ಬೈಲಹೊಂಗಲ:
ರಾಷ್ಟ್ರೀಯ ಬಸವದಳ ಹಾಗೂ ಬಸವ ಕಾಯಕ ಜೀವಿಗಳ ಸಂಘಟನೆಗಳ ವತಿಯಿಂದ ಅಣ್ಣಿಕೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ೧೩೦ ವಿದ್ಯಾರ್ಥಿಗಳಿಗೆ ಮಂಗಳವಾರ ಸಮವಸ್ತ್ರ ದಾಸೋಹವನ್ನು ಮಾಡಲಾಯಿತು.
ಶಾಲೆಯಲ್ಲಿ ನಡೆದ ಕಾರ್ಯಕ್ರದಲ್ಲಿ ಸ್ಥಳೀಯ ಭಾವಿ ಕುಟುಂಬದ ಸದಸ್ಯರು ನಡೆಸಿದ ಈ ದಾಸೋಹ ಸೇವೆಯನ್ನು ಎಲ್ಲರೂ ಪ್ರಶಂಸಿಸಿದರು.
“ಬಸವಣ್ಣನವರು ಕಟ್ಟಿದ್ದ ಕಲ್ಯಾಣದಲ್ಲಿ ಕೊಡುವವರೇ ಇದ್ದರು ಹೊರತು ಬೇಡುವವರು ಯಾರೂ ಇರಲಿಲ್ಲ. ಶರಣರು ಹೇಳಿದಂತೆ ಕಾಯಕವೇ ಕೈಲಾಸ ಎಂದು ನಾವೆಲ್ಲ ಕಾಯಕದಲ್ಲಿ ನಿರತರಾಗಿ, ಬಂದ ಪ್ರತಿಫಲದಲ್ಲಿ ಒಂದಷ್ಟನ್ನು ಸಮಾಜಕ್ಕೆ ವಿನಿಯೋಗಿಸಿ ಸಮಾಜದ ಋಣವನ್ನು ತೀರಿಸಬೇಕು,” ಎಂದು ರಾಷ್ಟ್ರೀಯ ಬಸವ ದಳದ ಜಿಲ್ಲಾ ಕಾರ್ಯದರ್ಶಿ ಆನಂದ ಗುಡಸ ಮಕ್ಕಳಿಗೆ ತಿಳಿಹೇಳಿದರು.
“ಇದು ಬಸವಾದಿ ಶರಣರು ತೋರಿಸಿದ ದಾರಿಯಾಗಿದೆ. ಆ ದಾರಿಯಲ್ಲಿ ನಾವೆಲ್ಲ ನಡೆಯೋಣ. ಮುಂದೆ ದೊಡ್ಡವರಾಗಿ ತಾವುಗಳೆಲ್ಲ ದಾಸೋಹವೆಂಬ ಸೇವೆಯಲ್ಲಿ ತೊಡಗಿಸಿಕೊಳ್ಳಿ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವ ಕಾಯಕ ಜೀವಿಗಳ ಸಂಘದ ಅಧ್ಯಕ್ಷರಾದ ಸೂರ್ಯಕಾಂತ ಭಾವಿ, ಕಾರ್ಯದರ್ಶಿ ಕೆ. ಶರಣಪ್ರಸಾದ, ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾಧ್ಯಕ್ಷರಾದ ಮಹಾಂತೇಶ ಗುಡಸ, ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷರಾದ ಎಸ್.ಎಸ್.ಪಾಟೀಲ, ನೇಸರ್ಗಿಯ ವ್ಯಾಪಾರಸ್ಥರಾದ ಸಲೀಂ ನದಾಫ, ಬಸವ ಕಾಯಕ ಜೀವಿಗಳ ಸಂಘದ ಸದಸ್ಯರಾದ ವೀರೇಶ ಹೊಳವಿ, ಶ್ರೀರಾಜ ಹಾವಣ್ಣವರ, ಶಾಲೆಯ ಮುಖ್ಯೋಪಾಧ್ಯಾಯರಾದ ಜಿ.ಎಫ್.ಕೋಲಕಾರ, ಗ್ರಾಮದ ಹಿರಿಯರಾದ ಜಗದೀಶ ಪಾಟೀಲ, ಮುದುಕಪ್ಪ ಅಲ್ಲಪ್ಪನವರ ಹಾಗೂ ಶಾಲೆಯ ಶಿಕ್ಷಕ, ಶಿಕ್ಷಕಿಯರು, ಸಿಬ್ಬಂದಿವರ್ಗ, ಗ್ರಾಮಸ್ಥರು ಉಪಸ್ಥಿತರಿದ್ದರು