ಸಾಮಾಜಿಕ ಬದಲಾವಣೆ ಹರಿಕಾರ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ

ಗದಗ

ಮನುಷ್ಯನಿಗೆ ಹುಟ್ಟು ಅಕಸ್ಮಿಕ ಸಾವು ನಿಶ್ಚಿತ ಆದರೆ ಹುಟ್ಟು ಸಾವಿನ ಮಧ್ಯೆ ಮನುಷ್ಯರು ತಾವು ಮಾಡಿದ ಮಹಾತ್ಕಾರ್ಯಗಳಿಂದ, ಮಹಾನ್ ವ್ಯಕ್ತಿಗಳಾಗುತ್ತಾರೆ. ದೇವಮಾನವರಾಗುತ್ತಾರೆ. ಅಂತಹವರ ಸಾಲಿನಲ್ಲಿ ದೇವಮಾನವರಾಗಿ ಜೀವಿಸಿದ್ದವರು ಲಿಂಗೈಕ್ಯ ಪರಮಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು.

ಲೋಕದಂತೆಬಾರರು ಲೋಕದಂತೆ ಇರರು ಲೋಕದಂತೆ ಹೋಗರು ನೋಡಯ್ಯ ಪುಣ್ಯದಂತೆ ಬಪ್ಪರು ಜ್ಞಾನದಂತೆ ಇಪ್ಪರು ಮುಕ್ತಿಯಂತೆ ಹೋಹರು ನೋಡಯ್ಯ ಉರಿಲಿಂಗದೇವಾ ನಿಮ್ಮ ಶರಣರು ಉಪಮಿಸಬಾರದ ಉಪಮಾತೀತರು ಎಂಬ ಶರಣರ ವಾಣಿಯಂತೆ ಜನಮಾನಸದಲ್ಲಿ ಅಚ್ಚಳಿಯದಂತೆ ಛಾಪು ಮೂಡಿಸಿದವರು ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿಯವರು.

ಶೂನ್ಯ ಪರಂಪರೆಯ ೧೯ನೇ ಪೀಠಾಧಿಪತಿಗಳಾಗಿ ೧೯೭೪, ಜುಲೈ ೨೯ರಂದು ಅಧಿಕಾರ ವಹಿಸಿಕೊಂಡರು. ವೈಚಾರಿಕ ಚಿಂತನೆಗೆ ಹೆಚ್ಚು ಒತ್ತು ಕೊಡುತ್ತಿದ್ದ ಪೂಜ್ಯರು ಕೋಮುಸೌಹಾರ್ದತೆಯ ಹರಿಕಾರರು. ಮೂಢನಂಬಿಕೆಯ ವಿರುದ್ಧ  ಹೋರಾಡುವುದರ ಜೊತೆಗೆ ಕಾಯಕದ ಮಹತ್ವ ತಿಳಿಸುವಲ್ಲಿ ಸ್ವತ: ತಾವೇ ಕೃಷಿ ಕಾರ್ಯದಲ್ಲಿ ತೊಡಗಿದವರು.

ಸಮಾಜದ ಏಳ್ಗೆಗಾಗಿ ನಾಡು ನುಡಿಯ ಉಳುವಿಗಾಗಿ ಅವಿರತವಾಗಿ ಶ್ರಮಿಸಿದವರು. ಹತ್ತಾರು ಚಳವಳಿಯಲ್ಲಿ ನಾಯಕತ್ವ  ವಹಿಸಿಕೊಳ್ಳುವುದರ ಜೊತೆಗೆ ಅವರ ದಿಟ್ಟ ನುಡಿ ಗಟ್ಟಿ ಹೆಜ್ಜೆಯ ಮೂಲಕ ನಾಡಿಗೆ ನ್ಯಾಯ ದೊರಕಿಸಿಕೊಟ್ಟವರು. ಸಾಮಾನ್ಯರ ನೋವು ನಲಿವಿನೊಂದಿಗೆ ಸ್ಪಂದಿಸುವುದರ ಮೂಲಕ ಸಾಮಾನ್ಯರ ಸ್ವಾಮೀಜಿ ಎನಿಸಿಕೊಂಡವರು.

