“ಎಳ್ಳಿಂಗೆ ಪರಿಮಳವ ಕಟ್ಟಿದಲ್ಲದೆ, ಎಣ್ಣಿಗೆ ಪರಿಮಳವೇಧಿಸದು. ದೇಹದಲ್ಲಿ ಇಷ್ಟಲಿಂಗ ಸ್ಥಾಪಿಸಿದಲ್ಲದೆ ಪ್ರಾಣಲಿಂಗ ಸಂಬಂಧವಾಗದು. ಇದು ಕಾರಣ ಗುಹೇಶ್ವರಲಿಂಗದಲ್ಲಿ ಇಷ್ಟಲಿಂಗ ಸಂಬಂಧಿಯಾದಲ್ಲದೆ ಪ್ರಾಣಲಿಂಗಸಂಬಂಧಿಯಾಗಬಾರದು ಕಾಣಾ ಸಿದ್ಧರಾಮಯ್ಯಾ.” ಎಳ್ಳಿಗೆ ಸುವಾಸನೆ ಬರುವುದಲ್ಲದೆ, ಎಣ್ಣೆಗೆ ಹೇಗೆ ಬರುತ್ತದೆ? ಈ ದೇಹದೊಳಗೆ ಇಷ್ಟಲಿಂಗವನ್ನು ಕಟ್ಟಿಕೊಳ್ಳದೆ, ಪ್ರಾಣಲಿಂಗದ ಸಂಬಂಧವುಂಟಾಗದು. ಆದ್ದರಿಂದ ಸಿದ್ಧರಾಮ ಮೊದಲು ನೀನು ಇಷ್ಟಲಿಂಗ ಸಂಬಂಧಿಯಾಗು, ನಂತರ ಪ್ರಾಣಲಿಂಗ ಸಂಬಂಧಿಯಾಗುವಿ ಎಂದು ಅಲ್ಲಮರು ಹೇಳಿದಾಗ, ಸಿದ್ಧರಾಮರಿಗೂ ಅವರ ಮಾತು ನಿಜವೆನಿಸಿತು.
ಪುಣ್ಯ ಎಂದರೇನು? ಪಾಪ ಎಂದರೇನು ಎಂಬುದನ್ನು ಅರಿತುಕೊಳ್ಳುವುದಕ್ಕಿಂತ ಮೊದಲು ಅನೇಕ ಭವ(ಜನ್ಮ)ಗಳಲ್ಲಿ ಬಂದು ನಿಮ್ಮ ನಿಲುವನ್ನು ಅರಿಯದೆ ಕೆಟ್ಟೆನಯ್ಯಾ! ಇನ್ನು ನಿಮ್ಮ ಶರಣುವೊಕ್ಕನಾಗಿ, ನಾ ನಿಮ್ಮನೆಂದು ಅಗಲದಂತೆ ಮಾಡಯ್ಯಾ. ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮಲ್ಲಿ ಒಂದು ಬೇಡುವೆ ಎನ್ನ ಕರ್ಮಬಂಧನ ಬಿಡುವಂತೆ ಮಾಡು ಎಂದು ಸಿದ್ಧರಾಮರು ಅಂಗಲಾಚುತ್ತಾರೆ. ಮುಂದುವರಿದು ನಿಮ್ಮ ಗಣಂಗಳ ಸಮೂಹದಲ್ಲಿ ನಿಮ್ಮ ನಾಮ ಡಿಂಗರಿಗನಾಗಿ ಇರುವೆನು ದಯವಿಟ್ಟು ನನ್ನನ್ನು ಉದ್ಧರಿಸಿ ಎನ್ನುತ್ತಾರೆ.
ಸಿದ್ಧರಾಮರಿಗೆ ಎಷ್ಟು ವಿಧದಿಂದ ವಿನಂತಿಸಿಕೊಂಡರೂ ಸಮಾಧಾನವಿಲ್ಲ. ಮತ್ತೆ ಮತ್ತೆ ತಮ್ಮ ಮನವಿಯನ್ನು ಮುಂದುವರಿಸುತ್ತಾರೆ. ‘ನಾನು ಮಂದಮತಿಯನು. ಕೆರೆ ಭಾವಿ ಹೂದೋಟ ಚೌಕ ಛತ್ರಂಗಳ ಮಾಡಿ, ಜೀವಂಗಳ ಮೇಲೆ ಕೃಪೆಯುಂಟೆಂದು, ಎನ್ನ ದಾನಿ ಎಂಬರು, ನಾನು ದಾನಿಯಲ್ಲ ಅಯ್ಯಾ. ನೀ ಹೇಳಿದಂತೆ ನಾ ಮಾಡಿದೆನು, ನೀ ಬರಹೇಳಿದಲ್ಲಿ ನಾನು ಬಂದೆನು. ನೀನು ಇರಿಸಿದಂತೆ ಇದ್ದೆನು. ನಿಮ್ಮ ಇಚ್ಛಾಮಾತ್ರವ ಮೀರಿದೆನಾಯಿತ್ತಾದಡೆ, ಫಲಪದ ಜನನವ ಬಯಸಿದೆನಾದಡೆ ನಿಮ್ಮಾಣೆ ಮತ್ತೊಮ್ಮೆ ನನ್ನನ್ನು ಈ ಭವಕ್ಕೆ ಬರಿಸದಿರಯ್ಯಾ ನಿಮ್ಮ ಧರ್ಮ. ಮಾಡಿಸಯ್ಯಾ ಎನಗೆ ನಿಮ್ಮವರ ಸಂಗವ, ಮಾಡಿಸಯ್ಯಾ ಎನಗೆ ನಿಮ್ಮವರಾನಂದವ, ಆಗಿಸಯ್ಯಾ ನಿನ್ನವರಾದಂತೆ, ನೋಡಿಸಯ್ಯಾ ನಿನ್ನವರ ಕೂಡೆ. ಸಂಗವನು ಮಾಡಿಸಯ್ಯಾ, ಎನಗೆ ಬಚ್ಚಬರಿಯ ಭಕ್ತಿಯನು ಕೊಡಿಸಯ್ಯಾ, ಎನಗೆ ಪಾದೋದಕ ಪ್ರಸಾದವನೊಚ್ಚತವ ಸಲಿಸಯ್ಯಾ. ನಿಮ್ಮವರ ಕೂಡ ಸಿಕ್ಕಿ ಇರಿಸಯ್ಯಾ. ನಿನ್ನವರ ಪಾದದ ಕೆಳಗೆ ನಿತ್ಯನಾಗಿ ಬರಿಸಯ್ಯಾ ಎನ್ನ ಭವಭವದಲ್ಲಿ, ವೇದಾಂತಿಗಳಂತೆ ಕೋಟಿಗಟ್ಟಲೆ ಅದ್ವೆöÊತ ಸಿದ್ಧಾಂತವನ್ನು ಹೇಳಬಹುದು, ಆದರೆ ಒಮ್ಮೆ ನಿರ್ಧಾರವಾಗಿ ಮಾಡಲು ಸಾಧ್ಯವೇ ಸದ್ಭಕ್ತಿ ಆಚಾರ. ನುಡಿದಂತೆ ನಡೆವ, ನಡೆದಂತೆ ನುಡಿವ ಸದ್ ಭಕ್ತಿ ಸದಾಚಾರಯುಕ್ತ ಮಹಾತ್ಮರ ಪಾದವ ಹಿಡಿದು ಬದುಕಿಸಯ್ಯಾ ಪ್ರಭುವೇ ಎಂದು ಸಿದ್ಧರಾಮರು ಒಂದೇ ಸಮನೆ ಬೇಡಿಕೊಳ್ಳುತ್ತಾರೆ. ಯೋಗಮಾರ್ಗಿಯಾಗಿದ್ದ ಸಿದ್ಧರಾಮರು ಈಗ ಯೋಗಮಾರ್ಗಕ್ಕಿಂತಲೂ ಭಿನ್ನವಾದ, ಆತ್ಮಾನಂದದ ಅನುಭೂತಿಯನ್ನು ನೀಡುವ ಇಷ್ಟಲಿಂಗದ ಅನುಸಂಧಾನದತ್ತ ಅವರು ಮನಸ್ಸು ಮಾಡುತ್ತಿದ್ದಾರೆ.
