ಶರಣೆ ಸತ್ಯಕ್ಕ ಅವರು ಶಿರಾಳಕೊಪ್ಪದವರು, ಅಲ್ಲಿ ಶಂಭು ಜಕ್ಕೇಶ್ವರನ ದೇವಸ್ಥಾನವಿದೆ. ಅದು ಶಿವಭಕ್ತಿಗೆ ಹೆಸರುವಾಸಿಯಾದದ್ದು ಎಂದು ಹೇಳಿ ಶರಣೆ ರತ್ನಕ್ಕ ಕಾದ್ರೊಳ್ಳಿ ಅವರು ತಮ್ಮ ಮಾತು ಪ್ರಾರಂಭ ಮಾಡಿದರು.
ಶಿವಶರಣರ ಅಂಗಳ ಕಸಗೂಡಿಸುವ ಕಾಯಕದ ಶರಣೆ ಸತ್ಯಕ್ಕ, ಜೊತೆ ಜೊತೆಗೆ ಶಿವಶರಣರ ಮನದ ಆಮಿಷ, ಕಲ್ಮಶಗಳನ್ನೂ ಕಳೆಯುವ ನೇಮವನ್ನು ಮಾಡಿಕೊಂಡಿದ್ದರು ಅವರದು ಏನಿದ್ದರೂ ಏಕದೇವತಾ ನಿಷ್ಠೆ. ಹರನಲ್ಲದೆ ಪರದೈವವಿಲ್ಲವೆಂಬ ಸಂಪೂರ್ಣ ನಂಬಿಕೆಯಲ್ಲಿ ಬೆಳೆದವರು.
“ಶಿವತತ್ವ ಚಿಂತಾಮಣಿ” “ಚೆನ್ನಬಸವಪುರಾಣ” “ಭೈರವೇಶ್ವರ ಕಾವ್ಯ ಕಥಾಮಣಿ ಸೂತ್ರ ರತ್ನಾಕರ” ಮೊದಲಾದ ಕೃತಿಗಳಲ್ಲಿ ಸತ್ಯಕ್ಕನವರ ಜೀವನದ ವಿವರಗಳು ನೋಡಲು ಸಿಗುತ್ತವೆ ಎಂದು ಸ್ಮರಿಸಿದರು.
ಸತ್ಯಕ್ಕನವರು ಬರೆದಿರುವ 32 ವಚನಗಳ ವಿಶ್ಲೇಷಣೆ ಮಾಡುತ್ತ, ಅವುಗಳಲ್ಲಿನ ವ್ರತನಿಷ್ಠೆ
ಅರಿವಿನ ಮಾರ್ಗ, ತೊಳಲಾಟ, ಜಾತಿ -ವರ್ಗ -ವರ್ಣ ನಿರಾಕರಣೆ, ಬಹಿರಂಗ ಢಾoಬಿಕ ಆಚರಣೆಯ ಟೀಕೆ
ಮುಂತಾದ ಅಂಶಗಳನ್ನು ಗುರುತಿಸಿದರು.
ಶರಣೆ ಇಂದಿರಾ ಹೋಳ್ಕರ ಅವರು ಜಾತಿ -ಮತ-ಪಂಥ-ಲಿಂಗಭೇದಗಳ ತಾರತಮ್ಯ ಹೋಗಲಾಡಿಸಿ ಕಲ್ಯಾಣದತ್ತ ನಮ್ಮನ್ನೆಲ್ಲ ಕರೆದುಕೊಂಡು ಹೋದ ಶರಣರ ಬಗ್ಗೆ ಹೇಳಿದರು.
ಮೋಳಿಗೆ ಮಹಾದೇವಿಯವರು ಮೋಳಿಗೆ ಮಾರಯ್ಯನವರ ಪತ್ನಿ, ಕಾಶ್ಮೀರದ ರಾಜದಂಪತಿಗಳು ಎಂದು ಉಲ್ಲೇಖಿಸುತ್ತಾ, ಬಸವಣ್ಣನವರ ಹೆಸರು ಕೇಳಿ ಕಲ್ಯಾಣಕ್ಕೆ ಬಂದು ನೆಲೆಸಿ, ಕಟ್ಟಿಗೆ ಮಾರುವ ಕಾಯಕ ಪ್ರಾರಂಭ ಮಾಡಿದ್ದು, ಆರು ಸಾವಿರ ಜನರಿಗೆ ದಾಸೋಹ ಮಾಡುತ್ತಿದ್ದುದನ್ನು ನೆನಪಿಸಿದರು.
ಮೋಳಿಗೆ ಮಹಾದೇವಿಯವರು 69 ವಚನಗಳನ್ನು ಎಂದು ಹೇಳಿ ಅವುಗಳಲ್ಲಿ ಕೆಲವನ್ನು ವಿಶ್ಲೇಷಣೆ ಮಾಡಿದರು.
ಡಾ. ಗೀತಾ ಡಿಗ್ಗೆ ಅವರು ಶರಣ ಸಾಹಿತ್ಯದಿಂದ ಚಿಂತನ-ಮಂಥನ ಮಾಡಿ ಎಲ್ಲರೂ ಜ್ಞಾನವನ್ನು ಪಡೆಯಬೇಕು. ಡಾ. ಶಶಿಕಾಂತ ಪಟ್ಟಣ ಅವರು ಶರಣರು ಹೇಗೆ ತಳಸಮುದಾಯದ ಜನರಿಗೆ ಮಾನಸಿಕವಾಗಿ ಧೈರ್ಯ ಕೊಟ್ಟರು ಎಂದು ವಿವರಿಸಿದರು.
ಶರಣ ಮಂಜು ಮಡಿವಾಳ ಅವರ ವಚನ ಪ್ರಾರ್ಥನೆ, ಶರಣೆ ಶಾಂತಾ ಧುಳoಗೆ ಅವರ ಸ್ವಾಗತ, ಶರಣೆ ಬಸಮ್ಮ ಭರಮಶೆಟ್ಟಿ ಅವರ ಶರಣು ಸಮರ್ಪಣೆ, ಶರಣೆ ಅನ್ನಪೂರ್ಣ ಅಗಡಿ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯ್ತು. ಶರಣೆ ವಿಜಯಲಕ್ಷ್ಮಿ ಕಲ್ಬುರ್ಗಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
(ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶರಣ ಬಿ. ಎಂ. ಪಾಟೀಲ ಮತ್ತು ತಾಯಿಯವರಾದ ಲಿಂ. ಶರಣೆ ಅಕ್ಕಮಹಾದೇವಿ ಪಾಟೀಲ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿ ಉಪನ್ಯಾಸದ 24 ನೆಯ ದಿವಸದ ವರದಿ. ಆಗಸ್ಟ್ 27)