ಹುಬ್ಬಳ್ಳಿ:
ಗಣಾಚಾರಿ ನಿಜಶರಣ, ವಚನಕಾರ ಅಂಬಿಗರ ಚೌಡಯ್ಯನವರ ೯೦೬ನೇ ಜಯಂತೋತ್ಸವವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬಸವ ಕಾಲೋನಿಯಲ್ಲಿ ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಚೌಡಯ್ಯನವರ ಪ್ರತಿಮೆಯ ಭವ್ಯ ಮೆರವಣಿಗೆ ನಡೆಯಿತು. ನಂತರ ನಡೆದ ಸಮಾರಂಭದಲ್ಲಿ ಕಾರ್ಮಿಕ ಮುಖಂಡ ಮಹೇಶ ಪತ್ತಾರ ಉಪನ್ಯಾಸ ನೀಡುತ್ತಾ, ಬಸವ ಬಾನಂಗಳದಲ್ಲಿ ಮಿನುಗತ್ತಿರುವ ಶರಣರಲ್ಲಿ ದ್ರುವತಾರೆಯಾಗಿ ಮಿನುಗಿದ ನಿಷ್ಟುರವಾದಿ ಶರಣ ಚೌಡಯ್ಯನವರು. ಬಸವಣ್ಣನವರ ಹೆಗಲಿಗೆ ಹೆಗಲಾದವರು. ವಚನ ಸಾಹಿತ್ಯ ರಚನೆಯಲ್ಲಿ ಚೌಡಯ್ಯನವರ ಪಾತ್ರ ದೊಡ್ಡದು. ಅವರ ಕ್ರಾಂತಿಕಾರಿ ವಿಚಾರ, ಮನೋಭಾವಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕು. ಅವರ ಸಮಸಮಾಜದ ಕನಸು ನನಸು ಮಾಡಬೇಕಿದೆ ಎಂದರು.

ಸಮುದಾಯ ಧಾರವಾಡ ಕಲಾ ತಂಡ ಚೌಡಯ್ಯನವರ ಜೀವನಾಧಾರಿತ ಲಾವಣಿ ಪದ ಹಾಗೂ ಮಾನವರಾಗೋಣ ನಾಟಕ ಪ್ರದರ್ಶಿಸಿದರು.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ಅರ್ಜುನ ಪಾಟೀಲ, ಕಸಾಪ ಜಿಲ್ಲಾಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ, ಸಮುದಾಯದ ಬಿ.ಐ. ಈಳಿಗೇರ, ಜೋಷೆಫ್ ಮಲ್ಲಾಡಿ, ಬಸವ ಕಾಲೋನಿ ನಾಗರಿಕ ಸುದಯಧಾರಣಾ ಸಮಿತಿ ಅಧ್ಯಕ್ಷರಾದ ಹನಮಂತ ಪೂಜಾರ, ಕಾರ್ಯದರ್ಶಿ ದುರ್ಗಪ್ಪ ಚಿಕ್ಕತುಂಬಳ, ಜಯಂತೋತ್ಸವ ಸಮಿತಿ ಮುಖಂಡರಾದ ಸೈದಪ್ಪ ಅಂಬಿಗೇರ, ಗುರುಸಿದ್ದಪ್ಪ ಅಂಬಿಗೇರ, ಮಂಜುನಾಥ ಹುಜರಾತಿ, ಮಯೂರ ನಾಟೇಕರ, ಶಿವು ಹುಜರಾತಿ, ಹನಮಂತ ಅಂಬಿಗೇರ, ದೇವರಾಜ, ಮಂಜುನಾಥ ಅಂಬಿಗೇರ ಮತ್ತಿತರರು ಉಪಸ್ಥಿತರಿದ್ದರು.

ಬಸವ ಕಾಲೋನಿಯ ಯುವಕರ ತಂಡ ಅತ್ಯಂತ ಅಚ್ಚುಕಟ್ಟಾಗಿ, ಅದ್ಧೂರಿಯಾಗಿ ಕಾರ್ಯಕ್ರಮವನ್ನು ಸಂಘಟಿಸಿದ್ದು ಎಲ್ಲರೂ ಮೆಚ್ಚುವಂತೆ ಮಾಡಿತು.

