‘ಇಷ್ಟೊಂದು ಪೂಜ್ಯರ ಮಿಲನವೇ ಒಂದು ಇತಿಹಾಸ ಎಂದು ಹೇಳಬಹುದು.’
ಧಾರವಾಡ
ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿರುವ ಬಸವ ಸಂಸ್ಕೃತಿ ಅಭಿಯಾನದ ಮುನ್ನವಾಗಿ ಇಂದು ಆಲೂರು ವೆಂಕಟರಾವ್ ಸಭಾಭವನದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಲಿಂಗಾಯತ ಮಠಾಧೀಶರ ಬೃಹತ್ ಸಮಾವೇಶ ನಡೆಯಿತು.
ಸ್ವಾಗತ ನುಡಿಗಳನ್ನಾಡಿದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ವಿರಕ್ತಮಠ ಹಂದಿಗುಂದ ಇವರು “ಮಠಾಧೀಶರ ಸಮ್ಮುಖದಲ್ಲಿ ನಡೆಯಲಿರುವ ಈ ಅಭಿಯಾನಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಿದೆ. ಸ್ವಾಮಿಗಳಿಗೆ ಯಾವತ್ತಿದ್ದರೂ ಸಮಾಜವೇ ಮುಖ್ಯ, ನಾವು ಸಮಾಜಮುಖಿಯಾಗಿ ದುಡಿದಾಗ ಮಾತ್ರ ಸಮಾಜವು ನಮ್ಮ ಆಲೋಚನೆಗಳನ್ನು ಸ್ವಾಗತಿಸುತ್ತದೆ, ನಮ್ಮ ಧರ್ಮದ ಬೆಳಕನ್ನು ಎಲ್ಲೆಡೆ ಸೂಸಲು ಇದೊಂದು ಒಳ್ಳೆಯ ಅವಕಾಶ ಅದಕ್ಕಾಗಿ ನಾವೆಲ್ಲಾ ಒಟ್ಟಾಗಿ ದುಡಿಯಬೇಕಿದೆ,” ಎಂದರು.

ಸಮಾವೇಶ ಉದ್ಘಾಟಿಸಿ ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಮಾತೆ ಗಂಗಾದೇವಿ ಮಾತನಾಡಿ, “ಇಂದು ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳವರ ಸ್ಮರಣೋತ್ಸವ ಇದ್ದು ಅವರು ತುಂಬಾ ಬಸವಪರ ಕಾರ್ಯಗಳನ್ನು ಮಾಡಿ ಹೋಗಿದ್ದಾರೆ. ಅವರೊಬ್ಬ ಧೀಮಂತ ದಂಡನಾಯಕರಾಗಿದ್ದರು. ಅವರ ಕಾಲದಲ್ಲಿಯೇ ನಿಜವಾದ ಬಸವಧರ್ಮವು ಬೆಳಕಿಗೆ ಬಂದಿತು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ನಡೆಯಬೇಕಿದೆ. ಅವರೇ ನಮಗೆ ಸದಾ ಸ್ಪೂರ್ತಿ, ಅವರನ್ನು ಅನುಸರಿಸಿಕೊಂಡು ಬಸವತತ್ವವನ್ನು ಬೆಳೆಸಲು ನಾವೆಲ್ಲಾ ಪಣತೊಡಬೇಕಾಗಿದೆ” ಎಂದರು.
ಲಿಂಗಾನಂದ ಮಹಾಸ್ವಾಮಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ನಡೆಯಬೇಕಿದೆ.

