ಗೂಗಲ್ ಮೀಟ್: ಕಲ್ಯಾಣ ಕ್ರಾಂತಿ, ನಿಜ ಸಂಕ್ರಾಂತಿ

ಸುಧಾ ಪಾಟೀಲ್
ಸುಧಾ ಪಾಟೀಲ್

ಮಧ್ಯಕಾಲೀನ ಸಾಹಿತ್ಯದಲ್ಲಿ ವಚನ, ರಗಳೆ, ತ್ರಿಪದಿ, ಕೀರ್ತನೆ ಮುಂತಾದ ದೇಸಿಯ ನೆಲೆಗಟ್ಟಿನಲ್ಲಿ ಮೂಡಿಬಂದ ಪ್ರಕಾರಗಳಲ್ಲಿ ವಚನ ಸಾಹಿತ್ಯ ತನ್ನದೇ ಆದ ಮಹತ್ವದ ಸ್ಥಾನ ಪಡೆದಿತ್ತು ಎನ್ನುವುದನ್ನು ಹೇಳುತ್ತಾ ಡಾ. ಸುಧಾ ಕೌಜಗೇರಿ ಅವರು ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.

ಜನಸಾಮಾನ್ಯರ ಬದುಕು,ಜನ ಮುಖಿಯಾದ ಆಲೋಚನೆ, ಸಮಾಜಮುಖಿ ಕಾರ್ಯಗಳು, ಎಲ್ಲವನ್ನು ಒಳಗೊಂಡ ಅದ್ಭುತವಾದ ವಚನ ಸಾಹಿತ್ಯ ಇದಾಗಿತ್ತು. ಶರಣರು ಇಡೀ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡರು. ಜನ ಮಾನಸದಲ್ಲಿ ವಚನಗಳು ನಿಚ್ಚಳಿಯದೆ ಉಳಿಯುವಂತೆ ಮಾಡಿದರು .ಜನಸಾಮಾನ್ಯರಏಳಿಗೆಗಾಗಿ ಉಳಿವಿಗಾಗಿ ಅಭಿವೃದ್ಧಿಗಾಗಿ ತಮ್ಮ ಜೀವವನ್ನೇ ತೇಯ್ದರು.ಶರಣರು ಹಸಿರನ್ನು ಬಿತ್ತಿದರು,ಬಂಗಾರವನ್ನು ಬೆಳೆದರು, ಕನ್ನಡವನ್ನು ಉಸಿರಾಡಿದರು. ಸಮಾಜದ ಕೊನೆಯ ವ್ಯಕ್ತಿಯನ್ನು ಸಹ ಅವರು ಮುಟ್ಟಿದರು ಎನ್ನುವ ಅಭಿಮಾನದ ನುಡಿಗಳನ್ನಾಡಿದರು.

ಶರಣರು ದೇವಸ್ಥಾನದ ಸಂಸ್ಕೃತಿ ತೆಗೆದು ಹಾಕಿದರು. ಕೆಳವರ್ಗದವರನ್ನು ಪ್ರಾಣಿಗಿಂತ ಕನಿಷ್ಠವಾಗಿ ಕಾಣುವಂತಹದನ್ನು ಖಂಡಿಸಿದರು. ಮಧ್ಯದಲ್ಲಿ ಚೆನ್ನಯ್ಯ ಕಕ್ಕಯ್ಯ ದಾಸಯ್ಯನವರ ಹೆಸರನ್ನು ಪ್ರಸ್ತಾಪಿಸುತ್ತಾ,ಮಾದರ ಚೆನ್ನಯ್ಯ, ಜೇಡರ ದಾಸಿಮಯ್ಯ, ಬಸವಣ್ಣ, ಅಂಬಿಗರ ಚೌಡಯ್ಯನವರ ವಚನಗಳನ್ನು ಹೇಳುತ್ತಾ ಹೋದರು. ಭಕ್ತಿ ಇಲ್ಲದ ಬಡವನಯ್ಯ, ಕುಲವನ್ ಅರಸದಿರಿ, ನೆಲನೊಂದೆ ಹೊಲಗೇರಿ, ಕುಲದ ಮದದ ನಿರಸನ, ಕೊಲುವವನೇ ಮಾದಿಗ ಎನ್ನುವ ಸಾಲುಗಳನ್ನು ಉದಾಹರಣೆ ಸಮೇತ ವಿವರಿಸುತ್ತಾ ಹೋದರು.

ಅಕ್ಕಮಹಾದೇವಿ, ಬಸವಣ್ಣ, ಅಕ್ಕ ನಾಗಮ್ಮ, ಪ್ರಭುದೇವರು, ಚೆನ್ನಬಸವಣ್ಣನವರ ಜೊತೆ ಜೊತೆ ಸಮಾನಸ್ಕoದರಾಗಿ ಆಧ್ಯಾತ್ಮಿಕ ಚರ್ಚೆಯಲ್ಲಿ ತೊಡಗಿಸಿಕೊಂಡು ಉಳಿದ ಶರಣರೂ ಸಹ ವಚನ ರಚನೆ ಮಾಡುತ್ತಾ ಮಹಾ ಜ್ಞಾನಿಯಾದರು. ಮುಕ್ತಾಯಕ್ಕನ ಶಿಶು ಕಂಡ ಕನಸಿನಂತಿರಬೇಕು, ಅಕ್ಕಮಹಾದೇವಿಯವರ ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು, ತಮ್ಮಲ್ಲಿರುವ ಮಹಾಘನವನ್ನು ಅರಿಯರು ಎನ್ನುವ ಉದಾತ್ತವಾದ ಆಧ್ಯಾತ್ಮಿಕ ಹಂತ ತಲುಪಿದ ಶರಣೆಯರ ವಿಚಾರಗಳನ್ನು ಹಂಚಿಕೊಂಡರು.

ಶರಣರು ರಾಜ ಪ್ರಭುತ್ವದ ವಿರುದ್ಧ ಮಾತನಾಡಿದರು. ಆರೋಪಣೆಗೆ ಒಳಗಾದ ವ್ಯವಸ್ಥೆಯನ್ನು ತೆಗೆದುಹಾಕಿ ಬೇರೆ ವ್ಯವಸ್ಥೆಯನ್ನು ಪ್ರಾರಂಭ ಮಾಡಿದರು. ಶಿವ ಭಕ್ತನ ಮನೆಯಲ್ಲಿ ತೊತ್ತಾಗಿರುವುದು ಲೇಸು, ಆಸೆ ಎಂಬುದು ಅ ರಸಿಂಗಲ್ಲದೆ ಶಿವ ಭಕ್ತರಿಗುಂಟೆ, ಇಳೆ ನಿಮ್ಮ ದಾನ ಬೆಳೆ ನಿಮ್ಮದಾನ, ಆನು ಒಲಿದಂತೆ ಹಾಡುವೆ,ಎನ್ನುವ ಶಿವಶರಣ ಶರಣೆಯರ ಸಾಲುಗಳನ್ನು ಉಲ್ಲೇಖಿಸಿದರು.

ಶರಣರು ಏಕದೇವೋಪಾಸನೆಗೆ ಒತ್ತು ಕೊಟ್ಟರು. ಅರಿವೇ ಗುರು, ನಿನ್ನೊಳಗೆ ದೇವರಿದ್ದಾನೆ,ತನ್ನ ತಾನೇ ದೇವರಾಗುವ ಪರಿ, ನೀನೆಲ್ಲಿ ಇರುವಿಯೋ ಅಲ್ಲಿಯೇ ದೇವರು ಎಂದು ತಿಳಿಸಿಕೊಟ್ಟು, ಕಾಯಕ ಸಿದ್ಧಾಂತಕ್ಕೆ ಶರಣರು ಮಹತ್ವ ಕೊಟ್ಟರು. ಪುರಾಣ ಮತ್ತು ಕರ್ಮ ಸಿದ್ದಾಂತವನ್ನು ಒಪ್ಪಲಿಲ್ಲ. ದೇವಸ್ಥಾನದಲ್ಲಿ ನಡೆಯುವ ನಂದಾದೀವಿಗೆ, ನೃತ್ಯ, ಭೂಮಿದೇಣಿಗೆ ,ಹಯನ ದೇಣಿಗೆ, ಎಣ್ಣೆ ಬತ್ತಿ ಕೊಡುವುದು ಎಲ್ಲವನ್ನೂ ಖಂಡಿಸಿದರು ಎನ್ನುವುದನ್ನು ತಿಳಿಸಿಕೊಟ್ಟರು.

ಕಲ್ಲು ದೇವರು ದೇವರಲ್ಲ, ದೇವ ಲೋಕ ಮರ್ತ್ಯ ಲೋಕ ಬೇರೆ ಇಲ್ಲ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ ಎನ್ನುವ ಶರಣರ ತಿಳುವಳಿಕೆಯ ವಚನದ ಸಾಲುಗಳನ್ನು ಹೇಳುತ್ತಾ, ಗಜೇಶ ಮಸಣಯ್ಯ, ಸಿದ್ಧರಾಮರು ಮತ್ತು ಸತ್ಯಕ್ಕನ ವಚನಗಳನ್ನು ನೆನಪು ಮಾಡಿಕೊಟ್ಟರು.ಶರಣರು ಕಾಯಕ ಮತ್ತು ದಾಸೋಹ ತತ್ವಕ್ಕೆ ಮಹತ್ವ ಕೊಟ್ಟರು, ಶರಣರ ಧಾರ್ಮಿಕ ಕ್ರಾಂತಿ, ಆರ್ಥಿಕ ಕ್ರಾಂತಿ,ರಾಜಕೀಯ ಕ್ರಾಂತಿ,ಸಾಮಾಜಿಕ ಕ್ರಾಂತಿಯನ್ನು ವಿವರಿಸಿ, ಶರಣರು ಹೇಗೆ ಆಂತರಿಕ ವಿಕಾಸದ ಮೆಟ್ಟಿಲಾದರು,ನೀತಿ ನಡತೆಯನ್ನು ಬೋಧಿಸಿದರು ಮತ್ತು ವೈಷಮ್ಯತೆ ಮತ್ತು ವೈಪರಿತ್ಯವನ್ನು ಹೋಗಲಾಡಿಸಿದರು. ಅಂತರಂಗ ಬಹಿರಂಗವನ್ನು ಒಂದುಗೂಡಿಸಿ ಮಹಾಸ್ಥಾನಕ್ಕೆ ಏರಿದರು. ಚತುರ್ವೇದ ಪುರುಷಾರ್ಥದ ಬಗೆಗೆ ಬಂಡಾಯ ಧೋರಣೆಯನ್ನು ತಾಳಿದ ಶರಣರು ಇದು ಕರ್ತಾರನ ಕಮ್ಮಟವಯ್ಯ, ಇಲ್ಲಿ ದುಡಿಯಲೇಬೇಕು, ದುಡಿದು ಉಣ್ಣಬೇಕು ಎನ್ನುವುದನ್ನು ಮನಗಾಣಿಸಿದರು.. ಎನ್ನುತ್ತಾ ತಮ್ಮ ಮಾತುಗಳನ್ನು ಮುಗಿಸಿದರು.

ಡಾ. ತಾರಾ. ಬಿ. ಎನ್ ಅವರು ವಚನ ಅಧ್ಯಯನ ವೇದಿಕೆ ಇದೊಂದು ಜ್ಞಾನದ ರಸದೌತಣ ಎಂದು ಹೇಳುತ್ತಾ, ಬಸವದಿ ಪ್ರಮಥರು ಹೇಗೆ ಜಾತೀಯತೆ ಗೊಡ್ಡು ಸಂಪ್ರದಾಯವನ್ನು ಹೊಡೆದು ಹಾಕಿ,ದಲಿತರನ್ನು ಹಿಂದುಳಿದವರನ್ನು ಹೇಗೆ ಒಗ್ಗೂಡಿಸಿಕೊಂಡು ವಿಶ್ವಾಸಕ್ಕೆ ತೆಗೆದುಕೊಂಡು ನೈತಿಕ ಸ್ಥೈರ್ಯ ತುಂಬಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ,ಎಲ್ಲರನ್ನೂ ಬೆಳೆಸಿದರು, ಶರಣೆಯರೂ ಸಹ ಹೇಗೆ ಅನುಭವ ಮಂಟಪಲ್ಲಿ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡು, ತಮ್ಮದೇ ಆದ ಅಂಕಿತನಾಮದಲ್ಲಿ ವಚನಗಳ ನ್ನು ರಚಿಸಿದರು ಎನ್ನುವುದನ್ನು ಒತ್ತಿ ಹೇಳಿದರು. ಶರಣರು ದಲಿತರ ಶೋಚನೀಯ ಸ್ಥಿತಿಯನ್ನು ಬದಲಾಯಿಸಿದರು. ತಾರತಮ್ಯವನ್ನು ಹೋಗಲಾಡಿಸಿದರು. ಸತ್ಯದ ಹಾದಿಯನ್ನು ತೆರೆದಿಟ್ಟರು. ಜಿಡ್ಡುಗಟ್ಟಿದ ಪರಿಸ್ಥಿತಿಯನ್ನು ಹೋಗಲಾಡಿಸಿದರು. ಎಲ್ಲರನ್ನೂ ಪ್ರಖರತೆಗೆ ತರುವ ನೈತಿಕತೆಯ ಪಣತೊಟ್ಟರು ಎಂದು ತಮ್ಮ ಮಾರ್ಗದರ್ಶನದಲ್ಲಿ ನುಡಿದರು

ಡಾ. ಶಶಿಕಾಂತ ಪಟ್ಟಣ ಅವರು ಅಂದಿನ ಕಾಲದಲ್ಲಿ ಸಾಹಿತ್ಯ ರಾಜರನ್ನು ಓಲೈಸುವ ಕ್ರಿಯೆಯಾಗಿತ್ತು. ಶರಣರು ಹೇಗೆ ಅದನ್ನು ತೊಡೆದುಹಾಕಿ, ವರ್ಗರಹಿತ ವರ್ಣರಹಿತ ಲಿಂಗರಹಿತ ಸಾಂಸ್ಥಿಕರಣವಲ್ಲದ ಸಮಾಜವನ್ನು ಹುಟ್ಟುಹಾಕಿದರು. ಪ್ರಾಪಂಚಿಕ ಆಷಾಢಭೂತಿಯನ್ನು ಕಿತ್ತು ಹಾಕಿದರು. ಎಲ್ಲ ಕಾಯಕದ ಪರಿಭಾಷೆಯನ್ನು, ಅಗತ್ಯವಾದ ಶಬ್ದಗಳನ್ನು ಬಳಸಿ, ವಚನವನ್ನು ರಚಿಸಿದರು. ಗುರು ಲಿಂಗ ಜಂಗಮ ಎಂದರೆ ಸಮಾನ ಅವಕಾಶ ಒದಗಿಸುವ ಪ್ರಜ್ಞೆ, ಶರಣರು ಬರೆದ ಹಾಗೆ ಬದುಕಿದರು, ಬದುಕಿದ ಹಾಗೆ ಬರೆದರು. ಮಹಿಳೆಯರಿಗೆ ವೈಚಾರಿಕ ಪ್ರಜ್ಞೆಯನ್ನು ಮತ್ತು ಆಲೋಚನಾ ಕ್ರಮವನ್ನು ಬದಲಾಯಿಸುವ, ಮುಖಾಮುಖಿಯಾಗಿ ಚರ್ಚೆ ಮಾಡುವ ಅವಕಾಶವನ್ನು ಕಲ್ಪಿಸಿದರು ಎಂದು ಅತ್ಯಂತ ಅಭಿಮಾನದಿಂದ ಶರಣ ತತ್ವದ ಬಗೆಗೆ ಮಾತನಾಡಿದರು.

ಸಂವಾದದಲ್ಲಿ ಡಾ. ವೀಣಾ ಎಲಿಗಾರ ಮೇಡಂ, ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಅಶೋಕ ಆಲೂರ, ಡಾ. ಸದಾಶಿವ ಮರ್ಜಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ತನ್ನದೇ ಆದ ಕಳೆ ತಂದರು.

ಪ್ರೊ. ಶಾರದಾ ಪಾಟೀಲ್ ಅವರ ವಚನ ಪ್ರಾರ್ಥನೆ, ಡಾ. ಸುಮಂಗಲಾ ಮೇಟಿ ಅವರ ಸ್ವಾಗತ -ಪ್ರಾಸ್ತಾವಿಕ-
ಪರಿಚಯ ಶರಣೆ ಸುಧಾ ಪಾಟೀಲ ಅವರ ಶರಣು ಸಮರ್ಪಣೆ, ಶರಣೆ ಸುಮಂಗಲಾ ಅಣ್ಣಿಗೇರಿ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಶರಣೆ ಜಯಶ್ರೀ ಆಲೂರ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

(ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ್ ಅವರ ತಂದೆಯವರಾದ ಲಿಂಗೈಕ್ಯ ಶರಣ ಬಿ.ಎಮ್.ಪಾಟೀಲ್ ಮತ್ತು ತಾಯಿಯವರಾದ ಲಿಂಗೈಕ್ಯ ಶರಣೆ ಅಕ್ಕಮಹಾದೇವಿ ಪಾಟೀಲ್ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿ ಉಪನ್ಯಾಸದ 28ನೆಯ ದಿವಸದ ವರದಿ. ಆಗಸ್ಟ್ 31.)

Share This Article
Leave a comment

Leave a Reply

Your email address will not be published. Required fields are marked *