ಕೈ ಜಾರಿದ ಎಡೆಯೂರು
ಎಡೆಯೂರು ಕ್ಷೇತ್ರದ ವಾರಸುದಾರರು ಗದುಗಿನ ಶ್ರೀಗಳು
ಕ್ಷೀಣಿಸುತ್ತಿದ್ದ ಲಿಂಗಾಯತ ಧರ್ಮವನ್ನು ತೋಂಟದ ಸಿದ್ದಲಿಂಗ ಯತಿಗಳು ೧೬ನೇ ಶತಮಾನದಲ್ಲಿ ಪುನಶ್ಚೇತನಗೊಳಿಸಿದರು. ಸಂಚಾರಿ ಜಂಗಮರಾದರೂ ಎಡೆಯೂರು ಅವರ ನೆಲೆಯೆಂದು ಗುರುತಾಗಿತ್ತು.
ಅವರು ಜೀವಂತ ಸಮಾಧಿಯಾಗಿದ್ದೂ ಅಲ್ಲಿನ ಮಠದ ಆವರಣದಲ್ಲಿಯೇ. ಎಡೆಯೂರು ಪ್ರಸಿದ್ಧಿಯಾಗಿ ಅಪಾರ ಭಕ್ತರನ್ನು ಗಳಿಸಿದ್ದು “ದ್ವಿತೀಯ ಅಲ್ಲಮ” ಸಿದ್ದಲಿಂಗ ಯತಿಗಳ ಗದ್ದುಗೆಯಿಂದಲೇ.
ಆ ಕಾಲದ ಪ್ರಸಿದ್ಧ ಶಾಸನ ಎಡೆಯೂರು ಕ್ಷೇತ್ರವನ್ನು ಆರು ಸಲ “ಮಠ”ವೆಂದು ಕರೆದಿದೆ. ಅಲ್ಲಿನ ೩-೪ ಕಾವ್ಯಗಳೂ ಅದನ್ನು “ಮಠ”ವೆಂದೇ ಗುರುತಿಸಿವೆ. ಅದು ದೇವಸ್ಥಾನವೆನ್ನಲು ಯಾವುದೇ ದಾಖಲೆಗಳಿಲ್ಲ.
ಆದರೂ ಎಡೆಯೂರು ಕ್ಷೇತ್ರ ಸರಕಾರದ ವಶವಾಯಿತು. ಮುಜರಾಯಿ ಇಲಾಖೆಗೆ ಸಾರ್ವಜನಿಕ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವ ಅಧಿಕಾರವಿದೆ, ಖಾಸಗಿ ಆಸ್ತಿಯೆನಿಸಿಕೊಳ್ಳುವ ಮಠಗಳನಲ್ಲ.
ಸಾರ್ವಜನಿಕ ಆಸ್ತಿಯಾಗಿದ್ದ ಗೋಕರ್ಣ ದೇವಸ್ಥಾನ ಯಾವುದೊ ಮಠಕ್ಕೆ ಹಸ್ತಾಂತರವಾಯಿತು. ಆದರೆ ಖಾಸಗಿ ಮಠವಾಗಿದ್ದ ಎಡೆಯೂರು ಕ್ಷೇತ್ರ ಮುಜರಾಯಿ ಇಲಾಖೆಯ ಪಾಲಾಯಿತು.
ಅಪ್ಪಟ್ಟ ಬಸವ ತತ್ವದ ಆ ಕ್ಷೇತ್ರ ದೇವಸ್ಥಾನವಾಗಿ ಬದಲಾಯಿತು. ಮುಜರಾಯಿ ಇಲಾಖೆಯ ಎಲ್ಲಾ ದೇವಸ್ಥಾನಗಳಂತೆ ವೈದಿಕ ಆಚರಣೆಗಳನ್ನು ರೂಡಿಸಿಕೊಂಡು, ನಿಜಾಚರಣೆಗಳಿಂದ ದೂರವಾಯಿತು.
(ಯಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರದ ವಾರಸುದಾರರು ಗದುಗಿನ ಶ್ರೀಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೫)