ಲಿಂಗಾಯತರಲ್ಲಿ ಮತಾಂತರ 1/2
ಲಿಂಗಾಯತ ಧರ್ಮ ತನಗಿಂತ ಹಳೆಯದಾದ ಜೈನ , ಶೈವ , ವೈಷ್ಣವ ಧರ್ಮಗಳಿಗಿಂತ ಜನಪ್ರಿಯವಾಯಿತು. ಎಲ್ಲರನ್ನೂ ಸಮಾನವಾಗಿ ಒಳಮಾಡಿಕೊಂಡ ಶರಣರ ಧೋರಣೆಯೇ ಇದಕ್ಕೆ ಕಾರಣ.
ಬಸವ ಪೂರ್ವ ಧರ್ಮಗಳಲ್ಲಿ ಮತಾಂತರವಾಗಲು ಎಲ್ಲರಿಗೂ ಮುಕ್ತ ಅವಕಾಶವಿರಲಿಲ್ಲ. ಬ್ರಾಹ್ಮಣರು ಮಾತ್ರ ಆ ಧರ್ಮಗಳ ದೀಕ್ಷೆ ಸ್ವೀಕರಿಸಿ, ಒಳ ಸೇರಿ, ರಕ್ತ ಸಂಬಂಧ ಬೆಳೆಸ ಬಹುದಾಗಿತ್ತು.
ಅಬ್ರಾಹ್ಮಣರು ಆ ಧರ್ಮಗಳ ‘ಮಂತ್ರದೀಕ್ಷೆ’ ಮಾತ್ರ ಪಡೆದು ಹೊರಗಿನಿಂದ ‘ಒಕ್ಕಲು’ ಅಥವಾ ಅನುಯಾಯಿಗಳಾಗಬಹುದಿತ್ತು. ಒಳ ಸೇರಿ ರಕ್ತ ಸಂಬಂಧಿಗಳಾಗಲು ಸಾಧ್ಯವಿರಲಿಲ್ಲ.
ಶ್ರೀವೈಷ್ಣವ ಧರ್ಮದಲ್ಲಿ ಒಕ್ಕಲಾಗುವವರಿಗೆ ಗಾಯತ್ರಿ ಮಂತ್ರ ಭೋದಿಸಿ, ನಾಮ, ಮುದ್ರೆ ನೀಡಲಾಗುತ್ತಿತ್ತು. ಶೈವ ಧರ್ಮಗಳಲ್ಲಿ ವಿಭೂತಿ ನೀಡಿ, ಮಂತ್ರ ಭೋದಿಸಿದರೂ, ಲಿಂಗ ನೀಡಲಾಗುತ್ತಿರಲಿಲ್ಲ.
ಈ ಧರ್ಮಗಳಲ್ಲಿ ಒಕ್ಕಲಾಗುವ ಕೆಲವು ಅಬ್ರಾಹ್ಮಣರಿಗೆ ಆಚಾರ್ಯರಾಗುವ ಅವಕಾಶವೂ ಇತ್ತು, ಆದರೆ ಅದ್ವೈತ ಧರ್ಮದಲ್ಲಿ ಅಬ್ರಾಹ್ಮಣರಿಗೆ ಮಂತ್ರದೀಕ್ಷೆ ನೀಡಲು ಯಾವುದೇ ಅವಕಾಶವಿರಲಿಲ್ಲ,
ಒಕ್ಕಲಾಗಲು ಅವಕಾಶ ನೀಡಿದ ಧರ್ಮಗಳು ಸಂಖ್ಯೆಯಲ್ಲಿ ಬೆಳೆದವು. ಒಳ ಸೇರಿಸದಿದ್ದರೂ ಹುಸಿ ಪ್ರತಿಷ್ಠೆಗಾಗಿ ಅನೇಕ ಸಮುದಾಯಗಳು ಮತ್ತು ಅರಸರೂ ಕೂಡ ಅವುಗಳ ಅನುಯಾಯಿಗಳಾದರು.
(‘ಶರಣ ಧರ್ಮ: ಜಾತಿ ನಾಶ-ಜಾತಿ ನಿರ್ಮಾಣ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)