ಡಾ.ಪ್ರಭಾಕರ ಕೋರೆ ಅವರಿಗೆ ಈಗ 77ರ ವಯಸ್ಸು.ಅವರು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ನಾಲ್ಕು ದಶಕ ಕಳೆದಿವೆ. ಅಂದರೆ ಬದುಕಿನ ಶೇ 70ರಷ್ಟು ಭಾಗವನ್ನು ಅವರು ಸಂಸ್ಥೆಗಾಗಿಯೇ ಸವೆಸಿದ್ದಾರೆ.
ಡಾ. ಕೋರೆ ಅವರು 1947ರ ಆಗಸ್ಟ್ 1ರಂದು ಚಿಕ್ಕೋಡಿ ತಾಲ್ಲೂಕಿನ ಅಂಕಲಿಯಲ್ಲಿ ಜನಿಸಿದರು. ಅವರ ತಂದೆ ಬಸವಪ್ರಭು ಕೋರೆ ಹಾಗೂ ತಾಯಿ ಶಾರದಾದೇವಿ. ಸಣ್ಣ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ಅವರಿಗೆ ತಂದೆ– ತಾಯಿ ಬಾಲ್ಯದಲ್ಲೇ ಸಂಸ್ಕಾರ ನೀಡಿದರು. ಮುಂದೆ ಅದೇ ಬಾಲಕ ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರಕ್ಕೆ ಗಟ್ಟಿ ಬೇರಾಗಿ ನಿಂತರು.
ಡಾ.ಕೋರೆ ಅವರ ಧೀಮಂತ ವ್ಯಕ್ತಿಯಾಗಿ ಬೆಳೆಯಲು ಮುಖ್ಯ ಕಾರಣ ಅವರಲ್ಲಿನ ಸಕಾರಾತ್ಮಕ ಆಲೋಚನೆಗಳು. ಅಸಾಧ್ಯ ಎಂಬ ಪದ ಅವರ ಶಬ್ದಕೋಶದಲ್ಲೇ ಇಲ್ಲ ಎಂಬುದನ್ನು ಅವರು ಸಾಧಿಸಿ ತೋರಿಸಿದರು.
ಅದಮ್ಯ ಉತ್ಸಾಹ, ಅನನ್ಯ ಕ್ರಿಯಾಶೀಲತೆ, ದಣಿವರಿಯದ ದುಡಿಮೆ, ಹೊಸದನ್ನು ಮಾಡುವ ಯೋಜನೆ, ದೊಡ್ಡದನ್ನು ಸಾಧಿಸುವ ಹುಮ್ಮಸ್ಸು, ದೂರದರ್ಶಿತ್ವ ಇವು ಡಾ.ಪ್ರಭಾಕರ ಕೋರೆ ಅವರ ವ್ಯಕ್ತಿತ್ವದ ಅಸ್ಮಿತೆಗಳು.
ಬೆಳಗಾವಿಯ ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾರೀ ಯಶಸ್ಸು, ಎರಡನೆಯ ವಿಶ್ವಕನ್ನಡ ಸಮ್ಮೇಳನದ ಯಶಸ್ಸು ಕೂಡ ಡಾ.ಕೋರೆ ಅವರಿಲ್ಲದೇ ಸಾಧ್ಯವಿರಲಿಲ್ಲ. ಗಡಿ ಭಾಗದಲ್ಲಿ ಕನ್ನಡ ನಾಡು– ನುಡಿಗೆ ಅವರು ನೀಡಿದ ಕೊಡುಗೆ ಅನನ್ಯ. ಭಾಷಾಪ್ರೇಮಿ, ಸಾಹಿತ್ಯ ಪ್ರೇಮಿಯೂ ಆದ ಅವರು ಹೈಟೆಕ್ ಕನ್ನಡ ಭವನ ನಿರ್ಮಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಕೆಎಲ್ಇ ಸಂಸ್ಥೆ ಕಳೆದ 40 ವರ್ಷಗಳಲ್ಲಿ 50 ಅಂಗಸಂಸ್ಥೆಗಳನ್ನು ಹೊಂದಲು ಶ್ರಮಿಸಿದ್ದಾರೆ.
1984ರ ಮೇ 16ರಂದು ಪ್ರಭಾಕರ ಕೋರೆ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ನೊಗ ಹೊತ್ತರು. ಕೆಎಲ್ಇ ಸಂಸ್ಥೆಯಲ್ಲಿ 1.25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು 16 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ವೈದ್ಯಕೀಯ ಕಾಲೇಜುಗಳು ಎಂಜಿನಿಯಂರಿಂಗ್ ಕಾಲೇಜುಗಳು ಮಾತ್ರವಲ್ಲದೇ ಸ್ವಾಯತ್ತ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನೇ ಕೊಡಿಸಿದ್ದಾರೆ.