ದಿಕ್ಸೂಚಿ ನುಡಿಗಳನ್ನಾಡಿದ ಗದಗಿನ ತೋಂಟದಾರ್ಯ ಸಿದ್ಧರಾಮ ಶ್ರೀಗಳು ನಾವೆಲ್ಲಾ ಮಠಾಧೀಶರು ಒಗ್ಗಟ್ಟಾಗಿ, ಒಟ್ಟಾಗಿ ಸೇರಿ ಮಾಡಬೇಕಾದ ಕೆಲಸ ತುಂಬಾ ಇವೆ. ನಾವೆಲ್ಲಾ ನಮ್ಮ ಧರ್ಮದ ಅಸ್ಮಿತೆಯನ್ನು ಕಾಪಾಡಲು ಪಣತೊಡಬೇಕಿದೆ. ಬೇರೆ ಧರ್ಮಗಳಿಂದಾಗುವ ಅನ್ಯಾಯಗಳ ವಿರುದ್ಧ ನಾವು ತಕ್ಕ ಉತ್ತರವನ್ನು ನೀಡಲೇಬೇಕು. ಮಠಾಧೀಶರೆಲ್ಲಾ ಸೇರಿಕೊಂಡು ಏನಾದರೂ ಉತ್ತಮ ಕಾರ್ಯವನ್ನು ಮಾಡಲು ಪಣತೊಟ್ಟು ನಿಂತರೆ ಎಂತಹ ಸಂದರ್ಭವನ್ನೂ ಎದುರಿಸಿಕೊಂಡು ಮುನ್ನುಗ್ಗುವ ಆತ್ಮಸ್ಥೈರ್ಯ ನಮ್ಮಲ್ಲಿದೆ, ಇದರ ಸದ್ಬಳಕೆಯನ್ನು ಪಡೆದುಕೊಂಡು ಈ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ” ಎಂದರು.
ಬೇರೆ ಧರ್ಮಗಳಿಂದಾಗುವ ಅನ್ಯಾಯಗಳ ವಿರುದ್ಧ ನಾವು ತಕ್ಕ ಉತ್ತರವನ್ನು ನೀಡಲೇಬೇಕು.

ಸಾಣೇಹಳ್ಳಿ ಶ್ರೀಗಳು ಮಾತನಾಡಿ, ಮನುಷ್ಯ ಈ ಲೋಕಕ್ಕೆ ಬಂದಿದ್ದು ಕೇವಲ ಉಂಡುಟ್ಟು ಬದುಕಲಿಕ್ಕಾಗಿ ಅಲ್ಲ, ಬದಲಿಗೆ ಆಧ್ಯಾತ್ಮದ ಅನುಭವವನ್ನು ಅನುಭವಿಸಲಿಕ್ಕೆ. ಅಂತಹ ಅನುಭವಗಳನ್ನು ಪಡೆದ ನಾವುಗಳು ಅದನ್ನು ಸಮಾಜಕ್ಕೂ ಹಂಚಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಬಸವ ಸಂಸ್ಕೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಇದನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಮೇಲಿದೆ. ಇದಕ್ಕೆ ನಾವು ತನು-ಮನ-ಧನಗಳನ್ನು ಅರ್ಪಿಸಿ ಕಾರ್ಯೋನ್ಮುಖರಾಗಬೇಕು ಎಂದು ಕರೆಗೊಟ್ಟರು. ಆಯಾ ಜಿಲ್ಲೆಯ ಉಸ್ತುವಾರಿಯನ್ನು ಆಯಾ ಜಿಲ್ಲೆಯ ಸ್ವಾಮಿಗಳು ವಹಿಸಿಕೊಂಡು ಅಭಿಯಾನದ ಸಂಪೂರ್ಣ ಆಗುಹೋಗುಗಳನ್ನು ನಿಭಾಯಿಸುವ ಕಾರ್ಯವಾಗಬೇಕು. ಜೊತೆಗೆ ಕಾರ್ಯಕ್ರಮದಲ್ಲಿ ಯಾವದೇ ರೀತಿಯ ಲೋಪದೋಷಗಳು ಆಗದಂತೆ ನಿಗಾವಹಿಸಬೇಕು. ಕಾರ್ಯಕ್ರಮದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗಮನಹರಿಸಬೇಕು ಎಂದು ಹಲವು ಸೂಚನೆಗಳನ್ನು ನೀಡಿದರು.
ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ.
