ಧರ್ಮ ಮಾನ್ಯತೆಗೆ ಕೇಂದ್ರ ಕೇಳಿರುವ ಪ್ರಶ್ನೆಗಳಿಗೆ ರಾಜ್ಯ ಉತ್ತರಿಸಲಿ: ಜಾಮದಾರ

ಬಸವ ಮೀಡಿಯಾ
ಬಸವ ಮೀಡಿಯಾ

ಹೊಸಪೇಟೆ

ಲಿಂಗಾಯತ ಧರ್ಮ ಮಾನ್ಯತೆಗೆ ಮತ್ತೊಮ್ಮೆ ಮನವಿ ಸಲ್ಲಿಸಬೇಕಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಮೂರನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ರಾಜ್ಯ ಸರ್ಕಾರದಿಂದ 2018ರಲ್ಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತು.

“ಕೇಂದ್ರ ಸರ್ಕಾರ ಮೂರು ಪ್ರಶ್ನೆಗಳನ್ನು ಮುಂದಿಟ್ಟು ರಾಜ್ಯ ಸರ್ಕಾರಕ್ಕೆ ಉತ್ತರ ಕೇಳಿದೆ. ಇವು ಯಾವುವೂ ಗಂಭೀರ ಪ್ರಶ್ನೆಗಳಲ್ಲ, ಆದರೂ ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರಗಳು ಅವುಗಳನ್ನು ಉತ್ತರಿಸಿಲ್ಲ.

ಕೇಂದ್ರಕ್ಕೆ ಸಮರ್ಪಕ ಉತ್ತರದೊಂದಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಲಿಂಗಾಯತರು ಒಗ್ಗೂಡಿ ಕಾಂಗ್ರೆಸ್‌ ಸರ್ಕಾರಕ್ಕೆ ಮನವಿ ಸಲ್ಲಿಸೋಣ,” ಎಂದು ಹೇಳಿದರು.

ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿರುವ ಮನವಿ 94 ಪುಟಗಳಲ್ಲಿದೆ. ಈ ಮನವಿ ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಲಾಗಿದೆ. ಇನ್ನೊಂದೆರಡು ವಾರಗಳಲ್ಲಿ ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ.
ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕ ಹೊರ ತಂದು ಒಂದು ಲಕ್ಷ ಪ್ರತಿಗಳನ್ನು ಹಂಚಲಾಗುವುದು ಎಂದು ತಿಳಿದು ಬಂದಿದೆ.

“ಅಲ್ಪಸಂಖ್ಯಾತ ರಾಷ್ಟ್ರೀಯ ಆಯೋಗ ಲಿಂಗಾಯತ, ವೀರಶೈವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸುಳ್ಳು ಹೇಳಿದೆ. ಈ ಕುರಿತು 500 ಪುಟಗಳ ಸರ್ಕಾರಿ ದಾಖಲೆಗಳಿದ್ದರೂ, ಸುಳ್ಳು ಹೇಳಲಾಗಿದೆ.

ಕೇಂದ್ರ ಸರ್ಕಾರ ಲಿಂಗಾಯತ ಧರ್ಮದಲ್ಲಿ ದಲಿತರು ಇದ್ದಾರೆ. ಸ್ವತಂತ್ರ ಧರ್ಮ ಮಾಡಿದರೆ, ದಲಿತರು ಸೌಲಭ್ಯ ವಂಚಿತರಾಗಲಿದ್ದಾರೆ ಎಂದು ಸುಳ್ಳು ಹೇಳಿದೆ. ಆದರೆ, ಸಿಖ್, ಬೌದ್ಧ ಧರ್ಮದಲ್ಲಿ ದಲಿತರಿದ್ದಾರೆ. ಅವರು ಸೌಲಭ್ಯ ವಂಚಿತರಾಗಿದ್ದಾರಾ,” ಎಂದು ಜಾಮದಾರ ಪ್ರಶ್ನಿಸಿದರು.

