ಬಸವತತ್ವ ನನ್ನುಸಿರು: ೭೭೦ ಪ್ರವಚನಗಳ ಅಭಿಯಾನ ಉದ್ಘಾಟನೆ ಮಾಡಿದ ಪ್ರಭುದೇವ ಸ್ವಾಮೀಜಿ
”ಬಸವ” ಎಂಬುದು ಕೇವಲ ಒಂದು ಶಬ್ದವಲ್ಲ, ದಿವ್ಯಶಕ್ತಿ, ಆಲೋಚನೆಯ ಮಾರ್ಗ, ಬದುಕಿನ ಸತ್ಪಥ ಹಾಗೂ ಅರಿವು-ಆಚಾರಗಳ ಸಂಗಮವೆಂದು ಬೀದರ ಬಸವಗಿರಿಯ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಭಾನುವಾರ ಹೇಳಿದರು.
ಅವರು ಗೋರ್ಟಾ(ಬಿ) ಗ್ರಾಮದ, ಲಿಂಗಾಯತ ಮಹಾಮಠದಲ್ಲಿ ಏರ್ಪಡಿಸಿದ್ದ ೭೭೦ ಪ್ರವಚನಗಳ ಅಭಿಯಾನವನ್ನು ಉದ್ಘಾಟಿಸಿ, ಸಾನಿಧ್ಯವಹಿಸಿ ಮಾತನಾಡುತ್ತಿದ್ದರು.
ಕಲ್ಯಾಣ ಬಸವಣ್ಣ ಯಾತಕ ಬಂದಾರ
ಕಲ್ಲಿಗೆ ಜೀವ ತುಂಬಾಕ
ಕಲ್ಲಂಥ ಸಮಾಜ ಬೆಳಗಾಕ
ಎಂದು ಜನಪದರು ಹಾಡುವಂತೆ, ಬಸವಣ್ಣನವರು ಬರುವ ಪೂರ್ವದಲ್ಲಿ ಕಲ್ಲಾಗಿತ್ತು ಈ ಸಮಾಜ. ಪ್ರಕೃತಿಯಲ್ಲಿ ಯಾವ ಪಶು-ಪ್ರಾಣಿ, ಕ್ರಿಮಿ-ಕೀಟಗಳು ತನ್ನ ಕುಲದಲ್ಲಿಯೇ ಮೇಲು-ಕೀಳು ಎಂದು ಆಚರಿಸಲಾರವು, ಅಗೌರವ ತೋರವುದಿಲ್ಲ. ಆದರೆ, ಮನುಷ್ಯನಲ್ಲಿ ಮಾತ್ರ ಇಂತಹ ಸಣ್ಣತನದ ಗುಣಗಳನ್ನು ಕಾಣುತ್ತೇವೆ.
ವರ್ಣಭೇದ, ವರ್ಗಭೇದ, ಲಿಂಗ ಭೇದಗಳಿಂದ ಮನುಕುಲ ನಲುಗಿ ಹೋಗಿತ್ತು. ಅಜ್ಞಾನ ತುಂಬಿರುವ ಆ ಕಾಲದಲ್ಲಿ ಗುರು ಬಸವಣ್ಣನವರು ಆಕಾಶದೀಪದಂತೆ ಬಂದರು.
ಸಮಾಜದಲ್ಲಿ ನೆಲೆಸಿದ್ದ ಭೇದ-ಭಾವ ತೊಡೆದು, ಸದೃಢ ಸಮಾಜ ನಿರ್ಮಾಣ ಮಾಡಿದರು. ಹೊನ್ನು,ಹೆಣ್ಣು, ಮಣ್ಣಿಗಾಗಿ ಬಂದವರಲ್ಲ, ಭಕ್ತಿಯ ಪಥವನ್ನು ತೋರಲು ಬಂದವರಾಗಿದ್ದರು ಬಸವಣ್ಣನವರು.
ಜಾತಿ,ವರ್ಣ,ವರ್ಗರಹಿತ ಕಲ್ಯಾಣ ರಾಜ್ಯ ಕಟ್ಟಿ ತೋರಿದ ಬಸವಣ್ಣನವರ ವಿಚಾರಧಾರೆಯನ್ನು ಜನಮಾನಸಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಮತ್ತೆ ಬಸವತತ್ವ ಬಿತ್ತಬೇಕೆಂಬ ಸದುದ್ಧೇಶದಿಂದ, ಲಿಂಗೈಕ್ಯ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರ ಸಂಕಲ್ಪದಂತೆ ರಾಜ್ಯಾದ್ಯಂತ ಈ ಪ್ರವಚನ ಅಭಿಯಾನ ಕಾರ್ಯಕ್ರಮ ಕೈಗೊಳ್ಳಲಾಗಿದೆಯೆಂದು ಪ್ರಭುದೇವಸ್ವಾಮೀಜಿ ನುಡಿದರು.
ಶರಣ ಸೋಮನಾಥಪ್ಪ ರಾಜೇಶ್ವರೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಪೂಜ್ಯರು ಕೈಗೊಂಡಿರುವ ಈ ಕಾರ್ಯದ ಸಂಕಲ್ಪ ಸಾಮಾನ್ಯವಾದದ್ದಲ್ಲ, ಇದು ಸದೃಢ ಸಮಾಜದ ಕಲ್ಪನೆ ಹೊತ್ತು ಕೈಗೊಂಡಿರುವ ಅಭಿಯಾನವಾಗಿದೆ. ಇದರಿಂದ ರಾಜ್ಯದಲ್ಲಿಯೇ ಹೊಸಗಾಳಿ ಬೀಸಿದಂತಾಗಿದೆ. ಈ ಹಿಂದೆ ಯಾರೂ ಮಾಡದ ಕಾರ್ಯ ಇದಾಗಿದೆಯೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಗೋದಾವರಿ ಅಕ್ಕ, ಕರುಣಾದೇವಿ ಕಣಜೆ, ಸುಭಾಷ ಪತಂಗೆ, ಬಸವರಾಜ ಮಾಶೆಟ್ಟಿ, ಚಂದ್ರಕಾಂತ ಕಣಜೆ, ಚನ್ನಬಸಪ್ಪ ಪತಂಗೆ ಪಾಲ್ಗೊಂಡಿದ್ದರು.
ಆರಂಭದಲ್ಲಿ ನೀಲಮ್ಮನ ಬಳಗದ ಶರಣೆಯರು ಬಸವಜ್ಯೋತಿ ಹೊತ್ತಿಸುವ ಮುಖಾಂತರ ಈ ಪ್ರವಚನ ಅಭಿಯಾನಕ್ಕೆ ಚಾಲನೆ ನೀಡಿದರು