ಲಿಂಗಾಯತರು ಏಕತಾ ಸಮಾವೇಶವನ್ನು ಬಹಿಷ್ಕರಿಸಿ, ಅಭಿಯಾನವನ್ನು ಬೆಂಬಲಿಸಿದರು
ಬೆಂಗಳೂರು

ಎಲ್ಲರ ನಿರೀಕ್ಷೆ ಮೀರಿ ಯಶಸ್ವಿಯಾದ ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ತಮ್ಮ ಅನುಭವವನ್ನು ಬಸವ ಮೀಡಿಯಾದ ಎಂ ಎ ಅರುಣ್ ಅವರ ಜೊತೆ ಹಂಚಿಕೊಂಡಿದ್ದಾರೆ.
1) ಬಸವ ಸಂಸ್ಕೃತಿ ಅಭಿಯಾನ ಶುರುವಾಗಿದ್ದು ಹೇಗೆ?
ಕಳೆದ ಡಿಸೆಂಬರ್ ತಿಂಗಳಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಹೊಸದುರ್ಗ ಘಟಕವನ್ನು ಉದ್ಘಾಟಿಸಲು ಸಾಣೇಹಳ್ಳಿ ಶ್ರೀಗಳು ಬಂದಿದ್ದರು. ಅಲ್ಲಿ ಅವರು ‘ಮತ್ತೆ ಕಲ್ಯಾಣ’ ಮತ್ತೆ ಮಾಡೋಣ ಎಂದು ಹೇಳಿದರು. ಆಗ ನಾವು ಆ ರೀತಿಯ ಅಭಿಯಾನವನ್ನು ಎಲ್ಲಾ ಪೂಜ್ಯರ ನೇತೃತ್ವದಲ್ಲಿ, ಲಿಂಗಾಯತರ ಮಠಾಧೀಶರ ಒಕ್ಕೊಟದ ಮೂಲಕ ಮಾಡಿದರೆ ಒಳ್ಳೆಯದೆಂದು ಸಲಹೆ ನೀಡಿದೆವು. ಇದಕ್ಕೆ ಎಲ್ಲರಿಂದ ಒಪ್ಪಿಗೆ ದೊರೆತು ಬಸವ ಸಂಸ್ಕೃತಿ ಅಭಿಯಾನ ಶುರುವಾಯಿತು.
2) ಅಭಿಯಾನ ನಿರೀಕ್ಷಿಸಿದ ಮಟ್ಟದಲ್ಲಿ ನಡೆಯಿತೇ?
ಅಭಿಯಾನ ಎಲ್ಲರ ನಿರೀಕ್ಷೇ ಮೀರಿ ನಡೆಯಿತು.
ಬಹಳ ಜಿಲ್ಲೆಗಳಲ್ಲಿ ಆಶ್ಚರ್ಯವಾಗುವಷ್ಟು ಜನ ಸೇರಿದ್ದರು. ರಾಜಕೀಯದ ರ್ಯಾಲಿಗಳ ತರಹ ಜನ ತರಲು ಎಲ್ಲೂ ಬಸ್, ಜೀಪ್, ಲಾರಿಗಳನ್ನು ಕಳಿಸಿರಲಿಲ್ಲ. ದುಡ್ಡಿಲ್ಲದೆ, ಬಸವಣ್ಣನವರ ಮೇಲಿನ ಭಕ್ತಿ, ಅಭಿಮಾನದಿಂದ ಜನ ತಾವಾಗಿಯೇ ಬಂದರು. ಬಾಗೇವಾಡಿಯಲ್ಲಿ 2,500 ಜನ ಬರುತ್ತಾರೆ ಎಂದು ಕೆಲವರ ನಿರೀಕ್ಷೆಯಿತ್ತು. ಆದರೆ ಮೊದಲ ಗಂಟೆಯಲ್ಲಿಯೇ 10,000 ಜನ ಬಂದರು. 21,000 ಜನ ಪ್ರಸಾದ ಮಾಡಿದರು.

