ಹಳ್ಳಿ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ: ಭಾಲ್ಕಿ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಔರಾದ :

ಹಳ್ಳಿ ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂಬ ದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀಗಳಾದ ಗುರುಬಸವ ಪಟ್ಟದ್ದೇವರು ಹೇಳಿದರು.

ತಾಲೂಕಿನ ಅನುಭವ ಮಂಟಪ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿರುವ ಅನುಭವ ಮಂಟಪ ಶಾಲೆ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸುತ್ತಿರುವುದು ಶ್ಲಾಘನೀಯ ಎಂದರು.

ಅಲ್ಲದೇ ಸಿದ್ದರಾಮೇಶ್ವರ ಪಿಯುಸಿ ಕಾಲೇಜು ಕಲ್ಯಾಣ ಕರ್ನಾಟಕ ಭಾಗದಲ್ಲೇ ಮಾದರಿ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದರು.

ಅನುಭವ ಮಂಟಪದ ಭೂಮಿ ಪೂಜೆಗೆ ಶಾಸಕ ಪ್ರಭು ಚವ್ಹಾಣ ಅವರು ಸಲ್ಲಿಸಿದ ಶ್ರಮವನ್ನು ಅವರು ಸ್ಮರಿಸಿದರು. ಬೀದರ ರಂಗಮಂದಿರಕ್ಕೆ ಡಾ. ಚನ್ನಬಸವ ಪಟ್ಟದ್ದೇವರ ಹೆಸರನ್ನು ನಾಮಕರಣ ಮಾಡಲು ನೀಡಿದ ಕೊಡುಗೆಯನ್ನೂ ಪ್ರಶಂಸಿಸಿದರು. ಒಂದು ಪೆನ್ನು, ಒಬ್ಬ ಶಿಕ್ಷಕ ಮತ್ತು ಒಂದು ನೋಟ್‌ಬುಕ್ ಸೇರಿಕೊಂಡರೆ ಇಡೀ ಪ್ರಪಂಚವನ್ನೇ ಗೆಲ್ಲುವ ಶಕ್ತಿ ಶಿಕ್ಷಣಕ್ಕಿದೆ ಎಂದರು.

ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರಭು ಚವ್ಹಾಣ, ಶಿಕ್ಷಣಕ್ಕೆ ಅಪಾರ ಶಕ್ತಿ ಇದೆ ಎಂದು ಹೇಳಿದರು. ಶ್ರೀಗಳ ಆಶ್ರಯದಲ್ಲಿ ಸುಮಾರು 25 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಡಾ.ಬಸವಲಿಂಗ ಪಟ್ಟದ್ದೇವರ ಶಿಕ್ಷಣ ಪ್ರಜ್ಞೆಯಿಂದ ಬಡ ಹಾಗೂ ಅನಾಥ ಮಕ್ಕಳು ಉನ್ನತ ಹುದ್ದೆಗಳಿಗೆ ತಲುಪುತ್ತಿದ್ದಾರೆ ಎಂದರು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಿಂದೆ ಸಹಕಾರ ನೀಡಿದ್ದೇನೆ, ಮುಂದೆಯೂ ನೀಡುತ್ತೇನೆ ಎಂದು ಭರವಸೆ ನೀಡಿದ ಅವರು, ಡಾ. ಬಸವಲಿಂಗ ಪಟ್ಟದ್ದೇವರು ನನ್ನ ದೇವರು. ಅವರ ಎಲ್ಲ ಮಾತುಗಳು ನನಗೆ ಶ್ರೀರಕ್ಷೆಯಾಗಿದೆ ಎಂದರು. ಮಕ್ಕಳ ಮುಂದೆ ಪಾಲಕರು ಟಿವಿ ನೋಡುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧ‌ರ ಕೋಸಂಬೆ, ತಹಸೀಲ್ದಾರ ಮಹೇಶ ಪಾಟೀಲ, ತಾಪಂ ಇಒ ಕಿರಣ್ ಪಾಟೀಲ, ಆಡಳಿತಾಧಿಕಾರಿ ಮೋಹನರೆಡ್ಡಿ, ತಾಪಂ ಎಡಿ ಶಿವಕುಮಾರ ಘಾಟೆ, ರಾಮಶೆಟ್ಟಿ ಪನ್ನಾಳೆ, ಶಶಿಕಾಂತ ಬಿಡುವೆ, ಡಾ. ಸಂಜೀವಕುಮಾರ ಜುಮ್ಮಾ, ಸೂರ್ಯಕಾಂತ ಅಲಮಾಜೆ, ಜ್ಯೋತಿ ಅಲಮಾಜೆ, ಶಿವಾನಂದ ಮೊಕ್ತೆದಾರ, ಗುಂಡಪ್ಪ ಬದಲ್ಲೆ, ಗುರುಪ್ರೀತ್ ಕೌರ್ ಸೇರಿದಂತೆ ಅನೇಕರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *