ಬಸವಣ್ಣ ಮಾಡಿದ ಕ್ರಾಂತಿ ಯಾರೂ ಮಾಡಲಿಲ್ಲ. ಅದಕ್ಕೆ ಇಂದೂ ಕೂಡ ಸಂಪ್ರದಾಯವಾದಿಗಳಿಗೆ ಅವರು ಹಿಡಿಸೋದಿಲ್ಲ. ಯಾಕಂದ್ರೆ ಬಸವಣ್ಣ ಬೆಳೆದರೆ ಅವರ ಅಂಗಡಿಗಳು ಬಂದ್ ಆಗಿಬಿಡ್ತವೆ.
ಅದಕ್ಕೆ ನಾವು ಬಸವಣ್ಣನವರ ಸಂದೇಶ ಮನೆ ಮನೆಗಳಿಗೆ ಮುಟ್ಟಿಸಬೇಕು.

ಈ ಮಾತನ್ನು ಹೇಳುವ ಮಾನ್ವಿಯ ಪ್ರಸಿದ್ಧ ಕಲಾವಿದ, ವಾಜಿದ್ ಖಾದ್ರಿ, 65, ಅಪ್ಪಟ್ಟ ಬಸವ ಭಕ್ತರು.
ತಮ್ಮ ದೀರ್ಘ ವೃತ್ತಿ ಜೀವನದುದ್ದಕ್ಕೂ ಬಸವಣ್ಣ, ಸಿದ್ದರಾಮ, ಅಂಬಿಗರ ಚೌಡಯ್ಯ, ಮೇದರ ಕೇತಯ್ಯ ಮುಂತಾದ ಹಲವಾರು ಶರಣರ ಚಿತ್ರಗಳನ್ನು ಬಿಡಿಸಿಕೊಂಡು ಬಂದಿದ್ದಾರೆ. ಬಸವಣ್ಣನವರ ಐವತ್ತಕ್ಕೂ ಹೆಚ್ಚಿನ ಚಿತ್ರಗಳನ್ನು ಬಿಡಿಸಿದ್ದೇನೆ, ಎನ್ನುತ್ತಾರೆ.
ಬಸವಣ್ಣ ಎಲ್ಲರಿಗೂ ಮುಖ್ಯವಾಗಿ ಕೆಳ ವರ್ಗದವರಿಗೆ ಸರಳ ದಾರಿ ತೋಷಿಸಿದರು. ಲಿಂಗಾಯತ ಧರ್ಮದಲ್ಲಿ ವೇಷಗಳಿಗೆ, ತೀರ್ಥಯಾತ್ರೆಗಳಿಗೆ, ಖರ್ಚು ಮಾಡಿಸುವ ಆಚರಣೆಗಳಿಗೆ ಪ್ರಾಮುಖ್ಯತೆಯಿಲ್ಲ. ಒಂದು ಲಿಂಗ ಹಿಡಿದು ಯಾರು ಬೇಕಾದರೂ ಪೂಜೆ ಮಾಡಬಹುದು. ಲಿಂಗ ಪೂಜೆಗಿಂತ ಕಾಯಕ ಮುಖ್ಯ.
ಬಸವ ಧರ್ಮದಲ್ಲಿ ಎಲ್ಲರನ್ನು ಇವ ನಮ್ಮ ಎಂದು ಒಪ್ಪಿಕೊಳ್ಳುವ ಮುಕ್ತ ಮನಸ್ಸಿದೆ, ಎನ್ನುತ್ತಾರೆ.
ವಾಜಿದ್ ಅವರಿಗೆ ಬಸವಣ್ಣ ಪರಿಚಯವಾಗಿದ್ದು 5 ತರಗತಿಯ ಪಠ್ಯಪುಸ್ತಕದಲ್ಲಿ ಇದ್ದ ಕಳಬೇಡ, ಕೊಲಬೇಡ, ಹುಸಿಯ ನುಡಿಯಲಿ ಬೇಡ ವಚನದಿಂದ. “ಈವಾಗಲೂ ಪ್ರತಿ ದಿನ 10 ವಚನ ಓದುತ್ತೇನೆ. ಅರ್ಥವಾಗದಿದ್ದರೆ ಬೇರೆಯವರನ್ನು ಕೇಳುತ್ತೇನೆ,” ಎನ್ನುತ್ತಾರೆ.

35 ವರ್ಷಗಳಿಂದ ವಾಜಿದ್ ಮಾನ್ವಿಯ ಬಸವ ಕೇಂದ್ರದಲ್ಲಿ ಸಕ್ರಿಯವಾಗಿದ್ದಾರೆ.
12 ವರ್ಷದ ಹಿಂದೆ ಮಾನ್ವಿಯ ಮಸೀದಿಯಲ್ಲಿ ‘ಮನೆಯಲ್ಲಿ ಮಹಾ ಮನೆ’ ಕಾರ್ಯಕ್ರಮ ಏರ್ಪಡಿಸಿ ಬೇರೆ ಬೇರೆ ಸಮುದಾಯಗಳ ಸುಮಾರು 150 ಜನರನ್ನು ಕರೆದಿದ್ದರು. “ಮಸೀದಿಯಲ್ಲಿ ನಮಾಜು ಓದಿಸುವ ಅಜ್ಜಾವರು ಕೂಡ ಬಂದು ಬಸವಣ್ಣ ಸಮಾನತೆಯ ಹರಿಕಾರರು ಅಂತ ಭಾಷಣ ಮಾಡಿದ್ದರು,” ಎಂದು ನೆನಪು ಮಾಡಿಕೊಳ್ಳುತ್ತಾರೆ.
ಕೆಲವರಿಂದ ವಿರೋಧ ಬಂತು ಆದರೆ ಮಸೀದಿಗಳಲ್ಲಿ ದೇವಸ್ಥಾನಗಳಲ್ಲಿ ಮನಸ್ಸುಗಳನ್ನು ಕೂಡಿಸುವ ಕೆಲಸ ಆಗಬೇಕು ಎನ್ನುತ್ತಾರೆ.