ಕೆಲವು ಕಡೆ ಸಾಧಾರಣ ಪ್ರತಿಕ್ರಿಯೆ ಬರಬಹುದೆಂಬ ನಿರೀಕ್ಷೆಯಿತ್ತು. ಅಲ್ಲೂ ಕೂಡ ಸಾವಿರಾರು ಜನ ಸೇರಿದರು.
ಎಷ್ಟು ಶಿಸ್ತಿನಿಂದ ನಮ್ಮ ಜನ ವರ್ತಿಸಿದರು. ಎಲ್ಲೂ ಯಾರಿಗೂ ತೊಂದರೆ ಕೊಡಲಿಲ್ಲ. ಆಸಕ್ತಿ, ತಾಳ್ಮೆಯಿಂದ ಉಪನ್ಯಾಸ ಕೇಳಿದರು, ಸಂವಾದದಲ್ಲಿ ಎಂತೆಂತ ಪ್ರಶ್ನೆಗಳು ಬಂದವು. ಇದೆಲ್ಲಾ ನಮಗೂ ಹೊಸ ಅನುಭವ, ಪಾಠವಾಯಿತು.
ಬಹಳ ಜಿಲ್ಲೆಗಳಲ್ಲಿ ಆಶ್ಚರ್ಯವಾಗುವಷ್ಟು ಜನ ಸೇರಿದ್ದರು. ಎಷ್ಟು ಶಿಸ್ತಿನಿಂದ ನಮ್ಮ ಜನ ವರ್ತಿಸಿದರು. ಎಲ್ಲೂ
ಯಾರಿಗೂ ತೊಂದರೆ ಕೊಡಲಿಲ್ಲ.
3) 2017-18 ಲಿಂಗಾಯತ ಚಳುವಳಿ ರ್ಯಾಲಿಗಳಿಗೂ ಈಗಿನ ಅಭಿಯಾನಕ್ಕೂ ಏನು ವ್ಯತ್ಯಾಸ ನೋಡುತ್ತಿದ್ದೀರಿ?
2017-18ರ ರ್ಯಾಲಿಗಳನ್ನು ಆರೆಸ್ಸೆಸ್, ಬಿಜೆಪಿ ರಾಜಕಾರಣಿಗಳು ಪಂಚಾಚಾರ್ಯರು, ವೀರಶೈವ ಮಹಾಸಭಾದವರು ಉಗ್ರವಾಗಿ ವಿರೋಧಿಸಿದ್ದರು.
ಈ ಬಾರಿ ಒಂದೆರಡು ಸಣ್ಣ ಘಟನೆ ಬಿಟ್ಟರೆ ಎಲ್ಲೂ ದೊಡ್ಡ ವಿರೋಧ ಕಂಡು ಬರಲಿಲ್ಲ. ವೀರಶೈವ ಮಹಾಸಭೆಯವರು ಈಗ ಈಗ ಬಹಳ ಬದಲಾಗಿದ್ದಾರೆ. ಡಿಸೆಂಬರ್ 2023ರಲ್ಲಿ ಲಿಂಗಾಯತರು ಹಿಂದೂಗಳಲ್ಲ ಎಂಬ ಐತಿಹಾಸಿಕ ನಿರ್ಣಯ ತೆಗೆದುಕೊಂಡು ತಮ್ಮ ನೂರು ವರ್ಷಕ್ಕಿಂತಲೂ ಹಳೆಯ ನಿಲುವನ್ನು ಬದಲಾಯಿಸಿದರು. ಅದರಿಂದ ಅಭಿಯಾನಕ್ಕೆ ಬಹಳ ಸಹಾಯವಾಗಿದೆ. ಬಹಳಷ್ಟು ಜಿಲ್ಲೆಗಳಲ್ಲಿ ವೀರಶೈವ ಮಹಾಸಭಾದವರು ತನು-ಮನ-ಧನದ ಜೊತೆ ನೇರವಾಗಿ ಭಾಗವಹಿಸಿದ್ದಾರೆ.
2017-18ರ ಚಳುವಳಿಗೆ ಬಂದಿದ್ದ ಉಗ್ರ ವಿರೋಧ ಈ ಬಾರಿ ಕಾಣಿಸಲಿಲ್ಲ…. ವೀರಶೈವ ಮಹಾಸಭೆಯವರು ಬದಲಾಗಿದ್ದಾರೆ.