ಸಿದ್ಧರಾಮರ ಈವರೆಗಿನ ಬದುಕು ಬೇರೆಯಾಗಿತ್ತು, ಈಗ ಹೊಸತನದತ್ತ ತುಡಿಯುತ್ತಿದೆ. ಅದಕ್ಕಾಗಿ ಅಲ್ಲಮರು ಮೊದಲು ನೀನು ಶ್ರುತಿಗಳನ್ನು ನಂಬುವುದನ್ನು ಬಿಡು, ಶ್ರುತಿ ತತಿಗಳು ಶಿವನಡಿಯನ್ನೇ ಕಾಣಲಾರದೆ ತೊಳಲಿ ಬಳಲುತ್ತಿದ್ದಾವೆ. ಶ್ರುತಿ ಹೇಳಿದತ್ತ ಹರಿಹರಿದು ಬಳಲದಿರು, ನನ್ನ ಗುರು ಸದ್ಗುರು ಅನುಮಿಷ ದೇವನಂತೆ ನಿನ್ನ ಕರಸ್ಥಲದಲ್ಲಿ ಮೊದಲು ಲಿಂಗವನ್ನು ನಿಶ್ವೆöÊಸಿ, ವಸ್ತು ನಿಶ್ಚಯವ ಕಂಡು, ನಮ್ಮ ಗುಹೇಶ್ವರ ಲಿಂಗದಲ್ಲಿ ನಿಬ್ಬೆರಗಾಗೊ ಮರುಳೆ ಎನ್ನುತ್ತಾರೆ. ಹೀಗೆ ನಿಮಗ್ನವಾದರೆ ದೇಹವೂ ಲಿಂಗವಾಗುತ್ತದೆ, ಪ್ರಾಣವೂ ಲಿಂಗವಾಗುತ್ತದೆ. ಮನಸ್ಸು ಲಿಂಗವಾಗುತ್ತದೆ. ಅಂಗ ಲಿಂಗವಾದಾಗ ನಡೆನುಡಿಗತಿಗಳೇ ಇಲ್ಲವಾಗುವವು. ಪ್ರಾಣ ಲಿಂಗವಾದರೆ ದೇಹದೊಳಗಿನ ನವನಾಳ, ನರಗಳ ಜಂಜಾಟ ತಪ್ಪುವುದು, ಮನಸ್ಸೇ ಲಿಂಗವಾದರೆ, ನೆನಪೇ ಅಳಸಿ ಹೋಗುವುದು. ಹೀಗೆ ಸರ್ವಾಂಗವೂ ಲಿಂಗವಾಗಿ ಸವೇಂದ್ರಿಯಗಳು ಗಮನಗೆಟ್ಟು ಮಹಾಘನವು ಗೋಚರಿಸಿ, ಪ್ರಾಣಲಿಂಗದ ಸಂಬಂಧವುಂಟಾಗುವುದು ಎಂದು ಅಲ್ಲಮರು ಹೇಳುತ್ತಾರೆ.
ಆಗ ಸಿದ್ಧರಾಮರು ಬೀಜದಲ್ಲಿ ವೃಕ್ಷವಡಗಿದಂತೆ, ಮೊಸರಿನಲ್ಲಿ ತುಪ್ಪವಿದ್ದಂತೆ, ತನ್ನೊಳಗೆ ಲಿಂಗ, ಲಿಂಗದೊಳಗೆ ತಾನು ಇದ್ದರೂ ತನ್ನೊಳಗಿನ ಸಮಸ್ತ ವಿಸ್ತಾರವೆಲ್ಲವನ್ನೂ ಕಂಡು, ಜಂಗಮ ಮುಖ ಲಿಂಗವೆಂಬ ಭೇದವನ್ನು, ಲಿಂಗಕ್ಕೆ ಜಂಗಮವೇ ಪ್ರಾಣ ಎಂಬ ಭೇದವನ್ನು, ಅಂಗದೊಳಗೆ ಲಿಂಗವೆ ಆಚಾರವಾಗಿ ಅಳವಡುವ ಪ್ರಕ್ರಿಯೆಯನ್ನು ಚನ್ನಬಸವಣ್ಣನವರಿಂದ ಕೃಪೆಮಾಡಿ ತಿಳಿಸಿಕೊಡಬೇಕೆಂದು ವಿನಂತಿಸುತ್ತಾರೆ. ಇಲ್ಲಿ ಸಿದ್ಧರಾಮರಿಗೆ ಲಿಂಗವಿಲ್ಲದೊಂದು ಕೊರತೆ ಮಾತ್ರವಿದೆ. ಲಿಂಗದೀಕ್ಷೆಯ ಬಗ್ಗೆ ಅವರೇ ಹೀಗೆ ವಿನಂತಿಸಿಕೊಂಡಾಗ, ಅಲ್ಲಮರು ಚೆನ್ನಬಸವಣ್ಣನವರಿಗೆ ಹೀಗೆ ಹೇಳುತ್ತಾರೆ.
ಹೊಳೆಯುವ ರತ್ನವಾದರೇನು, ಅದು ಕುಂದಣದಲ್ಲಿದ್ದರೆ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಮಧುರರುಚಿಯ ಹಣ್ಣು ರೂಪಗೊಳ್ಳಲು ಗಿಡವೇ ಕಾರಣವಾಗಿರುತ್ತದೆ, ಚಿತ್ರ ಸುಂದರವಾಗಿದೆ ಎಂದು ಭಾವಿಸಿದರೂ, ಆ ಚಿತ್ರ ಹಲಗೆಯನ್ನು ಆಶ್ರಯಿಸಿರುತ್ತದೆ. ಅಂಜನಕ್ಕೆ ನಿಧಿ ಹುಡುಕುವ ಶಕ್ತಿ ಇದೆ, ಆದರೆ ಅದು ಕ್ರಿಯೆಯಲ್ಲಿ ಬಂದರೆ ಮಾತ್ರ ಸಾಧ್ಯವಾಗುವುದು. ಹೀಗೆ ದೇಹದ ಮೇಲೆ ಲಿಂಗಧಾರಣೆ ಆಗದಿದ್ದರೆ ಕೇವಲ ಜ್ಞಾನಯೋಗದಿಂದ ಏನೂ ಪ್ರಯೋಜನವಿಲ್ಲ. ಕ್ರಿಯಾಲಿಂಗ ಸಂಬಂಧವಾದಾಗ ಮಾತ್ರ ಭಕ್ತನಿಗೆ ಭಕ್ತಿಯೊಂಬುದು ಒಲಿಯುವುದು. ಇದೇ ದೇಹಶೌಚವೂ ಆಗಿದೆ. ಆದ್ದರಿಂದ ಎಲ್ಲ ಶರಣರು ಒಪ್ಪುವ ರೀತಿಯಲ್ಲಿ ಸಿದ್ಧರಾಮನಿಗೆ ಲಿಂಗದೀಕ್ಷೆ ಮಾಡು ಚನ್ನಬಸವಣ್ಣ ಎಂದು ಅಲ್ಲಮರು ಹೇಳುತ್ತಾರೆ. ಆಗ ಚನ್ನಬಸವಣ್ಣನವರು ಲಿಂಗದೀಕ್ಷಾಕ್ರಮವನ್ನು ವಿವರಿಸುವ ಪ್ರಯತ್ನ ಮಾಡುತ್ತಾರೆ:
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಗಳು ಕಳೆದು, ಆಜ್ಞಾದೀಕ್ಷೆ ಉಪಮಾದೀಕ್ಷೆ ಸ್ವಸ್ತಿಕಾರೋಹಣ ಕಳಶಾಭಿಷೇಕ ವಿಭೂತಿಪಟ್ಟ ಲಿಂಗಾಯತ ಲಿಂಗ ಸ್ವಾಯತ, ಈ ಏಳನು ಕಾಯಕ್ಕುಪದೇಶವ ಮಾಡುವುದು. ಸಮಯ ನಿಸ್ಸಂಸಾರ ನಿರ್ವಾಣ ತತ್ತ÷್ವದೀಕ್ಷೆ ಆಧ್ಮಾತ್ಮಿಕ ಅನುಗ್ರಹ ಸತ್ಯ ಶುದ್ಧ ಈ ಏಳನು ಪ್ರಾಣಕ್ಕುಪದೇಶವ ಮಾಡುವುದು. ಏಕಾಗ್ರಚಿತ್ತ ಧೃಢವ್ರತ ಪಂಚೇಂದ್ರಿಯಾರ್ಪಿತ ಅಹಿಂಸೆ, ಮನೋಲಯ ಲಿಂಗನಿಜ ಸದ್ಯೋನ್ಮುಕ್ತಿ, ಈ ಏಳನು ಮನಕ್ಕುಪದೇಶವ ಮಾಡುವುದು. ಈ ಕ್ರಮವನರಿದು ಮಾಡುವುದು ಸಹಜದೀಕ್ಷೆಯಾಗಿದೆ ಎನ್ನುತ್ತಾರೆ.
ಚನ್ನಬಸವಣ್ಣನವರು ಕಾಯದ ಏಳು, ಪ್ರಾಣದ ಏಳು, ಭಾವದ ಏಳು ಒಟ್ಟು ಇಪ್ಪತ್ತೊಂದು ಬಗೆಯ ದೀಕ್ಷಾಪ್ರಕ್ರಿಯೆಗಳ ಮೂಲಕ ಸಿದ್ಧರಾಮೇಶ್ವರರಿಗೆ ಇಷ್ಟಲಿಂಗದೀಕ್ಷೆಯನ್ನು ಅನುಗ್ರಹಿಸುತ್ತಾರೆ. ಆಗ ಸಿದ್ಧರಾಮದೇವರಲ್ಲಿ ಒಂದು ಬಗೆಯ ಸಂತೃಪ್ತಭಾವ ಮೂಡುತ್ತದೆ. ಯೋಗದ ಜಂಜಾಟವನ್ನು ಹೊರತುಪಡಿಸಿ, ಸರಳವಾದ ಇಷ್ಟಲಿಂಗ ಪೂಜೆ ಸಿದ್ಧರಾಮರಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ. ಕೊನೆಗೆ ಈ ಲಿಂಗಯೋಗದ ಮಹತ್ವವನ್ನು ಅವರೇ ತಮ್ಮ ಮಾತಿನಲ್ಲಿ ತುಂಬ ಸ್ವಾರಸ್ಯವಾಗಿ ವಿವರಿಸುವ ಹಂತವನ್ನು ತಲುಪುತ್ತಾರೆ:
ಆಧ್ಯಾತ್ಮ ಆಧ್ಯಾತ್ಮವೆಂದೆಂಬರಿ, ಆಧ್ಯಾತ್ಮವಾರಿಗೆ? ಶ್ರೀಗುರುಸ್ವಾಮಿ ಬಹಳವಪ್ಪ ಶಿವಲಿಂಗವು ಸೂಕ್ಷö್ಮವ ಮಾಡಿ ಕರಸ್ಥಲದಲ್ಲಿ ಕೊಟ್ಟ ಬಳಿಕ, ಬೇರೆ ಯೋಗ ಉಂಟೆ? ತನ್ನ ಹಸ್ತವ ಮಸ್ತಕದಲ್ಲಿಟ್ಟು, ವಾಯುಪ್ರಾಣಿಯಾಗಿದ್ದುದಕೊಂದು ಲಿಂಗಪ್ರಾಣಿಯ ಮಾಡಿದ ಬಳಿಕ, ಅಕ್ಷರ ಐದರಲ್ಲಿ ಮುಕ್ತನ ಮಾಡಿದ ಬಳಿಕ, ಮರಳಿ ಯೋಗ ಉಂಟೇ, ಶಿವಯೋಗವಲ್ಲದೆ? ಲಿಂಗಾರ್ಚನೆಯಂ ಮಾಡಿ, ಜಂಗಮಪ್ರಸಾದವ ಕೊಂಡ ಬಳಿಕ, ಮರಳಿ ಬರಿಯ ಯೋಗಕ್ಕೆ ಒಡಂಬಡುವುದೆ ಅರಿವು? ಇಂತಪ್ಪವನತಿಗಳೆದು ಶುದ್ಧ ಶಿವಯೋಗಿಯ ಮಾಡಿದಾತ ಚೆನ್ನಬಸವಣ್ಣ. ಮಹಾಲೋಕದಲ್ಲಿಪ್ಪ ಅದ್ಯಕ್ಷರದ್ವಯವ ಭೇದಿಸಿತಂದು ಕರಸ್ಥಲದಲ್ಲಿ ಇರಿಸಿ, ಇದು ಉತ್ತರ ಪದವೆಂದು ತೋರಿಕೊಟ್ಟು, ಎನ್ನ ತನ್ನಂತೆ ಮಾಡಿದ ಗುರುಚೆನ್ನಬಸವಣ್ಣ. ಆನು ಚೆನ್ನಬಸವಣ್ಣನ ಕರುಣದಿಂದ ಅಭ್ಯಾಸಯೋಗವನತಿಗಳೆದು, ಶಿವಯೋಗದಲ್ಲಿ ನಿತ್ಯನಾಗಿ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗ ಶರಣ ಐಕ್ಯವೆಂಬ ಷಡುಸ್ಥಲಕ್ಕಧಿಕಾರಿಯಾದೆ. ನಿನ್ನವರ ಸಲುಗೆಗೆ ಸಂದೆ. ಚೆನ್ನಬಸವಣ್ಣನ ಕೃಪೆ ಎನ್ನನಿಂತು ಮಾಡಿತ್ತು….
ಹೆಸರಿಡಬಾರದ ಲಿಂಗವ ಹೆಸರಿಟ್ಟು ಎನ್ನ ಕರಸ್ಥಲಕ್ಕೆ ತಂದು, ಕರತಳಾಮಳದಂತೆ ಮಾಡಿ ಎನ್ನ ಕರಸ್ಥಲಕ್ಕೆ ಕ್ರಿಯಾಲಿಂಗವ ಕೊಟ್ಟ ಶ್ರೀಗುರು ಚೆನ್ನಬಸವಣ್ಣ, ಹೆಸರಿಟ್ಟ ಲಿಂಗದ ಹೆಸರ ಹೇಳುವೆನು ಕೇಳಯ್ಯಾ. ಕಂಜಕರ್ಣಿಕೆಯ ಹಣೆಯಲ್ಲಿ `ವಿಹತ್ತವಸ’ (ಈತಅವಾಸ)ವೆಂದುಬರೆದ ಐದಕ್ಷರವೆ ಆತನ ಪ್ರಥಮ ನಾಮ, ಅವ್ವೆಯ ಕರದೊಳೊಪ್ಪಿಪ್ಪ ಆರಕ್ಷರವೆ ಆತನ ದ್ವಿತೀಯ ನಾಮ, ಅವ್ವೆಯ ಆನಂದ ಮಸ್ತಕದೊಳಿಪ್ಪ ಅಕ್ಷರವೆ ಆತನ ಆಚಾರ್ಯನಾಮ. ಇಂತೀ ನಾಮತ್ರಯಂಗಳನರಿದು, ಧ್ಯಾನಾರೂಢನಾಗಿ ಮಾಡುವರು ಎತ್ತಾನಕೊಬ್ಬರು. ಈ ಬಸವಣ್ಣ ಮೊದಲಾದ ಪುರಾತನರು ಆ ಅವ್ವೆಯ ಅನುಮತದಿಂದ ಲಿಂಗಾರ್ಚನೆಯ ಮಾಡಿ ನಿತ್ಯ ನಿಜವಾಸಿಗಳಾದರು. ಆ ಶರಣರ ಅನುಮತದರುವಿನ ಉಪದೇಶವ ಕೇಳಿ, ಎನಗಿನ್ನಾವುದು ಹದನಯ್ಯಾ ಎಂಬ ಚಿಂತೆಯ ಬಿಟ್ಟು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೈಯಲ್ಲಿ ಪಿಡಿದೆನು.
ಆದಿಯಾಧಾರವಿಲ್ಲದಂದಿನ, ಸಾದಾಖ್ಯದೇಹವಿಲ್ಲದಂದಿನ, ಸೀಮೆಸಂಬಂಧಗಳಿಲ್ಲದಂದಿನ ಅನಾದಿ ಸಂಸಿದ್ಧನ ಆಗುಮಾಡಿ, ಹೆಸರಿಟ್ಟು ಕರಸ್ಥಲಕ್ಕೆ ತಂದುಕೊಟ್ಟ ಗುರುಚೆನ್ನಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ. ಶುದ್ಧವನರಿದೆ ಚೆನ್ನಬಸವಣ್ಣಾ, ನಿಮ್ಮಿಂದ, ಸಿದ್ಧವನರಿದೆ ಚೆನ್ನಬಸವಣ್ಣಾ, ನಿಮ್ಮಿಂದ ಪ್ರಸಿದ್ಧವನರಿದೆ ಚೆನ್ನಬಸವಣ್ಣ, ನಿಮ್ಮಿಂದ, ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ, ಚೆನ್ನಬಸವಣ್ಣ ಗುರುವಾಗಿಬಂದು, ಎನ್ನ ಜನ್ಮ ಕರ್ಮವ ನಿವೃತ್ತಿಯ ಮಾಡಿದನಯ್ಯಾ.
ಹೃದಯಕಮಲದ ಅಷ್ಟದಳದ ದ್ವಾತ್ರಿಂಶ ಕುಸುಮ ಮಧ್ಯದಲ್ಲಿ ಇಪ್ಪನಾ ಸೂರ್ಯ. ಆ ಸೂರ್ಯನ ಮಧ್ಯದಲ್ಲಿ ಇಪ್ಪನಾ ಚಂದ್ರ. ಆ ಚಂದ್ರನ ಮಧ್ಯದಲ್ಲಿ ಇಪ್ಪನಾ ಅಗ್ನಿ. ಆ ಅಗ್ನಿಯ ಮಧ್ಯದಲ್ಲಿ ಇಪ್ಪುದಾ ಕಾಂತಿ. ಆ ಕಾಂತಿಯ ಮಧ್ಯದಲ್ಲಿ ಇಪ್ಪುದಾ ಸುಜ್ಞಾನ. ಆ ಸುಜ್ಞಾನದ ಮಧ್ಯದಲ್ಲಿಪ್ಪುದಾ ಚಿದಾತ್ಮ. ಆ ಚಿದಾತ್ಮನ ಮಧ್ಯದಲ್ಲಿಪ್ಪುದಾ ಚಿತ್ಪ್ರಕಾಶರೂಪನಪ್ಪ ಪರಶಿವನು, ಅಂತಪ್ಪಾ ಪರಶಿವನೆನ್ನ ಸುಜ್ಞಾನ ಕಾಯದ ಮಸ್ತಕದ ಮೇಲೆ ಹಸ್ತವನಿರಿಸಿ, ಮನಭಾವ ಕರಣೇಂದ್ರಿಯಂಗಳಿಂದೆ ಸ್ವರೂಪೀಕರಿಸಿ, ದೃಷ್ಟಿಗೆ ತೋರಿ, ಕೈಯಲ್ಲಿ ಲಿಂಗವಕೊಟ್ಟ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ ಪ್ರಭುವೆ.
ಚನ್ನಬಸವಣ್ಣನವರು ಇಷ್ಟಲಿಂಗದೀಕ್ಷೆಯನ್ನು ಅನುಗ್ರಹಿಸಿದ ಬಳಿಕ ಸಿದ್ಧರಾಮದೇವರು ಮೇಲಿನ ಎಲ್ಲ ವಚನಗಳಲ್ಲಿ ಚನ್ನಬಸವಣ್ಣನವರೇ ನನಗೆ ಇಷ್ಟಲಿಂಗ ದೀಕ್ಷೆಯನ್ನು ದಯಪಾಲಿಸಿದರು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಆರೂ ವಚನಗಳ ಒಟ್ಟು ಸಾರವನ್ನು ಹಿರಿಯ ವಿದ್ವಾಂಸರಾದ ಜೋಳದರಾಶಿ ದೊಡ್ಡನಗೌಡರು ಹೀಗೆ ಕಟ್ಟಿಕೊಡುತ್ತಾರೆ :
ಶ್ರೀಗುರುವು ಹಿರಿದಾದ ಶಿವಲಿಂಗವನ್ನು ಕಿರಿದಾಗಿಸಿ ಅಂಗೈಗೆ ಕೊಟ್ಟ ತರುವಾಯ ದೇಹ ಆತ್ಮವೆಂಬ ವಿಚಾರವೆಲ್ಲಿದೆ? ಅಂಗವೇ ಲಿಂಗವಾದ ಬಳಿಕ ಇತರ ಯೋಗಮತ್ತೇಕೆ ಬೇಕು? ಗುರು ಅಮೃತಹಸ್ತ ಶಿಷ್ಯನ ಮಸ್ತಕದಲ್ಲಿಟ್ಟು ಗಾಳಿಯೇ ಪ್ರಾಣವಾಗಿದ್ದವನನ್ನು ಲಿಂಗಪ್ರಾಣಿಯನ್ನು ಮಾಡಿ ಪಂಚಾಕ್ಷರಿ ಮಂತ್ರದಲ್ಲಿ ಮುಕ್ತನನ್ನಾಗಿ ಮಾಡಿದ. ಲಿಂಗಾರ್ಚನೆ ಮಾಡಿ ಜಂಗಮ ಪ್ರಸಾದ ಸೇವಿಸಿದ ಮೇಲೆ ಮತ್ತಾವಯೋಗವಿಲ್ಲ ಅದೇ ಶಿವಯೋಗ. ಶಿರದಲ್ಲಿ ನೆಲೆಸಿದ ಚಿತ್ಕಳೆಯ (ಹಂ ಕ್ಷ ಎರಡಕ್ಷರ) ಒಂದು ಗುರುತಾಗಿಸಿ ಆರಾಧನೆಗೆ ತಂದುಕೊಟ್ಟ. ಇದೇ ಉತ್ತರಪದವೆಂದು ಹೇಳಿ ನನ್ನನ್ನು ತನ್ನಂತೆ ಮಾಡಿಕೊಂಡು ಪಾಲಿಸಿದ. ಷಡುಸ್ಥಲಕ್ಕೊಪ್ಪುವಂತೆ ಮಾಡಿದ ಮಹಾಗುರು ಚೆನ್ನಬಸವಣ್ಣನ ಕೃಪೆಯಿಂದ ಬದುಕಿದೆ ಕಪಿಲಸಿದ್ಧ ಮಲ್ಲಿಕಾರ್ಜುನಾ.
ಯಾವ ಹೆಸರೆಂದು ಹೇಳಲಿಕ್ಕೆ ಬಾರದ ಲಿಂಗವನ್ನು ಎನಗೆ ಅನುಗ್ರಹಿಸಿದ ಆ ಲಿಂಗದ ಗುಟ್ಟು ಹೇಳಿ ನನಗೆ ಸುಲಭತೆಯನ್ನು ತಂದುಕೊಟ್ಟ. ಆ ಲಿಂಗಕ್ಕೆ ಗುರುವಿಟ್ಟ ಹೆಸರು ಈತಅವಾಸ’ವೆಂದು. ಭ್ರೂಮಧ್ಯದವರೆಗೆ ಇರುವ ಆಧಾರಾದಿ ಐದು ಕಮಲಗಳಿಗೆ ಐದಕ್ಷರದ ನಮಃ ಶಿವಾಯ ಮಂತ್ರ ಒಂದು, ವಾಯುವನ್ನು ಪ್ರಾಣಲಿಂಗವಾಗಿಸಿದ, ಓಂ ನಮಃ ಶಿವಾಯ ಮಂತ್ರ ಎರಡನೆಯದು, ಭಾವ ಶುದ್ಧಿಯಾಗಿಸಿದ,
ಓಂ’ ಎಂಬ ಮಂತ್ರ ಮೂರನೆಯದು. ಕ್ರಿಯಾ ಜ್ಞಾನ ಭಾವಲಿಂಗಗಳಾಗಿ ಎನ್ನಸ್ಥೂಲ ಸೂಕ್ಷ್ಮ ಕಾರಣ ಶರೀರಗಳನ್ನು ಪವಿತ್ರಗೊಳಿಸಿದವು. ಇಂತು ಎನ್ನ ಗುರು ಚೆನ್ನಬಸವಣ್ಣ ಕರುಣಿಸಿದ ಕಪಿಲಸಿದ್ಧ ಮಲ್ಲಿಕಾರ್ಜುನಾ.
ಆದಿ ಅನಾದಿಗಳು ಯಾವು ಇರಲಿಲ್ಲ. ಅಂದು ಇಂದುಗಳು ಇರಲಿಲ್ಲ. ಆಕಾರಗಳು ಗುಣಾದಿಗಳಾವು ಇರಲಿಲ್ಲ. ಯಾವ ಹೆಸರುಗಳು ಅರ್ಥಗಳು ಇರಲಿಲ್ಲ. ಆಗಿದ್ದ ಮಹಾತತ್ತ÷್ವವನ್ನು ಒಂದು ಸ್ಥಿತಿಗೆ ನೆಲೆಗೆ ತಂದು ಕಾಣುವಂತೆ ಮಾಡಿ ಹೆಸರಿಟ್ಟ ಅಂಗೈಯಲ್ಲಿ ಅಡಗುವಂತೆ ಮಾಡಿ, ಅನುಷ್ಠಾನ ಹೇಳಿಕೊಟ್ಟ ಗುರು ಚೆನ್ನಬಸವಣ್ಣ ಕಪಿಲಸಿದ್ಧಮಲ್ಲಿಕಾರ್ಜುನಾ,
ಇಹಲೋಕ ಪರಲೋಕಗಳ ಸುಳಿದಾಟ ಇಲ್ಲದಂತಾಯಿತು, ಏಕೆಂದರೆ ನನ್ನ ಗುರು ಹಸ್ತದಲ್ಲಿ ಸತ್ತು ಪಂಚಾಕ್ಷರಿಯಲ್ಲಿ ಹುಟ್ಟಿದೆ. ನಿತ್ಯ ಲಿಂಗಪೂಜೆ ಮಾಡುವೆ, ವಿಭೂತಿ ರುದ್ರಾಕ್ಷಿಧಾರಣ ಮಾಡಿರುವೆ. ಗುರುವು ತನ್ನ ಹಸ್ತವನೆನ್ನ ಮಸ್ತಕದಲ್ಲಿಟ್ಟ ಕಾರಣ ಸರ್ವಾಂಗ ಲಿಂಗವಾಯಿತು ಕಪಿಲಸಿದ್ಧಮಲ್ಲಿಕಾರ್ಜುನಾ.