ಅಷ್ಟೇ ಅಲ್ಲದೇ ನಾವೆಲ್ಲಾ ಬಸವಾನುಯಾಯಿಗಳಾಗಿದ್ದರಿಂದ ನಮ್ಮ ಎಲ್ಲಾ ಮಠಗಳಲ್ಲಿ ಬಸವಣ್ಣನವರಿಗೇ ಮೊದಲ ಆದ್ಯತೆ ಕೊಡಬೇಕು. ನಂತರವೇ ಅಲ್ಲಿನ ಗುರುಗಳಿಗೆ ಅಂದರೆ ಭಾವಚಿತ್ರ, ಜಯಘೋಷ ಇತ್ಯಾದಿಗಳೆಲ್ಲಾ ಮೊದಲು ಬಸವಣ್ಣನವರಿಗೇ ಸಲ್ಲಬೇಕು. ಅಂದಾಗ ಜನಮಾನಸದಲ್ಲಿಯೂ ಕೂಡ ಬಸವಣ್ಣನವರೇ ನಮ್ಮ ಧರ್ಮಗುರು ಎಂದು ಒಪ್ಪೊಕೊಳ್ಳುತ್ತಾರೆ” ಎಂದು ಹೇಳಿದರು.

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ವಿಷಯದ ಕುರಿತು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೆವರು ಮಾತನಾಡಿ, “ಇಷ್ಟೊಂದು ಪೂಜ್ಯರ ಮಿಲನವೇ ಒಂದು ಇತಿಹಾಸ ಎಂದು ಹೇಳಬಹುದು. ಭಾರತದ ಪ್ರಧಾನ ಮಂತ್ರಿ ಬಸವಣ್ಣ ಭಾರತದ ರಾಷ್ಟ್ರೀಯ ನಾಯಕ ಎಂದು ಘೋಷಿಸುವ ಕಾಲ ಬಹಳ ದೂರವಿಲ್ಲ, ಅದಕ್ಕೆ ನಾವೆಲ್ಲಾ ಸೇರಿ ಈ ರೀತಿಯ ಅಭಿಯಾನಗಳನ್ನು ಮಾಡಬೇಕು. ನಾವು ಪದೇ ಪದೇ ಈ ರೀತಿ ಸೇರುವ ಪರಿಪಾಠವನ್ನು ಅಭ್ಯಾಸ ಮಾಡಬೇಕು. ಭಾರತದಲ್ಲಿ ಇಂದಿಗೂ ಸ್ವಾಮಿಗಳು ಎಂದರೆ ಗೌರವ, ಭಕ್ತಿ ಇದೆ. ಇದನ್ನು ನಾವು ಸದುಪಯೋಗ ಪಡಿಸಿಕೊಂಡು ನಾವೆಲ್ಲಾ ವರ್ಷಕ್ಕೆ ಕೇವಲ ತಿಂಗಳಿಂದ ಎರಡು ತಿಂಗಳಗಳ ಕಾಲ ಧರ್ಮಕ್ಕಾಗಿ ಮೀಸಲಿಟ್ಟರೆ ಇದರಿಂದ ಬಸವ ಧರ್ಮ ಬಹಳ ಬೇಗ ವಿಶ್ವವ್ಯಾಪಿಯಾಗಿ ಹರಡಿ ಬಸವಣ್ಣ ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬಹುದು. ನಮ್ಮ ನೂರಾರು ಕಾರ್ಯಗಳನ್ನು ಬದಿಗೊತ್ತಿ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪ್ರತಿಯೊಬ್ಬ ಮಠಾಧೀಶರು ಭಾಗವಹಿಸಬೇಕು. ಇದರಿಂದ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಕೇಂದ್ರವನ್ನು ಎಚ್ಚರಿಸುವ ಕಾರ್ಯ ಆಗುತ್ತದೆ.
ನಮ್ಮ ನೂರಾರು ಕಾರ್ಯಗಳನ್ನು ಬದಿಗೊತ್ತಿ ಪ್ರತಿಯೊಬ್ಬ ಮಠಾಧೀಶರೂ ಭಾಗವಹಿಸಬೇಕು.
