ಚನ್ನಬಸವಣ್ಣ ಚರಿತ್ರೆ 11: ವಚನ ಸಂಕಲನಗಳ ಮೊಟ್ಟಮೊದಲ ಕೃತಿ

[ಶಿಲೆಯೆಂಬ ಪೂರ್ವಾಶ್ರಯವ ಕಳೆದು ಲಿಂಗವೆಂದ,
ನರನೆಂಬ ಪೂರ್ವಾಶ್ರಯವ ಕಳೆದು ಗುರುವೆಂದ,
ಜಾತಿಸೂತಕದ ಪೂರ್ವಾಶ್ರಯವ ಕಳೆದು ಜಂಗಮವೆಂದ,
ಎಂಜಲೆಂಬ ಪೂರ್ವಾಶ್ರಯವ ಕಳೆದು ಪ್ರಸಾದವೆಂದ.
ಇಂತೀ ಚತುರ್ವಿಧ ಪೂರ್ವಾಶ್ರಯವ ಕಳೆಯಬಲ್ಲನಾಗಿ
ಕೂಡಲಚೆನ್ನಸಂಗಯ್ಯನಲ್ಲಿ ಶರಣ ಸ್ವತಂತ್ರನು.

ಇಂದು ೭೭ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಬಸವಾದಿ ಶಿವಶರಣರು ಸ್ವಾತಂತ್ರ್ಯಕ್ಕೆ ತುಂಬ ಮಹತ್ವವನ್ನು ಕೊಟ್ಟವರು. ಕೂಡಲಸಂಗನ ಶರಣರು ಸ್ವತಂತ್ರ ಧೀರರು ಎಂದು ಬಸವಣ್ಣನವರೇ ಒಂದು ಕಡೆ ಹೇಳುತ್ತಾರೆ. ಹಾಗೆಯೇ ಚನ್ನಬಸವಣ್ಣನವರು ಮೇಲಿನ ವಚನದಲ್ಲಿ ಸ್ವತಂತ್ರ ಶರಣನ ಲಕ್ಷಣವನ್ನು ತುಂಬ ಮಾರ್ಮಿಕವಾಗಿ ವಿವರಿಸಿದ್ದಾರೆ. ಸ್ವಾತಂತ್ರ್ಯಪ್ರಿಯ ಶರಣರಿಗೆ ಅನಂತ ಶರಣುಗಳನ್ನು ಸಲ್ಲಿಸುತ್ತ, ಎಲ್ಲರಿಗೂ ಸ್ವಾತಂತ್ರ್ಯೋತ್ಸವ ಶುಭಾಶಯಗಳನ್ನು ತಿಳಿಸುತ್ತ, ಚನ್ನಬಸವಣ್ಣನವರು ರಚಿಸಿದ ಮಹತ್ವದ ಕೃತಿಯೊಂದರ ಕುರಿತು ಪ್ರಸ್ತುತ ಲೇಖನದಲ್ಲಿ ವಿವರಿಸುವ ಪ್ರಯತ್ನ ಮಾಡಿರುವೆ]

ಷಟ್ ಸ್ಥಲ ನಿರ್ಣಯ ಪರಮಾವತಾರಿ ಎಂದು ಖ್ಯಾತರಾದ ಚನ್ನಬಸವಣ್ಣನವರು ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಆರು ಸ್ಥಲಗಳನ್ನು ವಿಭಜಿಸುತ್ತ ಪರಮ ಮುಕ್ತಿಯ ನಿಲುವನ್ನು ಗುರುತಿಸಲು ನೂರಾ ಒಂದು ಸ್ಥಲಗಳನ್ನು ಮೊಟ್ಟಮೊದಲ ಬಾರಿಗೆ ಅಸ್ತಿತ್ವಕ್ಕೆ ತಂದರು. ಪ್ರಾಯಶಃ ವಚನ ಸಂಕಲನಗಳ ಯುಗವನ್ನು ವಿದ್ವಾಂಸರು ೧೫ನೇ ಶತಮಾನವೆಂದು ಹೇಳುತ್ತಾರೆ. ಆದರೆ ಚನ್ನಬಸವಣ್ಣನವರು ಸಂಕಲಿಸಿದ ಮೊಟ್ಟ ಮೊದಲ ಕೃತಿಯೇ ಏಕೋತ್ತರ ಶತಸ್ಥಲ ಕೃತಿ.

