ಸಿರವಾರ
ಸ್ಥಳೀಯ ಈಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಂಜೆ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆ ನಡೆಯಿತು.
ಅಭಿಯಾನವು ಸೆಪ್ಟೆಂಬರ್ 5ಕ್ಕೆ ರಾಯಚೂರು ನಗರಕ್ಕೆ ಬರುವ ಕಾರಣ, ಆ ಕಾರ್ಯಕ್ರಮದ ಪೂರ್ವ ತಯಾರಿಯ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಲಾಯಿತು.
ಅಂದು ಮಧ್ಯಾಹ್ನ ನಡೆಯುವ ಬಸವ ಭಾವಚಿತ್ರದೊಂದಿಗೆ ವಚನಗಳ ಮೆರವಣಿಗೆ ಕಾರ್ಯಕ್ರಮಕ್ಕೆ ಬಸವ ಪ್ರೇಮಿಗಳು ಯಾವ ರೀತಿ ಭಾಗವಹಿಸಬೇಕು, ಮತ್ತು ಹಳ್ಳಿ-ಹಳ್ಳಿಗಳಿಗೂ ಹೇಗೆ ಬಸವ ಸಂಸ್ಕೃತಿಯನ್ನು ಪ್ರಚುರ ಪಡಿಸಬೇಕು ಎನ್ನುವ ವಿಚಾರಗಳು ಚರ್ಚೆಗೆ ಬಂದವು.
ಅಭಿಯಾನದ ಉದ್ದೇಶವನ್ನು ಪಿ. ರುದ್ರಪ್ಪ ಅವರು ವಿವರವಾಗಿ ತಿಳಿಸಿದರು. ಪ್ರಶ್ನೆ ಉತ್ತರಗಳ ಸಮಯದಲ್ಲಿ ಮುಂದಿನ ಜನಗಣತಿಯಲ್ಲಿ ಲಿಂಗಾಯತ ಬರೆಸಬೇಕೋ, ವೀರಶೈವ ಲಿಂಗಾಯತ ಬರೆಸಬೇಕೋ ಎನ್ನುವ ಪ್ರಶ್ನೆಗಳು ಕೇಳಿ ಬಂದವು. ಧರ್ಮದ ಅಂಕಣದಲ್ಲಿ ಇತರೆ ಬರೆಸಿ, ಲಿಂಗಾಯತ ಎಂದು ಮಾತ್ರ ಬರೆಸಬೇಕು ಎಂದು ತಿಳಿಸಲಾಯಿತು. ಜಾತಿ ಉಪಜಾತಿ ಅಂಕಣದಲ್ಲಿ ತಮ್ಮ ಉಪಜಾತಿ ಬರೆಸಬಹುದು ಎಂದು ತಿಳಿಸಿ, ಇದರಿಂದ ಮೀಸಲಾತಿಗೆ ಅಡ್ಡಿಯಾಗುವದಿಲ್ಲ ಎನ್ನುವ ವಿಚಾರವನ್ನು ತಿಳಿಸಲಾಯಿತು.

ಕೆಲವು ಜನ ವೀರಶೈವ ಲಿಂಗಾಯತ ಏಕೆ ಬರೆಸಬಾರದು? ಎಂದು ಕೇಳಿದಾಗ ಅದರಿಂದ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಅಡಚಣೆ ಆಗುತ್ತದೆ, ಈಗಾಗಲೇ ಮೂರು ಬಾರಿ ವೀರಶೈವ ಪದ ಸೇರಿಸಿದ್ದ ಕಾರಣ ಕೇಂದ್ರದಿಂದ ನಮ್ಮ ಅರ್ಜಿಗಳು ತೀರಸ್ಕೃತವಾದವು ಎಂದು ವಿವರಣೆ ನೀಡಲಾಯಿತು.
ಇದರ ಬಗ್ಗೆ ಒಂದಷ್ಟು ವಾದಗಳು ಚರ್ಚೆಗಳು ನಡೆದು, ಸರ್ವ ಸಮಸ್ಯೆಗಳಿಗೂ ಪರಿಹಾರ ಸ್ವತಂತ್ರ ಲಿಂಗಾಯತ ಧರ್ಮದ ಅವಶ್ಯಕತೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಯಿತು.
ಅಧ್ಯಕ್ಷತೆಯನ್ನು ಪಟ್ಟಣದ ಉದ್ಯಮಿ ಚುಕ್ಕಿ ಸೂಗಪ್ಪ ವಹಿಸಿದ್ದರು. ಅಭಿಯಾನ ಸಮಿತಿ ಜಿಲ್ಲಾಧ್ಯಕ್ಷರಾದ ಹರವಿ ನಾಗನಗೌಡರು, ವೀರಭದ್ರಯ್ಯ ಸ್ವಾಮೀಜಿ ಜಾಡಲದಿನ್ನಿ, ರಾಯಚೂರು ಬಸವ ಕೇಂದ್ರದ ಕಾರ್ಯದರ್ಶಿ ಚನ್ನಬಸವಣ್ಣ ಮಹಾಜನಶೆಟ್ಟಿ ಉಪಸ್ಥಿತರಿದ್ದರು.
ಎಲ್ಲ ಸಮಾಜಗಳ 200 ಕ್ಕೂ ಹೆಚ್ಚು ಜನ ಮುಖಂಡರು ಭಾಗವಹಿಸಿದ್ದರು.
ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.