ನ್ಯಾಮತಿ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನದ ಪ್ರಚಾರ ವಾಹನವು ತಾಲ್ಲೂಕಿನಲ್ಲಿ ಸಂಚರಿಸಲು ಚಾಲನೆ ನೀಡಲಾಯಿತು. ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಂಗಾಯತ ಮಹಾಸಭಾದ ಜಿಲ್ಲಾ ಮುಖಂಡರಾದ ಆವರಗೆರೆ ರುದ್ರಮುನಿ ಮಾತನಾಡಿದರು.
‘ಬಸವಣ್ಣನವರು ಕರ್ನಾಟಕ ಮಾತ್ರವಲ್ಲ, ವಿಶ್ವದ ಸಾಂಸ್ಕೃತಿಕ ನಾಯಕ. ಅವರು ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪರಿವರ್ತನೆ ತಂದವರು. ಅಂತಹವರ ವಚನ ಸಂವಿಧಾನದ ಆದರ್ಶಗಳನ್ನು ಎಲ್ಲರ ಮನಕ್ಕೆ ಮುಟ್ಟಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಲಿಂಗಾಯತತರು ಪ್ರಬಲವಾಗಿ ಸಂಘಟಿತರಾಗಬೇಕು ಎಂಬ ಉದ್ದೇಶದಿಂದ ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮವನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ತಾಲ್ಲೂಕಿನ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೆ.15 ರಂದು ದಾವಣಗೆರೆಯಲ್ಲಿ ನಡೆಯುವ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಹಾಸಭಾದ ತಾಲ್ಲೂಕು ಘಟಕ ಅಧ್ಯಕ್ಷ ಮಹೇಶ್ವರಪ್ಪ ತಿಳಿಸಿದರು.
ಕಸಾಪ ಅಧ್ಯಕ್ಷ ಹಾಲಾರಾಧ್ಯ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ. ಶಿವಯೋಗಿ, ನಿಕಟಪೂರ್ವ ಅಧ್ಯಕ್ಷ ಜಿ. ನಿಜಲಿಂಗಪ್ಪ, ಎನ್.ಜೆ. ಶಂಭುಲಿಂಗ, ಕದಳಿ ವೇದಿಕೆ ಅಧ್ಯಕ್ಷೆ ಅಂಬಿಕಮ್ಮ ಬಿದರಕಟ್ಟೆ, ಪ್ರಚಾರ ಸಮಿತಿಯ ವಿ.ಬಿ. ಮಂಜುನಾಥ, ಕಡ್ಲೆಬಾಳು ಪ್ರಕಾಶ, ಕಸಾಪ ಪದಾಧಿಕಾರಿಗಳು, ಲಿಂಗಾಯತ ಮಹಾಸಭಾ ಸದಸ್ಯರು ಉಪಸ್ಥಿತರಿದ್ದರು.