ಸಮಾಜಕಾರ್ಯ ಮಾಡಿದಾಗ ಮಾತ್ರ ಲಿಂಗಯ್ಯ ತೃಪ್ತಿಗೊಳ್ಳುತ್ತಾನೆ. ಹನ್ನೆರಡನೇ ಶತಮಾನದ ನಂತರ ಕೆಲವು ಕಾಲ ನಮ್ಮ ಧರ್ಮದ ಬಗ್ಗೆ ನಮಗೆ ನಿಜವಾದ ಅರಿವು ಇರಲಿಲ್ಲ. ಆದರೆ ಫ.ಗು. ಹಳಕಟ್ಟಿಯವರ ಕಠಿಣ ಕಾರ್ಯದಿಂದಾಗಿ ನಮಗೆ ವಚನಸಾಹಿತ್ಯ ದೊರಕಿತು. ಆ ವಚನಸಾಹಿತ್ಯ ಎಂಬ ತಾಯಿ ಹೇಳಿದಳು ಬಸವಣ್ಣನೇ ನಿಮ್ಮ ಅಪ್ಪ, ಗುರು ಎಂದು. ಆವಾಗ ನಾವು ಬಸವಣ್ಣನನ್ನು ಧರ್ಮಗುರು ಎಂದು ತಿಳಿದುಕೊಂಡೆವು. ವೈದಿಕ ಆಚರಣೆಗಳಿಂದ ದೂರ ಉಳಿದು, ನಿಜಾಚರಣೆಯನ್ನು ಆರಂಭಿಸಬೇಕು.

ನಮ್ಮ ಮಠಗಳ ಶಿಕ್ಷಣ ಸಂಸ್ಥೆಗಳಿಂದ ತಂತ್ರಜ್ಞಾನವನ್ನು ಬಳಸಿಕೊಂಡು ಬಸವಣ್ಣನವರ ತತ್ವಗಳನ್ನು ವಿಶ್ವವ್ಯಾಪಿ ಮಾಡುವುದು ಹೇಗೆ ಎಂದು ಯೋಚಿಸಬೇಕು. ನಾವು Modernise ಆಗಬೇಕಿದೆ. ಹಳಿಪೇಟಿ ಚಿಂತಾಮಣಿ ಎಂಬುವರು ಬೀದರ ಭಾಗಕ್ಕೆ ಚಿಂತನೆಗೆ ಬಂದಾಗ ಹೇಳಿದ್ದು, ಮುಂದಿನ ದಿನಗಳಲ್ಲಿ ಬಸವಣ್ಣನೇ ಜಾರಿಗೆ ಬರುತ್ತಾರೆ. ಅದನ್ನು ನೋಡಲು ನಾನಿರ್ತೀನೋ ಇಲ್ವೋ ಗೊತ್ತಿಲ್ಲ. ಆದರೆ ನೀವು ಜಾಗೃತಿಗೊಂಡರೆ ನಿಮ್ಮ ಹೆಸರಿನ ಮೇಲೆ ಬರುತ್ತಾರೆ, ಇಲ್ಲವಾದರೆ ಬೇರೆಯ ಹಣೆಪಟ್ಟಿಯನ್ನು ಹಾಕಿಕೊಂಡು ಬರಬೇಕಾಗುತ್ತದೆ.
ಹಿಂದೆ ಒಂದು ಕಾಲದಲ್ಲಿ ಬಸವಣ್ಣನವರ ಹೆಸರನ್ನೇ ಹೇಳದ ಜನ ಈಗ ಅವರ ಭಾವಚಿತ್ರವನ್ನು ಇಟ್ಟು ತಮ್ಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಮುಂದೆ ಬಸವಣ್ಣನವರೇ ಧರ್ಮಗುರು ಎಂಬ ಕಾಲ ಬಂದೇ ಬರುತ್ತದೆ. ನಾವು ನೋಡದಿದ್ದರೂ ನಮ್ಮ ಮಕ್ಕಳಾದರೂ ನೋಡುತ್ತಾರೆ. ಜಾತಿವಿಡಿದು ಹೋಗದೆ ಲಿಂಗಾಯತರೆಲ್ಲ ಒಂದೇ, ಲಿಂಗಾಯತ ಮಠಾಧೀಶರೆಲ್ಲಾ ಒಂದೇ ಎಂಬ ಆಚರಣೆ ಬರಬೇಕು. ಜಾತಿಗುರುಗಳು ಜಾತಿಗೆ ಮಾತ್ರ ಸೀಮಿತವಾಗಿರಬಾರದು ಬದಲಾಗಿ ಎಲ್ಲರೂ ಒಂದೇ ಎಂಬ ಭಾವ ಬರಬೇಕು. ಎಲ್ಲರೂ ಸೇರಿ ಈ ಬಸವ ಸಂಸ್ಕೃತಿ ಅಭಿಯಾನವನ್ನು “ನ ಭೂತೋ ನ ಭವಿಷ್ಯತೇ” ಎಂಬಂತೆ ಯಶಸ್ವಿಗೊಳಿಸಬೇಕು.