4) ಹಿಂದಿನಂತೆ ವಿರೋಧ ಈ ಬಾರಿ ಯಾಕೆ ಕಾಣಿಸಲಿಲ್ಲ?
ವಿರೋಧ ಮಾಡಿದವರು ಚುನಾವಣೆಯಲ್ಲಿ ಸೋಲಿನ ರುಚಿ ನೋಡಿದ್ದಾರೆ. ಜೋರಾಗಿ ವಿರೋಧಿಸಿದರೆ ಅದು ತಿರುಗುಬಾಣವಾಗುತ್ತದೆ ಎಂದು ಅರಿವಾಗಿದೆ. ಆದರೂ ಆ ಪಕ್ಷದಲ್ಲಿರೋ ಕೆಲವು ಲಿಂಗಾಯತ ನಾಯಕರಿಗೆ ಈ ಸತ್ಯ ಇನ್ನೂ ಅರಿವಾಗಿಲ್ಲ. ಆ ಕಾಲವೂ ಬರುತ್ತದೆ. ಆ ಪಕ್ಷ ಒಂದು ಬಾರಿಯೂ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ ಎನ್ನುವುದು ನೆನಪಿರಲಿ.
ಕೆಲವು ರಾಜಕಾರಣಿಗಳು, ವೀರಶೈವ ಮಹಾಸಭಾದ ರಾಜ್ಯಮಟ್ಟದ ನಾಯಕರು ದಾರಿ ತಪ್ಪಿಸಲು ಪ್ರಯತ್ನಿಸಿದರೂ, ಅದು ಯಶಸ್ವಿಯಾಗಲಿಲ್ಲ. ಲಕ್ಷಾಂತರ ಜನ ಸೇರಿಸಿ ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ಮಾಡ್ತೀವಿ ಅಂತ ಹೊರಟರು. ಅದರಲ್ಲಿ ಕೇವಲ 5000-6000 ಜನ ಬಂದರು. ಖುರ್ಚಿಗಳು ಖಾಲಿ ಖಾಲಿ ಇದ್ದವು. ವೇದಿಕೆ ಮೇಲೆ ಅವರವರಿಗೆಯೇ ಜಗಳವಾಯಿತು.
ಅಲ್ಲಿದ್ದ ಇಬ್ಬರೂ ಲಿಂಗಾಯತ ಮಾಜಿ ಮುಖ್ಯಮಂತ್ರಿಗಳಿಗೆ ಸಮುದಾಯಕ್ಕೆ ಅವರ ಕೊಡುಗೆ ಏನು ಅಂತ ಪ್ರಶ್ನೆ ಕೇಳಬೇಕು. ಅವರಲ್ಲಿ ಒಬ್ಬರು ರೇಣುಕಾ ಜಯಂತಿ ಬೆಂಬಲಿಸಿ ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸಿದರು.
ಲಿಂಗಾಯತರು ಏಕತಾ ಸಮಾವೇಶವನ್ನು ಹೇಗೆ ಬಹಿಷ್ಕರಿಸಿ, ಅಭಿಯಾನವನ್ನು ಹೇಗೆ ಬೆಂಬಲಿಸಿದರು ಅನ್ನುವುದನ್ನೂ ಗಮನಿಸಬೇಕು. ಅವರ ವೈಫಲ್ಯ ನಮ್ಮ ಸಾಫಲ್ಯವಾಯಿತು. ಅಭಿಯಾನ ದಿನದಿಂದ ದಿನಕ್ಕೆ ಶಕ್ತಿ ತುಂಬಿಕೊಂಡು ಬೆಳೆಯಿತು.
ಜೋರಾಗಿ ವಿರೋಧಿಸಿದರೆ ಅದು ತಿರುಗುಬಾಣವಾಗುತ್ತದೆ ಎಂದು ಅರಿವಾಗಿದೆ.
5) ಅಭಿಯಾನಕ್ಕೆ ಬೆಂಬಲ ಬೆಳೆದಿದ್ದು ಹೇಗೆ?