ಇನ್ನು 1871ರ ಜಾತಿ ಗಣತಿಯಲ್ಲಿ ಲಿಂಗಾಯತರು ಹಿಂದೂ ಧರ್ಮದ ಭಾಗವಾಗಿದ್ದರು ಎಂದು ಹೇಳಿದೆ. ಆದರೆ, ಹಿಂದೂ ಧರ್ಮದ ಭಾಗವಾಗಿದ್ದ ಸಿಖ್‌ ಧರ್ಮಕ್ಕೆ 1963ರಲ್ಲಿ ಮತ್ತು ಬೌದ್ಧ ಧರ್ಮಕ್ಕೆ 1993ರಲ್ಲಿ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಲಾಗಿದೆ. ಇನ್ನು ಜೈನರಿಗೆ 2014ರಲ್ಲಿ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಲಾಗಿದೆ. 900 ವರ್ಷಗಳ ಇತಿಹಾಸ ಹೊಂದಿರುವ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲಾಗುತ್ತಿಲ್ಲ. ಇದರಿಂದ ಲಿಂಗಾಯತರಿಗೆ ದೊರೆಯುವ ಅಲ್ಪಸಂಖ್ಯಾತರ ಸೌಲಭ್ಯ ಮರೆಯಾಗುತ್ತಿದೆ ಎಂದರು.

ಬಾಚಿಗೊಂಡನಹಳ್ಳಿಯ ಶಿವಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಕೇಂಪಗೌಡರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಗುಂಗಡ ಶೆಟ್ಟರ್, ಬಸವರಾಜ ರೊಟ್ಟಿ, ಡಾ. ಟಿ.ಆರ್. ಚಂದ್ರಶೇಖರ, ನಾಗನಗೌಡರು, ಹೇಮಯ್ಯಸ್ವಾಮಿ, ಮೆಟ್ರಿ ಮಲ್ಲಿಕಾರ್ಜುನ, ಪರಮೇಶ್ವರಪ್ಪ, ಮಾವಿನಹಳ್ಳಿ ಬಸವರಾಜ, ಡಾ. ಜೆ.ಎಸ್. ಪಾಟೀಲ, ಕೋರಿಶೆಟ್ಟಿ ಲಿಂಗಪ್ಪ, ಡಾ.‌ ಮಹಾಬಲೇಶ್ವರ ರೆಡ್ಡಿ, ಗೌರಮ್ಮ, ಪ್ರೇಮಾ, ಸರ್ವಮಂಗಳಮ್ಮ ಮತ್ತಿತರರಿದ್ದರು. ಉಪನ್ಯಾಸಕ ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು. ಅಂಗಡಿ ವಾಮದೇವ ಪ್ರಾರ್ಥಿಸಿದರು.

ನಂತರ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಸಮಾವೇಶದಲ್ಲಿ ವಿಜಯನಗರ ಜಿಲ್ಲಾ ಘಟಕ ಉದ್ಘಾಟನೆಯಾಗಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
5 Comments
  • ಉತ್ತರ ರೂಪದಲ್ಲಿ ತಯಾರಿಸಿರುವ ಧಾಖಲೆಯನ್ನು ಸರ್ಕಾರಕ್ಕೆ ಆದ್ಯತೆಯ ಮೇಲೆ ಸಲ್ಲಿಸಿ, ಕೆ ದ್ರ ಸರ್ಕಾರಕ್ಕೆ ಆದಷ್ಟು ಶೀಘ್ರವಾಗಿ ರಾಜ್ಯ ಸರ್ಕಾರದ ಅನುಮೋದನೆಯಿಂದಿಗೆ ಸಲ್ಲಿಸಲು ಒತ್ತಾಯ ತರಬೇಕು.

