ಶರಣ ಅರವಿಂದ್ ಜತ್ತಿ ಅಣ್ಣಾವರೇ,
ತಾವು ಸೆಪ್ಟೆಂಬರ್ 2024ರ ಬಸವ ಪಥದಲ್ಲಿ ಬರೆದ ಅಧ್ಯಕ್ಷರ ನುಡಿಯಲ್ಲಿ, ಬಸವಾದಿ ಶರಣ ಪರಂಪರೆಯ ವಚನ ಸಿದ್ಧಾಂತ ಆಧಾರಿತ ಲಿಂಗ ಧರ್ಮದ ಲಿಂಗವಂತರು “ಅದ್ವೈತಿ” ಗಳು ಎಂದು ಉಲ್ಲೇಖಿಸಿದ್ದು ಸರಿಯಲ್ಲ.
ಅದ್ವೈತವ ನುಡಿದವರೆಲ್ಲಾ ಅಹಂಕಾರಿಗಳು ಎಂದು ಪರಮಪೂಜ್ಯ ಮಹಾಜಂಗಂ ಅಲ್ಲಮಪ್ರಭು ಅವರು ಹೇಳಿರುವ ವಚನದ ಕಡೆಗೆ ನಿಮ್ಮ ಗಮನವಿರಲಿ. ಯಾವುದೊ ಭರದಲ್ಲಿ ಅಪಾರ್ಥಕ್ಕೆ ಏಡೆಮಾಡುವ ಪದ ಬಳಸದೆ ವಚನಗಳಲ್ಲಿ ಉಲ್ಲೇಖಿತ ಪದಗಳ ಕಡೆಗೆ ಗಮನವಿರಲಿ.
ಲಿಂಗ ಧರ್ಮದ ಲಿಂಗವಂತರುಗಳು ದ್ವೈತಿಗಳಲ್ಲ, ಅದ್ವೈತಿಗಳಲ್ಲ, ವಿಶಿಷ್ಟಾದ್ವೈತಿಗಳಲ್ಲ, ಬ್ರಹ್ಮವಾದಿಗಳಲ್ಲ, ಸೂನ್ಯವಾದಿಗಳಲ್ಲ, ಲಿಂಗವಂತರು ತನ್ನಂತೆ ಎಲ್ಲರು ಎಲ್ಲರಂತೆ ತಾನು ಎಂಬ ವಾಸ್ತವವಾದಿಗಳಾಗಿದ್ದು ಅವರು ಹಿಂದಿನ ಯಾವುದೇ ತತ್ವವಾದಿಗಳಲ್ಲ.
1) ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು. ಊರೊಳಗೆ ಪಂಥ ರಣದೊಳಗೆ ಓಟವೆ? ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೆ? ಈ ಘಾತಕರ ಶಾಸ್ತ್ರ, ವಚನ ರಚನೆಗೆ ಮೆಚ್ಚಿ ಮಾಡುವನ ಭಕ್ತಿ, ಅಲಗಿನ ಘೃತವ ಶ್ವಾನ ನೆಕ್ಕಿ ನಾಲಗೆ ಹರಿದು ಮತ್ತಲಗ ಕಂಡು ತೊಲಗುವಂತಾಯಿತ್ತು, ಉಭಯದ ಇರವು. ಇಂತೀ ಭೇದಂಗಳಲ್ಲಿ ಅರಿತು ನಿರತನಾಗಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ. (ಅರಿವಿನ ಮಾರಿತಂದೆ)
2) ಉಪೇಕ್ಷೆಯಿಂದ ಉರಿವ ಬೆಳಗು, ಪವನನ ಪ್ರಾಣಕ್ಕೆ ಒಳಗು. ಸ್ವಯಸಂಪರ್ಕದಿಂದ ಒದಗಿದ ಬೆಳಗು, ಅನಲನ ಆಹುತಿಗೆ ಹೊರಗಾಗಿಪ್ಪುದು. ಇಂತೀ ವಾಗದ್ವೈತದ ಮಾತಿನ ಮಾಲೆ, ಸ್ವಯಾದ್ವೈತವ ಮುಟ್ಟಬಲ್ಲುದೆ? ಸ್ಥಲಜ್ಞಾನ, ಯಾಚಕತ್ವ, ಸ್ಥಲಭರಿತನ ಮುಟ್ಟಬಲ್ಲುದೆ? ಇಂತೀ ಉಭಯದೊಳಗನರಿತು, ಇಷ್ಟಕ್ಕೆ ಕ್ರೀ, ಭಾವಕ್ಕೆ ಜ್ಞಾನ ಸಂಪೂರ್ಣವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ. (ಮೋಳಿಗೆ ಮಾರಯ್ಯ)
3) ಅದ್ವೈತವನೋದಿ ಎರಡಳಿದೆವೆಂಬ ಅಣ್ಣಗಳು ನೀವು ಕೇಳಿರೆ. ಅದ್ವೈತಿಯಾದಡೆ ತನುವಿಕಾರ, ಮನದ ಸಂಚಲ, ಭಾವದ ಭ್ರಾಂತು, ಅರಿವಿನ ಮರಹು, ಇಂತೀ ಚತುರ್ವಿಧಂಗಳಲ್ಲಿ ವಿಧಿನಿಷೇಧಂಗಳಳಿದು, ಚಿದ್ಬ್ರಹ್ಮದೊಳವಿರಳಾತ್ಮಕವಾದುದು ಅದ್ವೈತ. ಅಂತಪ್ಪ ವಿಧಿನಿಷೇಧಂಗಳು ಹಿಂಗದೆ, ಲಿಂಗವನರಿಯದೆ, ವಾಗದ್ವೈತದಿಂದ ನುಡಿದು ಅದ್ವೈತಿ ಎನಿಸಿಕೊಂಬುದೆ ದ್ವೈತ. ಇಂತಪ್ಪ ದ್ವೈತಾದ್ವೈತಂಗಳಿಗೆ ಸಿಲುಕದ, ಹರಿಹರಬ್ರರ್ಹದಿಗಳನರಿಯದ ವೇದಶಾಸ್ತ್ರ ಆಗದು ಪುರಾಣ ಇತಿಹಾಸ ರಹಸ್ಯಛಂದಸ್ಸು ಅಲಂಕಾರ ನಿಘಂಟು ಶಬ್ದತರ್ಕಂಗಳೆಂಬ ಕುತರ್ಕಂಗಳಿಗೆ ನಿಲುಕದ ನಿತ್ಯನಿಜೈಕ್ಯ ನಿರುಪಮಸುಖಿಯಾಗಿ, ತಾನಿದಿರೆಂಬ ಭಿನ್ನಭಾವವಿಲ್ಲದ ಸ್ವಯಾದ್ವೈತಿ ತಾನೆ ಸೌರಾಷ್ಟ್ರ ಸೋಮೇಶ್ವರ. (ಆದಯ್ಯ)
ನೀವು ಹೇಳಿರುವುದು ಮೇಲ್ನೋಟಕ್ಕೆ ಸರಿಯೆನಿಸಿದರೂ ಆ ದ್ವೈತ ಮತ್ತು ಅದ್ವೈತಗಳು ಬಸವಾದಿ ಶರಣ ಪರಂಪರೆಯ ಲಿಂಗ ಧರ್ಮದಲ್ಲಿ ಹಾಗೆ ಇಲ್ಲವಣ್ಣ. ಹಾಗಾಗಿ ನೀವು ಮೊದಲು ವೈದಿಕಶಾಹಿಯ ದ್ವೈತ ಮತ್ತು ಅದ್ವೈತಗಳು ಏನು ಹೇಳುತ್ತವೆ ಎಂಬುದನ್ನು ಅಧ್ಯಯನ ಮಾಡಿದರೆ ಅವುಗಳಲ್ಲಿ ಅಂತರ್ಗತ ವಾಗಿರುವ ತಿರುಳು ಅರ್ಥವಾಗುತ್ತದೆ. ನಿಮ್ಮ ಆಸಕ್ತಿಗೆ ಅಭಿನಂದನೆಗಳು ಅಣ್ಣಾವರೇ ಶರಣಾರ್ಥಿ.
ಪೂಜ್ಯ ಜಗನ್ನಾಥಪ್ಪ ಪನಸಾಲೆ ಜನವಾಡ
ಪೀಠಾಧಿಪತಿ,
ಅಲ್ಲಮಪ್ರಭು ಅನುಭಾವ ಪೀಠ,
ಕಾಸರಗೊಡ, ಕೇರಳ, ಪಶ್ಚಿಮ ಕರಾವಳಿ