ನೂರೊಂದು ಸ್ಥಲವನ್ನು ಸಂಸ್ಕೃತ ಭಾಷೆಯಲ್ಲಿ ಏಕೋತ್ತರ ಶತಸ್ಥಲವೆನ್ನುತ್ತಾರೆ. ಎರಡರ ಭಾವ-ಉದ್ದೇಶ ಪರಮ ಗಂತವ್ಯಗಳು ಒಂದೇ. ಹೀಗಾಗಿ ಏಕೋತ್ತರ ಶತಸ್ಥಲ ಎಂಬ ಪರಿಕಲ್ಪನೆಯನ್ನು ಬಸವಾದಿ ಶಿವಶರಣರಿಗಿಂತ ಸಿದ್ಧಾಂತ ಶಿಖಾಮಣಿಕಾರನು ಮೊದಲು ಕೊಟ್ಟಿದ್ದಾನೆ ಎಂದು ಕೆಲವು ತಥಾಕಥಿತ ವಿದ್ವಾಂಸರು ಹೇಳುತ್ತ ಬಂದಿದ್ದರು. ೨೦೦೩ರಲ್ಲಿ ಡಾ. ಇಮ್ಮಡಿ ಶಿವಬಸವ ಸ್ವಾಮಿಗಳು ‘ಸಿದ್ಧಾಂತ ಶಿಖಾಮಣಿ ಹಾಗೂ ಶ್ರೀಕರ ಭಾಷ್ಯ : ನಿಜದ ನಿಲವು’ ಎಂಬ ಸಂಶೋಧನಾತ್ಮಕ ಗ್ರಂಥವನ್ನು ರಚಿಸುವ ಮೂಲಕ, ಸಿದ್ಧಾಂತ ಶಿಖಾಮಣಿಯು ೧೫ನೇ ಶತಮಾನದ ಕೃತಿಯೆಂದೂ ನೂರೊಂದು ಸ್ಥಲಗಳ ಜನಕರು ಖಂಡಿತವಾಗಿಯೂ ಬಸವಾದಿ ಶಿವಶರಣರೇ ಎಂದು ಸಮೃದ್ಧವಾದ ಆಕರ ಸಾಕ್ಷಿಯನ್ನು ಒದಗಿಸಿದ್ದಾರೆ.

ಸಾಧಕನು ಲಿಂಗಾಂಗಯೋಗದ ಸಾಧನೆ ಮಾಡುತ್ತ ಸಾಧನೆಯ ತುತ್ತತುದಿಗೇರುವ ಹಂತಗಳನ್ನು ಏಕೋತ್ತರ ಶತಸ್ಥಲ ಎಂದು ಕರೆದರು. ಭಕ್ತಸ್ಥಲದ ಪಿಂಡಸ್ಥಲದಿಂದ ಪ್ರಾರಂಭವಾಗುವ ಈ ಸಾಧನೆಯ ಹೆಜ್ಜೆಗಳು ಜ್ಞಾನಶೂನ್ಯ ಸ್ಥಲದವರೆಗೆ ೧೦೧ ಮೆಟ್ಟಿಲುಗಳನ್ನು ತೋರಿಸುತ್ತದೆ.

ಸಾಧಕನ ಬೆಳವಣಿಗೆಯ ವಿವಿಧ ಹಂತಗಳನ್ನು ಈ ನೂರೊಂದು ಸ್ಥಲದಲ್ಲಿ ಗುರುತಿಸಬಹುದು. ಅಜ್ಞಾನಿಯಾಗಿದ್ದ ಭಕ್ತ ಸಾಧಕನು, ತನ್ನ ಈ ಸ್ಥಲ ಯಾತ್ರೆಯ ಮೂಲಕ ಲಿಂಗಾಂಗ ಸಾಮರಸ್ಯದ ಅಂತಿಮ ಗುರಿಯನ್ನು ತಲುಪುತ್ತಾನೆ. ಆಗ ಆತ ಅಕ್ಷರಶಃ ಶಬ್ದಮುಗ್ಧನಾಗುತ್ತಾನೆ.

೧೨ನೇ ಶತಮಾನದಲ್ಲಿ ವಚನಗಳ ಸಂಕಲನ, ಸಂಪಾದನ-ಸಂಗ್ರಹ ಘಟ್ಟಗಳು ಪ್ರಾರಂಭವಾದ ಸೂಚನೆಗಳನ್ನು ಚನ್ನಬಸವಣ್ಣನವರ ಈ ಏಕೋತ್ತರ ಶತಸ್ಥಲ ಕೃತಿ ನಮಗೆ ತಿಳಿಸಿಕೊಡುತ್ತದೆ. ವಚನ ಸಂಕಲನಗಳಲ್ಲಿ ಇದೇ ಮೊಟ್ಟಮೊದಲ ಕೃತಿ ಮತ್ತು ಚನ್ನಬಸವಣ್ಣನವರೇ ಆದ್ಯ ವಚನ ಸಂಕಲನಕಾರರು.

