ಗದಗ
ಕನ್ನಡದ ಕುಲಗುರುಗಳು, ಕೋಮು ಸೌಹಾರ್ದತೆಯ ಹರಿಕಾರರು ಹಾಗೂ ತೃತೀಯ ಅಲ್ಲಮರೆಂದು ಖ್ಯಾತರಾದ ಪೂಜ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 6ನೇ ಪುಣ್ಯಸ್ಮರಣೆ ಅಂಗವಾಗಿ ಅಕ್ಟೋಬರ್ 14 ರಂದು ಮುಂಜಾನೆ 10.30 ಗಂಟೆಗೆ ನಗರದ ತೋಂಟದಾರ್ಯ ಮಠದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಹಾಗೂ ಗ್ರಂಥಗಳ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊ.ಎಸ್.ಎಸ್ ಪಟ್ಟಣಶೆಟ್ಟರ ನುಡಿದರು.
ನಗರದ ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಪಡೆದ ಪೂಜ್ಯ ನಿರುಪಾಧೀಶ್ವರ ಮಹಾಸ್ವಾಮಿಗಳನ್ನು ಸನ್ಮಾನಿಸಲಾಗುವುದು.
೨೦೨೪ನೇ ಸಾಲಿನ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಶರಣ ಸಾಹಿತಿಗಳಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಅನುಪಮ ಸೇವೆಸಲ್ಲಿಸಿದ 97 ವರ್ಷದ ನಾಡೋಜ ಡಾ.ಗೊ.ರು ಚನ್ನಬಸಪ್ಪ ಭಾಜನರಾಗಿದ್ದಾರೆ. ಶ್ರೀಯುತರಿಗೆ ಕಾನೂನು, ಸಂಸದೀಯ ಮತ್ತು ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು. ಮುಂಡರಗಿ-ಬೈಲೂರ ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಶಿರೋಳ-ಭೈರನಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು, ಆಳಂದದ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಕೋರಣೇಶ್ವರ ಮಹಾಸ್ವಾಮಿಗಳು, ಸಂಡೂರ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಅರಸಿಕೇರಿ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು ಸಮ್ಮುಖ ವಹಿಸುವರು.
ಅತಿಥಿಗಳಾಗಿ ಹಾವೇರಿ-ಗದಗ ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಾಯಿ, ಶಾಸಕರಾದ ಸಿ.ಸಿ ಪಾಟೀಲ, ಜಿ.ಎಸ್ ಪಾಟೀಲ, ಡಾ.ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ, ಮಾಜಿ ಸಚಿವರಾದ ಎಸ್.ಎಸ್ ಪಾಟೀಲ, ಮಾಜಿ ಸಂಸದರಾದ ಶಿವಕುಮಾರ ಉದಾಸಿ, ಮಾಜಿ ಶಾಸಕರಾದ ಡಿ.ಆರ್ ಪಾಟೀಲ, ಕಳಕಪ್ಪ ಬಂಡಿ, ಬಿ.ಆರ್ ಯಾವಗಲ್, ಜಿ.ಎಸ್ ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ ಭಾಗವಹಿಸುವರು.
ಪ್ರೊ.ಶಿವಾನಂದ ಪಟ್ಟಣಶೆಟ್ಟಿ ಅವರು ರಚಿಸಿದ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ದುಬೈ ಭೇಟಿಯ ನೆನಪುಗಳು’ ಹಾಗೂ ಡಾ.ಲಕ್ಷ್ಮಣ ಕೌಂಠೆ ರಚಿಸಿದ
ಕೀರ್ತನ ಕೇಸರಿ ಶ್ರೀ ಚನ್ನಬಸವ ಸ್ವಾಮಿಗಳು’ ಗ್ರಂಥಗಳು ಲೋಕಾರ್ಪಣೆಗೊಳ್ಳುವವು. ಈ ಕಾರ್ಯಕ್ರಮಕ್ಕೆ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸದ್ಭಕ್ತರು-ಅಭಿಮಾನಿಗಳು ಪಾಲ್ಗೊಳ್ಳಲು ವಿನಂತಿಸಿದರು.
ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಚ್. ಬೇಲೂರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಜಾತ್ರಾ ಮಹೋತ್ಸವ ಸಮಿತಿ ಮಾಜಿ ಅಧ್ಯಕ್ಷ ಅಂಬರೇಶ ಅಂಗಡಿ, ಶಿವಾನುಭವ ಸಮಿತಿ ಚೇರ್ಮನ್ ಐ.ಬಿ. ಬೆನಕೊಪ್ಪ, ಜಾತ್ರಾ ಸಮಿತಿ ಕಾರ್ಯದರ್ಶಿ ಪ್ರವೀಣ ವಾರಕರ, ದಾನಯ್ಯ ಗಣಾಚಾರಿ, ಕೊಟ್ರೇಶ ಮೆಣಸಿನಕಾಯಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.