ಶರಣ ಅರ್. ಎಸ್. ಬಿರಾದಾರ ಅವರು ಜಾನಪದವು ಜನಮಾನಸದಲ್ಲಿ ಹಾಸುಹೊಕ್ಕಾಗಿ ಉಳಿದುಬಂದಿದೆ ಎಂದು ಹೇಳುತ್ತಾ ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು.
ಅಂಬಿಗರ ಚೌಡಯ್ಯನವರ ಬಗೆಗೆ ಹೇಳುತ್ತಾ, ಅವರ ಸಾಮಾಜಿಕ ಕಳಕಳಿ, ಅನ್ಯಾಯ, ವಂಚನೆಯನ್ನು ತೀವ್ರವಾಗಿ ಖಂಡಿಸುವ ಗುಣ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎನ್ನುವ ಗಟ್ಟಿತನ ಎಲ್ಲವೂ ಅವರಲ್ಲಿ ಇತ್ತು. ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಅವರು ಮಾಡುತ್ತಿದ್ದರು ಎನ್ನುವುದನ್ನು ನಮ್ಮೊಂದಿಗೆ ಹಂಚಿಕೊಂಡರು.
ಉಪಮೆ, ಗಾದೆ, ಹಾಡು, ಬೈಗುಳ, ಸಂಪ್ರದಾಯ ಖಂಡನೆಗಳು,ಎಲ್ಲವೂ ಅವರ ವಚನಗಳಲ್ಲಿ ಕಾಣಸಿಗುತ್ತವೆ,ಎಂದು ಹೇಳುತ್ತಾ, ಹಳೆಯ ಕನ್ನಡ ಪದಗಳನ್ನೂ ಸಹ ಉದಾಹರಿಸಿದರು.
ಪ್ರಿಯoವದಾ ಹುಲಗಬಾಳಿ ಅವರು ಕಾಯಕತತ್ವವೇ ಮೈವೆತ್ತಿನಿಂತ ಆಯ್ದಕ್ಕಿ ಲಕ್ಕಮ್ಮನವರ ಬಗ್ಗೆ ಹೇಳುತ್ತಾ, ಕಾಯಕತತ್ವವನ್ನು ಪೂರ್ಣ ಸ್ವರೂಪದಲ್ಲಿ ನಿತ್ಯಜೀವನದಲ್ಲಿ ಆಚರಣೆ ತಂದ ಮಹಾಸಾಧ್ವಿ ಶಿರೋಮಣಿ ಎಂದು ಹೇಳುತ್ತಾ ಅವರ ವಚನಗಳನ್ನು ಮಧ್ಯದಲ್ಲಿ ಉಲ್ಲೇಖಿಸುತ್ತಾ ಸುಂದರವಾದ ಉಪನ್ಯಾಸವನ್ನು ಕಟ್ಟಿಕೊಟ್ಟರು.
ಮಾರ್ಗದರ್ಶಕರಾದ ಬಿ. ಎಂ. ಪಾಟೀಲ್ ಅವರು ವಚನ ಸಾಹಿತ್ಯ ಮತ್ತು ಶರಣರ ಬದುಕನ್ನು ಅಳವಡಿಸಿಕೊಳ್ಳುವ ರೀತಿಯ ಬಗ್ಗೆ ಕಿವಿಮಾತು ಹೇಳಿದರು. ಹಳಕಟ್ಟಿ ಅವರ ಆಶಯದಂತೆ ವಚನಗಳನ್ನು ಮನೆ-ಮನೆಗೂ ಮುಟ್ಟಿಸಬೇಕು, ಪ್ರತಿದಿನ ಮನೆಯಲ್ಲಿ ಎಲ್ಲರಿಗೂ ಕಾಣುವ ಹಾಗೆ ಕಪ್ಪು ಹಲಗೆಯ ಮೇಲೆ ವಚನ ಬರೆದು ಎಲ್ಲರೂ ಓದುವ ಹಾಗೆ ಮಾಡಬೇಕು ಎಂದು ಹೇಳಿದರು.
ಡಾ. ಶಶಿಕಾಂತ ಪಟ್ಟಣ ಅವರು ದಾನಪುರದಲ್ಲಿ ಚೌಡಯ್ಯನವರ ಶಾಸನವಿದೆ ಎನ್ನುವುದರ ಬಗೆಗೆ, ಸತಿ-ಪತಿಗಳ ಭಾವ, ಸಮಷ್ಟಿ ಪ್ರಜ್ಞೆ, ಅಂಗ-ಲಿಂಗ ಒಂದಾದ ಬಗೆ ಹೀಗೆ ಆಯ್ದಕ್ಕಿ ಲಕ್ಕಮ್ಮ ಮತ್ತು ಅಂಬಿಗರ ಚೌಡಯ್ಯನವರ ಬಗ್ಗೆ ಇನ್ನಷ್ಟು ಮಾಹಿತಿ ಕೊಟ್ಟರು.
ಶರಣೆ ಪೂಜಾ ಹಿರೇಮಠ ಅವರ ವಚನ ಪ್ರಾರ್ಥನೆ, ಶರಣೆ ಸುಧಾ ಪಾಟೀಲ ಅವರ ಸ್ವಾಗತ, ಪ್ರಾಸ್ತಾವಿಕ, ಪರಿಚಯದ ನುಡಿಗಳು, ಶರಣ ನಾಗರಾಜ ಮತ್ತಿಹಳ್ಳಿ ಅವರ ಶರಣು ಸಮರ್ಪಣೆ, ಶರಣೆ ತ್ರಿವೇಣಿ ವಾರದ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಶರಣೆ ಮೀನಾಕ್ಷಿ ಪಾಟೀಲ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅತ್ಯಂತ ಸಮರ್ಪಕವಾಗಿ ನೆರವೇರಿಸಿದರು.
(ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿಉಪನ್ಯಾಸದ 14 ನೆಯ ದಿವಸದ ವರದಿ – ಆಗಸ್ಟ್ 17)