ಷಟ್ಸ್ಥಲ ಸಿದ್ಧಾಂತದ ತಳಹದಿಯ ಮೇಲೆ ನೂರೊಂದು ನೆಲೆಯ ನಿಲವು ಸ್ಪಷ್ಟವಾಗುತ್ತ ಲಿಂಗಾಂಗ ಸಾಮರಸ್ಯದ ಅಂತಿಮ ಹಂತವನ್ನು ತಲುಪುವ ಮಾರ್ಗಕ್ರಮಣವೇ ಏಕೋತ್ತರ ಶತಸ್ಥಲವೆನಿಸುತ್ತದೆ.

ಚನ್ನಬಸವಣ್ಣನವೇ ಮೊದಲ ಬಾರಿಗೆ ನೂರೊಂದು ಸ್ಥಲ; ಏಕೋತ್ತರ ಸ್ಥಲ ಎಂಬ ಪದಪ್ರಯೋಗಗಳನ್ನು ತಮ್ಮ ವಚನಗಳಲ್ಲಿ ಮಾಡಿರುವುದು ವಿಶೇಷ. ‘ಪಿಂಡಾದಿ ಜ್ಞಾನಶೂನ್ಯಾಂತವಾದ ಏಕೋತ್ತರಮಾರ್ಗದಲ್ಲಿ ನಿಂದು’ (ಬಿ. ವಿ. ಮಲ್ಲಾಪುರ : ಚನ್ನಬಸವಣ್ಣನವರ ವಚನ ಸಂಪುಟ ವಚನ ೯೩೦). ‘ನಮ್ಮ ಆದ್ಯರ ವಚನ ನೂರೊಂದು ಸ್ಥಲವ ಮೀರಿದ ಮಹದಲ್ಲಿ ನೆಲೆಸಿತ್ತು’ (ಬಿ. ವಿ. ಮಲ್ಲಾಪುರ : ಚನ್ನಬಸವಣ್ಣನವರ ವಚನ ಸಂಪುಟ ವಚನ ೧೨೯೫). ಈ ಎರಡು ವಚನಗಳಲ್ಲಿ ಚನ್ನಬಸವಣ್ಣನವರು ಬಹಳ ಸ್ಪಷ್ಟವಾಗಿ ಏಕೋತ್ತರ ಶತಸ್ಥಲದ ಪ್ರಸ್ತಾಪ ಮಾಡಿದ್ದಾರೆ.

ಬಸವೇಶ್ವರ ಸಮಕಾಲೀನರಾದ ಜೇಡರ ದಾಸಿಮಯ್ಯನವರ (ಇಲ್ಲಿಯವರೆಗೆ ದಾಸಿಮಯ್ಯನವರು ಆದ್ಯ ವಚನಕಾರ ಎಂದೇ ಎಲ್ಲರೂ ಬಳಸುತ್ತ ಬಂದಿದ್ದರು. ಆದರೆ ಡಾ. ಚಿದಾನಂದಮೂರ್ತಿ ಅವರು ‘ದೇವರ ದಾಸಿಮಯ್ಯನೇ ಬೇರೆ; ಜೇಡರ ದಾಸಿಮಯ್ಯನೇ ಬೇರೆ. ವಚನಗಳನ್ನು ಬರೆದವನು ಬಸವ ಸಮಕಾಲೀನ ಜೇಡರ ದಾಸಿಮಯ್ಯ ಎಂಬುದನ್ನು ಸಂಶೋಧನೆ ಮಾಡಿ ಒಂದು ಗ್ರಂಥವನ್ನೇ ರಚಿಸಿದ್ದಾರೆ. ಹೀಗಾಗಿ ದಾಸಿಮಯ್ಯ ಆದ್ಯ ವಚನಕಾರ ಎಂಬ ವಾದ ಬಿದ್ದು ಹೋಗಿದೆ. ಅವರೂ ಬಸವಣ್ಣನವರ ಸಮಕಾಲೀನ ವಚನಕಾರ ಎಂಬುದು ಸ್ಪಷ್ಟವಾಗಿದೆ) ಒಂದು ವಚನದಲ್ಲಿ ಈ ನೂರೊಂದು ಸ್ಥಲದ ಪರಿಕಲ್ಪನೆ ಕೊಟ್ಟಿರುವುದು ನಮಗೆ ಗೋಚರವಾಗುತ್ತದೆ.

