ಜಾತಿ, ಧರ್ಮ ಮೀರಿ ನಿಸ್ವಾರ್ಥ ಸೇವೆ ಮಾಡಿದ ನಡೆದಾಡುವ ದೇವರು

ಸಂಗಮೇಶ ಜವಾದಿ
ಸಂಗಮೇಶ ಜವಾದಿ

( ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ ಪ್ರಯುಕ್ತ ಲೇಖನ)

ಬೀದರ :

111 ವರ್ಷಗಳ ಸಾರ್ಥಕ ಬದುಕನ್ನು ಬಾಳಿದ ಸಿದ್ಧಗಂಗಾ ಮಠದ ಶ್ರೀಗಳಾದ ಡಾ. ಶಿವಕುಮಾರ ಮಹಾಸ್ವಾಮಿಗಳವರ ಸೇವಾ ಕಾರ್ಯಗಳು ಅನನ್ಯ. ಜಾತಿ-ಧರ್ಮಗಳನ್ನು ಮೀರಿದ ಅವರ ನಿಸ್ವಾರ್ಥ ಸೇವಾಕಾರ್ಯಗಳು ಇಂದಿಗೂ – ಎಂದೆಂದಿಗೂ ಅಜರಾಮರ. ಲಕ್ಷಾಂತರ ಜನರ ಬಾಳಿಗೆ ಬೆಳಕಾದ ‘ನಡೆದಾಡುವ ಶರಣರು,’ ಅನ್ನ, ಅಧ್ಯಾತ್ಮ, ಜ್ಞಾನವೆಂಬ ತ್ರಿವಿಧ ದಾಸೋಹದಿಂದ ಜಗತ್ತಿಗೇ ಮಾದರಿಯಾದ 21 ನೇ ಶತಮಾನದ ಸಂತ. ಭಾರತೀಯ ಆಧ್ಯಾತ್ಮಿಕ ನಾಯಕ, ಮಾನವೀಯ ಮತ್ತು ಶಿಕ್ಷಣತಜ್ಞ, ಲಿಂಗಾಯತ ಧರ್ಮದ ಶ್ರೇಷ್ಠ ತ್ಯಾಗಿ, ಕರ್ನಾಟಕದ ಸಿದ್ದಗಂಗಾ ಮಠದ ಮಠಾಧಿಪತಿಗಳಾಗಿ, ನಾಡನ್ನು ಬೆಳಗಿ, ನಡೆದಾಡುವ ಶರಣರಾಗಿ ಅಮರರಾಗಿದ್ದಾರೆ.

12 ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಶ್ರೀಗಳು ಮಾರ್ಚ್ 3, 1930ರಂದು ಶ್ರೀ ಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠವು, ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದು ನೋಡುತ್ತೇವೆ. ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿದ್ದರು. ಇವರು ಸಮಾಜದ ಎಷ್ಟೋ ಬಡ ಮಕ್ಕಳ ಬಾಲ್ಯ ಜೀವನವನ್ನು ಪರಿವರ್ತಿಸಿ, ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ಕರೆತಂದು ಬಹು ದೊಡ್ಡ ಮನುಷ್ಯರಾಗಿಸಿದ್ದಾರೆ. ಈ ಮೂಲಕ ಬಡವರ ಮಕ್ಕಳು ದೇಶದ ಉನ್ನತ ಹುದ್ದೆಗೆ ಹೋಗಲು ಸಾಧ್ಯವಿದೆ ಎಂಬುದನ್ನು ನಿರೂಪಿಸಿದ್ದಾರೆ.

ಅಂತೆಯೇ ತಮ್ಮ ಮಠದಲ್ಲಿ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು ಎಂಬುದು ನಾಡಿಗೆ ಗೊತ್ತಿರುವ ಸಂಗತಿ.

ಅಂದಹಾಗೆ, ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂಧರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿಧ್ಯಾರ್ಥಿಗಳ ನಿವಾಸ, ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತು ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿನಿಂತ ಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದಿದ್ದೂ ಉಂಟು. ಬರಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ದಿನನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗೂ ಗಣ್ಯರ ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿಲ್ಲದ ಕಾರ್ಯ ಪಟ್ಟಿಯೇ ಇರುತ್ತಿತ್ತು.