ಗೋಕಾಕ ಚಳವಳಿ:

ಗೋಕಾಕ ಚಳವಳಿಯ ಜಾರಿಗಾಗಿ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಧಾರವಾಡದಲ್ಲಿ ೧೯೮೨, ಎಪ್ರೀಲ್ ೪ರಂದು ಹೋರಾಟವನ್ನು ಆರಂಬಿಸಿತು. ಆದರೆ ಈ ಹೋರಾಟದ ಪೂರ್ವದಲ್ಲಿ ಅಂದರೆ ೧೫/೨/೧೯೮೨ರಲ್ಲಿ ಪೂಜ್ಯರು ಗೋಕಾಕ ವರದಿ ಜಾರಿಗೆ ತರುವಂತೆ ಹೋರಾಟಕ್ಕೆ ಸಿದ್ದರಾಗಲು ಕರೆಕೊಟ್ಟವರು. ಅಲ್ಲದೆ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಡಾ. ನಂಜುಂಡಪ್ಪ ವರದಿ ಒಂದೇ ದಾರಿ ಎಂದು ಪ್ರಬಲವಾಗಿ ಪ್ರತಿಪಾದಿಸಿದವರು.

ಶಿಕ್ಷಣ ಪ್ರೀತಿ:

ಸಮಾಜದ ಸುಧಾರಣೆಯಾಗಬೇಕಾದರೆ ಶಿಕ್ಷಣವೆಂಬುವುದು ಬ್ರಹ್ಮಾಸ್ತ್ರ ಎಂಬುದನ್ನು ಮನಗಂಡಿದ್ದ ಶ್ರೀಗಳು ಅನೇಕ ಶಾಲೆಗಳನ್ನು ತೆರೆದರು. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗದ ಹೊರತು ದೇಶದ ಸುಧಾರಣೆ ಸಾದ್ಯವಿಲ್ಲ ಎಂಬ ಗಾಂಧೀಜಿಯವರ ಮಾತಿನಂತೆ ಪೂಜ್ಯರು ಪ್ರಮುಖವಾಗಿ ರಾಜ್ಯದ ನಾನಾ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಶಿಕ್ಷಣ ಕೇವಲ ಜ್ಞಾನವನ್ನು ಮಾತ್ರವಲ್ಲದೆ ಉದ್ಯೋಗವನ್ನು ಒದಗಿಸಬೇಕೆಂಬ ಅವರ ದೂರದೃಷ್ಟಿತ್ವದ ಕಾರಣದಿಂದ ೧೯೮೩ರಲ್ಲಿ ಡಂಬಳದಲ್ಲಿ ತಾಂತ್ರಿಕ ತರಬೇತಿ ಕೇಂದ್ರ (ಐಟಿಐ)ವನ್ನು ಪ್ರಾರಂಭಿಸುವುದರ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು  ಉದ್ಯೋಗಸ್ಥರಾಗಲು ಮುನ್ನುಡಿ ಬರೆದವರು.

ಗ್ರಾಮೀಣ ಭಾಗಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡು ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಅಂದರೆ ಜೇವರ್ಗಿ, ಕಾರಟಗಿ, ಚಿಕ್ಕಪಡಸಲಗಿ, ಇಂಗಳಹಳ್ಳಿ, ಬಾಚಿಗೊಂಡನಹಳ್ಳಿ, ಡಂಬಳ, ಮಾಲಗಿತ್ತಿ  ಹೀಗೆ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ತೋಂಟದಾರ್ಯ ಶಿಕ್ಷಣ ಸಂಸ್ಥೆಗಳು ಆ ಭಾಗದ ವಿದ್ಯಾಕೇಂದ್ರಗಳಾಗಿವೆ.

