ಚಿತ್ರದುರ್ಗ:
ಶರಣಸಂಸ್ಕೃತಿ ಉತ್ಸವ-೨೦೨೪ರ ನಿಮಿತ್ತ ೨೫.೦೯.೨೦೨೪ರಿಂದ ೦೪.೧೦.೨೦೨೪ರವರೆಗೆ ಮುರುಘಾ ಮಠದಲ್ಲಿ ಯೋಗ ಶಿಬಿರ ಶುರುವಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತ ಯೋಗಗುರು ವೈದ್ಯಶ್ರೀ ಶ್ರೀಚನ್ನಬಸವಣ್ಣವನವರು ನಮ್ಮ ಮನಸ್ಸು ದೇಹ ಶುದ್ಧೀಕರಣಗೊಳ್ಳಬೇಕು. ಐದು ಪ್ರಕಾರದ ಶುದ್ಧಿ ಮಾಡಿಕೊಳ್ಳಬೇಕು. ತನು, ಮನ, ನಡೆ, ನುಡಿ ಹಾಗೂ ಭಾವದ ಶುದ್ಧಿಯಾಗಬೇಕು, ಎಂದು ಹೇಳಿದರು.
ನಾವು ಮನಸ್ಸಿನಲ್ಲಿ ನಗಬೇಕು. ನಗುವಿನಲ್ಲಿ ಭಾವವಿರಬೇಕು. ನಗು ನಮ್ಮ ಮನಸ್ಸನ್ನು ವಿಕಸನಗೊಳಿಸುತ್ತದೆ. ಬಸವಾದಿ ಶರಣರ, ಸಂತರ, ಮಹಾತ್ಮರ ರೀತಿಯಲ್ಲಿ ನಗಬೇಕು. ರೈತ ತನ್ನ ಸಮೃದ್ಧ ಪಸಲನ್ನು ಕಂಡಾಗ, ತಾಯಿ ತನ್ನ ಮಗುವಿಗೆ ಹಾಲುಣ್ಣಿಸಿದ ಸಮಯದಲ್ಲಿ ನಗುವ ಹಾಗೆ ನಗಬೇಕು.
ಮನುಷ್ಯನಿಗೆ ರೋಗ ಬರಲು ವಾತ ವಿಕಾರ, ಪಿತ್ತ ವಿಕಾರ ಹಾಗೂ ಕಫ ವಿಕಾರ ಕಾರಣ.
ವಾತ ವಿಕಾರ ಎಂಭತ್ತು ಆರೋಗ್ಯ ಸಮಸ್ಯೆಗಳಿಗೆ, ಪಿತ್ತ ವಿಕಾರ ಅರವತ್ತು ಆರೋಗ್ಯ ಸಮಸ್ಯೆಗಳಿಗೆ ಹಾಗೂ ಕಫ ವಿಕಾರ ಇಪ್ಪತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ನಮ್ಮ ದೇಹ ಹಾಗೂ ಮನಸ್ಸನ್ನು ಜಡವಾಗಲು ಬಿಡಬಾರದು. ನಮ್ಮ ದೇಹವನ್ನು ಕ್ರೀಯಾಶೀಲವಾಗಿಡಬೇಕು.