ಹಿಂದೆ ಅಂತರ ಕಾಯ್ದುಕೊಂಡಿದ್ದ ಲಿಂಗಾಯತ ಮಠಾಧೀಶರೂ ಮುಂದೆ ಬರುತ್ತಿದ್ದಾರೆ. 2017-18ರ ರ್ಯಾಲಿಗಳಲ್ಲಿ ಸುಮಾರು ನೂರರಷ್ಟು ವಿರಕ್ತ ಮಠಾಧೀಶರು ಭಾಗವಹಿಸಿದ್ದರು. ಅಭಿಯಾನದಲ್ಲಿ 400ಕ್ಕೂ ಹೆಚ್ಚು ಪೂಜ್ಯರು ಭಾಗವಹಿಸಿದರು.
ಆಗ ಕೆಲವು ಬಸವ ಸಂಘಟನೆಗಳು ಕೈ ಜೋಡಿಸಲಿಲ್ಲ. ಈಗ ಎಲ್ಲಾ ಸಂಘಟನೆಗಳು ಒಂದಾಗಿ ಅಭಿಯಾನಕ್ಕೆ ದುಡಿದವು.

ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಶರಣ ಸಾಹಿತ್ಯ ಪರಿಷತ್, ವೀರಶೈವ ಮಹಾಸಭಾ, ಬಸವ ಸಮಿತಿ, ಬಸವ ಕೇಂದ್ರ, ಜಿಲ್ಲಾ ಮಟ್ಟದಲ್ಲಿ 50-60 ಸಂಘಟನೆಗಳು ಒಂದೇ ಸಂಘಟನೆಯಂತೆ ದುಡಿದವು. 2017-18ರ ಚಳುವಳಿಯಲ್ಲಿ ಮತ್ತು ಅಭಿಯಾನದಲ್ಲಿ ರಾಷ್ಟ್ರೀಯ ಬಸವದಳದ ಪಾತ್ರ ಮಹತ್ವದ್ದು.
ಈ ಒಗ್ಗಟ್ಟು ಮತ್ತು ಸಹಯೋಗ ಮುಂದುವರೆಯಬೇಕು, ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದು ನಮ್ಮ ಮುಂದಿನ ಹೆಜ್ಜೆ.
6) ಅಭಿಯಾನದ ಯಶಸ್ಸಿಗೆ ಕಾರಣವೇನು?
ಲಿಂಗಾಯತ ಸಮಾಜದಲ್ಲಿ ಬಹಳ ಬದಲಾವಣೆಯಾಗಿದೆ. 2017-18ರಲ್ಲಿ ನಾವು ಹೇಳುತ್ತಿದ್ದ ವಿಷಯ ಹೊಸದಾಗಿತ್ತು. ನಮಗೆ ಸ್ಪಷ್ಟತೆಯಿದ್ದರೂ ಜನರಿಗೆ ಅರ್ಥವಾಗಲಿಲ್ಲ.
ಆದರೆ ಆಗಿನ ಚಳುವಳಿ, ಬೃಹತ್ ರ್ಯಾಲಿಗಳು ಎಲ್ಲರ ಗಮನ ಸೆಳೆದು ಮುಖ್ಯವಾಗಿ ಬಸವ ಸಂಘಟನೆಗಳಿಗೆ ಸೈದ್ಧಾಂತಿಕ ಸ್ಪಷ್ಟತೆ ನೀಡಿದವು.
ಲಿಂಗಾಯತ ಧರ್ಮದ ಬಗ್ಗೆ, ಬಸವ ತತ್ವದ ಬಗ್ಗೆ, ಅದರಿಂದಾಗುವ ವೈಯಕ್ತಿಕ ಹಾಗೂ ಸಾಮಾಜಿಕ ಉನ್ನತಿಯ ಬಗ್ಗೆ ಇಂದು ಬಹಳ ಜಾಗೃತಿ ಬೆಳೆದಿದೆ, ಮತ್ತು ಬೆಳೆಯುತ್ತಿದೆ. ಸಾಂಸ್ಕೃತಿಕ ನಾಯಕ ಘೋಷಣೆಯಾದ ಮೇಲೆ ಬಸವಣ್ಣನವರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಿದೆ, ಅವರ ಮಹತ್ವ ಅರಿವಾಗಿದೆ.
ಇದು ಅಭಿಯಾನದ ಯಶಸ್ಸಿಗೆ ಬಹು ದೊಡ್ಡ ಕಾರಣ. ಈ ವರ್ಷದ ಬಸವ ಜಯಂತಿ ಎಲ್ಲಾ ಕಡೆ ಎಷ್ಟು ದೊಡ್ಡದಾಗಿ, ಎಷ್ಟು ವೈಭವದಿಂದ ನಡೆದವು.
ಇದು ಆರಂಭವಷ್ಟೇ. ಲಿಂಗಾಯತ ಧರ್ಮಕ್ಕೆ ನಾವು ಮಾಡಬೇಕಾದ ಕೆಲಸ, ಸಾಗಬೇಕಾದ ದಾರಿ ಬಹಳಷ್ಟಿದೆ.
2017-18ರಲ್ಲಿ ನಾವು ಹೇಳುತ್ತಿದ್ದ ವಿಷಯ ಹೊಸದಾಗಿತ್ತು. ಇಂದು ಬಹಳ ಜಾಗೃತಿ ಬೆಳೆದಿದೆ.
7) ಲಿಂಗಾಯತ ಚಳುವಳಿ ರಾಜಕೀಯಕ್ಕೆ, ಧರ್ಮ ಒಡೆಯಲು ಬಳಕೆಯಾಯಿತು ಎಂದು ಹೇಳುತ್ತಾರಲ್ಲ…
ಬಸವ ಸಂಸ್ಕೃತಿ ಅಭಿಯಾನ ಪಕ್ಷಾತೀತವಾಗಿ ನಡೆದ ಅಭಿಯಾನ. ಇದನ್ನು ಶುರು ಮಾಡಿದವರಿಗೆ, ಇದಕ್ಕೆ ದುಡಿದವರಿಗೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ. ಇದು ನೂರಕ್ಕೆ ನೂರು ಬಸವಣ್ಣನವರ ಅಭಿಯಾನ. ಈ ಸತ್ಯ ಅಭಿಯಾನಕ್ಕೆ ದುಡಿದಿರುವ ಸಾವಿರಾರು ಕಾರ್ಯಕರ್ತರಿಗೆ ಗೊತ್ತು.
ಇದು ರಾಜಕೀಯ ಉದ್ದೇಶಕ್ಕಾಗಿಯೇ ನಡೆದ ಚಳುವಳಿ ಎಂದು ನಮ್ಮ ವಿರೋಧಿಗಳು 2017-18ರಲ್ಲಿ ಬಿಂಬಿಸಿದ್ದು ದೊಡ್ಡ ಸಮಸ್ಯೆಯಾಯಿತು. ವಿರೋಧ ಪಕ್ಷದಲ್ಲಿದ್ದ ಲಿಂಗಾಯತ ನಾಯಕರೇ ದಾರಿ ತಪ್ಪಿಸಿದರು. ಇಂದೂ ಕೂಡ ಅದೇ ಪಕ್ಷದ ನಾಯಕರು ಅದೇ ಪ್ರಯತ್ನ ಮಾಡುತ್ತಿದ್ದಾರೆ. ಅದೇ ಸುಳ್ಳು ಹೇಳುತ್ತಿದ್ದಾರೆ. ಆದರೆ ಅದು ಹಿಂದಿನಂತೆ ಜನರಿಗೆ ಮುಟ್ಟುತ್ತಿಲ್ಲ.
ಧರ್ಮ ಒಡೆಯುವುದು ಎಂದರೆ ಯಾವ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ. ಧರ್ಮ ಅಂದರೆ ಕೆಲವರು ಹಿಂದೂ ಎನ್ನುತ್ತಾರೆ ಕೆಲವರು ವೀರಶೈವ ಎನ್ನುತ್ತಾರೆ. ಈ ಎರಡೂ ಧರ್ಮಗಳಿಗೂ ಲಿಂಗಾಯತರಿಗೂ ಸಂಬಂಧವಿಲ್ಲ.