ನಾವೆಲ್ಲಾ ಒಗ್ಗಟ್ಟಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದೇ ಆದರೆ ನಾವು ಕೇಂದ್ರ ಸರ್ಕಾರದ ಬಳಿ ಹೋಗಬೇಕಿಲ್ಲ ಅವರೇ ನಮ್ಮ ಬಳಿಗೆ ಬಂದು ನಿಮ್ಮ ಧರ್ಮವನ್ನು ಸ್ವಂತತ್ರ ಧರ್ಮವೆಂದು ಘೋಷಿಸುತ್ತೇವೆ ಎಂದು ಹೇಳುತ್ತಾರೆ,” ಎಂದು ಹೇಳಿದರು.

ಬಸವಪರ ಸಂಘಟನೆಗಳು ಎಂಬ ವಿಷಯದ ಕುರಿತು ಮಾತನಾಡಿದ ಇಳಕಲ್ಲಿನ ಪೂಜ್ಯ ಶ್ರೀ ಗುರುಮಹಾಂತ ಮಹಾಸ್ವಾಮಿಗಳು “ಬಸವ ಸಂಸ್ಕ್ರತಿ ಅಭಿಯಾನ ಒಂದು ಶುಭೋದಯದ ಕಾಲ.
ರಾಷ್ಟ್ರೀಯ ಬಸವ ದಳ, ಬಸವ ಕೇಂದ್ರ, ಕದಳಿ ವೇದಿಕೆ, ಅಕ್ಕನ ಬಳಗ, ಬಸವ ಬಳಗ ಹೀಗೆ ಹಲವಾರು ರೀತಿಯಲ್ಲಿ ಬಸವಪರ ಸಂಘಟನೆಗಳು ಹುಟ್ಟಿಕೊಂಡಿವೆ. ಎಷ್ಟು ಸಂಘಟನೆಗಳು ಜಾಸ್ತಿಯಾಗುತ್ತವೆಯೋ ಅವುಗಳಿಂದ ಬಸವತತ್ವ ಮನೆ ಮನೆಗೆ ಮುಟ್ಟಿಸಲು ಅವಕಾಶವಾಗುತ್ತದೆ. ಬಸವಪರ ಸಂಘಟನೆಗಳ ಸದಸ್ಯರುಗಳಿಗೆ ನಮ್ಮ ಮಠಗಳ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಭಾಗವಹಿಸಲು ಅವಕಾಶ ಮಾಡಿಕೊಡಬೇಕು.
ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಸಂಘಟನೆಗಳನ್ನು ನಿರ್ಮಿಸಬೇಕು. ಉದಾಹರಣೆಗೆ ವಚನ ಕಂಠಪಾಠ ಸ್ಪರ್ಧಾ ಸಮಿತಿ ಇದು ರಾಜ್ಯಾದ್ಯಂತ ವಚನಗಳನ್ನು ಬಿತ್ತುವಲ್ಲಿ ಸಹಾಯಕವಾಗುತ್ತದೆ. ಹೀಗೆ ಧರ್ಮಸಂಸ್ಕಾರದ ಬಗ್ಗೆ ತಿಳುವಳಿಕೆಯನ್ನು ನೀಡಬೇಕು. ಈ ಸಂಘಟನೆಗಳೇ ಇಂದು ಇಷ್ಟು ಜನ ಸ್ವಾಮೀಜಿಗಳನ್ನು ಒಂದೆಡೆ ಸೇರಿಸಲು ಅವಕಾಶ ಮಾಡಿಕೊಟ್ಟಿದೆ. ಸಂಘಟನೆಗಳಿಗೆ ಶಕ್ತಿಯನ್ನು ತುಂಬುವಂತಹ ಕೆಲಸ ನಾವು ಅಂದರೆ ಜಂಗಮಮೂರ್ತಿಗಳು ಮಾಡಬೇಕಾಗಿದೆ.