ಅಲ್ಲದೆ ಎಂಜಿನಿಯರಿಂಗ್, ಡಿಪ್ಲೋಮಾ, ಸ್ನಾತಕೋತ್ತರ ಪದವಿಯವರೆಗೂ ನಿರಂತರ ಶಿಕ್ಷಣ ದಾಸೋಹದ ರೂವಾರಿಗಳಾಗಿದ್ದಾರೆ.

ಪ್ರಗತಿಪರ ಚಿಂತಕರು:

ಮಠಕ್ಕೆ ಅವರು ಬಂದಾಗ ಅದು ಹೂವಿನ ಹಾದಿಯಿರಲಿಲ್ಲ. ಹೀನಾಯ ಸ್ಥಿತಿಯಲ್ಲಿ ಇದ್ದ ಮಠ ಹಾಗೂ ಮಠದ ಭಕ್ತರನ್ನು ವೈಚಾರಿಕ ಹಿನ್ನೆಲೆಯಲ್ಲಿ ಭಾವನಾತ್ಮಕ ಸಂಬಂಧವನ್ನು ಬೆಸೆಯುವಲ್ಲಿ. ಪೂಜ್ಯರು ಕೈಗೊಂಡ ಅಮಾವ್ಯಾಸೆಯಂದು ಗದುಗಿನಿಂದ ಡಂಬಳದವರೆಗಿನ ಪಾದಯಾತ್ರೆ.

ತಾವೆ ಖುದ್ದಾಗಿ ಬಾವಿ ತೋಡುವುದರ ಮೂಲಕ ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡು ಮಣ್ಣನ್ನು ಹೊನ್ನಾಗಿಸುವುದರ ಮೂಲಕ ಜಗದ್ಗುರುಗಳು ಕೇವಲ ಪ್ರವಚನ ಹೇಳುವವರಲ್ಲ ಸಮಾಜಸುದಾರಕರೆಂದು ಸಾಬೀತುಪಡಿಸಿದರು.

ಸಮಾಜವಾದದ ಲೋಹಿಯಾರವರ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತಾ ಸಮಾಜ ಸುಧಾರಣೆ ಕೈಗೊಂಡವರು. ದಲಿತರು ರೈತರಿಗಾಗಿ ಭೂದಾನ ಮಾಡಿದರು. ತಾಂಡಾದ ಲಂಬಾಣಿ ಜನರ ಸುಧಾರಣೆಗೆ ಶ್ರಮಿಸಿದರು. ಹೀಗೆ ಅವರ ವಿಚಾರ, ಕೈಗೊಂಡ ಕಾರ್ಯ ಸ್ವಾಮಿತ್ವಕ್ಕೆ ಹೊಸ ಆಯಾಮವನ್ನು ತೋರಿದವರು.

ಶಿವಾನುಭವ:

ಭಕ್ತರನ್ನು ಒಗ್ಗೂಡಿಸಿ ಪ್ರಗತಿಪರ ಚಿಂತನೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಾಡಿನ ಅನೇಕ ಕಲಾವಿದರನ್ನು ಸಾಹಿತಿಗಳು, ಪತ್ರಕರ್ತರು ರಾಜಕಾರಣಿಗಳು ಹಾಗೂ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸಿ, ಅನೇಕ ಸಂತ, ಶರಣರ ದಾಶ೯ನಿಕ ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸಿದ್ದು ಶಿವಾನುಭವ ಕಾರ್ಯಕ್ರಮಗಳು. ಶಿವಾನುಭವ ಕಾರ್ಯಕ್ರಮಗಳು ದಾಖಲೆಯನ್ನು ನಿರ್ಮಿಸುವುದರ ಮೂಲಕ ಸಮಾಜದಲ್ಲಿ ಸೌಹಾರ್ದತೆಯನ್ನು ಮರೆಯುವಲ್ಲಿ ಕಾರಣಿಭೂತರಾದವರು.