8)ಅಭಿಯಾನದಿಂದ ಲಿಂಗಾಯತರು ಎದುರಿಸುತ್ತಿರುವ ಸಂಘರ್ಷ ಹೆಚ್ಚಾಗಿದೆಯೇ?
1950ರ ನಂತರ ವಚನಗಳ ಶೋಧನೆ, ಅಧ್ಯಯನ, ಪ್ರಚಾರದಿಂದ ಲಿಂಗಾಯತ ಧರ್ಮದ ಬಗ್ಗೆ, ನಮ್ಮ ನಂಬಿಕೆ, ಆಚರಣೆಗಳ ಬಗ್ಗೆ ಜಾಗೃತಿ ನಿರಂತರವಾಗಿ ಮೂಡುತ್ತಿದೆ.
ನಾವು ಹಿಂದೂಗಳ ವಿರುದ್ದವೂ ಅಲ್ಲ, ವೀರಶೈವರ ವಿರುದ್ದವೂ ಅಲ್ಲ. ವೀರಶೈವ ಹಿಂದೂ ಧರ್ಮದ ಒಂದು ಶೈವ ಶಾಖೆ. ನಾವು ನಮ್ಮ ಧರ್ಮದ ಪರವಾಗಿದ್ದೇವೆ ಹೊರತು, ಯಾರ ವಿರುದ್ಧವಾಗಿಯೂ ಅಲ್ಲ.
ಆದರೂ ಸಂಘರ್ಷಕ್ಕೆ ಬಂದರೆ ನಾವು ತಯಾರಾಗಿದ್ದೇವೆ.
ಕಳೆದ ಎರಡು ಮೂರು ವರ್ಷಗಳಿಂದ ನಮ್ಮ ಸೈದ್ಧಾಂತಿಕ ವಿರೋಧಿಗಳು ಹೊಸ ತಂತ್ರ ಬಳಸುತ್ತಿದ್ದಾರೆ. ಮುಂದೆ ಬಂದು ವಿರೋಧಿಸುವುದಕ್ಕಿಂತಲೂ ನಮ್ಮನ್ನು ಆಂತರಿಕವಾಗಿ ಬದಲಾಯಿಸಿ, ಅವರ ಒಳಗೆ ಸೇರಿಸಿಕೊಂಡು ಜೀರ್ಣಿಸಿಕೊಳ್ಳಲು ಸಂಚು ಮಾಡುತ್ತಿದ್ದಾರೆ.
ಅವರ ಪ್ರತಿಯೊಂದು ಸಂಚನ್ನೂ ಸಫಲವಾಗಿ ವಿರೋಧಿಸಿದ್ದೇವೆ. ಅವರು ಮಾಡಿದೆಲ್ಲಾ ಅವರಿಗೇ ತಿರುಗುಬಾಣವಾಗಿದೆ. ಅವರು ಒಂದು ಪುಸ್ತಕ ಮಾಡಿದರೆ, ನಾವು ಎರಡು ಪುಸ್ತಕ ಬಿಡುಗಡೆ ಮಾಡಿದೆವು. ಅವರು ಒಂದು ಸಿನಿಮಾ ಮಾಡಿದರೆ ಅದರಲ್ಲಿ ನಮಗೆ ವಿರೋಧವಾಗಿರುವ ಅಂಶಗಳನ್ನು ತೆಗೆಸಿದೆವು. ಅವರು ಹತ್ತು ವಿಡಿಯೋ ಮಾಡಿದರೆ, ನಾವು 20 ವಿಡಿಯೋ ಮಾಡಿದ್ದೇವೆ.
ಈ ಸಂಚನ್ನು ಅವರು ಕಾಣುವ ರೀತಿಯಲ್ಲಿ, ಕಾಣದ ರೀತಿಯಲ್ಲಿ ಮುಂದುವರೆಸುತ್ತಾರೆ ಎನ್ನುವುದು ಗೊತ್ತು. ನಾವೂ ಜಾಗೃತರಾಗಿಯೇ ಇದ್ದೇವೆ.