ಶುದ್ಧ ಸಿದ್ಧ ಪ್ರಸಿದ್ಧಗಳ ಅರಿತೆ ಗುರು ಚೆನ್ನಬಸವಯ್ಯಾ ನಿಮ್ಮಿಂದ ಎನ್ನ ಕರ್ಮದ ಜಡತೆ ಪರಿಹಾರವಾಗಿ ಜನ್ಮ ನಿವೃತ್ತನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
ಹೃದಯದ ಕಮಲ ವಿಕಾಸದಿಂದಾದ ಚಿತ್ಸೂರ್ಯ, ಚಂದ್ರ, ಅಗ್ನಿ, ಕಾಂತಿ, ಆ ಕಾಂತಿಯಲ್ಲಿ ಸುಜ್ಞಾನ, ಚಿದಾತ್ಮ, ಚಿತ್ಪ್ರಕಾಶ, ಅಲ್ಲಿ ಪರಶಿವನಿರುತ್ತಾನೆ. ಆ ಪರಶಿವನನ್ನೇ ಎನ್ನ ಕಾಯ ಮನ ಭಾವಗಳಿಗೆ ಲಿಂಗವಾಗಿ, ದೃಷ್ಟಿ ಗೋಚರವಾಗಿ ತಂದಿತ್ತ ಶ್ರೀಗುರು ಚೆನ್ನಬಸವದೇವರ ಶ್ರೀಪಾದ ಪದ್ಮಗಳಿಗೆ ನಮಸ್ಕಾರ ಮಾಡಿ ಬದುಕಿದೆ ಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
ಗುರುವಿನ ಅನುಗ್ರಹದಿಂದ ಸಕಲೇಂದ್ರಿಯಗಳಲ್ಲಿ ಸಂತೃಪ್ತಿಯನ್ನು ತಂದುಕೊಂಡ ಸಿದ್ಧರಾಮ ತನ್ನ ಹೃದಯತುಂಬಿ ಚೆನ್ನಬಸವಣ್ಣನನ್ನು ಸ್ತೋತ್ರಮಾಡಿದ. (ಜೋಳದರಾಶಿ ದೊಡ್ಡನಗೌಡರು : ಬಯಲ ಗಳಿಕೆಯ ಬೆಳಕು ಪು. ೫೬೭)
ಹೀಗೆ ಸಿದ್ಧರಾಮದೇವರು ಚನ್ನಬಸವಣ್ಣನವರ ಗುಣಗಾನ ಮಾಡುತ್ತಿರುವಾಗ, ಅತ್ತ ಚನ್ನಬಸವರು ಕೂಡ ತಮ್ಮ ಜ್ಞಾನತೇಜೋವಿಲಾಸಕ್ಕೆ ವಿಳಾಸವಾಗುವ ಒಬ್ಬ ಪರಿಪೂರ್ಣ ಶಿಷ್ಯ ಸಿಕ್ಕನಲ್ಲ ಎಂದು ಸಂತೋಷಪಡುತ್ತಾರೆ. ಲಿಂಗಪೂಜೆಯಲ್ಲಿ ಲಿಂಗಾಂಗ ಸಾಮರಸ್ಯ ಸುಖವನ್ನು ಸಿದ್ಧರಾಮರು ಅನುಭವಿಸಿದ ಪರಿಯನ್ನು ಚನ್ನಬಸವರು ಹೀಗೆ ವಿವರಿಸುತ್ತಾರೆ:
ಕಂಗಳ ನೋಟ ಮನದ ಕೂಟದಲ್ಲಿಯೆ ಏಕತ್ವಭಾವದ ಲಿಂಗೈಕ್ಯದ ನಿಲವು ತನ್ನಿಂದತಾನೆಯಾದ ಬಗೆಯ ನೋಡಾ! ಅರಿಯಲಿಲ್ಲದ ಅರಿವಿನ ತೆರನು ಸಯವಾಯಿತ್ತು ಕೂಡಲಚೆನ್ನಸಂಗಯ್ಯನಲ್ಲಿ ಸಿದ್ಧರಾಮಯ್ಯಂಗೆ.
ಸಿದ್ಧರಾಮದೇವರಿಗೆ ಏಕಾಗ್ರತೆಯ ಈ ಲಿಂಗೈಕ್ಯ ಸ್ಥಿತಿ ಪ್ರಾಪ್ತವಾದುದನ್ನು ಕಂಡು ಚನ್ನಬಸವಣ್ಣನವರು ತುಂಬ ಸಂತೋಷಪಡುತ್ತಾರೆ. ಆಗ ಅಲ್ಲಮರು ಒಂದು ಬೆಡಗಿನ ವಚನವನ್ನು ಹೇಳುತ್ತಾರೆ:
ಸ್ವಾನುಭಾವದ ಬೆಳಗಿನಲ್ಲಿ ಒಂದು ಬೆಕ್ಕು ಹುಟ್ಟಿತ್ತು. ಆ ಬೆಕ್ಕಿನ ತಲೆಯ ಮೇಲೆ ಒಂದು ಗಿರಿ ಹುಟ್ಟಿತ್ತು. ಆ ಗಿರಿಯ ಮೇಲೆ ಎರಡು ರತ್ನ ಹುಟ್ಟಿದವು. ಆ ರತ್ನವನರಸಿಕೊಂಡು ಬರಲು ಅವು ತನ್ನನವಗ್ರಹಿಸಿದವು. ಒಂದು ರತ್ನ ಅಂಗವನವಗ್ರಹಿಸಿತ್ತು. ಮತ್ತೊಂದು ರತ್ನ ಪ್ರಾಣವನವಗ್ರಹಿಸಿತ್ತು. ಆ ರತ್ನಂಗಳ ಪ್ರಭೆ ತಾನಾದ ನಮ್ಮ ಗುಹೇಶ್ವರನ ಶರಣ ಸಿದ್ಧರಾಮಯ್ಯನ ನಿಲವಿಂಗೆ ನಮೋ ನಮೋ ಎನುತಿರ್ದೆನಯ್ಯಾ ಚೆನ್ನಬಸವಣ್ಣಾ!
ತನ್ನರಿವಿನ ಬೆಳಕಿನಲ್ಲಿಯೇ ಒಂದು ಅನುಭಾವದ ಬೆಕ್ಕು(ಬೆಳಗು) ಮೂಡಿತು. ಆ ಬೆಳಗಿನಲ್ಲಿ ಒಂದು ಗಿರಿ(ಭಕ್ತಿ) ಹುಟ್ಟಿತ್ತು. ಆ ಭಕ್ತಿ ಎಂಬ ಗಿರಿಯ ಮೇಲೆ ಇಷ್ಟಲಿಂಗ ಮತ್ತು ಪ್ರಾಣಲಿಂಗ ಎಂಬ ರತ್ನಗಳು ಹುಟ್ಟಿದವು. ಈ ರತ್ನಗಳನ್ನು ಅರಸಿಕೊಂಡು ಹೋದಾಗ, ಅವು ನನ್ನನ್ನೇ ನುಂಗಿ ಹಾಕಿದವು. ಆಗ ಇಷ್ಟಲಿಂಗ ಎಂಬ ರತ್ನ ಪ್ರಾಣವನ್ನು ಹೊಂದಿತು, ಪ್ರಾಣಲಿಂಗ ಮನಸ್ಸನ್ನು ಒಳಗೊಂಡಿತು. ಇಂತಹ ಭಕ್ತಿ ಜ್ಞಾನ ವೈರಾಗ್ಯಗಳಿಂದ ಪರಿಶೋಭಿಸುತ್ತಿರುವ ಸಿದ್ಧರಾಮನೇ ನಿಜಶರಣ. ಆತನ ನಿಲುವಿಗೆ ನಮೋ ನಮೋ ಎಂದರು ಅಲ್ಲಮರು
.
“ಅಹುದಹುದು ಅಂಗಕ್ಕೆ ಲಿಂಗವನರಸಬೇಕಲ್ಲದೆ ಲಿಂಗಕ್ಕೆ ಲಿಂಗವನರಸಲುಂಟೆ? ಪ್ರಾಣಕ್ಕೆ ಜ್ಞಾನವನರಸಬೇಕಲ್ಲದೆ ಜ್ಞಾನಕ್ಕೆ ಜ್ಞಾನವನರಸಲುಂಟೆ? ಎರಡಾಗಿದ್ದುದನೊಂದು ಮಾಡಿಹೆನೆನಬಹುದಲ್ಲದೆ, ಒಂದಾಗಿದ್ದುದನೆರಡ ಮಾಡಲಿಲ್ಲ. ಕೂಡಲಚೆನ್ನಸಂಗಮದೇವರಲ್ಲಿ ಸಿದ್ಧರಾಮಯ್ಯದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ ಪ್ರಭುವೆ!”
ಪ್ರಭುದೇವಾ ನೀವು ಹೇಳಿರುವುದು ಅಕ್ಷರಶಃ ನಿಜ. ಪುರುಷನು ಪುರುಷನನ್ನು ಹುಡುಕಲಾರ, ಲಿಂಗವೇ ಲಿಂಗವನ್ನು ಹುಡುಕಲಾರದು. ಹೆಣ್ಣಿಗೆ ಗಂಡು ಹುಡುಕುವ ರೀತಿಯಲ್ಲಿ ಅಂಗಕ್ಕೆ ಲಿಂಗವನ್ನು ಹುಡುಕಬೇಕು. ಹೀಗೆ ಸಿದ್ಧರಾಮದೇವರು ಮೊದಲೇ ಈ ಎಲ್ಲವೂ ಆಗಿದ್ದರು ಎಂಬುದನ್ನು ಚನ್ನಬಸವಣ್ಣನವರು ಪ್ರಭುದೇವರಿಗೆ ವಿವರಿಸುತ್ತಾರೆ.