ಸಾಗರದೊಳಗಣ ಕಿಚ್ಚಿನ ಸಾಕಾರದಂತೆ
ಸಸಿಯೊಳಗಣ ಫಲ ಪುಷ್ಷಂಗಳ ರುಚಿ ಪರಿಮಳದಂತೆ
ಮನದ ಮರೆಯ ಮಾತು-ನೆನಹಿನಲ್ಲರಿದು
ನಾಲಗೆ ನುಡಿವಾಗಲಲ್ಲದೆ-ಕಾಣಬಾರದು ಕೇಳಬಾರದು
ಒಂದಂಗದೊಳಡಗಿದ ನೂರೊಂದರ ಪರಿ ರಾಮನಾಥ

ದಾಸಿಮಯ್ಯನವರಂತೆ ಮೋಳಿಗೆ ಮಾರಯ್ಯ ಶರಣರು ತಮ್ಮ ಅನೇಕ ವಚನಗಳಲ್ಲಿ ಏಕೋತ್ತರ ಶತಸ್ಥಲ ಎಂಬ ಶಬ್ದವನ್ನು ಪ್ರಯೋಗ ಮಾಡಿದ್ದಾರೆ.

ಹೀಗೆ ನೂರೊಂದುಸ್ಥಲದ ರೂಪ-ಸ್ವರೂಪವು ಷಟಸ್ಥಲಜ್ಞಾನಿ ಚನ್ನಬಸವಣ್ಣನವರಿಂದ ಅವರ ವಚನಗಳ ಮೂಲಕ ಬೆಳಕಿಗೆ ಬಂದುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ನೂರೊಂದು ಸ್ಥಲಗಳಲ್ಲಿ ಅಂಗ ಸ್ಥಲ (೪೪) ಮತ್ತು ಲಿಂಗ ಸ್ಥಲ(೫೭) ವೆಂದು ಎರಡು ಭಾಗಗಳು ಬರುತ್ತವೆ. ಆಶ್ರ‍್ಯವೆಂದರೆ ಈಗ ನಮಗೆ ದೊರಕಿರುವ ಚನ್ನಬಸವಣ್ಣನವರ ವಚನವೊಂದರಲ್ಲಿ ಲಿಂಗಸ್ಥಲದ ಸಮಗ್ರ ವಿವರಗಳು ದೊರೆಯುತ್ತವೆ; ಅಂಗಸ್ಥಲದ ವಿವರಣೆ ನೀಡುವ ವಚನದ ಪೂರ್ಣಪಾಠ ಇಲ್ಲದಿರುವುದು ವಿಷಾದದ ಸಂಗತಿಯಾಗಿದೆ. ಈಗ ದೊರೆತಿವ ಲಿಂಗಸ್ಥಲದ ವಿವರಣೆ ನೀಡುವ ಚನ್ನಬಸವಣ್ಣನವರ ವಚನ ಹೀಗಿದೆ:

ಲಿಂಗಸ್ಥಲದ ಆವಾಂತರಸ್ಥಲಗಳನ್ನು ನಿರೂಪಿಸುವ ಒಂದು ವಚನವನ್ನು ಇಲ್ಲಿ ಉದಾಹರಿಸಬಹುದು:

ಗುರುಲಿಂಗ ತ್ರಿವಿಧ: ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರು; ಸ್ವಯ, ಚರ, ಪರ ಇಂತು ಆಚಾರಲಿಂಗಸ್ಥಲ ಒಂಭತ್ತು.

ಆಗಮಲಿಂಗ ತ್ರಿವಿಧ: ಕ್ರಿಯಾಗಮ, ಭಾವಾಗಮ, ಜ್ಞಾನಾಗಮ; ಕಾಯಲಿಂಗ ತ್ರಿವಿಧ: ಸಕಾಯ, ಅಕಾಯ, ಪರಕಾಯ; ಆಚಾರಲಿಂಗ ತ್ರಿವಿಧ: ಧರ್ಮಾಚಾರ, ಭಾವಾಚಾರ, ಜ್ಞಾನಾಚಾರ ಇಂತು ಗುರುಲಿಂಗಸ್ಥಳ ಒಂಭತ್ತು, ಅಂತು ಉಭಯಸ್ಥಲ ಹದಿನೆಂಟು.

ಅನುಗ್ರಹಲಿಂಗತ್ರಿವಿಧ: ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹ; ಅರ್ಪಿತಲಿಂಗತ್ರಿವಿಧ: ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಷಿತ; ತನು ಗುಣಲಿಂಗತ್ರಿವಿಧ: ಶಿಷ್ಯ, ಶುಶ್ರೂಷಾ, ಸೇಸ್ಯ-ಇಂತು ಶಿವಲಿಂಗಸ್ಥಲ ಒಂಭತ್ತು ಅಂತು ತೃತೀಯಸ್ಥಲ ಇಪ್ಪತ್ತೇಳು.