ನಾವು ಯಾರ ವಿರುದ್ಧವಾಗಿಯೂ ಅಲ್ಲ. ಆದರೆ ಸಂಘರ್ಷಕ್ಕೆ ಬಂದರೆ ನಾವು ತಯಾರಾಗಿದ್ದೇವೆ.
9) ಅಭಿಯಾನ ಸಮುದಾಯದಲ್ಲಿ ದೊಡ್ಡ ಉತ್ಸಾಹ, ವೇಗ ಸೃಷ್ಟಿಸಿದೆ. ಅದನ್ನು ಉಳಿಸಿಕೊಂಡು, ಮುಂದುವರೆಸುವುದು ಹೇಗೆ?
ಇದು ಈಗ ಎಲ್ಲರ ಮುಂದಿರುವ ದೊಡ್ಡ ಪ್ರಶ್ನೆ. ಈ ಕೆಲಸ ಒಬ್ಬ ವ್ಯಕ್ತಿ, ಸಂಘಟನೆ, ಸ್ವಾಮೀಜಿ, ರಾಜಕಾರಣಿ ಮಾಡಲಾಗುವುದಿಲ್ಲ. ಎಲ್ಲಾ ಸೇರಿ ಇದನ್ನು ಮುಂದುವರೆಸಲು ಸೂಕ್ತವಾದ ಕಾರ್ಯಕ್ರಮಗಳನ್ನು ರೂಪಿಸಬೇಕು.

Good…
ಶರಣು ಶರಣಾರ್ಥಿ
So pleasing to go through.
ಬಸವ ಸಂಸ್ಕ್ರತಿ ಅಭಿಯಾನ ಲಿಂಗಾಯತ ಸಮುದಾಯದಲ್ಲಿ ಒಂದು ದೊಡ್ಡ ಸಂಚಲನ ಮೂಡಿಸಿದೆ, ಗುರು ಬಸವಣ್ಣನವರ ಶರಣರ ಆದರ್ಶಗಳ ಅಡಿ ನೂರಕ್ಕೂ ಹೆಚ್ಚಿನ ಸಮುದಾಯಗಳು ಲಿಂಗಾಯತ ಹೆಸರಿಗೆ ಮಹತ್ವಕೊಟ್ಟು, ವೀರಶೈವ ಅದು ಲಿಂಗಾಯತದ ಒಂದು ಒಳಪಂಗಡಕ್ಕೆ ಮೀಸಲಾಗುತ್ತದೆ, ಸಾಮಾಜಿಕ ಶೈಕ್ಷಣಿಕ ವರದಿಕೂಡ ಮುಂದಿನ ದಿನಗಳಲ್ಲಿ ಲಿಂಗಾಯತ ಸಮುದಾಯದ ಸಂಖೆ ,ವೀರಶೈವರಿಗಿಂತ ನೂರು ಪಟ್ಟು ಹೆಚ್ಚು ಎನ್ನುವುದನ್ನು ನಿರೂಪಿಸಲಿದೆ.
ಲಿಂಗಾಯತ ಅಸ್ಮಿತೆ, ಲಿಂಗಾಯತ ಸ್ವತಂತ್ರ ಅಸ್ತಿತ್ವವನ್ನು ವಿರೋಧಿಸುವ ಸ್ವಾಮಿಗಳಿಗೆ, ರಾಜಕಾರಣಿಗಳಿಗೆ ಪ್ರತಿರೋಧ, ಹಿನ್ನಡೆ ಉಂಟಾಗುವುದು ನಿಶ್ಚಿತ .
ಭಾರತ ದೇಶಾ ಜೈ ಬಸವೇಶ
ಜೈ ಬಸವೇಶ ಭಾರತ ದೇಶ. ನಮ್ಮ ಹೋರಾಟ ಸ್ವತಂತ್ರ ಧರ್ಮ ಆಗುವವರೆಗೆ.
ಜೈ ಲಿಂಗಾಯತ, ಜೈ ಗುರು ಬಸವ….