ಮುಂದೆ ಈ ಶೂನ್ಯಸಂಪಾದನೆಯಲ್ಲಿ ಪರಸ್ಪರ ಹೊಗಳಿಕೆ ಪರ್ವ ಪ್ರಾರಂಭವಾಗುತ್ತವೆ. ಚನ್ನಬಸವಣ್ಣನವರು ತಮ್ಮ ಪರಮ ಶಿಷ್ಯನನ್ನು ಹೊಗಳುವ ಕೆಲವು ವಚನಗಳು ಹೀಗಿವೆ:
ಕಾಯಕಲ್ಪಿತದಿಂದ ಭೋಗಾದಿಭೋಗಂಗಳ ಭೋಗಿಸಬಲ್ಲ, ದೇವಲೋಕವೆ ಸರ್ವತ. ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯ, ಇಂತೀ ಚತುರ್ವಿಧವನೆ ಮೀರಿ ಶಿವನ ಶ್ರೀಪಾದದಲ್ಲಿ ಇರಬಲ್ಲರೆ ಕೈಲಾಸವೇ ಕಲ್ಯಾಣ. ಲಿಂಗವೆ ತಾನು, ತಾನೆ ಲಿಂಗವಾಗಿರಬಲ್ಲ ಸಮಯೋಗಿ ಸಿದ್ಧರಾಮಯ್ಯ ದೇವರ ಶ್ರೀಪಾದದಲ್ಲಿ ಎಂದಿಪ್ಪೆ ಹೇಳಾ ಪ್ರಭುವೆ, ಕೂಡಲ ಚೆನ್ನಸಂಗಮದೇವಾ?
ಹಸು ಹಯನಾಯಿತ್ತು. ಹಸು ಮನೆಗೆ ಬಂದಿತ್ತು. ಹಸುವ ಕಟ್ಟುವರೆಲ್ಲರ ಕಟ್ಟಬಂದವರ ಒಕ್ಕಲಿಕ್ಕಿಯೆ ತುಳಿಯಿತ್ತು. ಕೂಡಲಚೆನ್ನಸಂಗಯ್ಯನಲ್ಲಿ ಹಸುವ ಕಟ್ಟಿದಾತ ನಮ್ಮ ಸಿದ್ಧರಾಮಯ್ಯದೇವರೊಬ್ಬರೆ.
ಹರ ತನ್ನ ರೂಪ ತೋರಲಿಕ್ಕೆ ಶ್ರೀಗುರುವಾದ, ಆ ಗುರವೆ ಕರಸ್ಥಲಕ್ಕೆ ಲಿಂಗವಾದ. ಮನಸ್ಥಲಕ್ಕೆ ಮಂತ್ರವಾದ, ತನುಸ್ಥಲಕ್ಕೆ ಪ್ರಸಾದವಾದ. ಪ್ರಾಣಸ್ಥಲಕ್ಕೆ ಜಂಗಮವಾದ, ಕೂಡಲಚೆನ್ನಸಂಗಯ್ಯನಲ್ಲಿ ಸಮಯೋಗಿ ಸಿದ್ಧರಾಮಯ್ಯ ದೇವರು ಒಬ್ಬರೆ ತಾವಾದರು.
ಕಬ್ಬನಗಿದ ಗಾಣ ಬಲ್ಲುದೆ, ಹಾಲ ಸವಿಯ? ಗಗದಲಾಡುವ ಪಕ್ಷಿ ಬಲ್ಲುದೆ, ರವಿಯ ನಿಲವ? ಹಗರಣಕ್ಕೆ ಪೂಜಿಸುವವರು ಬಲ್ಲರೆ, ನಮ್ಮ ಶರಣರ ಸುಳುಹ? ನಡುಮುರಿದು ಗುಡುಗೂರಿದರೇನು, ಲಿಂಗದ ನಿಜವನರಿಯದನ್ನಕ್ಕ? ಸಾವನ್ನಕ್ಕ ಜಪವ ಮಾಡಿದರೇನು, ಲಿಂಗದ ಪ್ರಾಣ ತನ್ನ ಪ್ರಾಣವ ಒಡಗೂಡದನ್ನಕ್ಕ? ಇಂತವರೆಲ್ಲರೂ ಅಭ್ಯಾಸ ಶಕ್ತಿಗರುಹಿಗರು. ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಮಾಯಾಕೋಳಾಹಳ ಸಿದ್ಧರಾಮಯ್ಯದೇವರಿಗೆ ಅಹೋರಾತ್ರಿ ನಮೋ ನಮೋ ಎಂದು ಬದುಕಿದೆನು ಕಾಣಾ ಪ್ರಭುವೆ.
ಭಾರತೀಯ ಧರ್ಮ ಪರಂಪರೆಯಲ್ಲಿ ಚತುರ್ವಿಧ ಮೋಕ್ಷಗಳನ್ನು ಹೇಳಿದ್ದಾರೆ. ಸಾಮೀಪ್ಯ, ಸಾರೂಪ್ಯ, ಸಾಲೋಕ್ಯ, ಸಾಯುಜ್ಯ ಆದರೆ ಶರಣರು ಈ ಎಲ್ಲ ಮೋಕ್ಷಗಳನ್ನು ಮೀರಿ ಲಿಂಗಾಂಗ ಸಾಮರಸ್ಯದ ಮೋಕ್ಷದ ಪರಿಕಲ್ಪನೆಯೊಂದನ್ನು ಕಟ್ಟಿಕೊಟ್ಟರು. ಹಾಲಿನಲ್ಲಿ ಸಕ್ಕರೆ ಬೆರೆತಂತೆ ಲಿಂಗದಲ್ಲಿ ಅಂಗನು ಕೂಡಿಕೊಂಡ ಪರಿಸ್ಥಿತಿ ಇರುವಾಗ ಈ ಚತುರ್ವಿಧ ಮೋಕ್ಷಗಳಿಗಿಂತ ಭಿನ್ನವಾದ ಆಲೋಚನೆ ಇಲ್ಲಿ ಕಾಣುತ್ತದೆ. ಇದು ಬಸವಾದಿ ಶರಣರು ಲೋಕಕ್ಕೆ ಕೊಟ್ಟ ಒಂದು ಅನುಪಮ ಕೊಡುಗೆಯೆಂದೇ ಹೇಳಬೇಕು.
ಹಸು ಹಾಲು ಕೊಡುವುದೆಂದು ಆ ಹಸುವನ್ನು ಕಟ್ಟಿಹಾಕಲು ಅನೇಕರು ಶ್ರಮಿಸಿದರು. ಆದರೆ ಅವರೆಲ್ಲರನ್ನು ಆ ಆಕಳು ತುಳಿದು ಹೊಸಕಿ ಹಾಕಿತು. ಅಂತಹ ಆಕಳನ್ನು ಕಟ್ಟಿ ಹಾಕಿದ ಏಕೈಕ ವ್ಯಕ್ತಿ ಸಿದ್ಧರಾಮರು ಎಂದು ಹೆಮ್ಮೆಯಿಂದ ಚನ್ನಬಸವಣ್ಣನವರು ಹೇಳುತ್ತಾರೆ.
ಪರಮಾತ್ಮನು ತನ್ನ ಆಕಾರ ತೋರಲು ಗುರುವಾದ. ಆ ಗುರುವೆ ಪೂಜೆಗೊಳ್ಳಲು ಕರಸ್ಥಲಕ್ಕೆ ಲಿಂಗವಾದ, ಮನದಲ್ಲಿ ಮಂತ್ರವಾದ. ಶರೀರಕ್ಕೆ ಪ್ರಸಾದವಾದ, ಪ್ರಾಣಕ್ಕೆ ಜಂಗಮವಾದ. ಕೂಡಲಚೆನ್ನಸಂಗಮದೇವರಲ್ಲಿ ಸಮಯೋಗಿಯಾದವನು ಸಿದ್ಧರಾಮಯ್ಯನೊಬ್ಬನೇ.
ಕಬ್ಬನ್ನು ಹಿಂಡಿ ಹಾಲು ಕೊಡುವ ಗಾಣಕ್ಕೆ ಆ ಕಬ್ಬಿಣ ಹಾಲುಸವಿಯ ಬಲ್ಲುದೆ? ಅಕಾಶದಲ್ಲಿ ಹಾರಾಡುವ ಪಕ್ಷಿಗೆ ಸೂರ್ಯನಾರೆಂಬುದು ಗೊತ್ತೇ? ಢಂಬಾಚಾರದಿಂದ ಪೂಜೆ ಮಾಡುವುದು ಸರಿಯಾದ ಕ್ರಮವಲ್ಲ. ನಡು ಮುರಿದು, ಗೂಡಿಗೆರಗಿದರೂ ಲಿಂಗದ ನೆಲೆಯನ್ನು ಕಾಣಲಿಲ್ಲ. ಮರಣಕಾಲ ಬರುವವರೆಗೆ ಜಪ ಮಾಡಿದರೇನು ಪ್ರಯೋಜನ? ಲಿಂಗವು ಪ್ರಾಣಲಿಂಗವಾಗಿ ಕೂಡದಿರುವಾಗ. ಹೀಗೆ ಸಾಧಿಸಿದವರು ನಮ್ಮಲ್ಲಿ ಸಿದ್ಧರಾಮದೇವರು ಒಬ್ಬರೇ ಎಂಬುದನ್ನು ಚನ್ನಬಸವಣ್ಣನವರು ಇಲ್ಲಿ ಪ್ರತಿಪಾದಿಸುತ್ತಾರೆ.
