ಗರಗದ ಮಡಿವಾಳೇಶ್ವರ ಶಿವಯೋಗಿ, ಹುಬ್ಬಳ್ಳಿ ಶ್ರೀ ಸಿದ್ಧಾರೂಢರ ಚರಿತ್ರೆ (ವಿಡಿಯೋ)

ಬಸವ ಮೀಡಿಯಾ
ಬಸವ ಮೀಡಿಯಾ

ಗರಗದ ಮಡಿವಾಳೇಶ್ವರ ಶಿವಯೋಗಿಗಳು ವಿರಕ್ತ ಪರಂಪರೆಯವರು, ತಮ್ಮ ಸಮಕಾಲೀನರಾದ ಸಿದ್ದಾರೂಢರು, ನಾಗಲಿಂಗ ಸ್ವಾಮಿಗಳು, ಹಾಲಕೆರೆ ಸ್ವಾಮಿಗಳು, ಶಿಶುನಾಳ ಶರೀಫರ ಜೊತೆಗೆ ಆಧ್ಯಾತ್ಮದ ಬಗೆಗೆ ಚಿಂತನ -ಮಂಥನ ಮಾಡುತ್ತಿದ್ದರು ಎಂದು ಶರಣ ಮಂಜುನಾಥ ಮಡಿವಾಳ ಅವರು ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು.

ಕಿತ್ತೂರಿನ ಚೌಕಿಮಠದ ಹೂದೋಟದಲ್ಲಿ ಮಗುವನ್ನು ನೋಡಿ, ಕಲ್ಮಠಕ್ಕೆ ಕರೆತಂದು, ವಿದ್ಯಾಗುರುಗಳ ಧರ್ಮಪತ್ನಿಯ ಪ್ರೀತಿಯ ಲಾಲನೆ -ಪಾಲನೆಯಲ್ಲಿ ಬಾಲ್ಯಕಳೆದದ್ದು , ಮಲ್ಲಸರ್ಜ್ ದೇಸಾಯಿ, ಚೆನ್ನಮ್ಮ, ರುದ್ರಮ್ಮ ಅವರ ಕೃಪಾಕಟಾಕ್ಷದಲ್ಲಿ ಬೆಳೆದದ್ದು,ಶಿವಲಿಂಗಸರ್ಜನ ಸಹಪಾಠಿಯಾಗಿದ್ದುದು ಹೀಗೆ ಶ್ರೀಗಳ ಬಾಲ್ಯದ ಪ್ರಸಂಗಗಳನ್ನು ಹೇಳುತ್ತಾ ಹೋದರು.

ಶ್ರೀಗಳು ದೊಡ್ಡವರಾದ ಮೇಲೆ ಅರಮನೆಯಲ್ಲಿ ನಡೆದ ಒಂದು ಪ್ರಸಂಗದಿಂದ ನೊಂದು ಅರಮನೆ ಬಿಟ್ಟು ಹೊರಟರು. ಸೊಗಲದ ಸಿದ್ಧನಗವಿಯಲ್ಲಿ ಲಿಂಗಾನುಷ್ಟಾನಕ್ಕೆ ಕುಳಿತರು ನಂತರ ಲೋಕಸಂಚಾರಕ್ಕೆ ಹೊರಟರು
ಎನ್ನುವುದನ್ನು ಸ್ಮರಿಸುತ್ತಾ, ವಿಭೂತಿ ತತ್ವವನ್ನು ಅಳವಡಿಸಿಕೊಂಡು ಪರಶಿವವೇ ನಾವಾಗಬೇಕು, ಎನ್ನುವ ಅವರ ನಿಲುವನ್ನು ಹಂಚಿಕೊಂಡರು.

ಯಾವಾಗಲೂ ಅರಿವಿನ ಕುರುಹಾದ ಇಷ್ಟಲಿಂಗವನ್ನು ಅಂಗದ ಮೇಲೆ ಕಟ್ಟಿಕೊಂಡಿದ್ದರು ಮತ್ತು ಮೂಢ ನಂಬಿಕೆಯನ್ನು ವಿರೋಧಿಸುತ್ತಿದ್ದರು. ಮೂರ್ತಿ ಪೂಜೆಗೆ ಆಸ್ಪದ ಕೊಡುತ್ತಿರಲಿಲ್ಲ ವೆಂದು ಹೇಳುತ್ತಾ, ನೇಪಾಳ, ಮೆಕ್ಕಾ -ಮದಿನಾ ಆದಿಯಾಗಿ ಇಡೀ ದೇಶವನ್ನು ಸಂಚರಿಸಿದರು ಎನ್ನುವುದನ್ನು ಉಲ್ಲೇಖಿಸಿದರು