ಆರಂಭದ ದಿನಗಳಲ್ಲಿ ‘ಶ್ರೀಗಳು ಇವನ್ನೆಲ್ಲ ನಿಭಾಯಿಸಲು ಸಾಧ್ಯವಿಲ್ಲ’ ಎಂಬ ಆಡು ನುಡಿಗಳೂ ಕೇಳಿ ಬಂದಿದ್ದವು. ಇದ್ಯಾವುದಕ್ಕೂ ಧೃತಿಗೆಡದ ಶ್ರೀಗಳು ಪೂಜ್ಯ ಲಿಂಗೈಕ್ಯ ಶ್ರೀ ಅಟವೀ ಸ್ವಾಮಿಗಳ ಹಾಗು ಲಿಂಗೈಕ್ಯ ಶ್ರೀ ಉದ್ಧಾನ ಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸಿದ್ದು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಐತಿಹಾಸಿಕ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಿದರು.

ಇನ್ನು ಶ್ರೀಗಳು ಶಿಕ್ಷಣ ಮತ್ತು ತರಬೇತಿಗಾಗಿ ಒಟ್ಟು 132 ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿದರು.

ನರ್ಸರಿಯಿಂದ ಎಂಜಿನಿಯರಿಂಗ್, ವಿಜ್ಞಾನ, ಕಲೆ ಮತ್ತು ನಿರ್ವಹಣೆ ಜೊತೆಗೆ ವೃತ್ತಿಪರ ತರಬೇತಿಯೂ ಸಹ ಇವೆ. ಅವರು ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಸೈ ಎನಿಸಿಕೊಂಡರು. ಅಲ್ಲದೆ ಶ್ರೀ ಮಠವು 10000 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದೆ. 5 ವಯಸ್ಸಿನಿಂದ 16 ವರ್ಷ ವಯಸ್ಸಿನ ಯಾವುದೇ ಹಂತದಲ್ಲಿ ಮತ್ತು ಉಚಿತ ಆಹಾರ, ಶಿಕ್ಷಣ ಮತ್ತು ಆಶ್ರಯ (ತ್ರಿವಿಧ ದಾಸೋಹ) ಅನ್ನು ಒದಗಿಸಿ, ಎಲ್ಲ ಧರ್ಮ, ಜಾತಿ ನೋಡದೆ ಎಲ್ಲಾ ಮಕ್ಕಳಿಗೆ ಉಚಿತವಾಗಿ ತೆರೆದಿರುತ್ತದೆ.

ಶ್ರೀ ಮಠದ ಯಾತ್ರಾರ್ಥಿಗಳು ಮತ್ತು ಸಂದರ್ಶಕರಿಗೆ ಕೂಡಾ ಉಚಿತ ಊಟದ ವ್ಯವಸ್ಥೆ ಇದೆ. ಹೀಗೆ ಶಿಕ್ಷಣ, ದಾಸೋಹ ಮತ್ತು ಸಮಾಜಿಕ ಕೆಲಸಗಳಲ್ಲಿ ಬದುಕಿನುದ್ದಕ್ಕೂ ತೊಡಗಿಸಿಕೊಂಡು ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸುವ ಕೆಲಸ ನಿತ್ಯ ನಿರಂತರವಾಗಿ ಮಾಡಿದರು. ಹೀಗಾಗಿಯೇ ಇವರನ್ನು ನಡೆದಾಡುವ ದೇವರು, ಶರಣರು ಎಂದು ಜನಸಾಮಾನ್ಯರು ಹೆಮ್ಮೆಯಿಂದ ಕರೆಯುತ್ತಾರೆ.

