ಬೆಂಗಳೂರು
ನಮ್ಮ ತಾಯಿಯವರ ಆಕಸ್ಮಿಕ ಸಾವಿನ ವಿಚಾರಗಳನ್ನು ಮುಂದೆ ತಂದು ಮಾತನಾಡುತ್ತಿರುವುದು ನಿಮ್ಮ ಅಸಭ್ಯ ಹಾಗೂ ಸಂಸ್ಕೃತಿ ಹೀನ ನಡವಳಿಕೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಮಿಸ್ಟರ್ ಬೈರತಿ ಸುರೇಶ್ ಅವರೇ, ನೀವು ನಡೆಸಿದ ಕಡು ಭ್ರಷ್ಟ ಹಗರಣಗಳಿಗೆ ಕನಸು ಮನಸ್ಸಿನಲ್ಲೂ ಎಣಿಸದ ರೀತಿಯಲ್ಲಿ ತನಿಖೆಗಳು ನಿಮ್ಮ ಕೊರಳು ಸುತ್ತಿ ಕೊಳ್ಳುತ್ತಿವೆ ಇದರಿಂದ ತೀವ್ರ ಹತಾಶಗೊಂಡಿರುವ ನೀವು ನಮ್ಮ ತಾಯಿಯವರ ಆಕಸ್ಮಿಕ ಸಾವಿನ ವಿಚಾರಗಳನ್ನು ಮುಂದೆ ತಂದು ಮಾತನಾಡುತ್ತಿರುವುದು ನಿಮ್ಮ ಅಸಭ್ಯ ಹಾಗೂ ಸಂಸ್ಕೃತಿ ಹೀನ ನಡವಳಿಕೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರವಿವಾರ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ‘ಬಿ.ಎಸ್.ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಅವರ ಸಾವಿನಲ್ಲಿ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂದು ನನಗೆ ಅನುಮಾನವಿದೆ. ಈ ಬಗ್ಗೆ ತನಿಖೆಯಾಗಲಿ’ ಎಂದು ಆರೋಪಿಸಿದ್ದರು.
ಮುಡಾ ಕಡತಗಳನ್ನು ಭೈರತಿ ಸುರೇಶ್ ಅವರು ಸುಟ್ಟುಹಾಕಿದ್ದಾರೆ ಎಂದು ಶೋಭಾ ಅವರು ಶನಿವಾರ ಆರೋಪದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಸುರೇಶ್ ಅವರು, ‘ಯಡಿಯೂರಪ್ಪ ಒಳ್ಳೆಯವರು. ಆದರೆ ಮೈತ್ರಾದೇವಿ ಅವರ ಸಾವು ಹೇಗಾಯಿತು. ಈ ಬಗ್ಗೆ ಗೃಹ ಸಚಿವರು, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿ’ ಎಂದರು.
‘ಒಬ್ಬ ಕೇಂದ್ರ ಸಚಿವೆಯಾಗಿ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ಅವರನ್ನೂ ಬಂಧಿಸಿ, ತನಿಖೆ ನಡೆಸಿದರೆ ಯಡಿಯೂರಪ್ಪ ಅವರ ಪತ್ನಿಯ ಸಾವು ಹೇಗಾಯಿತು ಎಂಬುದು ಗೊತ್ತಾಗುತ್ತದೆ ಎಂದು ನಾನು ಒತ್ತಾಯಿಸಿದರೆ, ಶೋಭಾ ಅದನ್ನು ಒಪ್ಪುತ್ತಾರೆಯೇ’ ಎಂದು ಪ್ರಶ್ನಿಸಿದರು.