ಸಾಣೇಹಳ್ಳಿ
ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಪ್ರತಿತಿಂಗಳು ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಪಂಡಿತಾರಾಧ್ಯ ಶ್ರೀಗಳು ಮಾತನಾಡುತ್ತಿದ್ದರು.
ಲಿಂಗಾಯತ ಹುಟ್ಟಿನಿಂದ ಆಗುವಂಥದ್ದಲ್ಲ. ಸಂಸ್ಕಾರದಿಂದ ಮಾತ್ರ ಯಾರು ಬೇಕಾದರೂ ಲಿಂಗಾಯತರಾಗೋದಕ್ಕೆ ಸಾಧ್ಯತೆಯಿದೆ. ಹುಟ್ಟಿನಿಂದ ಯಾವುದೇ ಜಾತಿ, ಜನಾಂಗವಾಗಿರಬಹುದು ಲಿಂಗಸಂಸ್ಕಾರವನ್ನು ಪಡೆದುಕೊಂಡಾಗ ನಿಜವಾದ ಲಿಂಗಾಯತರಾಗುವರು. ಲಿಂಗವನ್ನು ಮುಟ್ಟಿದಾಗ ಪೂರ್ವಜಾತ ಅಳಿದು ಪುನರ್ಜಾತರಾಗುವರು.
ಬಹುತೇಕ ಧರ್ಮದಲ್ಲಿ ಗುರು ಮತ್ತು ದೇವರು ಇರುವರು. ಆದರೆ ಜಂಗಮ ಇಲ್ಲ. ಆದರೆ ಲಿಂಗಾಯತ ಧರ್ಮದಲ್ಲಿ ಜಂಗಮ ತತ್ವವಿದೆ. ಜಂಗಮ ಅಂದಾಕ್ಷಣ ಊರಲ್ಲಿ ಬಿನ್ನ ಹಾಗೂ ಖಾವಿಹಾಕಿದವರಲ್ಲ. ಅರಿವು ಆಚಾರವನ್ನು ಹೊಂದಿದವರು ಯಾರು ಬೇಕಾದರೂ ಜಂಗಮರಾಗಬಹುದು. ಅವರು ಸರಿಯಾದ ಮಾರ್ಗವನ್ನು ತೋರಿಸಿ ಕೈಹಿಡಿದು ಮುನ್ನಡೆಸಿಕೊಂಡು ಹೋಗುವರು ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಶ್ರೀಗಳು ಬಸವಣ್ಣನವರ ಜೀವನದ ವಿವಿಧ ಆಯಾಮಗಳನ್ನು ಪರಿಚಯಮಾಡಿಕೊಟ್ಟರು.
ಬಸವಣ್ಣನವರು ೧೨ನೆಯ ಶತಮಾನದಲ್ಲಿ ನಮ್ಮ ನಿಮ್ಮ ಹಾಗೆ ಬಾಳಿ ಬದುಕಿದವರು. ಬಾಲ್ಯದಿಂದ ಕೊನೆಯ ಕ್ಷಣದವರೆಗೂ ಬಸವಣ್ಣನವರ ಬದುಕಿನ ಸಿಂಹಾವಲೋಕನವನ್ನು ಮಾಡಿದರೆ ಅವರ ಸಾಧನೆಯೇ ಅವರನ್ನು ವಿಶ್ವಗುರುವನ್ನಾಗಿ ಮಾಡಿದೆ.
ಬಸವಣ್ಣನವರ ಬದುಕಿನ ಮಹತ್ವದ ಘಟ್ಟ ಬ್ರಾಹ್ಮಣರಾಗಿ ಹುಟ್ಟುವರು. ನಂತರ ಸಮಾಜದಲ್ಲಿರುವಂಥ ಅನೇಕ ಅವಾಂತರಗಳನ್ನು, ಜಾತಿಯ ಮನೋಭಾವನೆಯನ್ನು, ಲಿಂಗತಾರತಮ್ಯವನ್ನು, ಅಸಮಾನತೆಯನ್ನು ಕಂಡು ಮನಸ್ಸಿನಲ್ಲಿ ಕಳವಳಗೊಳ್ಳುವರು.
ಬಸವಣ್ಣನವರಿಗೆ ೮ ವರ್ಷವಿರುವಾಗಲೇ ಬ್ರಾಹ್ಮಣ ಸಂಪ್ರದಾಯದಂತೆ ಜನಿವಾರ ಸಂಸ್ಕಾರ ಮಾಡುವರು. ಆಗ ಬಸವಣ್ಣನವರು ಪ್ರಶ್ನೆ ಮಾಡುವರು. ನನಗೆ ಹಾಕುವಂಥ ಜನಿವಾರ ನನ್ನನ್ನು ಹೆತ್ತಂಥ ತಾಯಿಗೆ ಯಾಕಿಲ್ಲ? ನನ್ನ ಜೊತೆಯಲ್ಲೇ ಹುಟ್ಟಿದ ನನ್ನ ಸಹೋದರಿಗೆ ಯಾಕಿ ಹಾಕಿಲ್ಲ? ಅವರಿಗಿಲ್ಲದ ಜನಿವಾರ ನನಗೇಕೆ? ಎಂದು ಅನೇಕ ಪ್ರಶ್ನೆಗಳು ಉದ್ಭವವಾಗುವುದು. ಆಗ ವೈದಿಕರು ಹೇಳುವುದು ಹೆಣ್ಣುಮಕ್ಕಳು ಶೂದ್ರ. ಹೀಗೆ ಅನೇಕರು ಶೂದ್ರರು ಇದ್ದಾರೆ. ಇಂಥವರಿಗೆ ಜನಿವಾರ ಸಂಸ್ಕಾರ ಕೊಡಲು ಸಾಧ್ಯವಿಲ್ಲ.
ಆಗ ಬಸವಣ್ಣ ಹೇಳುವುದು ಶೂದ್ರ ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟಿದ ನಾನು ಹೇಗೆ ದ್ವಿಜನಾಗ್ತೀನಿ ಎಂದು. ಈಗ ನಿನಗೆ ಈ ಸಂಸ್ಕಾರ ಕೊಡುವುದರಿಂದ ಶ್ರೇಷ್ಟನಾಗುತ್ತೀಯಾ. ಹೀಗೆ ಬಸವಣ್ಣನವರ ಪ್ರಶ್ನೆಗೆ ವೈದಿಕರು ದಡಬಡಾಯಿಸುವರು. ಆಗ ವೈದಿಕರು ಬಸವಣ್ಣನವರಿಗೆ ಬಹಿಷ್ಕಾರ ಹಾಕುವ ನಿರ್ಧಾರ ಮಾಡುತ್ತಾರೆ. ಆಗ ಬಾಲಕ ಬಸವಣ್ಣ ಹೇಳಿದ್ದು; ನೀವು ನನಗೆ ಬಹಿಷ್ಕಾರ ಹಾಕುವಂಥದ್ದು ಏನಿದೆ ನಿಮ್ಮೆಲ್ಲ ಸಂಪ್ರದಾಯಗಳಿಗೆ ನಾನೇ ಬಹಿಷ್ಕಾರ ಹಾಕುತ್ತೇನೆ ಎಂದು ಹುಟ್ಟಿದ ಮನೆಯಿಂದ, ಹುಟ್ಟಿದ ಊರಿನಿಂದ, ಹುಟ್ಟಿದ ಜಾತಿಯಿಂದ ಹೊರ ಬರುವರು.
ಬಸವಣ್ಣನವರು ಕೂಡಲಸಂಗಮದಲ್ಲಿ ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವರು. ಗುಡಿಯಲ್ಲಿರುವ ದೇವರು ಶಕ್ತಿಶಾಲಿ, ವರ ಹಾಗೂ ಶಾಪಕೊಡುವ ಶಕ್ತಿ ಇದೆ ಎಂದು ನಂಬಿದ್ದರು. ಆದನ್ನು ಮನಗಂಡ ಬಸವಣ್ಣ ಅಂಥವುಗಳನ್ನು ನಂಬಬೇಡಿ. ಅವುಗಳ ಹೆಸರಿನಲ್ಲಿ ಪೂಜಾರಿ ಪುರೋಹಿತರು ಜನರನ್ನು ಸುಲಿಗೆ, ಶೋಷಣೆ ಮಾಡುತ್ತಾರೆ. ಅದರಿಂದ ಮುಕ್ತಿ ಹೊಂದಬೇಕೆಂದು ಅಂಗೈಯಲ್ಲಿ ಇಷ್ಟಲಿಂಗವನ್ನು ಕರುಣಿಸಿದರು. ಭಗವಂತ ಇಲ್ಲದೇ ಇರುವ ಜಾಗವೇ ಇಲ್ಲ. ಸರ್ವವ್ಯಾಪಿ, ಸರ್ವಶಕ್ತ. ಸರ್ವಾಂತರ್ಯಾಮಿ. ನಮ್ಮೆಲ್ಲರ ಅಂತರಂಗದಲ್ಲಿ ಶಿವಚೈತನ್ಯವಿದೆ. ಅದನ್ನು ತೋರಿಸುವುದಕ್ಕೆ ಒಬ್ಬ ಗುರುಬೇಕೆಂದು ಅರಿತುಕೊಂಡು ತನ್ನರಿವೇ ತನಗೆ ಗುರುವನ್ನಾಗಿ ಮಾಡಿಕೊಂಡಿದ್ದರು. ಅರಿವಿನ ಕುರುಹಾಗಿ ಇಷ್ಟಲಿಂಗವನ್ನು ಕರುಣಿಸಿದರು.
ಕಾರ್ಯಕ್ರಮದಲ್ಲಿ ಹೆಚ್ ಎಸ್ ನಾಗರಾಜ ವಚನಗೀತೆಗಳನ್ನು ಹಾಡಿದರು. ಸಿರಿಮಠ ಹಾಗೂ ರಮೇಶ್ ಪೂಜೆಯ ವ್ಯವಸ್ಥೆಯನ್ನು ಮಾಡಿದರು. ೨೨ ಜನ ಇಷ್ಟಲಿಂಗದೀಕ್ಷಾ ಸಂಸ್ಕಾರ ಪಡೆದುಕೊಂಡರು.
ಮುಖ್ಯೋಪಾಧ್ಯಾಯ ಶಿವಕುಮಾರ ಬಿ.ಎಸ್. ಉಪಸ್ಥಿತರಿದ್ದರು.