ಶರಣ ಪರಂಪರೆ ಕೇವಲ ಇತಿಹಾಸವಲ್ಲ, ಜೀವಂತ ಚಿಂತನೆ: ಯಡಿಯೂರಪ್ಪ

ಭದ್ರಾವತಿ

ಶಿವಮೊಗ್ಗ ಶರಣರ ಸಂಸ್ಕೃತಿಯ ಪಾವನ ನೆಲ, ವಚನ ಚಿಂತನೆಯ ತವರೂರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕೀಯ ನಾಯಕ ಬಿ.ಎಸ್. ಯಡಿಯೂರಪ್ಪ ಶನಿವಾರ ಹೇಳಿದರು.

ನಗರದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ನಾಡಿನ ಶರಣ ಪರಂಪರೆ ಕೇವಲ ಇತಿಹಾಸವಲ್ಲ; ಅದು ಇಂದಿಗೂ ಸಮಾಜವನ್ನು ಮುನ್ನಡೆಸುವ ಜೀವಂತ ಚಿಂತನೆ ಎಂದು ಅಭಿಪ್ರಾಯಪಟ್ಟರು.

ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಜನಿಸಿದ ಅಲ್ಲಮಪ್ರಭು ದೇವರು ಜಗತ್ತಿಗೇ ಆತ್ಮಜ್ಞಾನ ಮತ್ತು ಸಮತೆಯ ದಾರಿ ತೋರಿದರು. ಉಡುತಡಿಯಲ್ಲಿ ಜನಿಸಿದ ಅಕ್ಕಮಹಾದೇವಿಯವರು ತ್ಯಾಗ, ತಪಸ್ಸು ಹಾಗೂ ಶುದ್ಧ ಬದುಕಿನ ಮಾದರಿಯನ್ನು ನೀಡಿದರು. ಅಂತಹ ದಿವ್ಯ ಶರಣ ಪರಂಪರೆಯ ಮುಂದುವರಿಕೆಯಾಗಿ ಶಿವಮೊಗ್ಗ ಜಿಲ್ಲೆಯ ಭೂಮಿಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಯಡಿಯೂರಪ್ಪ ಹೇಳಿದರು.

12ನೇ ಶತಮಾನದಲ್ಲಿ ಮರುಳಸಿದ್ಧರು “ತರಳಾ ಬಾಳು” ಎಂದು ಹರಸಿದ ಆಶೀರ್ವಾದ ಇಂದು ಕೋಟ್ಯಂತರ ಜನರ ಬದುಕಿನಲ್ಲಿ ಬೆಳಕಾಗುತ್ತಿದೆ. ಸಿರಿಗೆರೆ ಮಠ ಕೇವಲ ಧಾರ್ಮಿಕ ಕೇಂದ್ರವಷ್ಟೇ ಅಲ್ಲ; ಅದು ಸಾಮಾಜಿಕ ನ್ಯಾಯದ ವೇದಿಕೆಯೂ ಹೌದು. ಶೋಷಿತರ ಪರವಾಗಿ ಧ್ವನಿ ಎತ್ತುವುದು, ರೈತರ ಸಂಕಷ್ಟಕ್ಕೆ ಸ್ಪಂದಿಸುವುದು, ಶಿಕ್ಷಣದ ಮೂಲಕ ಸಮಾಜದಲ್ಲಿ ಕ್ರಾಂತಿ ತರುವ ಕಾರ್ಯವನ್ನು ಈ ಪೀಠ ನಿರಂತರವಾಗಿ ಮಾಡುತ್ತಿದೆ ಎಂದು ಪ್ರಶಂಸಿಸಿದರು.

ಸಿರಿಗೆರೆ ಜಗದ್ಗುರುಗಳೊಂದಿಗೆ ತಮ್ಮ ದೀರ್ಘಕಾಲದ ಆತ್ಮೀಯ ಬಾಂಧವ್ಯವನ್ನು ಸ್ಮರಿಸಿದ ಯಡಿಯೂರಪ್ಪ, “ಈ ಪೀಠದ ಮಾರ್ಗದರ್ಶನ, ಮೌಲ್ಯ ಮತ್ತು ಶಿಸ್ತು ನನ್ನ ಸಾರ್ವಜನಿಕ ಜೀವನಕ್ಕೂ ದಿಕ್ಕು ನೀಡಿದೆ. ಜಗದ್ಗುರುಗಳ ಆಶೀರ್ವಾದವನ್ನು ಶಿರಸಾ ವಹಿಸಿಕೊಂಡು ಸಾಗುವುದು ನನ್ನ ಜೀವನದ ಭಾಗವೇ ಆಗಿದೆ” ಎಂದು ಗೌರವಭಾವದಿಂದ ಹೇಳಿದರು. ವ್ಯಕ್ತಿತ್ವ, ವಿನಯ ಹಾಗೂ ಸಮಾಜಮುಖಿ ಚಿಂತನೆಯೇ ಶರಣ ಸಂಸ್ಕೃತಿಯ ಸಾರವಾಗಿದ್ದು, ಅದನ್ನು ಯುವ ಪೀಳಿಗೆಗೆ ತಲುಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಕರೆ ನೀಡಿದರು.