ನಮ್ಮ ಧರ್ಮದ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹೋರಾಡಬೇಕಿದೆ.
ಹಿಂದೆ ಧಾರವಾಡದ ಮುರುಘಾಸ್ವಾಮಿಗಳನ್ನು ಒಂದು ಗಣಪತಿ ದೇವಸ್ಥಾನದ ಉದ್ಘಾಟನೆಗೆ ಕರೆದು ಅವರಿಂದಲೇ ಆ ದೇವಾಲಯದ ಉದ್ಘಾಟನೆ ಮಾಡಿ ನಂತರ ಅವರನ್ನೇ ಗರ್ಭಗುಡಿಯೊಳಗೆ ಬಿಡಲಿಲ್ಲ. ಇದರಿಂದ ನಾವು ಲಿಂಗಾಯತರಾದವರು ನಮ್ಮ ಧರ್ಮದ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹೋರಾಡಬೇಕಿದೆ. ಬಸವಣ್ಣನವರು ನಮ್ಮನ್ನು ಮೇಲಕ್ಕೆ ಎತ್ತಿದವರು. ಆದರೆ ಇಂದು ನಾವು ಅಲ್ಲಮಪ್ರಭುಗಳ ಮಾತಿನಂತೆ “ಪಾಯಸವ ಜರಿದು, ಮಧ್ಯವ ಕುಡಿದರೆ ಆರೇನು ಮಾಡುವರು?” ಎಂಬಂತೆ ನಮ್ಮತನವನ್ನು ಬಿಟ್ಟು ಬೇರೊಬ್ಬರ ಬಳಿ ಹೊರಟಿದ್ದೇವೆ. ಈ ಕಾರ್ಯಗಳನ್ನೆಲ್ಲ ಸಂಘಟನೆಗಳು ಮಾಡಬೇಕು. ಧರ್ಮದ ಬೆಳವಣಿಗೆಗೆ ಸಂಘಟನೆಗಳ ಪಾತ್ರ ಬಹು ಮುಖ್ಯ” ಎಂದು ಹೇಳಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮಹತ್ವ ವಿಷಯದ ಕುರಿತು ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬೆಕ್ಕಿನ ಕಲ್ಮಠ, ಶಿವಮೊಗ್ಗ ಇವರು ಮಾತನಾಡಿ, “1918 ರಲ್ಲಿ ಮೇ ತಿಂಗಳಲ್ಲಿ ‘ಟೈಮ್ಸ ಆಫ್ ಇಂಡಿಯಾ’ ಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದ್ದಂತ ಒಂದು ಸಾಲು, “ಬಹಳ ಜನ ಸಮಾಜ ಸುಧಾರಕರು ಬಂದರೂ ಅವರೆಲ್ಲ ಒಂದೊಂದು ಮುಖದಲ್ಲಿ ಸಮಾಜಸೇವೆಯನ್ನು ಮಾಡಿದ್ದಾರೆ. ಆದರೆ ಬಸವಣ್ಣನವರಂತೆ ಸಮಗ್ರತೆಯನ್ನು ಕಾಣಲಿಕ್ಕೆ ಸಾಧ್ಯವಾಗಲಿಲ್ಲ.” ಯಾರು ನಾಯಕ ಎಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಗುರುತಿಸಿ ಅವರನ್ನು ಮೇಲೆತ್ತಿ ಸಮಾಜದ ಮುಖ್ಯ ವೇದಿಕೆಗೆ ತರುವ ವ್ಯಕ್ತಿ ಮಾತ್ರ ನಾಯಕನಾಗಬಲ್ಲ.
