ರಾಯಚೂರು
ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆ ರವಿವಾರ ನಗರದ ಬಸವ ಕೇಂದ್ರದಲ್ಲಿ ನಡೆಯಿತು.
ಸಭೆಯಲ್ಲಿ ಅಭಿಯಾನದ ಗೌರವಾಧ್ಯಕ್ಷ ಸಚಿವ ಎನ್. ಎಸ್. ಬೋಸರಾಜು
ಮಾತನಾಡಿ ಸಾಂಸ್ಕೃತಿಕ ನಾಯಕ ಘೋಷಣೆಗೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಹೇಳಿದರು. ಅಭಿಯಾನದಲ್ಲಿ ಭಾಗವಹಿಸಿ ಸಹಕಾರ ನೀಡುವೆ ಎಂದರು.
ಸರಕಾರ ಘೋಷಣೆ ಮಾಡಿದರೂ ಜಿಲ್ಲೆಯಲ್ಲಿ ಅನೇಕ ಕಚೇರಿಗಳಲ್ಲಿ ಬಸವಣ್ಣನವರ ಪಟ ಹಾಕದಿರುವುದರ ಬಗ್ಗೆ ನಿರೂಪಕ ಚನ್ನಬಸವಣ್ಣ ಮಹಾಜನಶೆಟ್ಟಿ ಮಂತ್ರಿಗಳ ಗಮನ ಸೆಳೆದರು.

ಅಭಿಯಾನದ ಅಧ್ಯಕ್ಷ ಶಾಸಕ ಶಿವರಾಜ ಪಾಟೀಲರು ಅಭಿಯಾನದ ಬಗ್ಗೆ ಮೆಚ್ಚುಗೆ ಸೂಚಿಸಿ ಎಲ್ಲಾ ರೀತಿಯ ಸಹಕಾರ ನೀಡಿ ಅಭಿಯಾನದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಿ. ರುದ್ರಪ್ಪ ಸೃಷ್ಟಿಯ ರಹಸ್ಯ ಬಿಚ್ಚಿಟ್ಟು ಮಹಿಳೆಗೆ ಸ್ವಾತಂತ್ರ್ಯ ಕೊಟ್ಟರು ಶರಣರು, ಆದರೆ ಅದಕ್ಕೆ ವಿಸ್ತಾರ ಸಿಗಲಿಲ್ಲ. ಕಲ್ಯಾಣ ಕ್ರಾಂತಿಯ ನಂತರ ೩೦೦ ವರ್ಷ ವಚನಗಳು ಮರೆಯಾದವು. ವಿಜಯನಗರ ಆಡಳಿತದಲ್ಲಿ ಮತ್ತೆ ಪುನಶ್ಚೇತನಗೊಂಡು ಮತ್ತೆ ಮರೆಯಾದವು. ಈಗ ಬಸವ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿತು.
ಧಾರವಾಡದಲ್ಲಿ ಸುಮಾರು ೩೦೦-೩೫೦ ಜನ ಲಿಂಗಾಯತ ಮಠಾಧೀಶರು ಸಭೆ ಸೇರಿ ಬಸವಣ್ಣನೇ ಧರ್ಮಗುರು, ವಚನಸಾಹಿತ್ಯವೇ ಧರ್ಮಗ್ರಂಥ ಎಂದು ಪ್ರಮಾಣ ಮಾಡಿ ಸ್ವತಃ ತಾವೇ ೬೦ ಲಕ್ಷ ಹಣ ಕೂಡಿಸಿ, ಬಸವನಬಾಗೇವಾಡಿಯಿಂದ ಬೆಂಗಳೂರಿಗೆ ತಿಂಗಳು ಕಾಲ ಬಸವ ಸಂಸ್ಕೃತಿ ಪ್ರಚಾರ ಮಾಡಲು ಪಣತೊಟ್ಟರು ಎಂದು ಹೇಳಿದರು.
