ಗದಗ:
ದೇಶದ ಇಂದಿನ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ೧೨ನೇ ಶತಮಾನದಲ್ಲೇ ಮುನ್ನುಡಿ ಬರೆದವರು ಬಸವಾದಿ ಶರಣರು. ಸಮಾನತೆ, ಜಾತ್ಯಾತೀತತೆ, ಮಾನವೀಯತೆ ಎಂಬ ಮೌಲ್ಯಗಳಿಗೆ ಪಿತಾಮಹರಾದವರು ಶರಣರು ಎಂದು ಶರಣೆ ಗಿರಿಜಾ ಹಿರೇಮಠ ಹೇಳಿದರು.
ಬಸವದಳದ ವತಿಯಿಂದ ಆಯೋಜಿಸಲಾದ ೧೬೮೨ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಕುರಿತು ಮಾತನಾಡಿದರು.
ಅಂದು ಮೇಲು–ಕೀಳು, ವರ್ಗ–ವರ್ಣ, ಜಾತಿಭೇದಗಳಿಂದ ತುಂಬಿದ್ದ ಸಮಾಜದಲ್ಲಿ ಸರ್ವರೂ ಸಮಾನರು, ಭುವಿಯಲ್ಲಿರುವರೆಲ್ಲರೂ ದೇವರ ಮಕ್ಕಳು ಎಂಬ ಕ್ರಾಂತಿಕಾರಿ ತತ್ತ್ವವನ್ನು ಬಸವಾದಿ ಶರಣರು ಪ್ರತಿಪಾದಿಸಿದರು. ಜಾತಿರಹಿತ ನವ ಸಮಾಜ ನಿರ್ಮಾಣವೇ ಅವರ ನಿಷ್ಕಳಂಕ ಕನಸಾಗಿತ್ತು ಎಂದು ಹೇಳಿದರು.

ಅನುಭವ ಮಂಟಪದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಸಿದ್ಧರಾಮರು, ಹಡಪದ ಅಪ್ಪಣ್ಣ ಸೇರಿದಂತೆ ಅನೇಕ ಶಿವಶರಣರ ನಡುವೆ ನಿಜಶರಣ, ನೇರ ನಿಷ್ಠುರವಾದಿ ಹಾಗೂ ಬಂಡಾಯದ ಹರಿಕಾರರಾದ ಅಂಬಿಗರ ಚೌಡಯ್ಯನವರು ಪ್ರಮುಖ ಶರಣರಾಗಿದ್ದರು ಎಂದ ತಿಳಿಸಿದರು.
ರಾಣೆಬೆನ್ನೂರ ತಾಲ್ಲೂಕಿನ ಶಿವಪುರ (ಇಂದಿನ ಚೌಡದಾನಪುರ)ದಲ್ಲಿ ೧೧೬೦ರಲ್ಲಿ ಜನಿಸಿದ ಚೌಡಯ್ಯನವರ ಮೂಲ ಹೆಸರು ಚೌಡೇಶ. ವಿರೂಪಾಕ್ಷ ಮತ್ತು ಪಂಪಾದೇವಿ ಇವರ ತಂದೆ–ತಾಯಿ. ಆರಂಭದಲ್ಲಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದ ಅವರು ನಂತರ ಅಂಬಿಗರ ಚೌಡಯ್ಯನವರಾಗಿ ಖ್ಯಾತರಾದರು. ಅನುಭವ ಮಂಟಪದ ಸಂಸ್ಕಾರಗಳಿಂದ ಗಣಾಚಾರಿ ಶರಣರಾಗಿ ರೂಪುಗೊಂಡು ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಅರ್ಪಿಸಿಕೊಂಡರು ಎಂದು ವಿವರಿಸಿದರು.
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬಸವ ಧರ್ಮ ಹಾಗೂ ವಚನ ಸಾಹಿತ್ಯದ ರಕ್ಷಣೆಯಲ್ಲಿ ಚೌಡಯ್ಯನವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಚನ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ಖಡ್ಗ ಹಿಡಿದು ಹೋರಾಡಿದ ವೀರಗಣಾಚಾರಿಗಳಲ್ಲಿ ಅವರು ಒಬ್ಬರಾಗಿದ್ದರು ಎಂದರು.

ಅವರ ವಚನಗಳಲ್ಲಿ ಏಕದೇವೋಪಾಸನೆ, ವೈಚಾರಿಕತೆ, ಇಷ್ಟಲಿಂಗ ನಿಷ್ಠೆ ಹಾಗೂ ನೈತಿಕ ಮೌಲ್ಯಗಳ ಪ್ರತಿಪಾದನೆ ಸ್ಪಷ್ಟವಾಗಿ ಕಾಣುತ್ತದೆ. ತಮ್ಮ ನಿಷ್ಠುರ ವಚನಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ ಶರಣ ಅಂಬಿಗರ ಚೌಡಯ್ಯನವರು ಎಂದು ಗಿರಿಜಾ ಹಿರೇಮಠ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗಿರಿಜಕ್ಕ ಧರ್ಮರೆಡ್ಡಿ ಅವರು, ಶರಣ ಸಾಹಿತ್ಯವು ಸಂಸ್ಕಾರ ನೀಡುವ ಸಾಹಿತ್ಯವಾಗಿದ್ದು, ಮಕ್ಕಳಲ್ಲಿ ಶರಣ ಸಾಹಿತ್ಯ ಓದುವ ಅಭ್ಯಾಸ ಬೆಳೆಸಬೇಕಾಗಿದೆ. ಮೊಬೈಲ್ ಗೀಳಿನಿಂದ ಮಕ್ಕಳನ್ನು ದೂರವಿಟ್ಟು, ವಚನ ಓದು ಮತ್ತು ಇಷ್ಟಲಿಂಗ ಪೂಜೆಯ ಸಂಸ್ಕೃತಿಯನ್ನು ಬಾಲ್ಯದಲ್ಲೇ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅತಿಥಿ ಪ್ರೊ. ಕೆ. ಎಚ್. ಬೆಲೂರ ಗುರುಗಳು ಮಾತನಾಡಿ, ಇಂದಿನ ಯುವಜನತೆ ಸಂಸ್ಕಾರರಹಿತವಾಗಿ ಅಧಃಪತನದತ್ತ ಸಾಗುತ್ತಿರುವ ಸಂದರ್ಭದಲ್ಲಿ ವಚನ ಸಾಹಿತ್ಯ ಹೊಸ ಬೆಳಕು ನೀಡುತ್ತದೆ. ಈ ನಿಟ್ಟಿನಲ್ಲಿ ಹಿರಿಯರು ಹೆಚ್ಚಿನ ಗಮನ ಹರಿಸಬೇಕೆಂದರು.
ಸಭೆಯ ಅಧ್ಯಕ್ಷತೆಯನ್ನು ಬಸವದಳದ ಕಾರ್ಯಾಧ್ಯಕ್ಷ ಎಂ. ಬಿ. ಲಿಂಗದಾಳ ವಹಿಸಿದ್ದರು. ಕಾರ್ಯಕ್ರಮ ವಚನ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶರಣೆ ಗಂಗಮ್ಮಾ ಹೂಗಾರ ನಿರೂಪಿಸಿದರು. ಶರಣೆ ನೀಲಲೋಚನ ಹಂಚಿನಾಳ ಸ್ವಾಗತಿಸಿದರು. ಶರಣು ಸಮರ್ಪಣೆಯನ್ನು ಸುಜಾತಾ ವಾರದ ಮಾಡಿದರು. ಬಸವದಳದ ಸರ್ವ ಶರಣರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಚನದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.
