ಕೊಪ್ಪಳ:
ಜಿಲ್ಲೆಯ ಜಾಗ್ರತ ಮನಸುಗಳು ಸೇರಿ ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದಲ್ಲಿ ನಡೆದ ದಲಿತ ಯುವಕ ಯಮನಪ್ಪನ ಹತ್ಯೆಯನ್ನು ಖಂಡಿಸಿ, ಕೊಪ್ಪಳ ಜಿಲ್ಲೆಯನ್ನು ದಲಿತ ದಮನಿತರ ದೌರ್ಜನ್ಯ ಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ, ಕೊಪ್ಪಳದಿಂದ ಸಂಗನಹಾಲ ಗ್ರಾಮದವರೆಗೆ ‘ಸಮಾನ ಬದುಕಿನತ್ತ ಅರಿವಿನ ಜಾಥಾ’, “ಸಂಗನಹಾಲ ಚಲೋ” ಹೋರಾಟಕ್ಕೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಜಮಾಯಿಸಿದ ಸಮಾವೇಶದಲ್ಲಿ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ನೀಲಿ ಬಾವುಟ ಬೀಸಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಜಾಥಾ ಕುರಿತು ಮಾತನಾಡಿದರು.
ಜಾಥಾ ದದೇಗಲ್ಲ, ಹಲಗೇರಿ ಗ್ರಾಮಗಳ ಮೂಲಕ ಸಂಜೆ ಬಾಣಾಪುರ ತಲುಪಲಿದೆ, ಅಲ್ಲೇ ವಾಸ್ತವ್ಯ ಹೂಡಲಿದೆ. 18ರ ಮುಂಜಾನೆ ಬಾಣಾಪುರ ಗ್ರಾಮ ಬಿಟ್ಟು ಕುಕನೂರು ಮೂಲಕ ಸಂಗನಹಾಲ ತಲುಪಲಿದೆ. ಸಂಗನಹಾಲದಲ್ಲಿ ಸೌಹಾರ್ದ ಸಮಾವೇಶ ಆಯೋಜಿಸಲಾಗಿದೆ.
ಬಸವರಾಜ ಸೂಳಿಭಾವಿ, ದಾನಪ್ಪ ಮಸ್ಕಿ, ಅಂಬಣ್ಣ ಅರೋಲಿಕರ್, ಡಿ.ಎಚ್. ಪೂಜಾರ, ಹನುಮೇಶ ಕಲ್ಮಂಗಿ, ಪಿ. ರತ್ನಾಕರ, ಕರಿಯಪ್ಪ ಗುಡಿಮನಿ, ಮುತ್ತು ಬಿಳಿಯಲಿ, ಶರೀಫ ಬಿಳಿಯಲಿ, ಶರಣು ಪೂಜಾರ, ಪರಶು ಕಾಳೆ, ಗೌರಿ ಗೋನಾಳ, ನೀಲಮ್ಮ ಸೋಮಸಾಗರ, ಸಾವಿತ್ರಿ ಮುಜುಂದಾರ, ಶಶಿಕಲಾ ಮಠದ, ಸುನಿತಾ, ಶೋಭಾ, ಮಂಜುಳ ಮತ್ತೀತರರು ಜಾಥಾದ ನೇತೃತ್ವ ವಹಿಸಿದ್ದಾರೆ.
ದಲಿತ, ರೈತ, ಕಾರ್ಮಿಕ, ಬಸವಪರ, ಪ್ರಗತಿಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಜಾಥಾದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.