ಒಲವುಲಿಂಗತ್ರಿವಿಧ : ಜೀವಾತ್ಮ, ಅಂತರಾತ್ಮ, ಪರಮಾತ್ಮ; ನಿರೂಪಲಿಂಗ. ತ್ರಿವಿಧ : ನಿರ್ದೇಹಾಗಮ, ನಿರ್ಭಾವಾಗಮ, ನಷ್ಟಾಗಮ. ಪ್ರಸಾದಲಿಂಗ ತ್ರಿವಿಧಃ ಆದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯಪ್ರಸಾದಿ. ಪಾದೋದಕಲಿಂಗ ತ್ರಿವಿಧಃ ದೀಕ್ಷಾಪಾದೋದಕ, ಶಿಕ್ಷಾಪಾದೋದಕ, ಜ್ಞಾನಪಾದೋದಕ-ಇಂತು ಜಂಗಮಸ್ಥಲ ಹನ್ನೆರಡು. ಅಂತು ಚತುರ್ಥಸ್ಥಳ ಮೂವತ್ತೊಂಭತ್ತು.

ಮೀರಿದ ಕ್ರೀದೀಕ್ಷಾಕ್ರಮದಿಂದತ್ತಲು ನಿಃಪತಿಲಿಂಗತ್ರಿವಿಧ ಃ ಕ್ರಿಯಾನಿಃಪತಿ, ಭಾವನಿಃಪತಿ, ಜ್ಞಾನನಿಃಪತಿ; ಆಕಾಶಲಿಂಗತ್ರಿವಿಧಃ ಪಿಂಡಾಕಾಶ, ಬಿಂಧ್ವಾಕಾಶ, ಮಹದಾಕಾಶ; ಪ್ರಕಾಶಲಿಂಗತ್ರಿವಿಧಃ ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನ ಪ್ರಕಾಶ ಇಂತು ಪ್ರಸಾದಲಿಂಗ ಒಂಭತ್ತು. ಅಂತು ಪಂಚಮಸ್ಥಲ ನಾಲ್ವತ್ತೆಂಟು.

ಆ ಲಿಂಗೈಕ್ಯನು, ಕೊಂಡುದು ಪ್ರಸಾದ, ನಿಂದುದೋಗರ, ಚರಾಚರನಾಸ್ತಿ ಇಂತೀತ್ರಿವಿಧ, ಭಾಂಡ, ಭಾಜನ, ಅಂಗಲೇಪನ-ಇಂತೀತ್ರಿವಿಧ. ಸ್ವಯಪರವೞೆಯದಸ್ಥಲ, ಭಾವಭಾವವನಷ್ಟಸ್ಥಲ, ಜ್ಞಾನಶೂನ್ಯಸ್ಥಲ-ಇಂತು ಮಹಾಲಿಂಗಸ್ಥಲ ಒಂಭತ್ತು. ಅಂತೂ ಷಡುಸ್ಥಲ ಐವತ್ತೇಳು. ಇಂತಿವೆಲ್ಲ ಸ್ಥಳಂಗಳನೊಳಕೊಂಡ ಮಹಾಮಹಿಮನು ಜ್ಞಾನಿಯಲ್ಲ; ಅಜ್ಞಾನಿಯಲ್ಲ, ಶೂನ್ಯನಲ್ಲ; ನಿಃಶೂನ್ಯನಲ್ಲ, ಉಭಯಾಚಾರವು ತಾನೆಂದೞೆದ ಪರಮಜ್ಞಾನಿಗೆ ಕೊಳುಕೊಡೆಯಿಲ್ಲ. ಸಾಕಾರ ಸಂಬಂಧವನರಿದು ನಿತ್ಯಮುಕ್ತ, ನಿರವಯ, ಉಭಯಾತ್ಮಕ ತಾನು ಕೂಡಲ ಚೆನ್ನ ಸಂಗಯ್ಯನೆಂದೂ ಎನ್ನದ ಸುಯಿಧಾನಿ.

(ಮಹಲಿಂಗದೇವರ ಏಕೋತ್ತರಶತಸ್ಥಲ-ಸರ್ವಾಚಾರ ಸಂಪತ್ತುಸ್ಥಲದ ೨೧ನೆಯ ವಚನ -ಸಂ. ಪ್ರೊ. ಸಂ.ಶಿ. ಭೂಸನೂರಮಠ ೧೯೭೪)

Share This Article
Leave a comment

Leave a Reply

Your email address will not be published. Required fields are marked *