ರಾಯಚೂರು:
ಡಾಂಭಿಕತೆ ಇಲ್ಲದ, ವೇಷಧಾರಿಗಳ ವಿರುದ್ಧ ಸಿಡಿದೇಳುವ ಸ್ವಭಾವ ಶರಣ ಅಂಬಿಗರ ಚೌಡಯ್ಯನವರದು. ಅವರ ಮಾತು ಕತ್ತಿಯಂತೆ ಹರಿತವಾಗಿದ್ದರೂ, ಅದು ಕಟುಕನ ಕೈಯಲ್ಲಿನ ಕತ್ತಿಯಲ್ಲ, ಶಸ್ತ್ರಚಿಕಿತ್ಸೆ ಮಾಡುವ ವೈದ್ಯನ ಕೈಯಲ್ಲಿನ ಸಂಸ್ಕಾರಗೊಂಡ ಕತ್ತಿಯಂತಿತ್ತು ಎಂದು ರಂಗಪ್ಪ ಮ್ಯಾದಾರ ಅವರು ಹೇಳಿದರು.
ನಗರದ ಬಸವ ಕೇಂದ್ರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯ ಅಂಗವಾಗಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾನ್ವಿ ಬಸವಕೇಂದ್ರದ ಅಧ್ಯಕ್ಷರಾದ ರಂಗಪ್ಪ ಮ್ಯಾದಾರ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
“ಅಂಬಿಗ ಅಂಬಿಗ ಎಂದು ನುಡಿಯದಿರು, ಒಂದೇ ಹುಟ್ಟಲಿ ಕಡೆಯ ಹಾಯಿಸುವ ಚೌಡಯ್ಯ” ಎಂಬ ವಚನವನ್ನು ಉಲ್ಲೇಖಿಸಿ, ಚೌಡಯ್ಯನವರ ಧೀರ-ನೇರ ವ್ಯಕ್ತಿತ್ವವನ್ನು ವಿವರಿಸಿದರು. ಅಜ್ಞಾನಿ ಗುರುಗಳನ್ನು ತಿದ್ದುವಲ್ಲಿ ಚೌಡಯ್ಯನವರ ಪ್ರಯತ್ನ ಅತ್ಯಂತ ಪರಿಣಾಮಕಾರಿಯಾಗಿತ್ತು.
ಲಿಂಗಧಾರಿಯಾದ ಬಳಿಕ ಜಾತಿ ಭೇದ ತ್ಯಜಿಸುವುದೇ ಶರಣ ಸಿದ್ಧಾಂತವಾಗಿದ್ದು, ಕುಲಹೀನ ಶಿಷ್ಯನಿಗೆ ಅನುಗ್ರಹಿಸಿದ ಮೇಲೆ ಸಹಪಂಕ್ತಿ ಭೋಜನ ಮಾಡುವುದೇ ನಿಜಗುರುವಿನ ಧರ್ಮ ಎಂದು ತಿಳಿಸಿದರು. ಸಮಾನ ಸಮಾಜ ನಿರ್ಮಾಣಕ್ಕೆ ಇಂತಹ ನಿಜಗುರುಗಳ ಮಾರ್ಗದರ್ಶನ ಇಂದಿನ ದಿನಗಳಲ್ಲಿ ಅತ್ಯವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಶರಣ ಚಿಂತಕರಾದ ಶರಣೆ ಮುಕ್ತಾ ನರಕಲದಿನ್ನಿ ಅವರು ಮಾತನಾಡಿ, ಗಾಳಿ ಬೀಸುವಾಗ ಜೊಳ್ಳು ಮತ್ತು ಗಟ್ಟಿಕಾಳು ಬೇರ್ಪಡುವಂತೆ, ಜೀವನದಲ್ಲೂ ಅವಕಾಶಗಳು ದೊರಕುವ ಸಮಯವನ್ನು ಗುರುತಿಸಿ ಅವುಗಳನ್ನು ಸದುಪಯೋಗಪಡಿಸಿಕೊಳ್ಬೇಕು ಎಂದು “ಗಾಳಿ ಹಡೆದಲ್ಲಿ ತೂರಿಕೊಳ್ಳಿರಯ್ಯ, ಗಾಳಿ ನಿನ್ನಾಧೀನವಲ್ಲವಯ್ಯ” ಎಂಬ ಚೌಡಯ್ಯನವರ ವಚನದ ಮೂಲಕ ವಿವರಿಸಿದರು.
ಶಿವಶರಣರು ಲೋಕಕಲ್ಯಾಣಕ್ಕಾಗಿ ತಂಗಾಳಿಯಂತೆ ಸಂಚರಿಸುತ್ತಾರೆ. ಆ ಸಂದರ್ಭದಲ್ಲಿ ನಮ್ಮ ಮನಸ್ಸಿನ ಅನಾವಶ್ಯಕತೆಯನ್ನು ತೂರಿ ಮೌಲ್ಯಯುತವಾದುದನ್ನು ಉಳಿಸಿಕೊಳ್ಳಬೇಕೆಂದು ಹೇಳಿದರು.
ರಾಯಚೂರು ಬಸವ ಕೇಂದ್ರದಲ್ಲಿ ಪ್ರತಿ ಭಾನುವಾರ ಶಿವಶರಣರ ತಂಗಾಳಿ ಬೀಸುತ್ತಿದ್ದು, ಸಾರ್ವಜನಿಕರು ನಿರಂತರವಾಗಿ ಭಾಗವಹಿಸಿ ಮನಸ್ಸಿನ ಶುದ್ಧೀಕರಣ ಮಾಡಿಕೊಂಡು ಹೋಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಹರವಿ ನಾಗನಗೌಡರು ಮಾತನಾಡಿದರು. ಎಸ್. ಶಂಕರಗೌಡರು ಮತ್ತು ಸಂಗಡಿಗರು ವಚನ ಗಾಯನವನ್ನು ಪ್ರಸ್ತುತ ಪಡಿಸಿದರು. ಮಕ್ಕಳಿಗೆ ವಚನ ಪಾಠಶಾಲೆ ಹಾಗೂ ಸಾಮೂಹಿಕ ಬಸವ ಪ್ರಾರ್ಥನೆಯನ್ನು ಪೂರ್ಣಿಮ ಪಾಟೀಲ ನಡೆಸಿಕೊಟ್ಟರು.
ಬಲ್ಲಟಗಿ ಬಸವನಗೌಡ ಸ್ವಾಗತಿಸಿದರು. ವಿಶ್ರಾಂತ ಪ್ರಾಚಾರ್ಯ ಅಮರೇಗೌಡ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಮರಪ್ಪ ಅಮೀನಗಡ ವಂದಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು.
ಹರವಿ ಶಂಕರಗೌಡರು, ಜಗದೇವಿ ಚನ್ನಬಸವ, ಸೂಗೂರಯ್ಯ ತಾತ, ಸರೋಜಾ ಮಾಲಿಪಾಟೀಲ, ಸಿ.ಬಿ. ಪಾಟೀಲ ಸೇರಿದಂತೆ ಹಲವಾರು ಶರಣ, ಶರಣೆಯರು ಭಾಗವಹಿಸಿದ್ದರು.