ಕಟ್ಟಕಡೆಗೆ ಅವರು ಬಂದು ನೆಲೆಸಿದ್ದು ಗರಗದ ತುಪ್ಪರಿ ಹಳ್ಳದ ದಂಡೆಯ ಮೇಲೆ ಇರುವ ಬಸವಣ್ಣನ ಗುಡಿಯಲ್ಲಿ.ಅಲ್ಲಿರುವ ಹಂಗರಕಿ ದೇಸಾಯಿಯವರು ಅವರಿಗೆ ಗುರುಮಠವನ್ನು ಕಟ್ಟಿ ಕೊಟ್ಟಿದ್ದು,ಬರಗಾಲ ಬಂದಾಗ ಭಕ್ತರ ಕಡೆಯಿಂದ ಸಂಗ್ರಹಣೆ ಮಾಡಿದ್ದ ರೊಟ್ಟಿ ಬಣವಿಯಿಂದ ಎಲ್ಲರನ್ನೂ ಸoರಕ್ಷಿಸಿದ್ದು, ಸಿದ್ಧಾರೂಢರ ಒಡನಾಟವನ್ನು ನೆನಪು ಮಾಡಿಕೊಡುತ್ತ, ಭಕ್ತರ ಕೋರಿಕೆಯ ಮೇರೆಗೆ ತಾವು ಲಿಂಗೈಕ್ಯರಾಗುವುದನ್ನು ಹತ್ತು ವರ್ಷ ಮುಂದೂಡಿದ್ದು, ನಂತರ ಎಲ್ಲರಿಗೂ ಪತ್ರ ಬರೆಸಿ ಅದೇ ರೀತಿಯಲ್ಲಿ ಲಿಂಗಪೂಜೆ ಮಾಡುತ್ತಾ ಶಿವನಲ್ಲಿ ಲೀನವಾಗಿದ್ದುದನ್ನು ಅತ್ಯಂತ ಭಕ್ತಿ ಭಾವದಿಂದ ಹಂಚಿಕೊಂಡರು.

ಅನ್ನಪೂರ್ಣ ಅಗಡಿ ಅವರು ಜಾತಿ -ವರ್ಗ ಭೇದ ಮರೆತು ಒಟ್ಟಿಗೆ ಕೂಡುವ ಮಠ ಹುಬ್ಬಳ್ಳಿಯಲ್ಲಿ ಯಾವುದಾದರೂ ಇದ್ದರೆ ಅದು ಸಿದ್ಧಾರೂಢ ಮಠ ಎನ್ನುತ್ತಾ ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು.

ಆಪತ್ತು ಬಂದರೆ ಕಾಯುವ, ಮುಕ್ತವಾಗಿ ಯಾವುದೇ ಅಡೆತಡೆಯಿಲ್ಲದೆ,ಎಲ್ಲ ಜನಾಂಗದವರು ಕೂಡಿ ಉಣ್ಣುವ ಜಾಗ ಅಂದರೆ ಸಿದ್ಧಾರೂಢ ಮಠ, ಜ್ಞಾನ ದಾಸೋಹ, ಅನ್ನ ದಾಸೋಹ ಅಲ್ಲಿ ನಿರಂತರವಾಗಿ ನಡೆಯುತ್ತದೆ ಎನ್ನುವುದನ್ನು ನೆನೆಸಿದರು.