ಶ್ರೀಗಳಿಗೆ ಸಂದ ಪ್ರಶಸ್ತಿಗಳು: ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ 1965ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಪೂಜ್ಯ ಸ್ವಾಮೀಜಿಯವರ 100ನೆ ವರ್ಷದ ಹುಟ್ಟುಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ. 2015ರಲ್ಲಿ ಭಾರತ ಸರ್ಕಾರ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಪ್ರಾತಃಸ್ಮರಣೀಯ ಸೇವಾ ಕಾರ್ಯ:

1941ರಲ್ಲಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ ಶ್ರೀಗಳು, ಶ್ರೀ ಸಿದ್ಧಗಂಗಾ ಮಠದ ಸ್ವರೂಪ ಆಮೂಲಾಗ್ರವಾಗಿ ಬದಲಾವಣೆ ಮಾಡಿ, ಅಭಿವೃದ್ಧಿ ಪಥದಲ್ಲಿ ಸಾಗಿಸಿ, ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳ ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಧೀಮಂತ ಸಂತ, ಆಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅನನ್ಯ ಸೇವೆ ಸಲ್ಲಿಸುತ್ತಾ ಬಂದಿರುವ ಸಿದ್ದಗಂಗೆಯ ಸಿದ್ದಿಪುರುಷರು ಪೂಜ್ಯ ಸ್ವಾಮೀಜಿಯವರ ನಿಸ್ವಾರ್ಥ ಸೇವಾ ಕಾರ್ಯಗಳಿಗೆ ದೇಶದ ಜನತೆಗೆ ಇಂದಿಗೂ ಎಂದೆಂದಿಗೂ ಪ್ರಾತಃ ಸ್ಮರಣೀಯರಾಗಿದ್ದಾರೆ.

ಭಕ್ತಿಯ ನಮನಗಳು :

ಸದ್ದು ಗದ್ದಲವಿರದ ಸಾಧನೆಯಿಲ್ಲಿ ಗದ್ದುಗೆಯೇರಿ, ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿಯ ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿ, ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ. ನೋಡಾ ಎನ್ನುವಂತೆ ಬದುಕಿ, ಸರ್ವ ಜನಾಂಗದವರ ಮೆಚ್ಚುಗೆಗೆ ಪಾತ್ರರಾಗಿ, ನಮ್ಮೆಲ್ಲರ ಸ್ಪೂರ್ತಿಯ ಚೇತನರ ದಿವ್ಯ ಅಂತರಾತ್ಮಕ್ಕೆ ಭಕ್ತಿಯ ಶರಣಾರ್ಥಿಯ ನಮನಗಳು ಸಲ್ಲಿಸುತ್ತೇವೆ.

119ನೇ ವರ್ಷದ ಜಯಂತೋತ್ಸವ:

ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳು ತುಮಕೂರಿನ ಸಿದ್ದಗಂಗಾ ಮಠದ ನಡೆದಾಡುವ ದೇವರು ಎಂದು ಪ್ರಸಿದ್ಧರಾಗಿದ್ದ ತ್ರಿವಿಧ ದಾಸೋಹಿ. 130ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಆಶ್ರಯ ನೀಡಿದ ಅವರು, ಮಠದಲ್ಲಿ ಜಾತಿ-ಮತ ಬೇಧವಿಲ್ಲದೆ ಮಕ್ಕಳಿಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣ ಕಲ್ಪಿಸಿದ್ದ ಶ್ರೇಷ್ಠ ಸಂತರು, ಲಿಂಗಾಯತ ಧರ್ಮದ ಆಧ್ಯಾತ್ಮಿಕ ಗುರುಗಳಾಗಿ ಇಂದಿನ ಸಮಾಜಕ್ಕೆ ಪ್ರೇರಣಾದಾಯಕರಾಗಿದ್ದಾರೆ.

119ನೇ ವರ್ಷದ  ಜಯಂತೋತ್ಸವ ದಿನಾಚರಣೆ ಕಾರ್ಯಕ್ರಮವು ನಾಡಿನಾದ್ಯಂತ ಅತ್ಯಂತ ಭಕ್ತಿ ಭಾವದಿಂದ ಆಚರಣೆ ಮಾಡಲಾಗುತ್ತದೆ.

ಅಕ್ಷರ, ಆಶ್ರಯ ನೀಡಿದ ಗುರುವನ್ನು ಸ್ಮರಿಸುವ, ಅನೇಕ ಬಡ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ತೋರಿದ ಸಂತನಿಗೆ ಭಕ್ತಿ ಪೂರ್ವಕ ನಮನಗಳು ಸಲ್ಲಿಸೋಣ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
1 Comment

Leave a Reply

Your email address will not be published. Required fields are marked *