ಇಂತಹ ವರ್ಗ, ವರ್ಣ, ಜಾತಿಭೇದ ರಹಿತ ಧರ್ಮಕ್ಕೆ ನಮಗೆ ಸಾಂವಿಧಾನಿಕ ಅಸ್ತಿತ್ವ ಬೇಕಾಗಿದೆ. ಇದಕ್ಕಾಗಿ ಮುಂಬರುವ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ “ಲಿಂಗಾಯತ” ಎಂದು ಜಾತಿ ಕಾಲಂನಲ್ಲಿ ನಿಮ್ಮ ನಿಮ್ಮ ಪಂಗಡ, ಜಾತಿಗಳ ಹೆಸರನ್ನು ಬರೆಸಿ ಧರ್ಮ ಮಾನ್ಯತೆಗೆ ಒಗ್ಗಟ್ಟಾಗಿ ಶ್ರಮಿಸಲು ಕರೆ ನೀಡಿದರು.
ಮಾಜಿ ಎಂಎಲ್ಸಿ ಎನ್. ಶಂಕ್ರಪ್ಪ ಮಾತನಾಡಿ, ಸಮಾಜಕ್ಕೆ ಒಳಿತು ಮಾಡುವ ಬಿತ್ತನೆ ಕಾರ್ಯ ೧೨-ನೇ ಶತಮಾನದಲ್ಲಿ ಬಸವರು ಮಾಡಿದ ಅನುಭವ ಮಂಟಪದಲ್ಲಿ ಹಲವಾರು ಶರಣರು ರಚಿಸಿದ ಸಾಹಿತ್ಯವನ್ನು ಈ ಸಾಂಸ್ಕೃತಿಕ ಲೋಕಕ್ಕೆ ಅರ್ಪಣೆ ಮಾಡಿದ್ದು, ಇದನ್ನು ಸಮಾಜಕ್ಕೆ ತಿಳಿಸುವ ಕಾರ್ಯವಾಗಬೇಕು ಎಂದು ಹೇಳಿದರು. ಬಸವ ತತ್ವವನ್ನು ನಿಜವಾಗಿ ಪಾಲಿಸಿದರೆ ಇಡೀ ಸಮಾಜವನ್ನೇ ನಮ್ಮ ಜೊತೆಗೆ ಕರೆದುಕೊಂಡು ಹೋಗುವಂಥ ಭಾವನಾತ್ಮಕ ವಿಷಯ ಬಿತ್ತರಿಸುವ ಶರಣ ಸಾಹಿತ್ಯ ಓದಿ ಅರ್ಥಮಾಡಿಕೊಂಡರೆ, ಯಾರೂ ಯಾರನ್ನೂ ದ್ವೇಷಿಸುವುದಿಲ್ಲ. ಈ ಕಾರ್ಯಕ್ರಮಕ್ಕೆ ಭಾಗವಹಿಸುವೆ ಮತ್ತು ಇತರ ಜನರಿಗೆ ಭಾಗವಹಿಸಲು ಪ್ರೇರೆಪಿಸುವುದಾಗಿ ತಿಳಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಿ ಅವರು ಮಾತನಾಡುತ್ತಾ, ಶೂದ್ರರಾದ ನಮಗೆ ಲಿಂಗ ಕಟ್ಟಿ ನಮ್ಮನ್ನು ಮನುಷ್ಯರನ್ನಾಗಿ ಮಾಡಿದವರು ಶರಣರು ಎಂದು, ಹೊಲಬುಗೆಟ್ಟ ಶಿಶು ತನ್ನ ತಾಯನರಸುವಂತೆ ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ ಬಯಸುತ್ತಿದ್ದೆನಯ್ಯ ನಿಮ್ಮ ಭಕ್ತರ ಬರವನು ! ಬಯಸುತ್ತಿದ್ದೆನಯ್ಯ ನಿಮ್ಮ ಶರಣರ ಬರವನು ! ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ ಎನಗೆ ನಿಮ್ಮ ಶರಣರ ಬರವು ಕೂಡಲಸಂಗಮದೇವಾ ವಚನ ಹೇಳಿ ಭಾವುಕರಾದರು.
ಅಭಿಯಾನದಲ್ಲಿ ಭಾಗವಹಿಸಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಜಾಲಿಂಮ ಮಹಿಳಾ ಅಧ್ಯಕ್ಷೆ ಡಾ. ಸರ್ವಮಂಗಳಾ ಸಕ್ರಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಕರ್ನಾಟಕದಾದ್ಯಂತ ಹಮ್ಮಿಕೊಂಡ ಯೋಜನೆ. ಬಸವ ಜಯಂತಿ ಗೊಂದಲಗಳು, ಪಿತೂರಿ ಇವುಗಳನ್ನು ಮೀರಿ ನಡೆಯಲು ಮಠಾಧೀಶರ ಒಕ್ಕೂಟ ಟೊಂಕಕಟ್ಟಿ ನಿಂತಿದೆ. ಎಲ್ಲಾ ತಾಲೂಕಿನಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಹೇಳಿದರು.
ಪುರುಷೋತ್ತಮ ಸಾವಿತ್ರಿ, ಬಿ. ಪ್ರಸಾದ, ಅಂಬಾಪತಿ ಪಾಟೀಲ ಮತ್ತು ಜೆ. ಶರಣಪ್ಪಗೌಡ ಅವರುಗಳು ಅಭಿಯಾನಕ್ಕೆ ಮೆಚ್ಚುಗೆ ಸೂಚಿಸಿ ಸಹಕಾರ ನೀಡುವುದಾಗಿ ತಿಳಿಸಿದರು.
ಅಭಿಯಾನದ ಸಂಯೋಜಕ ಹರವಿ ನಾಗನಗೌಡರು ಸರ್ವರ ಸಹಕಾರದೊಂದಿಗೆ ಬಸವ ಸಂಸ್ಕೃತಿ ಅಭಿಯಾನವನ್ನು ಅರ್ಥಪೂರ್ಣ, ಅದ್ಧೂರಿಯಾಗಿ ನೆರವೇರಿಸುವುದಾಗಿ ತಿಳಿಸಿದರು.

ಮಾಜಿ ಎಮ್ಮೆಲ್ಸಿ ಎನ್. ಶಂಕ್ರಪ್ಪ, ಸಂಸ್ಕೃತಿ ಅಭಿಯಾನದ ಜಿಲ್ಲಾ ಸಂಯೋಜಕ ಹರವಿ ನಾಗನಗೌಡರ ಮಾತಂದಿದರು.
ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಪುರುಷೋತ್ತಮ ಸಾವಿತ್ರಿ, ಕಮ್ಮವಾರಿ ಸಂಘದ ಅಧ್ಯಕ್ಷ ಬಿ. ಪ್ರಸಾದ, ತಾರನಾಥ ಶಿಕ್ಷಣ ಸಂಸ್ಥೆಯ ಪ್ರ. ಕಾರ್ಯದರ್ಶಿ ಅಂಬಾಪತಿ ಪಾಟೀಲರು, ಜೆಡಿಎಸ್ ಮುಖಂಡರಾದ ಜೆ. ಶರಣಪ್ಪಗೌಡರು ಸಿರವಾರ, ಗುತ್ತೆದಾರ ಸಿದ್ಧನಗೌಡ ಅಮರಖೇಡ, ಗಿರಿಜಾಶಂಕರ ಸಿರವಾರ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರ ಸಿ.ಬಿ. ಪಾಟೀಲ, ನಾಗೇಶಪ್ಪ, ಮಲ್ಲಿಕಾರ್ಜುನ ಗುಡಿಮನಿ, ಶರಣಬಸವ ಗುಡಿಮನಿ ಸೇರಿದಂತೆ ಲಿಂಗಾಯತ, ಬಸವಪರ ಸಂಘಟನೆಗಳ ಅನೇಕರು ಉಪಸ್ಥಿತರಿದ್ದರು.
ಜೆ. ಬಸವರಾಜ ಸ್ವಾಗತಿಸಿದರು. ಯಂಕಣ್ಣ ಆಶಾಪುರ ಶರಣು ಸಮರ್ಪಣೆ ಮಾಡಿದರು. ಪಾರ್ವತಿ ಪಾಟೀಲ ಹಾಗೂ ಪ್ರತಿಭಾ ಗೋನಾಳ ವಚನ ಹಾಡಿದರು.