ಬಸವಕಲ್ಯಾಣ:
ಫ್ರಾನ್ಸ್ ಕ್ರಾಂತಿಯ ನಂತರ ವಿಚಾರವಾದಿಗಳು ಮನುಷ್ಯ ಸ್ವಾತಂತ್ರ್ಯ, ಸಮಾನತೆಯ ಬಗೆಗೆ ಮಾತನಾಡಿದ್ದಾರೆ. ನಮ್ಮಲ್ಲಿ ಹನ್ನೆರಡನೇ ಶತಮಾನದಲ್ಲಿಯೇ ಬಸವಾದಿ ಶರಣರು ಸ್ವಾತಂತ್ರ್ಯ, ಸಮಾನತೆಯ ಕುರಿತು ಚಿಂತನೆ ಮಾಡಿದ್ದರು ಎಂದು ಧಾರವಾಡದ ಹಿರಿಯ ಚಿಂತಕ ಪ್ರೊ. ಶ್ಯಾಮಸುಂದರ ಬಿದರಕುಂದಿ ಹೇಳಿದರು.
ನಗರದ ತೇರು ಮೈದಾನ ಸಭಾಭವನದ ತಾಲೂಕು ಸಾರ್ವಜನಿಕ ಗ್ರಂಥಾಲಯದಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ೯೭ನೇ ಉಪನ್ಯಾಸ ಮತ್ತು ಸಂವಾದ ಸಮಾರಂಭದಲ್ಲಿ ‘ಸಮಕಾಲೀನ ಸೈದ್ಧಾಂತಿಕ ಚಿಂತನೆಗಳು’ ಕುರಿತು ಮಾತನಾಡಿದ ಅವರು, ಶ್ರೇಷ್ಠ ಸಾಹಿತ್ಯ ಓದುವುದರ ಮೂಲಕ ಬದುಕನ್ನು ವಿಶ್ಲೇಷಿಸಬೇಕು ಎಂದರು.
ಹಸಿದವರನ್ನು ಜೊತೆಗೆ ತೆಗೆದುಕೊಂಡು ಮಹಾ ಮನೆಯಲ್ಲಿ ಉಣ್ಣುವ ಮೂಲಕ ಬಸವಣ್ಣನವರು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸಿದರು. ಎಲ್ಲ ಭೇದಗಳನ್ನು ಬಿಟ್ಟು ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಳಿಸಿಕೊಂಡಿದ್ದು ವಚನ ಚಳುವಳಿ ಎಂದರು.
ಬಸವಣ್ಣನವರಲ್ಲಿ ಆದೇಶಾತ್ಮಕ ವಿಚಾರಗಳಿರಲಿಲ್ಲ. ಎಲ್ಲರೊಟ್ಟಿಗೆ ಬದುಕಲು ಹಂಬಲಿಸಿದ ಬಸವಣ್ಣ ಮತ್ತು ಗಾಂಧೀಜಿಯವರು ಆಪ್ತತೆಯ ವಿಚಾರಗಳು ಹೊಂದಿದ್ದರು. ಅವರ ಸಾಹಿತ್ಯದ ತಾತ್ವಿಕತೆ ಸಮಾಜವಾದಿಯಾಗಿದೆ. ‘ಇವ ನಮ್ಮವ’ ಎಂಬ ಆಪ್ತತೆಯ ಚಿಂತನೆಗಳಿಂದ ಬಸವಣ್ಣನವರ ಮತ್ತು ಎಲ್ಲಾ ಶರಣರ ವ್ಯಕ್ತಿತ್ವ ಶ್ರೇಷ್ಠವಾಗಿದೆ ಎಂದರು.

ಬದುಕನ್ನು, ಸಮಾಜವನ್ನು, ಜನಸಮುದಾಯವನ್ನು ಸರಿಯಾದ ಕ್ರಮದಲ್ಲಿ ಗ್ರಹಿಸಲು ಸಾಹಿತ್ಯದ ಓದಿನಿಂದ ಸಾಧ್ಯ.
ಸಂಗೀತ, ನೃತ್ಯ ಸೇರಿ ಯಾವುದೇ ಕಲೆಗಳಲ್ಲಿ ಕಾಣದ ಎಡ-ಬಲ ಎಂಬ ಪರಿಕಲ್ಪನೆ ಸಾಹಿತ್ಯದಲ್ಲಿ ಹೆಚ್ಚಾಗಿದೆ. ಎಡ-ಬಲ ಎಂಬುದು ಮೂಲತಃ ರಾಜ್ಯಶಾಸ್ತ್ರದ ಪರಿಕಲ್ಪನೆಯಾಗಿದೆ. ಎಡ-ಬಲ ಪದಗಳಿಂದ ಎಲ್ಲವನ್ನೂ ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಎಸ್. ಜಿ ಹುಡೇದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಂಥಾಲಯ ಸಹಾಯಕರಾದ ನಿಂಗಪ್ಪ ತುಂಬಗಿ, ಚಂದ್ರಕಾಂತ ಅಕ್ಕಣ್ಣ, ಡಾ. ಶಿವಾಜಿ ಮೇತ್ರೆ, ಶರಣಪ್ಪ ಗದಲೆಗಾಂವ, ಡಾ. ಸಂಗಪ್ಪ ತೌಡಿ, ನಾಗಪ್ಪ ನಿಣ್ಣೆ, ಶಿವಪುತ್ರ ಗಿರಗಂಟೆ, ಶಿವಪುತ್ರ ಸಂಗನಬಸವ, ಗಂಗಾಧರ ಸಾಲಿಮಠ, ವಿವೇಕಾನಂದ ಶಿಂದೆ, ನಿಂಗಪ್ಪ ಸಂವಾದದಲ್ಲಿ ಭಾಗವಹಿಸಿದ್ದರು.
ನಾಗೇಂದ್ರ ಬಿರಾದಾರ ಭಾವಗೀತೆ ಹಾಡಿದರು. ರಮೇಶ ಉಮಾಪುರೆ ಸ್ವಾಗತಿಸಿದರು. ಭೀಮಾಶಂಕರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು. ಸಂಜುಕುಮಾರ ನಡುಕರ ವಂದಿಸಿದರು.
