ಚಾಮರಾಜನಗರ
ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮಿಗಳು ಜನರ ಬದುಕಿನ ಉನ್ನತಿಗಾಗಿ ಶ್ರಮಿಸಿದ ದೇಶದ ಧಾರ್ಮಿಕ ಸಂತ, ಮಹಾನ್ ಚೇತನ ಎಂದು ಸಾರಿಗೆ ಇಲಾಖೆಯ ನಿವೃತ್ತ ಸಂಚಾರ ನಿಯಂತ್ರಣಾಧಿಕಾರಿ ಹೊಂಗನೂರು ಸಿದ್ದಲಿಂಗಸ್ವಾಮಿ ಅಭಿಪ್ರಾಯ ಪಟ್ಟರು.
ಅವರು ನಗರದ ಮಹಾಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ‘ದಾಸೋಹ ದಿನ’ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದರು.
ತ್ರಿವಿಧ ದಾಸೋಹದ ಹಿರಿಮೆಯನ್ನು ಜಗತ್ತಿಗೆ ಸಾರಿದ ಈ ಯುಗದ ಸಂತರಾಗಿದ್ದ ಶ್ರೀಗಳು ಅರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಬಡಮಕ್ಕಳ ಶಿಕ್ಷಣಕ್ಕಾಗಿ ಹಲವು ಸವಾಲುಗಳನ್ನು ಎದುರಿಸಿ, ಅನ್ನ -ಅಕ್ಷರ -ಆಶ್ರಯ ನೀಡಿ ಲಕ್ಷಾಂತರ ಮಕ್ಕಳ ಬದುಕಿಗೆ ದಾರಿದೀಪವಾಗಿದ್ದಾರೆ.
ಅವರ ಸರಳ ಜೀವನ, ಸಾಮಾಜಿಕ ಕಳಕಳಿ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎನ್ ರಿಚ್ ಮಹಾದೇವಸ್ವಾಮಿ ಮಾತನಾಡಿ, ಸ್ವಾತಂತ್ರಪೂರ್ವದಲ್ಲೇ ಶಿಕ್ಷಣ ಕ್ರಾಂತಿ ಮಾಡಿ, ಬಹುಸಂಖ್ಯಾತ ಜನರು ವಿದ್ಯಾವಂತರಾಗಲು, ಜೀವನ ರೂಪಿಸಿಕೊಳ್ಳಲು ಶ್ರೀಗಳು ನೀಡಿದ ಕೊಡುಗೆ ಅನನ್ಯವಾದುದು. ಅವರ ಸೇವೆಗಾಗಿ ಕೇಂದ್ರ ಸರಕಾರ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.
ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಂದಿಗೌಡನಹಳ್ಳಿ ಸಿದ್ದಮಲ್ಲಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು.
ಸಂಘದ ಕಾರ್ಯದರ್ಶಿ ಅರ್ಕಪ್ಪ, ಉಪಾಧ್ಯಕ್ಷ ಎನ್. ಮಹದೇವಸ್ವಾಮಿ, ಡಾ. ಪರಮೇಶ್ವರಪ್ಪ, ಹೊನ್ನಮೇಟಿ ಸುಂದರ್, ಯೋಗದೊರೆಸ್ವಾಮಿ, ಆರ್. ಎಸ್. ಲಿಂಗರಾಜು, ಬಿ.ಎಸ್. ಬಸವರಾಜಪ್ಪ, ಎಂ. ನಾಗರಾಜು, ಸೋಮೇಶ, ಸದಾಶಿವಮೂರ್ತಿ, ಪ್ರಾಂಶುಪಾಲ ಮಹದೇವಸ್ವಾಮಿ, ಮೂರ್ತಿ, ಕಾವುದವಾಡಿ ಗುರು, ಪ್ರಭುಲಿಂಗಸ್ವಾಮಿ, ಜೆ.ಎಸ್. ಎಸ್. ವಸತಿನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಸಂಗಮ ಗೃಹ ನಿರ್ಮಾಣ ಸಹಕಾರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