ಒಂದು ವ್ಯವಸ್ಥೆಯನ್ನು ಹಾಳು ಮಾಡಲು ಒಂದು ಮೂರ್ಖ ಮನಸ್ಥಿತಿ ಸಾಕು. ಆದರೆ ಅದನ್ನು ಉದ್ಧರಿಸಲು ಒಬ್ಬ ಮಹಾಪುರುಷನೇ ಬರಬೇಕು. ಆ ಮಹಾಪುರುಷನೇ ವಿಶ್ವಗುರು ಬಸವಣ್ಣ. ಕಾಶಿಗೇ ಹೋದರೆ ಮಾತ್ರ ಸ್ವಾಮಿಗಳಾಗಬೇಕೆಂಬ ಕಾಲದಲ್ಲಿ ಅದರಿಂದ ಹೊರಬಂದು ಕಾಶಿಗೆ ಹೋಗದೆಯೇ ಇಲ್ಲೇ ಅಭ್ಯಾಸ ಮಾಡಿ ಸ್ವಾಮಿಗಳಾಗಬೇಕೆಂದು ಬಂದವರಲ್ಲಿ ನಮ್ಮ ತಂಡವೇ ಮೊದಲು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಹರ್ಡೇಕರ್ ಮಂಜಪ್ಪನವರು ಹಾಗೂ ಧಾರವಾಡದ ಮೃತ್ಯುಂಜಯ ಅಪ್ಪಂಗಳು ಬಸವ ಜಯಂತಿಯೆಂದರೆ ಕೇವಲ ಎತ್ತಿನ ಪೂಜೆಯಲ್ಲ, ಅದೊಂದು ಮಹಾಪುರುಷನ ಜಯಂತಿ ಎಂದು ಮೊಟ್ಟಮೊದಲಿಗೆ ತಿಳಿಸಿಕೊಟ್ಟವರು. ಲಿಂಗಾಯತ ಮಠಗಳಿಂದಲೇ ವಿದ್ಯಾನಿಲಯಗಳು ಮತ್ತು ಪ್ರಸಾದನಿಲಯಗಳು ಆರಂಭವಾಗಿದ್ದು. ಅವರಿಂದಲೇ ಹಲವಾರು ಜನ ವಿದ್ಯಾವಂತರಾಗಿದ್ದಾರೆ. ನಾವೆಲ್ಲಾ ಸ್ವಾಮಿಗಳು ವೈಯಕ್ತಿಕವಾಗಿ ಬಲಿಷ್ಠರಿದ್ದೇವೆ. ಆದರೆ ಸಮಷ್ಟಿ ಪ್ರಜ್ಞೆಯ ಅರಿವು ನಮ್ಮಲ್ಲಿ ಕಡಿಮೆಯಿದೆ. ಆದರೆ ಈಗಲಾದರೂ ನಾವು ಎಚ್ಚೆತ್ತುಕೊಂಡು ಒಕ್ಕೂಟದಲ್ಲಿದ್ದುಕೊಂಡು ಮುಂದುವರಿಯಬೇಕಾಗಿದೆ” ಎಂದರು.
ನಾವೆಲ್ಲಾ ಸ್ವಾಮಿಗಳು ವೈಯಕ್ತಿಕವಾಗಿ ಬಲಿಷ್ಠರಿದ್ದೇವೆ. ಆದರೆ ಸಮಷ್ಟಿ ಪ್ರಜ್ಞೆಯ ಅರಿವು ನಮ್ಮಲ್ಲಿ ಕಡಿಮೆಯಿದೆ.
ಪೂಜ್ಯ ಭೋವಿ ಪೀಠದ ಇಮ್ಮಡಿ ಸಿದ್ಧರಾಮ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮಾದಾರ ಸ್ವಾಮೀಜಿ, ಕುಂಚಿಟಿಗ ಪೀಠದ ಶಾಂತವೀರ ಸ್ವಾಮೀಜಿ, ಬೀದರನ ಅಕ್ಕ ಗಂಗಾಂಬಿಕೆ, ನಿಡಸೋಸಿ ಸ್ವಾಮೀಜಿ, ಶರತ್ಚಂದ್ರ ಸ್ವಾಮೀಜಿ, ಪಾಂಡೋಮಟ್ಟಿ ಶ್ರೀಗಳು, ನಿಜಗುಣಾನಂದ ಶ್ರೀಗಳು ಶುಭಾಶಯದ ನುಡಿಗಳನ್ನು ಆಡಿದರು.
ಸೇರಿದ ಪೂಜ್ಯರು ಅಭಿಯಾನದ ಯಶಸ್ಸಿಗೆ ಸಾಧ್ಯವಾದಷ್ಟು ಧನದಾಸೋಹವನ್ನು ಮಾಡಬೇಕೆಂದು ಹೇಳಿದರು.