ನಾವು ಹೇಗೆ ಕೆಟ್ಟ ವ್ಯಕ್ತಿಗಳಿಗೆ ನಮ್ಮ ಮನೆಯಲ್ಲಿ ಅವಕಾಶ ಮಾಡಿಕೊಡುವುದಿಲ್ಲವೋ ಅದೇ ರೀತಿ ನಮ್ಮ ದೇಹದಿಂದ ಕೆಟ್ಟ ವಾಯುವನ್ನು ಹೊರಹಾಕಬೇಕು. ಕೆಟ್ಟ ವಾಯು ನಮ್ಮ ಶರೀರ ರೋಗಗ್ರಸ್ತವಾಗಲು ಕಾರಣವಾಗುತ್ತದೆ. ದೇಹ ಚೈತನ್ಯವಾಗಿಡಲು ನಮ್ಮ ಬೆನ್ನಹುರಿ ಕ್ರಿಯಾಶೀಲವಾಗಿರಬೇಕು. ಬೆನ್ನಹುರಿ ಕ್ರಿಯಾಶೀಲವಾಗಿದ್ದಲ್ಲಿ ಪ್ರಾಣಾಯಾಮ ಮಾಡಬಹುದು. ಮಕರಾಸನ ನಮ್ಮ ಶ್ವಾಸವನ್ನು ದೀರ್ಘವನ್ನಾಗಿಸುತ್ತದೆ. ಆಳ, ಲಯಬದ್ಧ, ನಿಧಾನವಾಗಿಸುತ್ತದೆ. ನಮ್ಮ ಶ್ವಾಸ ನಿಧಾನವಾಗಿದ್ದಲ್ಲಿ ನಮ್ಮ ಆರೋಗ್ಯ, ಆಯುಷ್ಯ ಚೆನ್ನಾಗಿರುತ್ತದೆ.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಯೋಗಗುರು ಶ್ರೀ ಚನ್ನಬಸವಣ್ಣನವರು ಪ್ರತಿನಿತ್ಯ ೧೫೦ ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡುತ್ತಾರೆ. ನಿರಂತರವಾಗಿ ಕಾಯೋನ್ಮುಖರಾಗಿರುತ್ತಾರೆ. ತಮ್ಮ ಕೆಲಸಗಳ ಒತ್ತಡದ ನಡುವೆಯೂ ಶರಣಸಂಸ್ಕೃತಿ ಉತ್ಸವದ ನಿಮಿತ್ತ ೧೦ ದಿನಗಳ ಕಾಲ ಆಯೋಜಿಸಿರುವ ಯೋಗ ಹಾಗೂ ಪ್ರವಚನ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಬೆಳಗ್ಗೆಯ ಕಾರ್ಯಕ್ರಮದಲ್ಲಿ ಯೋಗಾಬ್ಯಾಸ ನಡೆಯಲಿದ್ದು, ಸಂಜೆ ಆರೋಗ್ಯ ಆಧ್ಯಾತ್ಮ ಕುರಿತು ಪ್ರವಚನ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಯೋಗಾಚಾರ್ಯ ಶ್ರೀ ಎಲ್ ಎಸ್ ಚಿನ್ಮಯಾನಂದ, ಚಿತ್ರದುರ್ಗ ನಗರದ ವಿವಿಧ ಬಡಾವಣೆಗಳ ಯೋಗ ತರಬೇತುದಾರರುಗಳಾದ ಎಂ. ಬಿ. ಮುರಳಿ ವೆಂಕಟೇಶ್, ಪ್ರಸನ್ನ ಕುಮಾರ್, ಕೆಂಚವೀರಪ್ಪ, ರವಿ ಅಂಬೇಕರ್, ರುದ್ರೇಶ್, ಮಂಜುಳ, ವಸಂತ ಲಕ್ಷ್ಮಿ ಮತ್ತು ಮಂಜುನಾಥ್ ಹಾಗೂ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಭರತ್ ಪಿ ಬಿ, ಬೃಹನ್ಮಠ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಎಂ.ಜಿ.ರಾಜೇಶ್, ಹರಗುರು ಚರಮೂರ್ತಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ-ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು, ವಿವಿಧ ಯೋಗ ಸಂಸ್ಥೆಗಳ ತರಬೇತುದಾರರು, ಯೋಗಪಟುಗಳು, ಸಾಧಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಪ್ರೊ.ಜಯದೇವಪ್ಪ ಆರ್ ಎಸ್ ನಿರೂಪಿಸಿ, ಸ್ವಾಗತಿಸಿ, ಪ್ರೊ. ಚೇತನ್ ಎಸ್ ವಂದಿಸಿದರು.