ಜನಗಣತಿಯಲ್ಲಿ ಲಿಂಗಾಯತ ಅಥವಾ ಪಂಚಮಸಾಲಿ ಎಂದು ಬರೆಸಲು ತೀರ್ಮಾನಿಸಬೇಕಿದೆ: ವಚನಾನಂದ ಶ್ರೀ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ದಾವಣಗೆರೆ:

ಮುಂಬರುವ ಜನಗಣತಿಯ ವೇಳೆ ನಮ್ಮ ಜಾತಿಯನ್ನು ಪಂಚಮಸಾಲಿ ಎಂದೋ ಅಥವಾ ಲಿಂಗಾಯತ ಎಂದು ಬರೆಸಬೇಕೋ ಎಂಬುದನ್ನು ನಿರ್ಧರಿಸಲಿದ್ದೇವೆ ಎಂದು ವಚನಾನಂದ ಶ್ರೀಗಳು ಹೇಳಿದರು.

ಇಲ್ಲಿ ಶನಿವಾರ ನಡೆದ ವೀರಶೈವ- ಲಿಂಗಾಯತರು ಹಿಂದುಗಳು ಎಂಬ ಚರ್ಚೆಯಲ್ಲಿ ಮಾತನಾಡಿ, ಸರ್ಕಾರ ಕೂಡ ಮೀಸಲಾತಿ ವಿಚಾರವಾಗಿ ಯಾವುದೇ ನಿರ್ಧಾರ ಮಾಡಿಲ್ಲ ಎಂದರು.

ಹಿಂದೂ ಎನ್ನುವುದು ಅತ್ಯಂತ ಶ್ರೇಷ್ಠವಾದ ಸತ್ಯ. ನಾವು ಎಲ್ಲಿದ್ದೇವೆ, ಯಾವ ರಾಷ್ಟ್ರದಲ್ಲಿ ಇದ್ದೇವೆ ಎನ್ನುವುದನ್ನು ಅರ್ಥ ಮೊದಲು ಮಾಡಿಕೊಳ್ಳಬೇಕು. ನಾವು ಈ ರಾಷ್ಟ್ರವನ್ನು ಯಾವ ರೀತಿ ಬೆಳೆಸಬೇಕು‌ ಎಂದು ಯೋಚಿಸಬೇಕು. ಸನಾತನ ಎಂಬುದೊಂದು ಶುದ್ಧ ಜೀವನ ಪದ್ಧತಿ. ಹಿಂದುತ್ವದ ವಟವೃಕ್ಷದಲ್ಲಿ ಸಾಕಷ್ಟು ರೆಂಬೆ, ಕೊಂಬೆಗಳು ಇವೆ ಎಂದು ಹೇಳಿದರು.

ಅಲ್ಲಮಪ್ರಭು, ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಮಹಾವೀರ ಸೇರಿದಂತೆ ಮಹಾಯೋಗಿ ಶರಣರು ಧರ್ಮಗಳ ಪ್ರತೀಕವಾಗಿದ್ದಾರೆ. ಎಲ್ಲ ಮಹನೀಯರು ಹೇಳಿದ್ದು ಹಿಂದೂ ತತ್ವವೇ. ನಾವೆಲ್ಲರೂ ಹಿಂದೂಗಳೆ. ನಾವುಗಳು ಮಹಾಸಾಗರಕ್ಕೆ ಸೇರುವ ನದಿಗಳಿದ್ದಂತೆ. ಸಾಮಾಜಿಕವಾಗಿ ನಾವೆಲ್ಲ ಒಂದೇ. ತಾತ್ವಿಕವಾಗಿ ಬೇರೆ ಬೇರೆ ಆಗಿದ್ದೇವೆ ಎಂದು ಹೇಳಿದರು.

ಸಾಮಾಜಿಕ, ಬೌದ್ಧಿಕವಾಗಿ ಇಡೀ ವೀರಶೈವ ಲಿಂಗಾಯತ ಒಂದೇ ಎಂಬುದು ನಮ್ಮ ಭಾವನೆ. ಅದು ಹಿಂದೂ ಧರ್ಮಕ್ಕೆ ಪೂರಕ ಆಗಬೇಕು. ಬಸವ ಪಥ, ಜೈನ ಪಥ, ಬೌದ್ಧ ಪಥ ಬೇರೆ ಬೇರೆಯಾಗಿದ್ದರೂ, ಅವುಗಳ ಮೂಲ ಸನಾತನ ಹಿಂದೂ. ನಮ್ಮೆಲ್ಲರ ಸರ್ಟಿಫಿಕೆಟ್​​ನಲ್ಲಿ ಜಾತಿ ಬೇರೆ ಬೇರೆ ಇದೆ. ಆಚರಣೆ ಬೇರೆ ಇದೆ ಅಷ್ಟೆ. ಆದರೆ, ನಾವೆಲ್ಲರೂ ಒಂದೇ ಎಂದು ಶ್ರೀಗಳು ಪ್ರತಿಪಾದಿಸಿದರು.

ಲಿಂಗಾಯತ ಸಮುದಾಯದ 24 ಒಳಪಂಗಡಗಳು ಈಗಾಗಲೇ 2ಎ ಮೀಸಲಾತಿ ಹಕ್ಕನ್ನು ಅನುಭವಿಸುತ್ತಿವೆ. ಈ ಮೀಸಲಾತಿ 3ಬಿ ವರ್ಗದಲ್ಲಿರುವ ನಮ್ಮ ಸಮುದಾಯಕ್ಕೆ ಇಲ್ಲ. ಹೀಗಾಗಿ ಮೀಸಲಾತಿ ಬದಲಿಸಬೇಕು ಎಂದು ಹೋರಾಟ ನಡೆಯುತ್ತಿದೆ ಹೇಳಿದರು.

Share This Article
Leave a comment

Leave a Reply

Your email address will not be published. Required fields are marked *