ಪುಸ್ತಕ ಪ್ರೇಮಿ:

ಒಂದು ಪುಸ್ತಕ ನೂರು ಸ್ನೇಹಿತರ ಸಮ ಎಂಬಂತೆ ಪೂಜ್ಯರಿಗೆ ಪುಸ್ತಕಗಳೆಂದರೆ ಅಧಿಕ ಪ್ರೀತಿ. ವಿಶ್ವವಿದ್ಯಾನಿಲಯಗಳು ಪ್ರಕಟಿಸಲು ಸಾಧ್ಯವಾಗದಷ್ಟು ಪುಸ್ತಕಗಳನ್ನು ಲಿಂಗಾಯತ ಪ್ರಗತಿಶೀಲ ಸಂಘದ ಮೂಲಕ ಪ್ರಕಟಿಸಿದರು. ಐತಿಹಾಸಿಕ ಪುರಾತತ್ವ ಸ್ಥಳಗಳ ಪುನರುಜ್ಜೀವನಗೊಳಿಸುವಲ್ಲಿ, ಡಂಬಳದ ದೊಡ್ಡಬಸಪ್ಪ ಗುಡಿ ಹಾಗೂ ಸೋಮೇಶ್ವರ ಗುಡಿಯ ಜೀರ್ಣೋದ್ಧಾರದಲ್ಲಿ ಅಂದಿನ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧೀಕ್ಷಕರಾದ ಎಚ್. ವೆಂಕಟೇಶಯ್ಯರವರ ನೇತೃತ್ವದಲ್ಲಿ ಆ ದೇವಾಲಯಗಳು ಜೀರ್ಣೋದ್ಧಾರ ಮಾಡುವುದರ ಮೂಲಕ ಇತಿಹಾಸದ ಅರಿವನ್ನು ಮೂಡಿಸುವಲ್ಲಿ ಪ್ರಮುಖರಾಗಿದ್ದಾರೆ.

ಪರಿಸರ ಕಾಳಜಿ:

ಉತ್ತರ ಕನಾ೯ಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದ ಉಳಿವಿಗಾಗಿ ಅವಿರತವಾಗಿ ಶ್ರಮಿಸಿದವರು. ಪರಿಸರವಾದಿ ಮೇಧಾ ಪಾಟ್ಕರ್ ಅವರೊಂದಿಗೆ ರಾಜ್ಯದ ಅನೇಕ ಪರಿಸರವಾದಿಗಳು, ರಾಜಕಾರಣಿಗಳು, ಪ್ರಗತಿಪರ ಚಿಂತಕರು ಹಾಗೂ ಸ್ಥಳೀಯ ಜನರನ್ನು ಒಗ್ಗೂಡಿಸಿ ಪೂಜ್ಯರು ನಡೆಸಿದ ಹೋರಾಟಕ್ಕೆ ಅಂತರ್‍ರಾಷ್ಟ್ರೀಯ ಕಂಪನಿ ಬಲ್ಡೊಟಾ, ಪೊಕ್ಸೊ ಕಂಪನಿಗಳಿಗೆ ಸಿಂಹಸ್ವಪ್ನವಾಗಿ ಕೊನೆಗೂ ಹೋರಾಟದ ತೀವ್ರತೆಗೆ ಸರಕಾರ ಮಣಿದು ಕಂಪನಿಯನ್ನು ಹಿಮ್ಮೆಟ್ಟಿಸಲು ಕಾರಣರಾದವರು. ಕಪ್ಪತ್ತಗಿರಿಯನ್ನು ಸಂರಕ್ಷಿತ ಪ್ರದೇಶವಾಗಿಸಿ ಪರಿಸರವನ್ನು ಉಳಿಸಿದವರು.

ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ಅವರ ಜಯಂತ್ಯುತ್ಸವವನ್ನು ಭಾವೈಕ್ಯತೆ ದಿನವಾಗಿ ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ. ಇಂಥ ಮಹಾಚೇತನ ಮರಣವೇ ಮಹಾನವಮಿ ಎನ್ನುವುದರ ಮೂಲಕ ನಮ್ಮನಗಲಿದರೂ ಅವರ ಆದರ್ಶ   ಧ್ಯೇಯೋಧ್ದೇಶಗಳು ಸದಾ ಜೀವಂತವಾಗಿವೆ.

