ತುಮಕೂರು:
ಜಿಲ್ಲೆಯ ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ “ವಿಶ್ವಗುರು ಬಸವಣ್ಣ ಜೈವಿಕ ಉದ್ಯಾನ”ಕ್ಕೆ ₹500 ಕೋಟಿ ಅನುದಾನ ನೀಡಿ, 2 ವರ್ಷದಲ್ಲಿ ಅಭಿವೃದ್ಧಿಪಡಿಸಿ ಉದ್ಘಾಟನೆ ಮಾಡಲಾಗುವುದು ಎಂದು ಅರಣ್ಯ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಅರಣ್ಯ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಬೃಹತ್ ಉದ್ಯಾನಕ್ಕೆ ‘ವಿಶ್ವಗುರು ಬಸವಣ್ಣ ಜೈವಿಕ ಉದ್ಯಾನ’ ಎಂದು ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದ್ದು, ಉದ್ಯಾನದ ಮೊದಲ ಹಂತದ ಅಭಿವೃದ್ಧಿ ಕಾಮಗಾರಿಗೆ ₹500 ಕೋಟಿ ಅನುದಾನ ನೀಡಲು ಸಮ್ಮತಿ ದೊರೆತಿದೆ. ಜೊತೆಗೆ ಸಿಎಸ್ಆರ್ ನೆರವು ಪಡೆದು ಎರಡು ವರ್ಷಗಳೊಳಗೆ ಉದ್ಯಾನವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಉದ್ಘಾಟನೆ ಮಾಡಲಾಗುವುದು ಎಂದು ಖಂಡ್ರೆ ತಿಳಿಸಿದ್ದಾರೆ.
ಶುಕ್ರವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು, ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಈ ವಿಷಯವನ್ನು ತಿಳಿಸಿದರು.

ಮಾನವತಾವಾದಿ ವಿಶ್ವಗುರು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಹಾಗೂ ಲಾಲ್ಬಾಗ್ ಮಾದರಿಯಲ್ಲಿ ಬೆಂಗಳೂರಿನ ಉತ್ತರ ತಾಲ್ಲೂಕಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಉದ್ಯಾನಕ್ಕೆ ಬಸವಣ್ಣನವರ ಹೆಸರನ್ನು ನಾಮಕರಣ ಮಾಡಲು ಸಚಿವ ಸಂಪುಟದಿಂದ ಅಧಿಕೃತ ಅನುಮೋದನೆ ದೊರೆತಿದೆ ಎಂದು ಸಚಿವರು ತಿಳಿಸಿದ್ದಾರೆ.
