ದುರ್ವ್ಯಸನರಹಿತರಾಗಿ ಬದುಕುವುದೇ ನಿಜವಾದ ಅಭಿವೃದ್ಧಿ: ಚಿಂತಕ ಡಾ.ಪ್ರಭುರಾಜ ನಾಯಕ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಕೊಪ್ಪಳ

ಹಣ ಸಂಪಾದನೆ, ಆಸ್ತಿ ಗಳಿಕೆ, ಒಳ್ಳೆಯ ಹುದ್ದೆ ಈ ಎಲ್ಲವುಕ್ಕಿಂತ ದುರ್ವ್ಯಸನರಹಿತರಾಗಿ, ಆರೋಗ್ಯಪೂರ್ಣವಾಗಿ ಬದುಕುವುದೇ ನಿಜವಾದ ಜೀವನಾಭಿವೃದ್ಧಿ ಎಂದು ಮಂಗಳೂರು ಸಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ, ಚಿಂತಕರಾದ ಡಾ.ಪ್ರಭುರಾಜ್ ಕೆ.ನಾಯಕ ಅವರು ಹೇಳಿದರು.

ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಗುರುವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಸನ ಮುಕ್ತ ದಿನಾಚರಣೆಯನ್ನು ಉದ್ದೇಶಿಸಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

1930 ರಲ್ಲಿ ಜನಿಸಿದ ಡಾ.ಮಹಾಂತ ಶಿವಯೋಗಿಗಳ ಬದುಕಲ್ಲಿ 1976 ರಲ್ಲಿ ನಡೆದ ಒಂದು ಘಟನೆ ಅವರನ್ನು ದುಶ್ಚಟಗಳನ್ನು ಭಿಕ್ಷೆಯಾಗಿ ಪಡೆಯುವಂತೆ ಮಾಡಿತು. ಗ್ರಾಮವೊಂದರಲ್ಲಿ ಭಿಕ್ಷೆಗೆ ತೆರಳಿದ್ದಾಗ ಕುಡಿತದ ಚಟದಿಂದ ವ್ಯಕ್ತಿ ಮೃತಪಟ್ಟು, ಆತನ ಹೆಂಡತಿ, ಕುಟುಂಬ ಸಂಕಷ್ಟಕ್ಕೆ ಸಿಲುಕಿದ ಸಂದರ್ಭ ನೋಡಿದ ಶ್ರೀಗಳು ಅಂದಿನಿಂದ ಸಾರ್ವಜನಿಕರಲ್ಲಿನ ದುಶ್ಚಟಗಳನ್ನು ಭಿಕ್ಷೆಯಾಗಿ ತಮ್ಮ ಜೋಳಿಗೆಗೆ ಪಡೆದು, ದುಶ್ಚಟಗಳಿಂದ ಜನರನ್ನು ಮುಕ್ತಗೊಳಿಸುವ ಸತ್ಕಾರ್ಯ ಮಾಡಿದರು.

ಅವರ ಸಾಮಾಜಿಕ ಕಳಕಳಿಯನ್ನು ಗೌರವಿಸಿದ ಸರ್ಕಾರ ಅವರ ಜನ್ಮದಿನವನ್ನು ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿತು. ನಾವೆಲ್ಲರೂ ಕೂಡ ಮೊದಲಿಗೆ ವೈಯಕ್ತಿಕವಾಗಿ ದುಶ್ಚಟಗಳಿಂದ ದೂರವಿರೋಣ. ನಂತರ ನಮ್ಮ ಸುತ್ತಲಿನ ನಾಲ್ಕು ಜನರನ್ನು ದುಶ್ಚಟಗಳಿಂದ ದೂರ ಮಾಡಿದರೂ ಸಾಕು, ಆ ಕಾರ್ಯ ಮುಂದುವರೆಯುತ್ತದೆ. ನಮ್ಮ ಜೀವನಕ್ಕೂ ಸಾರ್ಥಕತೆ ಸಿಗುತ್ತದೆ ಎಂದು
ಮುನಿರಾಬಾದ್‌ ಐಆರ್‌ಬಿಯ ಡೆಪ್ಯೂಟಿ ಕಮಾಂಡೆಂಟ್ ರಾಧಾಕೃಷ್ಣ ಅಡಾವತ್ ಅವರು ಹೇಳಿದರು.

ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು “ ಮದ್ಯಪಾನ, ಮಾದಕ ವಸ್ತು, ತಂಬಾಕು ಸೇವನೆಯು ನನಗೆ ಮತ್ತು ಮಾನವ ಸಮಾಜಕ್ಕೆ ಮಾರಕವೆಂದು ಇದರಿಂದ ಮಾನವನ ದೇಹವಲ್ಲದೆ, ಮನಸ್ಸು ಮತ್ತು ಇಡೀ ಸಮಾಜ ಅನಾರೋಗ್ಯ ಪೀಡಿತವಾಗುತ್ತಿರುವುದು ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಜನತೆ ಇದರ ದಾಸ್ಯಕ್ಕೆ ಒಳಗಾಗುತ್ತಿರುವುದು ತಿಳಿದಿದೆ. ಇದರಿಂದ ಮಾನವನ ಆರ್ಥಿಕ, ಸಾಮಾಜಿಕ ಸ್ಥಿತಿ ಅಧೋಗತಿಗೆ ಇಳಿಯುತ್ತಿದೆ.

ಆದ್ದರಿಂದ ಪೂಜ್ಯ ಶ್ರೀ ಮ.ನಿ.ಪ್ರ. ಡಾ.ಮಹಾಂತ ಶಿವಯೋಗಿಗಳ ಸ್ವಾಮೀಜಿಗಳ ಜನ್ಮದಿನದ ಈ ಶುಭದಿನದಂದು ನಾನು ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳನ್ನು ತ್ಯಜಿಸುತ್ತೇನೆ. ಹಾಗೂ ಇನ್ನೆಂದಿಗೂ ಮುಟ್ಟುವುದಿಲ್ಲ ಹಾಗೂ ನ್ನ ನೆರೆ ಹೊರೆಯವರಿಗೆ ಬಂಧು-ಬಾಂಧವರಿಗೆ, ಸ್ನೇಹಿತರಿಗೆ ಈ ಬಗ್ಗೆ ತಿಳುವಳಿಕೆ ನೀಡುತ್ತೇನೆ ಎಂದು ಈ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸುತ್ತೇನೆ” ಎಂದು ಕಾರ್ಯಕ್ರಮದಲ್ಲಿದ್ದ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಪಿ.ಬಿ.ಗೌಡರ ಅವರು ಆರೋಗ್ಯವಂತ ಜೀವನಶೈಲಿ ರೂಢಿಸಿಕೊಳ್ಳುವ ಬಗ್ಗೆ ಹಾಗೂ ನೈಸರ್ಗಿಕ ವೈದ್ಯಕೀಯ ಪದ್ದತಿಗಳ ಮೂಲಕ ಆರೋಗ್ಯದ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಮಾತನಾಡಿ, ವಿದ್ಯಾರ್ಥಿ ಜೀವನ ಒಳ್ಳೆಯ ಹವ್ಯಾಸ, ಜೀವನ ಶೈಲಿ ರೂಢಿಸಿಕೊಳ್ಳುವುದಕ್ಕೆ ಇರುವ ಒಂದೊಳ್ಳೆಯ ಅವಕಾಶ. ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಹವ್ಯಾಸ ರೂಢಿಸಿಕೊಂಡು ನಮ್ಮ ಭವಿಷ್ಯದ ಜೀವನಕ್ಕೆ ಪೂರಕವಾಗಿ ಅಧ್ಯಯನ ಮಾಡಬೇಕು. ಕೆಟ್ಟ ಚಟಗಳಿಗೆ, ವ್ಯಸನಗಳಿಗೆ ಬಲಿಯಾಗದೆ, ಕಲೆ, ಸಾಹಿತ್ಯ, ಅಧ್ಯಯನಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಕೃಷ್ಣಮೂರ್ತಿ ದೇಸಾಯಿ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ವಯಸ್ಕರ ಶಿಕ್ಷಣ ಇಲಾಖೆಯ ವೆಂಕಟೇಶ್ ಕೊಂಕಲ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಕೊಪ್ಪಳ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಘಟಕದ ಶೇಖರ ಇಂಗದಾಳ, ವಿಶ್ವಗುರು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ನ ರಾಜೇಶ ಸಸಿಮಠ,ಗುಡದಪ್ಪ ಹಡಪದ, ಸೇರಿದಂತೆ ಅಧಿಕಾರಿಗಳು, ವಿವಿಧ ಶಾಲಾ,ಕಾಲೇಜುಗಳ ವಿದ್ಯಾರ್ಥಿಗಳು,ವಾರ್ತಾ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,ಕೊಪ್ಪಳ ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳು ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Share This Article
Leave a comment

Leave a Reply

Your email address will not be published. Required fields are marked *