ಕಲಬುರಗಿ
ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ವಚನಗಳನ್ನು 50 ಭಾಷೆಗಳಿಗೆ ಭಾಷಾಂತರಿಸುವ ಉದ್ದೇಶ ಹೊಂದಿದ್ದೇವೆ ಎಂದು ಬಸವ ಸಮಿತಿಯ ಅಧ್ಯಕ್ಷ ಡಾ. ಅರವಿಂದ್ ಜತ್ತಿ ಅವರು ಸೋಮವಾರ ಹೇಳಿದರು.
ಬಸವಾದಿ ಶರಣರ ತತ್ವಾದರ್ಶಗಳನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ಪ್ರಯತ್ನಿಸುತ್ತಿದ್ದೇವೆ, ಅದಕ್ಕಾಗಿ ನಾವು ವಚನಗಳನ್ನು ವಿವಿಧ ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಭಾಷಾಂತರಿಸಲು ಪ್ರಾರಂಭಿಸಿದ್ದೇವೆ. “ನಾವು ಈಗಾಗಲೇ 28 ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಿಸಿದ್ದೇವೆ,” ಎಂದರು ಎಂದು ಪ್ರಜಾವಾಣಿ ವರದಿ ಮಾಡಿದೆ.
ವಚನಗಳನ್ನು ಜಪಾನೀಸ್, ಜರ್ಮನ್, ಸ್ಪ್ಯಾನಿಷ್, ನೇಪಾಳಿ, ಚೈನೀಸ್ ಮತ್ತು ಫ್ರೆಂಚ್ ಭಾಷೆಗಳಿಗೆ ಅನುವಾದಿಸುವ ಕಾರ್ಯವು ಮುಕ್ತಾಯದ ಹಂತದಲ್ಲಿದೆ. ಈ ಆರು ಸಂಪುಟಗಳು ಜನವರಿ 2025 ರೊಳಗೆ ಬಿಡುಗಡೆ ಮಾಡುವ ಯೋಜನೆಯಿದೆ. ಕೊರಿಯಾ, ಕೋಸಿ(ಮೇಘಾಲಯ), ಬೋಡೋ(ಅಸ್ಸಾಂ) ಮತ್ತು ಪೋರ್ಚುಗೀಸ್ ಭಾಷೆಗಳಿಗೆ ವಚನಗಳ ಅನುವಾದ ಕಾರ್ಯವು ಶೀಘ್ರದಲ್ಲೇ ಪ್ರಾರಂಭವಾಗಲಿದೆ, ಎಂದು ಹೇಳಿದರು.
ಆಳಂದ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯ ಸಹಯೋಗದಲ್ಲಿ ವಚನಗಳನ್ನು ವಿದೇಶಿ ಭಾಷೆಗಳಿಗೆ ಅನುವಾದಿಸುವ ಎರಡು ದಿನಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.