  • ಅದಷ್ಟು ಬೇಗನೆ ದಾಖಲೆಗಳ ಸಮೇತ ಸಮರ್ಪಕ ಉತ್ತರಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ರಾಜ್ಯ ಸರ್ಕಾರ ವಿಳಂಬ ಮಾಡದಂತೆ ಒತ್ತಾಯಿಸಿ ಅದು ತನ್ನ ಅನುಮೋದನೆ ಸಹಿತ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ನೋಡಿಕೊಳ್ಳಬೇಕು.
    ದುರುದ್ದೇಶದಿಂದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಗಬಾರದೆಂದು ಅಪಪ್ರಚಾರ ಮಾಡುತ್ತಿರುವ ಲಿಂಗಾಯತ ದ್ರೋಹಿಗಳಿಗೂ ಸಮರ್ಪಕ ಎದಿರೇಟು ನೀಡಬೇಕು.
    ಇವೆಲ್ಲ ಕಾರ್ಯಗಳಿಗೆ ಸಾಕಷ್ಟು ಪ್ರಚಾರ ಸಿಗಬೇಕು.
    ಜಾಗತಿಕ ಲಿಂಗಾಯತ ಮಹಾಸಭಾ ಮಾಡುತ್ತಿರುವ ಈ ಪ್ರಯತ್ನಕ್ಕೆ ಅದಷ್ಟು ಬೇಗನೆ ಜಯ ಸಿಗಲಿ ಎಂದು ಪ್ರಾರ್ಥಿಸುವೆ.

  • ಲಿಂಗಾಯತ ಧರ್ಮ ಮಾನ್ಯತೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಮೂರು ಪ್ರಶ್ನೆಗಳಿಗೆ ಉತ್ತರಗಳನ್ನು ಕೋರಿದೆ. ಈ ಮೂರು ಪ್ರಶ್ನೆಗೆ ಉತ್ತರ ಗೊತ್ತಿದ್ದು, ಕೇಂದ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.
    ರಾಜ್ಯ ಸರ್ಕಾರ ಈ ಕೂಡಲೇ ಉತ್ತರ ಸಹಿತವಾಗಿ ಸ್ವತಂತ್ರ ಧರ್ಮ ಮಾನ್ಯತೆಗೆ ಮರುಪ್ರಸ್ತಾವನೆಯನ್ನ ಸಲ್ಲಿಸುವಂತೆ ಜಾಗತಿಕ ಲಿಂಗಾಯತ ಮಹಾಸಭಾ ದಿಟ್ಟ ಹೆಜ್ಜೆಗಳನ್ನು ಇಡಬೇಕಾಗಿದೆ. ಇದಕ್ಕೆ ಎಲ್ಲ ಬಸವಪರ ಸಂಘಟನೆಗಳು, ಬಸವಪರ ಮಠಾಧೀಶರು ಒಮ್ಮತದಿಂದ ಬೆಂಬಲವನ್ನು ನೀಡುವುದರ ಮೂಲಕ ಸಹಕರಿಸಬೇಕಿದೆ..
    ಇಲ್ಲಾಂದ್ರೆ ನಮ್ಮನ್ನ ಒಂದು ಮಾಡ್ತೀವಿ ಅಂತ ಹೇಳಿ ಇಂದು ಮಹಾಸಾಗರದಲ್ಲಿ ಮುಳುಗಿಸುತ್ತಾರೆ.
    ಶರಣು ಶರಣಾರ್ಥಿಗಳು 🙏

  • ಈಗಿನ ಮಾನ್ಯ ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ಸ್ವೀಕರಿಸುತ್ತದೆ. ನಾವುಗಳು ಜಾಗರೂಕವಾಗಿ ನೆರವೇರಿಕೊಳ್ಳಬೇಕಾಗಿದೆ. ಇದಕ್ಕೆಲ್ಲ ನಮ್ಮ ರಾಜಕೀಯ ಸಮರ್ಥರನ್ನು ಬಳಸಿಕೊಂಡು ಮುಂದುವರಿಯಬೇಕು.

Leave a Reply

Your email address will not be published. Required fields are marked *