ಶ್ರೀಗಳ ಬಾಲ್ಯದ ವಿಷಯಗಳನ್ನು ಒಂದೊಂದಾಗಿ ಹೇಳುತ್ತಾ, ಅವರು ಮನೆ ಬಿಟ್ಟು ಬಂದದ್ದು, ಗುರುಕೃಪೆಗೆ ಒಳಗಾಗಿದ್ದು, ಇಡೀ ದೇಶವನ್ನು ಸುತ್ತಿ, ಹುಬ್ಬಳ್ಳಿಯಲ್ಲಿ ನೆಲೆ ನಿಂತದ್ದನ್ನು ಭಕ್ತಿಯಿಂದ ಸ್ಮರಿಸಿದರು.ಮಠದಲ್ಲಿ ಪ್ರತಿದಿನ ನಡೆಯುವ ಸತ್ಸಂಗ, ಕೀರ್ತನೆ, ಜಾತ್ರೆ, ಓಂನಮಃ ಶಿವಾಯ ಮಂತ್ರದ ನಿನಾದ, ದಾಸೋಹ ಎಲ್ಲವನ್ನೂ ವಿವರವಾಗಿ ಹಂಚಿಕೊಂಡರು. ಜನರು ಅವರಿಗೆ ಕೊಟ್ಟ ಹಿಂಸೆಗಳು, ಆದರೂ ಶ್ರೀಗಳು ಯಾರಿಗೂ ಏನೂ ಅನ್ನದೆ, ಒಳ್ಳೆಯದಾಗಲಿ ಎಂದು ಹರಸುತ್ತಿದ್ದರು ಎಂದು ಸ್ಮರಿಸಿದರು. ಮುಂದೆ ಗುರುನಾಥಾರೂಢರು ಮಠದ ಜವಾಬ್ದಾರಿ ಹೊತ್ತರು. ಈಗಲೂ ಬೇರೆ ಬೇರೆ ರಾಜ್ಯಗಳಿಂದ ಬರುವ ಅವರ ಭಕ್ತರು ಮಠಕ್ಕೆ ನಡೆದುಕೊಳ್ಳುತ್ತಾರೆ ಎನ್ನುತ್ತಾ ತಮ್ಮ ಮಾತನ್ನು ಮುಗಿಸಿದರು.

ಡಾ. ಜಯಶ್ರೀ ಹಸಬಿ ಅವರು ವೈಚಾರಿಕತೆ ಮತ್ತು ವೈಜ್ಞಾನಿಕ ಹಿನ್ನೆಲೆಯಲ್ಲಿ ನಾವು ಶರಣರ ಸಿದ್ಧಾಂತಗಳನ್ನು ನೋಡಬೇಕು ಎಂದು ಹೇಳುತ್ತಾ, ಇಬ್ಬರೂ ಶ್ರೀಗಳ ಕಾರ್ಯದ ಬಗೆಗೆ ಇನ್ನಷ್ಟು ವಿಷಯ ನಮ್ಮ ಜೊತೆಗೆ ಹಂಚಿಕೊಂಡರು.

ಡಾ. ಶಶಿಕಾಂತ ಪಟ್ಟಣ ಅವರು ವಿರಕ್ತ ಪರಂಪರೆ ಮತ್ತು ಆರೂಢ ಪರಂಪರೆಯ ಬಗೆಗೆ ಮಾತನಾಡುತ್ತಾ, ಆಗೀನ ಸಮಕಾಲೀನರಾಗಿದ್ದ ಕಬೀರರು, ಅಥಣಿ ಶಿವಯೋಗಿಗಳು, ರಾಮಕೃಷ್ಣ ಪರಮಹಂಸರು, ಅಕ್ಕಲಕೋಟೆ ಸಮರ್ಥ ಮಹಾರಾಜರು, ಶಿರಡಿ ಸಾಯಿಬಾಬಾ,ಬಾಲ ಮಹಾಂತ ಸ್ವಾಮಿಗಳು, ಎಲ್ಲರನ್ನೂ ಭಕ್ತಿಯಿಂದ ಸ್ಮರಿಸಿದರು.
ರಾಷ್ಟ್ರೀಯ ಅಧಿವೇಶನದಲ್ಲಿ ಶ್ರೀಗಳು ಸಿದ್ಧಪ್ಪ ಕಂಬಳಿ, ಶಾಹೂ ಮಹಾರಾಜ ಮತ್ತು ಇನ್ನಿತರ ಮುಖಂಡರ ಜೊತೆಗೆ ಕೂಡಿಕೊಂಡು ಭಾಗವಹಿಸಿದ್ದುದನ್ನು ಹಂಚಿಕೊಂಡರು.

ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಪ್ರಾರ್ಥನೆ, ಶರಣೆ ಸುಮಂಗಲಾ ಮೇಟಿ ಅವರ ಸ್ವಾಗತ, ಶರಣೆ ತ್ರಿವೇಣಿ ವಾರದ ಅವರ ಶರಣು ಸಮರ್ಪಣೆ, ಶರಣೆ ವಿಜಯ ಮಹಾಂತಮಾತಾ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಗೀತಾ ದಾನಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

(ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ 17 ನೆಯ ದಿವಸದ ವರದಿ. ಆಗಸ್ಟ್ 20)

Share This Article
Leave a comment

Leave a Reply

Your email address will not be published. Required fields are marked *