ಗುರು ಚನ್ನಬಸವರು ಇಷ್ಟೆಲ್ಲ ಹೊಗಳಿದ ಮೇಲೆ ಶಿಷ್ಯರಾದ ಸಿದ್ಧರಾಮರು ಹೇಗೆ ಸುಮ್ಮನಿರುತ್ತಾರೆ. ಅವರೂ ಗುರು ಚನ್ನಬಸವರನ್ನು ಸ್ತುತಿಸುವ ಮಹತ್ವದ ವಚನಗಳು ಹೀಗಿವೆ:
ಮಲತ್ರಯಂಗಳಲ್ಲಿ ಕುದಿಯಲೀಯದೆ, ಮನಸಿಜನ ಬಾಣಕ್ಕೆ ಗುರಿಯಾಗಲೀಯದೆ, ಎನ್ನ ತನ್ನಂತೆ ಮಾಡಿದನಯ್ಯಾ ಶ್ರೀಗುರು. ಪದನಾಲ್ಕ ಮೀರಿ ಭವಕ್ಕೆ ಹೇತುವಾಗಲೀಯದ ಕಾರಣ ಸದ್ಯೋನ್ಮುಕ್ತನ ಮಾಡಿದನಯ್ಯಾ. ಶ್ರೀಗುರುವೆ, ಪರಮ ಗುರುವೆ, ಪರಿಭವಕ್ಕೆ ಬರಲೀಯದಂತೆ ಎನ್ನ ನಿನ್ನವರೊಳಗೊಬ್ಬನೆಂದೆನಿಸಿದೆಯಲ್ಲಾ ಗುರುವೆ! ಪರಮಗುರುವೆ, ಕಾಲನ ಕಮ್ಮಟಕ್ಕೆ ಗುರಿಯಹ ಎನ್ನನು ತೆಗೆದು, ಗುರು ಲಿಂಗ ಜಂಗಮ ತ್ರೆöÊಲಿಂಗಕ್ಕೆ ಕಾರಣಿಕನ ಮಾಡಿದೆ. ಇನ್ನು ಭವಕ್ಕೆ ಬಾರೆನು. ನಿನ್ನವರಾದಂತೆ ಅಪ್ಪೆ. ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ. ಎನ್ನ ಮೀರಿದ ಪದವೊಂದು ಇಲ್ಲವಯ್ಯಾ!
ರೂಪಿಂಗೆ ರೂಪು, ಜ್ಞಾನಕ್ಕೆ ಜ್ಞಾನ. ಪ್ರಾಣಕ್ಕೆ ಪ್ರಸಾದ, ಲಿಂಗತ್ರಯದ ವೇಧೆಯಿಂದವೆ ತಂದು, ಅವರವರ ಕರದಲ್ಲಿ ದೀಕ್ಷೆಯ ಮಾಡಿದನು ಚೆನ್ನಬಸವಣ್ಣ. ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ!
ಎಂದೋ? ಎನಗೆ ಶಿವಪದವೆಂದೋ? ಎಂದು ಚಿಂತಿಸುವಂಗೆ ಮುಂದೆ ತೋರುತ್ತದೆ ಪರಮಪ್ರಸಾದದ ಬೀಡು! ಆ ಬೀಡ ಕಂಡು ಶಿವಗಣಂಗಳ ನೆರವ ಮಾಡಿಕೊಂಡು, ಪರಮಗುರು ಚೆನ್ನಬಸವಣ್ಣನ ಶ್ರೀಪಾದಾರವಿಂದವನರಿದು ಅವರ ಕೃಪಾವಲೋಕನದಿಂದ ನಿಮ್ಮ ಶ್ರೀಪಾದವನರಿದೆ ಕಾಣಾ ಕಪಿಲಸಿದ್ಧಮಲ್ಲಿನಾಥಯ್ಯಾ.
ಇನ್ನು ಜನನವು ಇಲ್ಲ. ಮುನ್ನವೆ ಸಂಗಳಿದೆ, ಮನ್ನಣೆಯಿಂದ ನೀ ಕಳುಹಿದಂತೆ ಉನ್ನತೋನ್ನತನಾದೆÀ. ಚೆನ್ನಬಸವಣ್ಣನ ಕರುಣದಿಂ ನಿನ್ನ ರೂಪಾದೆ. ಇನ್ನೆನಗೆ ಅರಿದುಂಟೆ ಕಪಿಲಸಿದ್ಧಮಲ್ಲಿಕಾರ್ಜುನಾ?
ಎನ್ನ ತನ್ನವನೆನಿಸಿ ಮನ್ನಿಸಿದ ಭಕ್ತಿಯೊಳು ಸನ್ನುತನು ಆದೆನೈ ಸಕಲದೊಳಗೆ ಬಿನ್ನಾಣ-ದೇಹವನು ತನ್ನಂತೆ ಮಾಡಿದನು. ಚೆನ್ನಬಸವಣ್ಣನ್ನೈ ಶ್ರೀ ಮಲ್ಲಿಕಾರ್ಜುನಾ.
ಸಿದ್ಧರಾಮರು ಮೇಲಿನ ವಚನಗಳಲ್ಲಿ ತಾವು ಪಡೆದುಕೊಂಡ ಗುರುಕೃಪೆಯ ಮಹತ್ವ, ಪರಿಣಾಮಗಳನ್ನು ಅತ್ಯಂತ ಮಾರ್ಮಿಕವಾಗಿ ಇಲ್ಲಿ ಪ್ರತಿಪಾದಿಸಿದ್ದಾರೆ. ಹೀಗೆ ಗುರುಕೃಪೆ, ಇಷ್ಟಲಿಂಗಪೂಜೆಯಿಂದ ಸಿದ್ಧರಾಮರಿಗೆ ಕೊನೆಗೊಮ್ಮೆ ಲಿಂಗಾಂಗ ಸಾಮರಸ್ಯದ ಪರಮ ಸುಖ ಪ್ರಾಪ್ತಿಯಾಯಿತು. ಇದನ್ನು ಅಲ್ಲಮರ ಮುಂದೆ ಹೀಗೆ ಹೇಳುತ್ತಾರೆ:
ನೆರೆದೇನು, ನೆರೆದೇನು ಎಂಬಡೆ ನಾನೇನು ಎರವೆ? ಶ್ರೀಗುರು ಸ್ವಾಮಿ ಎನ್ನ ನಿನ್ನ, ನಿನ್ನ ಎನ್ನ ಕರಸ್ಥಲದಲ್ಲಿ ಸ್ಥಾಪ್ಯಗೊಳಿಸಿದ ಬಳಿಕ. ಮಹಾಜ್ಯೋತಿರ್ಮಯದಲ್ಲಿ ತಮ ಉಂಟೆ? ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಮಹಾಸಮುದ್ರವನೊಡಗೂಡಿದ ಬಳಿಕ ಬೇರೆ ನಾನೊಂದು ನದಿ ಎನುಲುಂಟೆ ಪ್ರಭುವೆ? ಕರಣಂಗಳ ಕಳೆದು ಇರವಿನ ಬ್ರಹ್ಮ ನಿಜದಲ್ಲಿ ನಿಂದಿತ್ತಯ್ಯಾ! ಆತ್ಮ ಸಂಗ ಸಂಯೋಗದ ಇರವು ನಿಮ್ಮಲ್ಲಿ ನಿಜವಾಯಿತ್ತಯ್ಯಾ! ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಚೆನ್ನಬಸವಣ್ಣನ ಕೃಪೆ ನಿಮ್ಮಿಂದ ಸಾಧ್ಯವಾಯಿತ್ತಯ್ಯಾ ಪ್ರಭುವೆ
ತಮ್ಮ ಅಂಗದ ಮೇಲೆ ಲಿಂಗವನ್ನು ಸ್ವಾಯತ್ತ ಮಾಡಿಕೊಂಡ ತರುವಾಯ ಸಿದ್ಧರಾಮರ ಒಟ್ಟು ನಿಲುವೇ ಬೇರೆಯಾಯಿತು. ಅದನ್ನು ಈ ವಚನದಲ್ಲಿ ಸ್ವಾರಸ್ಯವಾಗಿ ವಿವರಿಸಿದ್ದಾರೆ. ಕೊನೆಗೆ ಅಲ್ಲಮರು ಲಿಂಗ ಒಂದನ್ನು ಅರಿತುಕೊಂಡರೆ ಸಾಕು, ಎಲ್ಲವೂ ನಿನಗೆ ಪ್ರಾಪ್ತವಾಗುವುದು ಎಂದು ಹೇಳುವ ವಚನ:
ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ, ಲಿಂಗವನರಿದ ಬಳಿಕ ಮತ್ತೇನನರಿದಡೆಯೂ ಫಲವಿಲ್ಲ, ಸರ್ವಕಾರಣ ಲಿಂಗವಾಗಿ, ಲಿಂಗವನೆ ಅರಿದರಿದು, ಲಿಂಗಸಂಗವನೆ ಮಾಡುವೆ; ಸಂಗ ಸುಖದೊಳೋಲಾಡುವೆ ಗುಹೇಶ್ವರಾ!
