ಅಭಿಯಾನ: ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಮಕ್ಕಳು ಸ್ಪರ್ಧಾಳುಗಳು ಭಾಗಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಬಸವ ಸಂಸ್ಕೃತಿ ಅಭಿಯಾನ ಸಮಿತಿಯು ಇಲ್ಲಿಯ ಐಎಂಎ ಹಾಲ್‍ನಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಮುಕ್ತ ವಚನ ಕಂಠಪಾಠ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಿಲ್ಲೆಯ ವಿವಿಧೆಡೆಯ 50 ಸ್ಪರ್ಧಾಳುಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಅನೇಕರು ಪಟಪಟನೆ ಬಸವಾದಿ ಶರಣರ ವಚನಗಳನ್ನು ಹೇಳಿ ಗಮನ ಸೆಳೆದರು.

ವಿದ್ಯಾವತಿ ಬಲ್ಲೂರ, ಡಾ. ರಘುಶಂಖ ಭಾತಂಬ್ರಾ, ಡಾ. ರಾಜಕುಮಾರ ಹೊಸದೊಡ್ಡೆ, ಸಂಗಮೇಶ ಜ್ಯಾಂತೆ, ಸುರೇಶ ಸ್ವಾಮಿ, ಅರವಿಂದ ಧುಮ್ಮನಸೂರೆ ಹಾಗೂ ರಾಜು ಕಮಠಾಣೆ ತೀರ್ಪುಗಾರರಾಗಿದ್ದರು.

ವಚನಗಳನ್ನು ಓದಿದ ಮಕ್ಕಳು ದಾರಿ ತಪ್ಪುವುದಿಲ್ಲ ಸತ್ಪ್ರಜೆಗಳಾಗುತ್ತಾರೆ ಎಂದು ಸ್ಪರ್ಧೆಯನ್ನು ಉದ್ಘಾಟಿಸಿದ ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಜೈರಾಜ ಖಂಡ್ರೆ ಹೇಳಿದರು. ಪಾಲಕರು ಮಕ್ಕಳಲ್ಲಿ ವಚನ ಓದುವ ಆಸಕ್ತಿ ಬೆಳೆಸಬೇಕು ಎಂದು ಸಲಹೆ ಮಾಡಿದರು.

ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಆವರಣದಲ್ಲಿ ಸೆ. 3 ರಂದು ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಪ್ರಧಾನ ಕಾರ್ಯಕ್ರಮದಲ್ಲಿ ಸ್ಪರ್ಧೆಯ ವಿಜೇತರ ಹೆಸರು ಪ್ರಕಟಿಸಲಾಗುವುದು. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ ಕ್ರಮವಾಗಿ ರೂ. 10 ಸಾವಿರ, ರೂ. 6 ಸಾವಿರ ಹಾಗೂ ರೂ. 4 ಸಾವಿರ ನಗದು ಬಹುಮಾನ ವಿತರಿಸಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಬೀದರ್ ಬಸವ ಸಂಸ್ಕೃತಿ ಅಭಿಯಾನ ಸಮಿತಿಯ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದರು.

ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಯೋಗೇಶ ಶ್ರೀಗಿರಿ, ರಾಜೇಂದ್ರಕುಮಾರ ಗಂದಗೆ, ಅರವಿಂದ ಕಾರಬಾರಿ ಮತ್ತಿತರರು ಇದ್ದರು.

ಬಾಬುರಾವ್ ದಾನಿ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಲಕ್ಷ್ಮಿ ಜಿ. ಬಿರಾದಾರ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Leave a comment

Leave a Reply

Your email address will not be published. Required fields are marked *