ಕೊನೆಗೆ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಾದ ಪ್ರತಿಯೊಬ್ಬ ಸ್ವಾಮೀಜಿ ಪ್ರತಿಜ್ಞೆ ಮಾಡಬೇಕೆಂದು, ಗದುಗಿನ ತೋಂಟದಾರ್ಯ ಶ್ರೀಗಳು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು, ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು.
ಅಥಣೀಶ ಪ್ರಭುಚನ್ನಬಸವ ಸ್ವಾಮಿ ವಿರಚಿತ ಅಭಿಯಾನದ ಶಿರ್ಷಿಕೆ ಗೀತೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಸಮಾವೇಶದಲ್ಲಿ ನಾಡಿನ 288 ಬಸವತತ್ವದ ಮಠಾಧೀಶರು ಪಾಲ್ಗೊಂಡಿದ್ದರು.
ಸಾಣೇಹಳ್ಳಿ ಶಿವಸಂಚಾರದ ನಾಗರಾಜ ತಂಡ, ಶರಣಪ್ಪ ಮೇಡೆಗಾರ ಅವರು ಪ್ರಾರ್ಥನೆ ಹಾಗೂ ಮಧ್ಯದಲ್ಲಿ ವಚನ ಸಂಗೀತಗಳನ್ನು ಹಾಡಿ ಕೊನೆಗೆ ಕಲ್ಯಾಣಗೀತೆಯೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.
ತುಂಬಾ ಒಳ್ಳೆಯ ಮತ್ತು ಸ್ವಾಗತಾರ್ಹ ಬೆಳವಣಿಗೆ. ಮಠಾಧೀಶರುಗಳು ಇನ್ನಾದರೂ ಬಸವಣ್ಣ ಮತ್ತು ಶರಣರ ವಚನಗಳನ್ನು ಗಂಭೀರವಾಗಿ ತೆಗೆದುಕೊಂಡು ಬಸವ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಸರಿಸುವ ಕೆಲಸವನ್ನು ಮಾಡಲಿ ಎಂದು ಆಶಿಸುತ್ತೇನೆ.
ಪರಮ ಪೂಜ್ಯರೆಲ್ಲರಲ್ಲಿ ಶರಣು ಶರಣಾರ್ಥಿಗಳು. ತಮ್ಮ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಲು ಬಯಸುತ್ತೇವೆ . ತಮ್ಮ ಈ ಸಮಾರಂಭ ನಮಗೆ ಬಸವ ತತ್ವದಲ್ಲಿ ಮುನ್ನಡೆಯಲು ಉತ್ಸಾಹವನ್ನು ತುಂಬಿದೆ.ತಮ್ಮೆಲ್ಲರ ಈ ಪ್ರಯತ್ನಕ್ಕೆ ಅನಂತ ಶರಣು ಶರಣಾರ್ಥಿಗಳು
ಇದೊಂದು ಐತಿಹಾಸಿಕ ನಿರ್ಣಯ
ನಾವು ವೈದಿಕರ ದಾಳಿಗೆ ಹೆದರಬೇಕಾಗಿಲ್ಲ ನಮ್ಮ ಆಚರಣೆಗಳನ್ನು ಜಾರಿಗೆ ತಂದರೆ ಸಾಕು ಅವರು ಓಡಿ ಹೋಗುತ್ತಾರೆ
ಓಂ ಶ್ರೀಗುರು ಬಸವಲಿಂಗಾಯ ನಮಃ
ಅಭಿಯಾನದ ಯಶಸ್ಸಿಗೆ ಎಲ್ಲರೂ ಶ್ರಮಿಸೋಣ. ಬಸವ ತತ್ವ ವಿಶ್ವ ತತ್ವವಾಗಲಿ
ಜಯಗುರು ಬಸವೇಶ
ಸ್ವಾಮೀಜಿಗಳು ಬಸವ ತತ್ವ ಪ್ರಚಾರ ಮಾಡಲು ಮುಂದಾಗಿದ್ದು ಹಂಡೆ ಹಾಲು ಕುಡಿದಷ್ಟು ಸಂತೋಷವಾಯಿತು. 🙏🙏
ಓಂ ಶ್ರೀಗುರುಬಸವಲಿಂಗಾಯನಮಃ 🙏🙏