ಸಾವಿಲ್ಲದ ಶರಣರು, ಜನತೆಯ ಜಗದ್ಗುರು, ದಾರ್ಶನಿಕರಾದ ಸಿದ್ಧಲಿಂಗ ಸ್ವಾಮಿಗಳಲ್ಲಿ ಬುದ್ಧನ ಶಾಂತಿ ಮಂತ್ರ, ಬಸವಣ್ಣನವರ ಸಮಾನತೆ, ಗಾಂಧೀಜಿಯವರ ಸ್ವಾತಂತ್ರ್ಯ ಕಲ್ಪನೆ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ, ಇವೆಲ್ಲ ಗುಣಗಳು ಹಾಸುಹೊಕ್ಕಾಗಿದ್ದವು ಎಂದು ಸ್ಮರಿಸುತ್ತಾ, ಶರಣ ಕುಪ್ಪಸ್ತ ಸರ್ ಅವರು ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು.
ಸಿಂದಗಿಯಲ್ಲಿ ಶ್ರೀಗಳ ಬಾಲ್ಯ, ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದಲ್ಲಿದ್ದುಕೊಂಡು ಕಾಲೇಜು ಶಿಕ್ಷಣ, ಧಾರವಾಡ ಯೂನಿವರ್ಸಿಟಿಯಲ್ಲಿ ಉನ್ನತ ಶಿಕ್ಷಣವನ್ನು ಶರಣ ಕಲ್ಬುರ್ಗಿ ಸರ್ ಅವರ ಶಿಷ್ಯರಾಗಿ ಪಡೆದುಕೊಂಡಿದ್ದು, ಮೂಜಗಂ ಅವರ ಗರಡಿಯಲ್ಲಿ ಪರಂಜ್ಯೋತಿ ಪತ್ರಿಕೆಯ ಉಸ್ತುವಾರಿಯನ್ನು ಹೊತ್ತಿದ್ದು ಹೀಗೆ ಅವರ ಮೊದಲ ದಿನಗಳ ಜೀವನವನ್ನು ನೆನಪು ಮಾಡಿಕೊಂಡರು.
1974,ಜುಲೈ 19 ರಂದು ಗದುಗಿನ ತೋoಟದಾರ್ಯ ಮಠಕ್ಕೆ ಜಗದ್ಗುರುಗಳಾಗಿ ಪಟ್ಟಾಧಿಕಾರ ವಹಿಸಿಕೊಂಡಿದ್ದು, ತಕ್ಷಣವೇ ಮಠದ ಏಳ್ಗೆಗಾಗಿ ಕಾರ್ಯೋನ್ಮುಖರಾಗಿದ್ದು, ಪ್ರತಿ ಅಮಾವಾಸ್ಯೆಗೊಮ್ಮೆಎಲ್ಲ ವಟುಗಳನ್ನು ಕರೆದುಕೊಂಡು ಡಂಬಳಕ್ಕೆ ಪಾದಯಾತ್ರೆಗೆ ಹೋಗುತ್ತಿದ್ದರು. ಅಲ್ಲಿ ನೂರಾರು ಎಕರೆ ಜಮೀನಿನ ಕಾಯಕಲ್ಪ ಮಾಡುವುದು ಅವರ ಇಚ್ಛೆಯಾಗಿತ್ತು.
ಅದರಂತೆ ತಾವೇ ವಟುಗಳ ಜೊತೆಗೆ ಬಾವಿ ತೋಡುವುದು, ಹರಗುವುದು, ಬಿತ್ತುವುದು ಹೀಗೆ ಪ್ರತಿಯೊಂದು ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಲ್ಲಿ ದ್ರಾಕ್ಷಿ, ಪೇರು, ದಾಳಿಂಬೆ, ಎಲ್ಲ ಥರದ ಹಣ್ಣು, ಕಾಯಿಪಲ್ಲೆ, ದವಸ ಧಾನ್ಯಗಳನ್ನು ಬೆಳೆಯಲು ಶುರು ಮಾಡಿದರು. ಇದೇ ರೀತಿ ಕಜ್ಜಾಯ ತರಲು ವಟುಗಳು ಭಕ್ತರ ಮನೆಗೆ ಹೋದಾಗ ಅವರ ಜೊತೆಯಲ್ಲಿ ಸಣ್ಣ ಡಬ್ಬಿ ಕೊಟ್ಟು ಕಳಿಸಲು ಶುರು ಮಾಡಿದರು. ತಮಗೆ ಆದಷ್ಟು ಚಿಕ್ಕ ಪ್ರಮಾಣದಲ್ಲಿಯೇ ಭಕ್ತರು ಕಾಣಿಕೆ ಸಲ್ಲಿಸಲಿ ಅಂತ. ತಿಂಗಳಿಗೊಮ್ಮೆ ಅದನ್ನೆಲ್ಲ ಎಣಿಸಿ, ಲೆಕ್ಕಪತ್ರ ಇಟ್ಟು ಮಠದ ಅಭಿವೃದ್ಧಿಗೆ, ಪುಸ್ತಕ ಪ್ರಕಟಣೆಗೆ ಬಳಸಲು ಶುರುಮಾಡಿದರು, ಎಂದು ನೆನೆಸಿಕೊಂಡರು.
