ಕೈ ಜಾರಿದ ಎಡೆಯೂರು
ಎಡೆಯೂರು ಕ್ಷೇತ್ರದ ವಾರಸುದಾರರು ಗದುಗಿನ ಶ್ರೀಗಳು
ಸಿದ್ದಲಿಂಗ ಯತಿಗಳು ಲಿಂಗೈಕ್ಯರಾದ ಮೇಲೆ ಪಟ್ಟಕ್ಕೆ ಬಂದ ಶಿಷ್ಯರು, ಅವರ ಗದ್ದಿಗೆಯ ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿ, ಜಂಗಮ ತತ್ವದಂತೆ ಧರ್ಮ ಪ್ರಚಾರ ಮಾಡಲು ಮತ್ತೆ ಹೊರಟರು.
ಅವರ ಸಂಚಾರ ಹೆಚ್ಚಿದಂತೆ ಆಗಿನ ಪ್ರಯಾಣದ ಸಮಸ್ಯೆಗಳಿಂದ ಎಡೆಯೂರಿಗೆ ಮರಳುವುದು ವಿರಳವಾಯಿತು. ಮಠದ ಆಡಳಿತ ದುರ್ಬಲವಾಗಿ, ಪೂಜೆಗೆಂದು ನೇಮಕವಾಗಿದ್ದ ಅರ್ಚಕರ ಮೇಲಿನ ಹತೋಟಿ ತಪ್ಪಿತ್ತು.
ಅರ್ಚಕರು ಮಠದ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಾರಂಭಿಸಿ, ಧಾರ್ಮಿಕ ಕರ್ತವ್ಯವನ್ನು ಕಡೆಗಣಿಸಿದರು. ಸ್ವಾರ್ಥಕ್ಕಾಗಿ ಮಠದ ಆಭರಣಗಳನ್ನು ಅಡ ಇಟ್ಟ ಪ್ರಕರಣಗಳೂ ಹೊರ ಬಂದವು.
ಈ ಅವ್ಯವಹಾರ ಬಹಳ ದಿನ ಯಾವುದೇ ಅಡಚಣೆಯಿಲ್ಲದೆ ನಡೆಯಿತು. ಇದರಿಂದ ಬೇಸತ್ತ ಮಠದ ಭಕ್ತಾದಿಗಳು 1902ರಲ್ಲಿ ಮೈಸೂರಿನ ಸರಕಾರಕ್ಕೆ ಎರಡು ಪತ್ರಗಳನ್ನು ಬರೆದು ದೂರು ಕೊಟ್ಟರು.
ಈ ಪತ್ರಗಳನ್ನು ಬಳಸಿಕೊಂಡು ಸರಕಾರ ಮಠವನ್ನು ವಹಿಸಿಕೊಂಡಿತು. ಎಡೆಯೂರು ಕ್ಷೇತ್ರದ ವಾರಸುದಾರರಾಗಿದ್ದ ಅಂದಿನ ಗದಗಿನ ಶ್ರೀಗಳು ಇದನ್ನು ಪ್ರತಿಭಟಿಸಿದರೂ ಪ್ರಯೋಜನವಾಗಲಿಲ್ಲ.
ಸ್ವಾತಂತ್ರ್ಯದ ನಂತರ 1968ರಲ್ಲಿ ಸರಕಾರ ಮಠವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಿತು. ಸಿದ್ದಲಿಂಗ ಯತಿಗಳು ಜೀವಂತ ಸಮಾಧಿಯಾಗಿದ್ದ ಗದ್ದಿಗೆ ದೇವಸ್ಥಾನವಾಗಿ ಬದಲಾಯಿತು.
(ಯಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರದ ವಾರಸುದಾರರು ಗದುಗಿನ ಶ್ರೀಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೫)