ಆಗ ಸಿದ್ಧರಾಮದೇವರಿಗೆ ಪ್ರಭುದೇವರು ಅಂದು ಸೊಲ್ಲಾಪುರಕ್ಕೆ ಬರದೇ ಹೋಗಿದ್ದರೆ, ನನ್ನ ಭವದ ಬೇರು ಹರಿಯುತ್ತಿರಲಿಲ್ಲ. ಮಲತ್ರಯ ದೋಷ ನಿವಾರಣೆಯಾಗುತ್ತಿರಲಿಲ್ಲ. ಎನ್ನ ಭವದ ಬೇರು ಹರಿಯಲೆಂದೇ ಅಲ್ಲಮರು ಪ್ರಭುರೂಪವಾಗಿ ಸೊನ್ನಲಾಪೂರಕ್ಕೆ ದಯಮಾಡಿಸಿದರು ಎಂದು ಸಿದ್ಧರಾಮದೇವರು ಭಕ್ತಿ ವಿನಯದಿಂದ ನಿವೇದಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಚನ್ನಬಸವಣ್ಣನವರು ರಾಗ ಸಹಿತವಾಗಿ ಸ್ವರವಚನವೊಂದನ್ನು ಹಾಡುತ್ತಾರೆ.
ರಾಗ: ರಾಮಶ್ರೀ
ಬೀಜವಿಲ್ಲ(ದ) ಸಸಿಗೆ ಸೌಖ್ಯ ರಾಜಿಸುವ ಸುಗಂಧ ಒಡಲು
ತ್ರಿಜಗಂಗಳನಿಂಬುಗೊಂಡ ಲಿಂಗ ದೇಹಿ ಶರಣನು ||ಪಲ್ಲವಿ||
ಆದಿಯಿಂದಲತ್ತಲಾದನಾದಿ ಸಂಸಿದ್ಧವನ್ನು
ವೇದಂಗಳರಸಿ ಕಾಣದಾಗಮಕತ್ಯಧಿಕನಾ
ಸಾಧಕಾಂಗದೊಳಗೆಯ್ದು ಭೇದಿಸಿ ಪರತತ್ವವದಿರವ
ದಾದಡದುವೆ ಲಿಂಗದಂಗ ಅಂಗಲಿಂಗ ಶರಣನು ||೧||
ಪರುಷ ಸೋಂಕಿನಿಂದ ಲೋಹ ಪರುಷವಾದುದೆಂಬ ಶಬ್ದ
ಸ್ಪರುಷ ರೂಪು ರಸವು ಗಂಧವೆರಸಿದರ್ಪಿತಂಗಳ
ಪರಶಿವನೊಳು ಬೆರಸಿ ಪರಮತತ್ವವತುರಿಯವಾದ ಬಳಿಕ
ಶರಣಭರಿತ ಲಿಂಗವೋ ಲಿಂಗಭರಿತ ಶರಣನೋ ||೨||
ಅಂಗಲಿಂಗ ಸಂಗ ಸಂಚು ಹೀಗೆ ಕಂಗಳಂಗದಲ್ಲಿ
ಹಿಂಗದಾ ನೋಟ ಘೃತದ ನೆಳಲೊಳಿಪ್ಪ ಬಿಂಬವು
ಲಿಂಗವೇ ಶರಣಭರಿತ ಶರಣನೇ ಲಿಂಗಭರಿತ
ಅಭಂಗ ಕೂಡಲಚೆನ್ನಸಂಗ ನಿಮ್ಮ ಶರಣನು ||೩||
ಈ ಪದ್ಯದಲ್ಲಿ ತುಂಬ ಸ್ವಾರಸ್ಯಕರ ವಿಚಾರಗಳಿವೆ. ಬೀಜವಿಲ್ಲದ ವೃಕ್ಷ ಎಂಬ ಪದದಲ್ಲಿ ಹುರಿದ ಬೀಜ ಭೂಮಿಯಲ್ಲಿ ಹಾಕಿದರೆ ನಾಟಲಾರದಯ. ಹಾಗೆಯೇ ಜನನ ಮರಣಗಳೆಂಬ ಚಕ್ರವನ್ನು ದಾಟಿದ ಬೀಜವಿದು ಎಂದು ವಿವರಿಸುತ್ತಾರೆ. ಪರುಷಮಣಿ ತಾಕಿದ ಕಬ್ಬುಣ ಬಂಗಾರವಾದಂತೆ, ಗುರುವಿನ ಹಸ್ತಮಸ್ತ ಸಂಯೋಗದಿಂದ ಲಿಂಗವನ್ನು ಅನುಗ್ರಹಿಸಿಕೊಂಡ ಮೇಲೆ, ಮೂರು ತನುಗಳಲ್ಲಿ ಮೂರು ಲಿಂಗಗಳಾಗಿ ಲಿಂಗವೇ ತಾನಾಗಿ ನಿಂದ ನಿಲುವು ಎಂಬ ಭಾವ ಈ ಸ್ವರವಚನದಲ್ಲಿದೆ.
ಸಿದ್ಧರಾಮರು ಯೋಗಮಾರ್ಗದಿಂದ ಷಟ್ ಸ್ಥಲ ಮಾರ್ಗಕ್ಕೆ ಬಂದ ಪರಿಯನ್ನು ವಿವರಿಸುತ್ತ, ತಮ್ಮ ಪರಮಾರಾಧ್ಯ ಗುರು ಚನ್ನಬಸವಣ್ಣನವರು ಅಚ್ಚಪ್ರಸಾದಿ ಆದ ಪರಿಯನ್ನು ತಮ್ಮ ಮತ್ತೊಂದು ವಚನದಲ್ಲಿ ಹೀಗೆ ಹೇಳುತ್ತಾರೆ:
ಭಕ್ತಿವಿಡಿದು ಭಕ್ತನಾದ ಪ್ರಸಾದಿ. ಮೋಕ್ಷವಿಡಿದು, ಧೈರ್ಯವಿಡಿದು, ಆ ಭಕ್ತಂಗೆ ಮಾಹೇಶ್ವರನಾದ ಪ್ರಸಾದಿ, ಕಾರಣವಿಡಿದು, ಅವಧಾನ ತಪ್ಪದೆ, ಆ ಭಕ್ತಂಗೆ ಪ್ರಸಾದಿಯಾದ ಪ್ರಸಾದಿ. ಕರ್ಮರಹಿತನಾಗಿ, ಕಾಲಕಲ್ಪಿತವಿಲ್ಲದೆ, ಆ ಭಕ್ತಂಗೆ ಪ್ರಾಣಲಿಂಗಿಯಾದ ಪ್ರಸಾದಿ, ಪತಿಭಕ್ತಿವಿಡಿದು, ಧರ್ಮಾರ್ಥ ಕಾಮ ಮೋಕ್ಷಂಗಳಾಸೆಯ ನಿವೃತ್ತಿಯಂ ಮಾಡಿದ ಆ ಭಕ್ತಂಗೆ ಶರಣನಾದ ಪ್ರಸಾದಿ. ಉಭಯ ಸಮರಸ ಏಕವೆಂದು ತಿಳಿದು, ಉಭಯಭಾವ ಉರಿ ಕರ್ಪುರ ಸಂಯೋಗವಾದ ಆ ಭಕ್ತಂಗೈಕ್ಯನಾದ ಪ್ರಸಾದಿ, ನಮ್ಮ ಕಪಿಲಸಿದ್ಧ-ಮಲ್ಲಿನಾಥನಲ್ಲಿ ಸರ್ವಕ್ಕೆ ಚೈತನ್ಯವಾದ ನಮ್ಮ ಚೆನ್ನಬಸವಣ್ಣನೆಂಬ ಅಚ್ಚಪ್ರಸಾದಿ.
ಅಚ್ಚಪ್ರಸಾದಿಯಾದ ಚನ್ನಬಸವಣ್ಣನವರು ತಮ್ಮ ಶಿಷ್ಯ ಸಿದ್ಧರಾಮರಿಗೆ ಲಿಂಗದ ಕುರಿತು ಎಷ್ಟು ಹೇಳಿದರೂ ಸಮಾಧಾನವಾಗುತ್ತಿಲ್ಲ. ಮತ್ತೆ ಲಿಂಗದ ವ್ಯಾಖ್ಯಾನವನ್ನು ಹೇಳುತ್ತಾರೆ:
ಲಿಕಾರವೆ ಶೂನ್ಯ. ಬಿಂದುವೆ ಲೀಲೆ, ಗಕಾರವೆ ಚಿತ್ತು. ಈ ತ್ರಿವಿಧದೊಳಗದೆ ಲಿಂಗವೆಂಬ ಸಕೀಲ. ಇದರ ಸಂಚವನಾವಾತಬಲ್ಲ. ಆತನೇ ಲಿಂಗಸಂಗಿ, ಲಿಂಗಾನುಭಾವಿಗಳ ಶ್ರೀಚರಣಕ್ಕೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಮ ದೇವಾ.
ಲಿ ಮತ್ತು ಗ ಕಾರಗಳ ಮಧ್ಯ ಇರುವ ಶೂನ್ಯವೇ ಲೀಲೆಯಾಗಿದೆ. ಇದರಿಂದ ಲಿಂಗಕಟ್ಟಿಕೊಂಡ ಸಿದ್ಧರಾಮರು ಇಂದು ಲಿಂಗಸಂಗಿಗಳಾದರು ಎನ್ನುತ್ತಾರೆ.