ವಿಐಎಸ್‌ಎಲ್ ಪುನಶ್ಚತನ

ಮಹೋತ್ಸವದ ವೇದಿಕೆಯಲ್ಲಿ ಮಾತನಾಡಿದ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಭದ್ರಾವತಿಯ ವಿಶ್ವೇಶರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ (ವಿಐಎಸ್‌ಎಲ್) ಪುನಶ್ಚತನಕ್ಕೆ ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್) ₹5,000 ಕೋಟಿ ಅನುದಾನ ನೀಡಲು ನಿರ್ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೂ ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಘೋಷಿಸಿದರು.

ಮಠದಿಂದ ₹5 ಕೋಟಿ

“ಎರಡೂವರೆ ತಿಂಗಳೊಳಗೆ ಕಾರ್ಖಾನೆಗೆ ದೊಡ್ಡಮಟ್ಟದ ಕಾಯಕಲ್ಪ ಆರಂಭವಾಗಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ,” ಎಂದು ಸ್ಪಷ್ಟ ಭರವಸೆ ನೀಡಿದ ಅವರು, ಹಣಕಾಸು ಸಚಿವರ ಸಹಿ ಮಾತ್ರ ಬಾಕಿ ಇದ್ದು, ಶೀಘ್ರದಲ್ಲೇ ಅಧಿಕೃತ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಭದ್ರಾವತಿ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ವಿಐಎಸ್‌ಎಲ್ ಪುನಶ್ಚತನಕ್ಕೆ ಸಿರಿಗೆರೆಯ ತರಳಬಾಳು ಮಠದಿಂದ ₹5 ಕೋಟಿ ನೀಡುವುದಾಗಿ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಘೋಷಿಸಿದರು. ಮಹೋತ್ಸವದ ಕಾಣಿಕೆ ಸಂಗ್ರಹದಲ್ಲಿ ಉಳಿದ ಹಣಕ್ಕೆ ಮಠದಿಂದ ಇನ್ನಷ್ಟು ನೆರವು ಸೇರಿಸಿ ಕೊಡುವುದಾಗಿ ತಿಳಿಸಿದರು. ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಕಾರ್ಖಾನೆ ಪುನಶ್ಚತನಕ್ಕೆ ಅಗತ್ಯ ಹಣಕಾಸು ವ್ಯವಸ್ಥೆ ಮಾಡುವಂತೆ ಸಚಿವ ಕುಮಾರಸ್ವಾಮಿಯವರಿಗೆ ಮನವಿ ಮಾಡಿದರು.

“ಸರ್ಕಾರದ ಗ್ಯಾರಂಟಿಗಳಿಗಿಂತ ಜನರಿಗೆ ದುಡಿಯುವ ಗ್ಯಾರಂಟಿ ಅತ್ಯಂತ ಮುಖ್ಯ. ಕೆಲಸದ ಅವಕಾಶಗಳು ಸಿಕ್ಕರೆ ಜನರಿಗೆ ಬೇರೆ ಯಾವುದೂ ಬೇಡ,” ಎಂದು ಹೇಳಿದರು.

ಮಹೋತ್ಸವದ ಅಂಗವಾಗಿ ವಚನಗಾಯನ, ಭಕ್ತಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶರಣ ಸಂಸ್ಕೃತಿಯ ಮೌಲ್ಯಗಳನ್ನು ಜನಮನಕ್ಕೆ ತಲುಪಿಸುತ್ತಿವೆ.

ಸಿರಿಗೆರೆಯಿಂದ ಭದ್ರಾವತಿಗೆ ಯುವಕರು ಬೈಕ್‌ಗಳಲ್ಲಿ ನಡೆಸಿದ ಭವ್ಯ ಮೆರವಣಿಗೆ ವಿಶೇಷ ಗಮನ ಸೆಳೆದಿತು.

ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮಿಗಳು, ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಗೋವಿಂದ ಕಾರಜೋಳ, ಶಾಸಕರಾದ ಬಿ.ಪಿ. ಹರೀಶ್, ಎಂ. ಚಂದ್ರಪ್ಪ, ಶಿವಗಂಗಾ ಬಸವರಾಜ್, ಬಿ.ಕೆ. ಸಂಗಮೇಶ್, ಶಾರದಾ ಪೂರ್ಯಾ ನಾಯ್ಕ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಮಾಜಿ ಸಚಿವ ಸಾರಾ ಮಹೇಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.

(ವರದಿ ಕೃಪೆ ಡಿಜಿಟಲ್ ನ್ಯೂಸ್ 24 ಶಿವಮೊಗ್ಗ)

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
1 Comment
  • K S Eshwarappa ನೀ ಏನು ಲಿಂಗಾಯತ. ಲಿಂಗಾಯತ ಬಗ್ಗೆ ವಿಷಯ ತೆಗೆದರೆ ಚನ್ನಾಗಿರಕ್ಕಿಲ್

Leave a Reply

Your email address will not be published. Required fields are marked *

ಸಂಪಾದಕರು, ಡಿಟೆಕ್ಟಿವ್ ನ್ಯೂಸ್ 24