಶರಣರೆಲ್ಲ ತಮಗಾದಷ್ಟು ವಚನಗಳ ಕಟ್ಟುಗಳನ್ನು ಹೊತ್ತೊಯ್ದರು. ಎಲ್ಲಾ ವರ್ಗದ ಶರಣರು ರಚಿಸಿದ್ದ ಕೋಟಿಗಟ್ಟಲೇ ವಚನಗಳನ್ನು ಅಂದಿನ ಜಾತಿವಾದಿಗಳು ಸುಟ್ಟರು.
ಸಂರಕ್ಷಿಸಲ್ಪಟ್ಟಂತಹ ವಚನ ಕಟ್ಟುಗಳಲ್ಲಿ ಪ್ರಸ್ತುತ ಕೇವಲ ೨೦೦೦೦+ ವಚನಗಳು ಮಾತ್ರ ಲಭ್ಯವಿದ್ದು ಅಂಬಿಗರ ಚೌಡಯ್ಯ ನವರ ಕೇವಲ 248 ಸಂಖ್ಯೆಯ ವಚನಗಳು ಮಾತ್ರ ದೊರಕಿರುತ್ತವೆ.
ಎಲ್ಲಾ ಶರಣರು ತಮ್ಮ ತಮ್ಮ ಇಷ್ಟದೈವದ ಹೆಸರಿನಲ್ಲಿ ವಚನಗಳನ್ನು ರಚಿಸಿದರೆ ಅಂಬಿಗರ ಚೌಡಯ್ಯ ನವರು ತಮ್ಮ ಹೆಸರನ್ನೇ ಆ ದೈವಕ್ಕೆ ಇಟ್ಟು ವಚನಗಳನ್ನು ರಚಿಸುತ್ತಾರೆ. ಈ ವಿಚಾರಕ್ಕೆ ಮತ್ತು ಇವರ ಗಣಾಚಾರಕ್ಕೆ ಮಾರುಹೋಗಿದ್ದ ಬಸವಣ್ಣನವರು ಇವರನ್ನು “ನಿಜಶರಣ ಅಂಬಿಗರ ಚೌಡಯ್ಯ” ಎಂದು ಕರೆಯುತ್ತಾರೆ.
ಈ ಹಿನ್ನೆಲೆಯಲ್ಲಿ ಚೌಡಯ್ಯನವರ ಕೆಲವು ವಚನಗಳ ಅಂಕಿತನಾಮ ಕೇವಲ “ಅಂಬಿಗರ ಚೌಡಯ್ಯ” ನೆಂತಲೂ ಹಾಗೂ ಇನ್ನು ಕೆಲವು ವಚನಗಳ ಅಂಕಿತನಾಮ “ಅಂಬಿಗರ ಚೌಡಯ್ಯ ನಿಜಶರಣ” ನೆಂತಲೂ ಕಾಣಬರುತ್ತವೆ.
ಇವರ ವಚನಗಳಲ್ಲಿ ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮಿಕ, ಕಾಯಕ, ದಾಸೋಹ ಮತ್ತು ಇತರೆ ವಿಷಯಗಳ ವಿವರಣೆ ಇದ್ದು, ಇವರ ವಚನಗಳ ಅದ್ಯಯನಕ್ಕೆ ಮತ್ತು ಸಂಶೋಧನೆಗೆ ಹಾಗೂ ಉಡುಪಿ, ಮಂಗಳೂರು, ಕಾರವಾರ ಭಾಗದ ಮೀನುಗಾರಿಕೆ ಕಾಯಕದ ಜನರ ಸರ್ವೋದ್ಧಾರಕ್ಕಾಗಿ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಮತ್ತು ಮಂಗಳೂರು ವಿಶ್ವವಿದ್ಯಾಲಯದಲ್ಲಿ “ಅಂಬಿಗರ ಚೌಡಯ್ಯ ಅಧ್ಯಯನ ಪೀಠ” ವನ್ನು ಸ್ಥಾಪಿಸಿರುತ್ತಾರೆ.
