ಗದಗ
ಬಿ.ಎಲ್.ಡಿ.ಇ. (BLDE) ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ. ಫಕೀರಪ್ಪ ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ.ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆಯ ಕಾರ್ಯಕ್ರಮ ಶನಿವಾರ ವಿಜಯಪುರದಲ್ಲಿ ನಡೆಯಿತು.
ಸಾನಿಧ್ಯ ವಹಿಸಿದ್ದ ಪೂಜ್ಯ ಡಾ. ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಜನರಿಗೆ ಶಿಕ್ಷಣವೇ ಮರೀಚಿಕೆಯಾಗಿದ್ದ ದಿನಗಳಲ್ಲಿ ಬಿಎಲ್.ಡಿ.ಇ. ಸಂಸ್ಥೆಯನ್ನು ಆರಂಭಿಸಿ ಎಲ್ಲರಿಗೂ ಶಿಕ್ಷಣ ದೊರಕುವಂತೆ ಮಾಡಿದ ಸಂಗನಬಸವ ಶಿವಯೋಗಿಗಳು ಮೊದಲಾದವರ ಸೇವೆಯು ಸದಾ ಸ್ಮರಣಾರ್ಹವಾದುದೆಂದರು. ಉತ್ತಮ ರೀತಿಯಲ್ಲಿ ಸಾಗಿರುವ ಸಂಸ್ಥೆ ಭವಿಷ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ(KLE)ಯ ಕಾರ್ಯಾಧ್ಯಕ್ಷರೂ ಆದ ಡಾ. ಪ್ರಭಾಕರ ಕೊರೆಯವರು ಸಂಸ್ಥೆಯ ಕಾರ್ಯಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿ, ಬೆಂಗಳೂರಿನಲ್ಲೂ ಬಿ.ಎಲ್.ಡಿ.ಇ.ತನ್ನ ಶಾಖೆ ಆರಂಭಿಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ, ಸರ್ಕಾರದ ಸಚಿವರಾದ ಎಂ.ಬಿ.ಪಾಟೀಲ ವಹಿಸಿದ್ದರು .
ಬಿ.ಎಲ್.ಡಿ.ಇ.ವಿಶ್ವವಿದ್ಯಾಲಯಉಪಕುಲಪತಿಗಳಾದ ಡಾ. ಆರ್.ಎಸ್. ಮುಧೋಳ, ಸಮಕುಲಾಧಿಪತಿ ಡಾ.ವೈ. ಎಂ. ಜಯರಾಜ, ಡಾ.ಅರುಣ್ ಸಿ. ಇನಾಂದಾರ, ಡಾ. ಆರ್.ವಿ. ಕುಲಕರ್ಣಿ, ಚಿಂತಕರು, ಬಸವಭಕ್ತರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.