ಮಹಾತ್ಮರಾದವರ ಸಾವಿನ ನಂತರವು ಅವರ ಆಚಾರ, ವಿಚಾರಗಳು ಜೀವಂತವಾಗಿರುತ್ತವೆ. ಕೇವಲ ಅವರ ಶರೀರಕ್ಕೆ ಮಾತ್ರ ಸಾವು ಬರುತ್ತದೆ. ಅವರ ವಿಚಾರಗಳು ಸದಾಕಾಲಕ್ಕೂ ಪ್ರಸ್ತುತವಾಗಿರುತ್ತವೆ ಎನ್ನುತ್ತಿದ್ದರು. ಇಂದಿಗೂ ತೋಂಟದಾರ್ಯ ಶ್ರೀಗಳ ವಿಚಾರಧಾರೆಗಳು ಸೂರ್ಯ-ಚಂದ್ರರಂತೆ ಎದುರಿಗೆ ನಮ್ಮ ಜೀವನದಲ್ಲಿ ಗೋಚರಿಸುತ್ತಿವೆ.

ತ್ರಿವಿಧ ದಾಸೋಹಿ, ಕನ್ನಡದ ಕುಲಗುರುಗಳು, ಬಸವತತ್ವದ ದಂಡನಾಯಕರು, ಭಾರತ ಸರ್ಕಾರದಿಂದ ರಾಷ್ಟ್ರೀಯ ಭಾವೈಕ್ಯತೆ ಹಾಗೂ ದೇಶದ ಏಕತಾ ಪ್ರಶಸ್ತಿ ಪುರಸ್ಕೃತರಾದ ಸಿದ್ಧಲಿಂಗ ಮಹಾಸ್ವಾಮೀಜಿ ಜನ್ಮದಿನದ ನಿಮಿತ್ಯ ಕರ್ನಾಟಕ ಸರ್ಕಾರ ದಿನಾಂಕ ೨೧-೦೨-೨೦೨೬ ಶನಿವಾರ ಬೆಳಗ್ಗೆ ೧೦.೩೦ಕ್ಕೆ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪ ತೋಂಟದಾರ್ಯ ಮಠದಲ್ಲಿ ಅವರ ೭೭ನೇ ಜಯಂತಿ ಆಚರಣೆ ಮಾಡಿ ಭಾವೈಕ್ಯತೆ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತಿದೆ.

ಅಂದು ಗ್ರಂಥಗಳ ಬಿಡುಗಡೆ, ವಚನ ಪಾಠಶಾಲೆ ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ.

ಮಠಗಳು ಎಂದರೆ ದೇವರ ಪೂಜೆ, ಗರ್ಭಗುಡಿಯ ಪೂಜೆ ಮಾಡಿ ಭಕ್ತರನ್ನು ಸಂತೃಪ್ತಿ ಪಡಿಸುವುದು ಅಲ್ಲ. ಮಠಗಳ ಸ್ವಾಮೀಜಿಗಳಾದವರು ಸಮಾಜದಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಿ, ಬಡವ, ಶ್ರೀಮಂತ, ಜಾತಿ ಮತ, ಪಂಥಗಳಲ್ಲಿಯ ಬೇಧಭಾವ ತೊರೆದು ಮನುಷ್ಯ ಕುಲ ಒಂದೇ ಎಂಬ ಭಾವನೆ ಹೊಂದಬೇಕು. ಸ್ವಾಮೀಜಿಗಳಾದವರು ನೀರಿನಂತೆ, ಗಾಳಿಯಂತೆ, ಬೆಳಕಿನಂತೆ, ಸಮಾಜವನ್ನು ತಿಳಿಮಾಡುವ ಕೆಲಸದಲ್ಲಿ ತೊಡಗಬೇಕು ಎನ್ನುತ್ತಿದ್ದರು.