1975-76 ರಲ್ಲಿ ವೀರಶೈವ ಅಧ್ಯಯನ ಸಂಸ್ಥೆ ಹುಟ್ಟುಹಾಕಿ ಮಠದಿಂದ ಪುಸ್ತಕಗಳನ್ನು ಪ್ರಕಟಣೆ ಮಾಡಲು ಪ್ರಾರಂಭ ಮಾಡಿದ್ದು, ಅದು ಮುಂದೆ 2005 ರಲ್ಲಿ ಲಿಂಗಾಯತ ಅಧ್ಯಯನ ಸಂಸ್ಥೆಯಾಗಿ ಪರಿವರ್ತನೆಗೊಂಡಿತು, ಇದರ ಹಿಂದಿನ ಕತೃತ್ವ ಶಕ್ತಿ ಡಾ. ಎಂ. ಎಂ. ಕಲ್ಬುರ್ಗಿ ಅವರದು ಎನ್ನುವದನ್ನು ಸ್ಮರಿಸಿಕೊಂಡರು.
ಕಲ್ಬುರ್ಗಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದು, ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕಾರ ಮತ್ತು ಕೋಮು ಸೌಹಾರ್ದ ಪ್ರಶಸ್ತಿ ಬಂದದ್ದು ಹೇಳುತ್ತಾ, ಅನೇಕ ಸಾಹಿತಿಗಳು ಅವರನ್ನು ಪ್ರೀತಿಯಿಂದ ” ಕನ್ನಡದ ವಿವೇಕಾನಂದ ” “ಪುಸ್ತಕದ ಸ್ವಾಮಿಜಿ ” “ಮನುಕುಲದ ಬೆಳಕು “”ಪವಾಡವಲ್ಲದ ಪವಾಡಪುರುಷರು “ಶ್ರಮ ಸಂಸ್ಕೃತಿಯ ರಾಯಭಾರಿ ” “ಸಮಾಜಮುಖಿ ಶ್ರೀಗಳು “”ಸಾಮಾನ್ಯರ ಜಗದ್ಗುರು ” ಎನ್ನುವ ಬಿರುದುಗಳನ್ನು ಕೊಟ್ಟು ಆರಾಧಿಸಿದರು ಎನ್ನುವುದನ್ನು ಹೆಮ್ಮೆಯಿಂದ ಹೇಳಿದರು.
ಗೋಕಾಕ ಚಳುವಳಿಯಲ್ಲಿ ಮುಂಚೂಣಿ ವಹಿಸಿದ್ದು, ಕಪ್ಪತಗುಡ್ಡ ಸoರಕ್ಷಣೆ, ಪೋಸ್ಕೊ ಕಂಪನಿ ವಿರುದ್ದ ಹೋರಾಟ, ಎಡೆಯೂರು, ಹರದನಹಳ್ಳಿ ಮತ್ತು ಕಗ್ಗೇರಿಯಲ್ಲಿನ ದಾಸೋಹಭವನ ನಿರ್ಮಾಣ, ಇಟಗಿ ಪ್ರಾರ್ಥಮಿಕ ಕೇಂದ್ರ, ಹೀಗೆ ಅವರ ನೂರಾರು ಕಾರ್ಯಗಳಲ್ಲಿ ಒಂದಿಷ್ಟನ್ನು ನಮ್ಮ ಜೊತೆಗೆ ಹಂಚಿಕೊಂಡರು
ನಾಡು ಕಂಡ ಶ್ರೇಷ್ಠ ಆಧ್ಯಾತ್ಮದ ಸಂತ, ಜಗದ್ಗುರು ಪದಕ್ಕೆ ಹೊಸ ಭಾಷ್ಯ, ವಿನೂತನ ವ್ಯಾಖ್ಯಾನ ಬರೆದವರು, ಭಕ್ತರ ಮತ್ತು ಸ್ವಾಮಿಗಳ ನಡುವಿನ ಅಂತರ ಕಡಿಮೆ ಮಾಡಿದವರು, ಸದಾ ಪ್ರಸನ್ನ ಚಿತ್ತದಿಂದ ಇರುವ, ಅಭಯ ಹಸ್ತ ನೀಡುವ ಶ್ರೀಗಳು 2018 ರಲ್ಲಿ ನಮ್ಮನ್ನೆಲ್ಲ ಅಗಲಿದರು ಎಂದು ದುಃಖತಪ್ತದಿಂದ ಹೇಳುತ್ತಾ ತಮ್ಮ ಮಾತುಗಳನ್ನು ಮುಗಿಸಿದರು.
ಮಾರ್ಗದರ್ಶನದಲ್ಲಿ ಡಾ.ಸಿದ್ಧಲಿಂಗೇಶ ಸಜ್ಜನಶೆಟ್ಟರ ಅವರು ಶ್ರೀಗಳ ಹೆಸರನ್ನೇ ತಮಗೆ ಇಟ್ಟಿದ್ದನ್ನು ಗೌರವದಿಂದ ಹೇಳಿಕೊಂಡು,ಶ್ರೀಗಳು ವಟುಗಳಿಗೆ ಅಡಿಗೆ ಮಾಡಿ ನೀಡುತ್ತಿದ್ದುದನ್ನು, ಕಾಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದು, ಮಠದ ಜೀರ್ಣೋದ್ದಾರ ಮಾಡಿದ್ದು,ನಾಗಪ್ಪನಿಗೆ ಹಾಲು ಎರೆಯಬೇಡಿ ಎನ್ನುವ ಅರಿಕೆ, ಅಡ್ಡಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವುದು ಬಿಟ್ಟಿದ್ದು, ಕಿರೀಟ ಹಾಕಿಕೊಳ್ಳುವುದು ಬೇಡ ಎನ್ನುವ ನಿರ್ಧಾರ,ಇನ್ನೂ ಹಲವಾರು ಮೂಢನಂಬಿಕೆ, ಗೊಡ್ಡು ಸಂಪ್ರದಾಯಗಳ ವಿರೋಧಿಸಿ ಸಮಾಜದಲ್ಲಿ ತಿಳುವಳಿಕೆ ಮೂಡಿಸಿದ್ದನ್ನು ನಮಗೆಲ್ಲ ಮನವರಿಕೆ ಮಾಡಿಕೊಟ್ಟರು.
ಕಡೆಯಲ್ಲಿ ಡಾ. ಶಶಿಕಾಂತ ಪಟ್ಟಣ ಅವರು ತಾವು ಶ್ರೀಗಳನ್ನು ಮೊದಲು ಭೆಟ್ಟಿಯಾದದ್ದು, ತಮ್ಮ ಪುಸ್ತಕಗಳನ್ನು ಅವರಿಗೆ ಕೊಟ್ಟು ಕಳಿಸಿದ್ದು, ಅವರ ಪುಸ್ತಕಗಳನ್ನು ಪಡೆದುಕೊಂಡಿದ್ದು, ಕಲ್ಬುರ್ಗಿ ಅಂತ್ಯಕ್ರಿಯೆಯಲ್ಲಿ ಶ್ರೀಗಳು ಭಾಗವಹಿಸಿದ್ದು ಹೇಳುತ್ತಾ, ಶ್ರೀಗಳು ಗುಣಗ್ರಾಹಿ, ಲವಲವಿಕೆಯುಳ್ಳವರು,ಹೊಸತನವನ್ನು ಅರಸುವವರು, ಸಾಹಿತ್ಯಕ್ಕೆ ಹೆಚ್ಚು ಮಹತ್ವ ಕೊಟ್ಟ ವರು, ನೆನಪಿನ ಶಕ್ತಿಯ ಆಗರ ಮತ್ತು ಗ್ರಾoಥಸ್ಥರು ಎನ್ನುವುದನ್ನು ಸ್ಮರಿಸಿದರು.
ಸಂವಾದದಲ್ಲಿ ಡಾ. ವೀಣಾ ಎಲಿಗಾರ ಅವರು ಮಾತನಾಡಿ,ಶ್ರೀಗಳ ಜೊತೆಗಿದ್ದ ತಮ್ಮ ಒಡನಾಟ ನೆನಪಿಸಿಕೊಂಡರು. ದತ್ತಿದಾಸೋಹಿಗಳಾದ ಶರಣ ಶಿವಾನಂದ ಕಲಕೇರಿ ಅವರು ವಚನ ಸಾಹಿತ್ಯ ನಿಂತ ನೀರಲ್ಲ, ಹರಿಯುವ ನೀರು, ಶರಣರ ನಿಜಾಚರಣೆಗಳನ್ನು ನಾವು ಪಾಲಿಸಬೇಕು ಎನ್ನುವ ಕಿವಿಮಾತು ಹೇಳಿದರು.
ಶರಣೆ ಸುಗುಣ ಮಲ್ಲೇಶ ಅವರ ವಚನ ಪ್ರಾರ್ಥನೆ, ಡಾ. ಸರಸ್ವತಿ ಪಾಟೀಲ್ ಅವರ ಸ್ವಾಗತ, ಪ್ರಾಸ್ತಾವಿಕ, ಪರಿಚಯದ ನುಡಿಗಳು, ಶರಣೆ ಮಂಗಲಾ ಪಾಟೀಲ್ ಅವರ ಶರಣು ಸಮರ್ಪಣೆ ಮತ್ತು ಶರಣೆ ಸುಮಂಗಲಾ ಅಣ್ಣಿಗೇರಿ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಶರಣೆ ಜಯಶ್ರೀ ಆಲೂರ ಅವರು ಕಾರ್ಯಕ್ರಮವನ್ನು ಸಮರ್ಪಕವಾಗಿ ನಡೆಸಿಕೊಟ್ಟರು.
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿಉಪನ್ಯಾಸದ 12 ನೆಯ ದಿವಸದ ವರದಿ (ಆಗಸ್ಟ್ 15)