ಬಸವಣ್ಣ, ಸಿದ್ಧರಾಮ, ಪಂಡಿತಾರಾಧ್ಯ
ಸಿದ್ಧರಾಮರು ಶ್ರೀಶೈಲದ ಕಪಿಲ ಮಲ್ಲಿಕಾರ್ಜುನನ ಭಕ್ತರು. ತಮ್ಮ ನೆಲೆ ಸೊಲ್ಲಾಪುರವನ್ನು ‘ಅಭಿನವ ಶ್ರೀಶೈಲ’ವಾಗಿ ಬೆಳೆಸಲು ಹಲವಾರು ಕ್ಷೇತ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪ್ರಸಿದ್ಧರಾದರು.
ಲೋಕಕಲ್ಯಾಣಕ್ಕಾಗಿ ಅವರು ಅನೇಕ ದೇವಸ್ಥಾನ, ಕೆರೆ, ಉದ್ಯಾನಗಳನ್ನು ನಿರ್ಮಿಸಿದರು. ಯೋಗರಮಣೀಯ ಕ್ಷೇತ್ರ ಮತ್ತು ಅಷ್ಟಷಷ್ಠಿ ತೀರ್ಥ ಕ್ಷೇತ್ರ ಅವರ ಮುಖ್ಯ ಸಾಧನೆಗಳು.
ಸಿದ್ಧರಾಮರು ಅನೇಕ ಸ್ಥಾವರ ಲಿಂಗದ ದೇವಸ್ಥಾನಗಳನ್ನು ಸ್ಥಾಪಿಸಿದ್ದರು. ಬಹು ದೇವತಾ ಆರಾಧಕರಾಗಿದ್ದ ಅವರು ಅಭಿಷೇಕ, ಹೋಮಗಳಂತಹ ವೈದಿಕ ಆಚರಣೆಗಳಲ್ಲಿ ಮುಳುಗಿದ್ದರು.
ಲೋಕ ಕಲ್ಯಾಣಕ್ಕಾಗಿ ದುಡಿದರೂ, ಅವರ ಸಾಧನೆಯಲ್ಲಿ ಬಾಹ್ಯ ಆಡಂಬರವೇ ಪ್ರಬಲವಾಗಿತ್ತು. ಅಲ್ಲಮ ಪ್ರಭುಗಳ ಪ್ರಭಾವದಿಂದ ಅಂತರಂಗದ ಸಾಧನೆಯ ಮಹತ್ವ ಅರಿವಾಗಿ ಕಲ್ಯಾಣಕ್ಕೆ ಬಂದರು.
ಅಲ್ಲಿ ಬಸವಣ್ಣನವರ ಪ್ರಭಾವದಿಂದ ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದರು. ಹಲವಾರು ವಚನಗಳನ್ನು ರಚಿಸಿದ್ದು ಮಾತ್ರವಲ್ಲದೆ, ಬಸವ ಸ್ತೋತ್ರ ತ್ರಿವಿಧಿಯಂತಹ ಕೃತಿಗಳನ್ನೂ ರಚಿಸಿದರು.
ಸಿದ್ಧರಾಮರ ಜೊತೆ ಅಪಾರ ಸಂಖ್ಯೆಯಲ್ಲಿದ್ದ ಅವರ ಭಕ್ತರೂ ಶರಣರನ್ನು ಸೇರಿಕೊಂಡರು. ಕೆಲವೇ ವರ್ಷಗಳಲ್ಲಿ ಶರಣ ಚಳುವಳಿ ಪ್ರವಾಹದಂತೆ ಹೊಮ್ಮಲು ಇದೂ ಒಂದು ಮುಖ್ಯ ಕಾರಣವಾಯಿತು.
(‘ಸಿದ್ದರಾಮ-ಬಸವಣ್ಣ-ಪಂಡಿತಾರಾಧ್ಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)