ಮಾನವ ಸಂಸ್ಕೃತಿಯ ಇತಿಹಾಸದಲ್ಲಿ ಅನೇಕ ಧರ್ಮಗಳು, ಸಂಸ್ಕೃತಿಗಳು ಅಳಿವು ಉಳಿವುಗಳನ್ನು ಕಂಡಿವೆ.
ಆದರೆ ಕಾಯಕಧರ್ಮ ಬಿಟ್ಟರೆ ಮಾನವ ಜನಾಂಗಕ್ಕೆ ಉಳಿಗಾಲವಿಲ್ಲ. ಆದ್ದರಿಂದ ಮಾನವ ಕುಲವನ್ನು ಉದ್ಧರಿಸುವಲ್ಲಿ ಕಾಯಕ-ದಾಸೋಹ ಧರ್ಮ ಪಾಲಿಸಬೇಕು ಎಂಬುದನ್ನು ಪ್ರತಿಪಾದಿಸಿದ ನುಲಿಯ ಚಂದಯ್ಯನವರು ಬಸವಣ್ಣನವರ ಸಮಕಾಲೀನ ಶರಣರು.
ನುಲಿಯ ಚಂದಯ್ಯನವರ ಜನ್ಮಸ್ಥಳದ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಅವರ ಚರಿತ್ರೆಯ ವಿವರಗಳು ಸಂಪೂರ್ಣ ಲಭ್ಯವಿಲ್ಲ.
ಅವರ ಪೂರ್ವಜರು ಮತ್ತು ಕುಟುಂಬದ ಮಾಹಿತಿ ಸಿಗುವುದಿಲ್ಲ. ಬಸವಪುರಾಣ, ಶಿವತತ್ತ್ವ ಚಿಂತಾಮಣಿ, ಅಸಂಖ್ಯಾತರ ಕಥೆ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ, ಹಲಗೆಯಾರ್ಯರ ಶೂನ್ಯಸಂಪಾದನೆ, ಗುಮ್ಮಳಾಪುರದ ಸಿದ್ಧಲಿಂಗದೇವರ ಶೂನ್ಯ ಸಂಪಾದನೆ, ಮತ್ತು ಗೂಳೂರು ಸಿದ್ಧವೀರಣ್ಣೂಡೆಯರ ಶೂನ್ಯಸಂಪಾದನೆ, ಸಿದ್ಧನಂಜೇಶನ ಗುರುರಾಜ ಚಾರಿತ್ರ, ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ, ರಾಘವಾಂಕ ಚರಿತ್ರೆ, ಫ.ಗು. ಹಳಕಟ್ಟಿ ಅವರ ಶಿವಶರಣರ ಚರಿತ್ರೆ ಭಾಗ-2, ಕರ್ನಾಟಕ ಕವಿಚರಿತೆ- 1, ಮುಂತಾದ ಗ್ರಂಥಗಳಲ್ಲಿ ನುಲಿಯ ಚಂದಯ್ಯನವರ ಪ್ರಸ್ತಾಪ ಬರುತ್ತದೆ.
ಅವರು ವಯಸ್ಸಿನಲ್ಲಿ ಬಸವಣ್ಣನವರಿಗಿಂತ ಹಿರಿಯರು ಎಂಬುದು ಬಸವಣ್ಣನವರ ವಚನವೊಂದರಿಂದ ತಿಳಿದುಬರುತ್ತದೆ. ಅವರ ವಚನಾಂಕಿತ ಚಂದೇಶ್ವರಲಿಂಗ,
ಮೆದೆಹುಲ್ಲಿನಿಂದ ತಯಾರಿಸಿದ ನುಲಿಯ ಹೊಸೆದು ಹಗ್ಗ ಕಣ್ಣಿ ಮಾಡಿ, ಕಲ್ಯಾಣದಲ್ಲಿ ಮಾರಿ ಜಂಗಮ ದಾಸೋಹ ಮಾಡುವ ಕುರಿತು ಇತಿಹಾಸದಲ್ಲಿ ಉಲ್ಲೇಖವಿದೆ. ಅವರು ಬಸವಣ್ಣನವರ ಸಮಕಾಲೀನರು ಮತ್ತು ಅನುಭವ ಮಂಟಪದ 770 ಅಮರಗಣಂಗಳಲ್ಲಿ ಒಬ್ಬರು ಎಂಬುದಕ್ಕೆ ಬಸವಾದಿ ಶರಣರ ವಚನಗಳು ಸಾಕ್ಷಿ ಇವೆ. ಶಿವಣಗಿ, ಕಲ್ಯಾಣ, ಉಳವಿ, ಗೋಣಿಬೀಡು, ಎಣ್ಣೆಹೊಳೆ, ನಂದಿ ಗ್ರಾಮ, ನುಲೇನೂರು ಮುಂತಾದ ಕಡೆಗಳಲ್ಲಿ ಅವರು ಇದ್ದ ಬಗ್ಗೆ ಮಾಹಿತಿ ಸಿಗುತ್ತದೆ.
(ಶರಣ ರಮಜಾನ ದರ್ಗಾ ಅವರು ಬರೆದ ದಾಸೋಹ ಜ್ಞಾನಿ ನುಲಿಯ ಚಂದಯ್ಯ ಕೃತಿಯ ಆಯ್ದ ಭಾಗ.)