ಅಭಿಯಾನ ಇನ್ನು ಮುಂದೆ ಪ್ರತಿಯೊಂದು ಜಿಲ್ಲೆ ತಾಲೂಕು ಮತ್ತು ಗ್ರಾಮದಲ್ಲಿ ಬಸವ ಸಂಘಟನೆಗಳ ನೇತೃತ್ವದಲ್ಲಿ ನಡೆಯಬೇಕು. ಮಠಾಧೀಶರು ಮಾರ್ಗದರ್ಶನ ಮಾಡಬೇಕು ಶಾಲೆ ಕಾಲೇಜುಗಳಲ್ಲಿ ಬಸವಾದಿ ಶರಣರ ಕುರಿತು ಸಂವಾದ ವಚನ ಗಾಯನ ವಚನ ಕಂಠಪಾಠ ವಿಶ್ಲೇಷಣೆ ಏರ್ಪಡಿಸಿಸಬೇಕು. ವಚನಾಧಾರಿತ ನಿಜಾಚರಣೆ ಸ್ವಾಮೀಜಿಗಳು ಆಚರಣೆಗೆ ತರಬೇಕು.ಪ್ರತಿಯೊಂದು ಮಠದಲ್ಲಿ ವಚನ ಚಿಂತನ ಮಂಥನ ನಡೆಯಬೇಕು.ಸ್ವಾಮೀಜಿಗಳು ಮಠಾಧೀಶರು ಬಸವಪರ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಬೇಕು .ಇಲ್ಲದಿದ್ದರೆ ಅಭಿಯಾನದ ಯಶಸ್ಸು ವ್ಯರ್ಥವಾಗುತ್ತದೆ ಶರಣುಶರಣಾರ್ಥಿಗಳು.
ಲಿಂಗಾಯತ ಧರ್ಮ ಜಾಗತಿಕವಾಗಿ ಬೆಳೆಯಬೇಕು . ಜಗತ್ತು ನಮ್ಮ ಅಸ್ತಿತ್ವವನ್ನು ಅರಿವಂತಗಬೇಕು. ಅವಾಗ ನಾವು ನಮ್ಮ ಧರ್ಮ ಹಾಗೂ ಸಂಸ್ಕೃತಿ ಬೆಳೆಯುತ್ತದೆ. ಶಿಖ್ಖ ಧರ್ಮವನ್ನು ಅವರು ಜಗತ್ತು ಗುರುತಿಸುವ ಹಾಗೆ ಬೆಳೆಸಿದ್ದಾರೆ. ಹಾಗೆ ನಮ್ಮ ಧರ್ಮವನ್ನು ಬೆಳೆಸಬೇಕು.
ಒಳ್ಳೆಯ ವಿಚಾರ ಹಂಚಿಕೆ ಮಾಡಿದ್ದಕ್ಕೆ ಅನಂತ ಶರಣು.
ಶಿವಾನಂದ್ ಜಾಮದರ್ ಸರ್ ಲಿಂಗಾಯತ ಧರ್ಮದ ಒಂದು ಮಾಹಿತಿ ಕಣಜ ಎಂದರೆ ತಪ್ಪಾಗಲಾರದು..
ಮತ್ತು ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಬಸವ ಮಿಡೀಯಾದ ಕಾರ್ಯ ಬಹಳ ಇದೆ ಅದಕ್ಕೆ ಬಸವ ಮಿಡೀಯಾಕ್ಕೆ ಅಭಿನಂಧನೆಗಳು
ಅಭಿಯಾನವನ್ನು ಆಯೋಜಿಸಿದ ಮಾನ್ಯ ಶರಣ ಶಿವಾನಂದ ಜಮಾದಾರರ ಪ್ರತಿಭಾ ಸಮರ್ಥಕ್ಕೆ ಇದೊಂದು ರತ್ನ. ಮಾನ್ಯರ ಕೊಡುಗೆ ಸಮಾಜಕ್ಕೆ ಧರ್ಮಕ್ಕೆ ಮರೆಯಲಾಗದ ಒಂದು ಮೈಲಿಗಲ್ಲು. ಶತಮಾನ ಗಳ ವರೆಗೆ ಆಯುಷವಂತರು ಗಳಾಗಿ ಬದುಕಲಿ. ಜೈ ಬಸವೇಶ. ಜೈ ಲಿಂಗಾಯತ ಧರ್ಮ.