ಸ್ವಾಮೀಜಿ ಕೇವಲ ಬಸವಣ್ಣನವರ ವಿಚಾರಗಳನ್ನಷ್ಟೆ ಅಲ್ಲದೇ ಜಗತ್ತಿನ ಮಹಾಮಾನವತಾವಾದಿಗಳ ಜೀವನ ಚರಿತ್ರೆ, ಆಚಾರ ವಿಚಾರಗಳನ್ನು ತಿಳಿಸುವ ಕಾಯಕದಲ್ಲಿ ತೊಡಗಿ ಬುದ್ಧ, ಬಸವ, ಅಲ್ಲಮಪ್ರಭು, ಏಸು, ಪೈಗಂಬರ, ಕನಕದಾಸ, ವಿವೇಕಾನಂದ ಸೇರಿದಂತೆ ಜಗತ್ತಿನ ತತ್ವಜ್ಞಾನಿಗಳ ಬಗ್ಗೆ ತಿಳಿಸಿ ಜಾಗೃತ ಸಮಾಜ ನಿರ್ಮಾಣ ಮಾಡಿದರು.

ಬಡತನ ನಿರ್ಮೂಲನೆ, ಜಾತಿ ವ್ಯವಸ್ಥೆ, ಮೇಲು-ಕೀಳು ಎಂಬ ತಾರತಮ್ಯ ಸರಿಪಡಿಸುವ ದಾರಿ ಎಂದರೆ ಪ್ರತಿಯೊಬ್ಬರು ಸಮಾಜದಲ್ಲಿ ಶಿಕ್ಷಣವಂತರಾಗಬೇಕು. ಮೌಢ್ಯ ಕಂದಾಚಾರ, ಮೇಲು-ಕೀಳು ಎಂಬುದು ದೂರಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ ಎನ್ನುತ್ತಿದ್ದವರು ಶ್ರೀಗಳು. ಒಬ್ಬ ವ್ಯಕ್ತಿ ರಾಜ್ಯವನ್ನಾಳಬಹುದು, ಪ್ರಾಂತವನ್ನಾಳಬಹುದು. ಪ್ರಧಾನಿ ಹಾಗೂ ರಾಷ್ಟ್ರಪತಿಗಳಾಗಿ ದೇಶವನ್ನಾಳಬಹುದು. ಆದರೆ ಜ್ಞಾನ ಇಡೀ ಜಗತ್ತನ್ನೆ ಆಳಬಲ್ಲದು ಎಂದು ಪ್ರತಿಪಾದಿಸುತ್ತಿದ್ದರು.

ಮಠ ಬಡತನದಲ್ಲಿದ್ದರೂ ಭಕ್ತರ ಹೃದಯ ಶ್ರೀಮಂತಿಕೆಯಿಂದ ಇರಬೇಕು ಎಂದು ಆಶೀರ್ವಚನ ನೀಡುತ್ತಿದ್ದರು.

ಶ್ರೀಗಳು ಜಗತ್ತಿನ ಮೇಧಾವಿಗಳ ಬಗ್ಗೆ ಅಧ್ಯಯನ ಮಾಡಿ ಲೋಹಿಯಾ, ಸಾಕ್ರೇಟಿಸ್, ರೂಸೊ, ಅರಿಸ್ಟಾಟಲ್, ಪ್ಲೇಟೋ, ನಾರಾಯಣಗುರು, ದಾಬೋಲಕರ, ಕ್ರಾಂತಿಕಾರಿ ಬಸವಣ್ಣನವರ ಬಗ್ಗೆ ಅಧ್ಯಯನ ಮಾಡಿ ಸಾಮಾಜಿಕ ಸಮಾನತೆ ಬಗ್ಗೆ ಸಮಾಜದಲ್ಲಿ ತಿಳಿಹೇಳಿ ಅಜ್ಞಾನ, ಅಂಧಕಾರ ದೂರವಾಡಿ, ನವಸಮಾಜದ ನಿರ್ಮಾಣಕ್ಕೆ ಸಾಕ್ಷಿಯಾದವರು ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *