“ಸಾಣೇಹಳ್ಳಿಯನ್ನು ಇಲೆಕ್ಟ್ರಾನಿಕ್ ಸಿಟಿಯನ್ನಾಗಿ ಶ್ರೀಗಳು ಬದಲಾಯಿಸಿದ್ದಾರೆ”

ಸಾಣೇಹಳ್ಳಿ

ಸಾಣೇಹಳ್ಳಿಯನ್ನು ಇಲೆಕ್ಟ್ರಾನಿಕ್ ಸಿಟಿಯನ್ನಾಗಿ ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಮಾಡಿದ್ದಾರೆ. ರಂಗಶಂಕರವನ್ನು ಸಾಣೇಹಳ್ಳಿಯಲ್ಲಿ ನೋಡ್ತಾ ಇದೀವಿ. ಶ್ರೀಗಳು ಬಸವತತ್ವವೇ ಉಸಿರಾಗಿಸಿಕೊಂಡು ವೈಚಾರಿಕವಾಗಿ ಕೆಲಸ ಮಾಡ್ತಾ ಇದಾರೆ. ನಮ್ಮಂಥ ಯುವಕರಿಗೆ ಮಾರ್ಗದರ್ಶಕರಾಗಿ ನಮ್ಮ ಮಧ್ಯೆ ಇರುವುದೇ ದೊಡ್ಡ ಹೆಮ್ಮೆ ಎಂದು ಮುರುಘಾಮಠದ ಬಸವಕುಮಾರ ಸ್ವಾಮೀಜಿ ರವಿವಾರ ಹೇಳಿದರು.

ಇಲ್ಲಿನ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ಸರ್ವೋದಯ ಕೃಷಿ ಘಟಕ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಸಂಯುಕ್ತಾಶ್ರಯದಲ್ಲಿ ನಡೆದ “ಸಾಧಕ ರೈತರ ಸಮ್ಮಿಲನ” ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡುತ್ತ ಭೂಮಿಯಲ್ಲಿ ರಾಸಾಯನಿಕ ಹೆಚ್ಚಾಗಿ ಭೂಮಿ ಸತ್ವವನ್ನೇ ಕಳೆದುಕೊಂಡಿದೆ. ಸರಕಾರದಿಂದ ಕೃಷಿ ಮೇಳಕ್ಕೆ ಲಕ್ಷಗಟ್ಟಲೆ ಹಣ ಖರ್ಚು ಮಾಡುವರು. ಯಾವ್ಯಾವುದಕ್ಕೆ ಖರ್ಚು ಮಾಡುತ್ತಾರೆ ಎನ್ನುವುದು ಅರಿಯದಾಗಿದೆ. ಯಾವುದೇ ಮೇಳ ಮಾಡಿದರೂ ಅದು ಸಾರ್ಥಕ ಮೇಳವಾಗಬೇಕು.

ಕಾರ್ಯಕ್ರಮದಲ್ಲಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅನೇಕರು ರಾಜಕೀಯವಾಗಿ ಮೇಲೆ ಹೋದಂತೆ ರೈತರ ಮಗ, ಒಕ್ಕಲಿಗ ಮಗನೆಂದು ಹೇಳಿಕೊಳ್ಳುವರು. ಆದರೆ ಅವರಾರೂ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವವರನ್ನು ಕಾಣುತ್ತೇವೆ. ನಮ್ಮ ಸರಕಾರ ರೈತರಿಗೆ ಬೇಕಾದ ವಿದ್ಯುತ್, ನೀರು, ಗೊಬ್ಬರದ ಸೌಲಭ್ಯಗಳನ್ನು ಒದಗಿಸುವುದರ ಕಡೆ ಗಮನಹರಿಸಬೇಕು. ಆಗ ರೈತನ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ. ಇಲ್ಲಿ ನಡೆದ ಕಾರ್ಯಕ್ರಮ ರೈತರಿಗೆ ಹೊಸ ಬೆಳಕನ್ನು ಕಾಣುವಂತಾಗಬೇಕು. ಈ ವಷ೵ದ ನಮ್ಮ ನಾಟಕೋತ್ಸವ ಕಾರ್ಯಗಕ್ರಮದಲ್ಲಿ ಕೃಷಿಗೆ ಹೆಚ್ಚು ಒತ್ತು ಕೊಡಬೇಕೆಂದೆನಿಸಿದೆ. ನಮ್ಮ ಸುತ್ತಮುತ್ತ ಅನೇಕ ರೈತ ಸಾಧಕರಿದ್ದಾರೆ. ಅವರನ್ನು ಗುರುತಿಸುವ ಕೆಲಸ ಆಗಬೇಕು. ನಿಜವಾದ ರಕ್ಷಕರು ನಮ್ಮ ರೈತರು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ನುಡಿಗಳನ್ನಾಡಿದ ನಾಡೋಜ ಗೊ ರು ಚನ್ನಬಸಪ್ಪ ನಮ್ಮ ರೈತರು ಸಂಘಟಿತ ರೈತರಾಗಬೇಕು. ಗ್ರಾಮೀಣರ ಬದುಕು ಬೆಡಗು ಭಿನ್ನಾಣವಲ್ಲ. ಸಹಜ ಬದುಕು ಅವರದು. ಸಣ್ಣ ಹಿಡುವಳಿದಾರರಿಗೆ ನೈಸರ್ಗಿಕ ಕೃಷಿ ತುಂಬ ಲಾಭಕಾರಿ.

ಶಾಶ್ವತ ಮಣ್ಣಿನ ಸತ್ವವನ್ನು ಅಲಕ್ಷ್ಯತೆ ಮಾಡಿದ್ದೇವೆ. ಕೃಷಿ ಲಾಭಕರವಲ್ಲ ಎನ್ನುವ ಧೋರಣೆ ಸರಕಾರದ್ದಾಗಿದೆ. ಕೃಷಿಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಸರಕಾರ ಮಾಡಿಕೊಂಡಿರುವುದು ಕೃಷಿಕರಿಗೆ ಮಾಡಿದ ಅವಮಾನ. ಆಧುನಿಕ ಕೃಷಿ ಬಗೆಗೆ, ಕೃಷಿ ನೀತಿಯ ಬಗೆಗೆ ಸರಕಾರ ಪುನರ್ ಚಿಂತನೆ ಮಾಡಬೇಕು. ರೈತರು ಬೆಳೆದ ಬೆಲೆಗೆ ಸರಕಾರ ಸೂಕ್ತ ಬೆಲೆಯನ್ನು ನಿಗದಿ ಮಾಡಬೇಕು. ರೈತರ ಬದುಕು ಸ್ವಾಭಿಮಾನದ ಬದುಕಾಗಬೇಕು, ಎಂದು ಹೇಳಿದರು.

ಮಾಜಿ ಶಾಸಕ ಮಹಿಮಾ ಜೆ ಪಾಟೀಲ್ ಮಾತನಾಡಿ ಮಠಗಳು ರೈತರಲ್ಲಿರುವ ಪ್ರತಿಭೆಗಳನ್ನು ಹೊರ ತರುವ ಕೆಲಸ ಮಾಡುತ್ತಾ ಬಂದಿವೆ. ಕಲೆ, ಸಾಹಿತ್ಯ ಸಂಸ್ಕೃತಿಗೆ ಹೆಚ್ಚಿನ ಬೆಲೆಯನ್ನು ಕೊಡುತ್ತಾ ಬಂದಿರುವುದು ಕರ್ನಾಟಕದಲ್ಲಿ. “ಹಿಂದೆ ಏನಾಗಿತ್ತು ಎನ್ನುವುದನ್ನು ಮಾತನಾಡುತ್ತೇವೆ. ಆದರೆ ಈಗ ಎಲ್ಲವೂ ಕೆಟ್ಟೋಗಿದೆ ಎಂದು ಬಹಳ ಆಕ್ರೋಶವಾಗಿ ಮಾತನಾಡುತ್ತೇವೆ. ಆದರೆ ಮುಂದೆ ಏನಾಗಬೇಕೆಂದು ಮಾತನಾಡುವವರ ಸಂಖ್ಯೆ ತುಂಬಾ ವಿರಳ. ಹೊಸ ಪರಿವರ್ತನೆ ಪ್ರಾರಂಭವಾಗುವುದು ಕೆಲವೇ ಕೆಲವು ಜನಗಳಿಂದ. ಸಮೂಹದ ಮೂಲಕ ಹೋದಾಗ ಹುಮ್ಮಸ್ಸು ಹೆಚ್ಚುತ್ತೆ. ನಮ್ಮ ಭೂಮಿ ಪ್ರಸವ ವೇದನೆಯ ಮೂಲಕ ಹೋಗ್ತಾ ಇದೆ. ನಮ್ಮ ಹಿರಿಯರ ಏನು ಬೆಳೆಯುತ್ತಿದ್ದರೋ ಅದನ್ನು ಊಟ ಮಾಡ್ತಾ ಇದ್ದರು. ಏನು ಊಟ ಮಾಡುತ್ತಿದ್ದರೋ ಅದನು ಬೆಳೆಯುತ್ತಿದ್ದರು. ಈಗ ಹಣದ ಭೂತದಿಂದ ಓಡಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ತಾ ಇದ್ದೇವೆ.

ಕೃಷಿ ಸಾಧಕರಾದ ಚಂದ್ರಶೇಖರ್ ನಾರಾಯಣಪುರ, ಶಿವಪ್ರಸಾದ್, ಮಂಜುನಾಥ, ವಿಶ್ವೇಶ್ವರ ಸಜ್ಜನ್, ಹೊಯ್ಸಳ ಅಪ್ಪಾಜಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಡಾ. ಗಿರೀಶ್ ಮಾತನಾಡಿದರು. ಡಾ. ಸೋಮಶೇಖರ್. ಸ್ವಾಗತಿಸಿ ನಿರೂಪಿಸಿದರು. ಕಾರ್ಯರಕ್ರಮದ ಆರಂಭದಲ್ಲಿ ನಾಗರಾಜ್ ಹೆಚ್ ಎಸ್ ತಬಲಾ ಸಾಥಿ ಶರಣ್ ವಚನಗೀತೆ ಹಾಗೂ ರೈತರ ಗೀತೆಗಳನ್ನು ಹಾಡಿದರು.

Share This Article
Leave a comment

Leave a Reply

Your email address will not be published. Required fields are marked *