ಕಲೆಯನ್ನೇ ವೃತ್ತಿಯಾಗಿಸಿಕೊಂಡಿರುವ ವಾಜಿದ್ ಸಮಾಜಕ್ಕಾಗಿ ಬದುಕಿದವರನ್ನು ಚಿತ್ರಿಸಲು ಇಷ್ಟಪಡುತ್ತಾರೆ. ಮದರ್ ತೆರೇಸಾ ಅವರ ಚಿತ್ರಗಳನ್ನೂ ಸಾಕಷ್ಟು ಬಿಡಿಸಿದ್ದಾರೆ. ಚಿತ್ರಗಳಿಗೆ ವಾಜಿದ್-ಸಜಿದ್ ಎಂದು ಸಹಿ ಮಾಡುವ ಇವರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ.
ಯಾವುದೇ ಚಿತ್ರ ಕಲೆಯ ಶಾಲೆಯಲ್ಲಿ ತರಬೇತಿ ಪಡೆಯದೇ ಸ್ವಂತ ಪ್ರತಿಭೆ, ಅನುಭವದಿಂದ ಮೇಲೆ ಬಂದಿದ್ದಾರೆ.

ನನ್ನ ವೃತ್ತಿ ಜೀವನ ಶುರುವಾಗಿದ್ದು ರಸ್ತೆಯ ಮೈಲುಗಲ್ಲುಗಳ ಮೇಲೆ ನಂಬರ್ ಬರೆಯುವದರಿಂದ. ನಂತರ ಅಂಗಡಿಗಳ ಬೋರ್ಡ್ ಬರೆಯುತ್ತಿದ್ದೆ. ಬೋರ್ಡಿನ ಹೆಸರಿಗೆ ತಕ್ಕಂತೆ ಚಿತ್ರ ಬಿಡಿಸುತ್ತಿದ್ದೆ. ವೆಂಕಟೇಶ್ವರ ಹೆಸರಿದ್ದರೆ ತಿರುಪತಿ ತಿಮ್ಮಪ್ಪ ಚಿತ್ರ ಬಿಡಿಸುತ್ತಿದ್ದೆ. ನಾನ್ ವೆಜ್ ಹೋಟೆಲ್ ಆಗಿದ್ದರೆ ಕೋಳಿ ಚಿತ್ರ ಬಿಡಿಸುತ್ತಿದ್ದೆ. ಇದರಿಂದ ಸಾಕಷ್ಟು ಹೆಸರು ಬಂತು, ಎನ್ನುತ್ತಾರೆ.
ನಂತರ ಹೈದರಾಬಾದಿಗೆ ಹೋಗಿ ಅಲ್ಲಿ NTR ಸ್ಟುಡಿಯೋದಲ್ಲಿ ಕೆಲಸ ಕಲಿತು, ಬಹಳ ವರ್ಷ ಸಿನಿಮಾ ರಂಗದಲ್ಲಿ ಕೆಲಸ ಮಾಡಿದರು. ಅನೇಕ ವಿಷ್ಣುವರ್ಧನ್ ಚಿತ್ರಗಳ ಪೋಸ್ಟರ್ ಮಾಡಿದ್ದೇನೆ ಅಂದರು.
ವಾಜಿದ್ ಅವರಿಗೆ ನೂರು ಶರಣರ ವ್ಯಕ್ತಿತ್ವ, ಸಂದೇಶಗಳನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸುವ ಆಸೆಯಿದೆ. ಈ ಕೆಲಸಕ್ಕಾಗುವ ಕನಿಷ್ಠ ಖರ್ಚನ್ನು ನಿಭಾಯಿಸಲು ಯಾರಾದರೂ ಮುಂದೆ ಬರುತ್ತಾರಾ ಎಂದು ಕಾಯುತ್ತಿದ್ದಾರೆ.





ಕಾಯಕ, ತನುಮನದಿಂದ ಬಸವಣ್ಣನವರನ್ನು ಅಪ್ಪಿಕೊಂಡವರು ಜಾತಿಯಿಂದ ಲಿಂಗಾಯತ ಎನಿಸಿಕೊಂಡವರಲ್ಲೇ ಅತಿ ವಿರಳ. ಅಂತಹುದರಲ್ಲಿ ವಜೀದ್ ಶರಣರ ಕಲಾಸೇವೆ ಬಸವಣ್ಣ, ವಚನಗಳ ಬಗೆಗೆ ಇರುವ ಅವರ ಪ್ರೀತಿಗೆ ಶರಣು ಶರಣಾಥಿ೯ಗಳು 🙏🙏 ಅರುಣ್ ಸರ್ ತಮ್ಮ ಬಸವ ಮೀಡಿಯ ಎತ್ತರಕ್ಕೆ ಬೆಳೆದು ತಮ್ಮ ಕನಸು ಸಾಕಾರಗೊಳ್ಳಲಿ. ಶರಣು ಶರಣಾಥಿ೯ಗಳು 🙏🙏
ಧನ್ಯವಾದಗಳು ಅಕ್ಕಾವರೆ
ನಮ್ಮೆಲ್ಲರ ಬಸವ ಮೀಡಿಯಾ
ಹಿರಿಯ ಕಲಾವಿದ ವಾಜೀದ್ ಅವರು ಸಹಬಾಳ್ವೆಯ ಬದುಕಿಗೆ ಉತ್ತಮ ನಿದರ್ಶನ.ಕೋಮು ಸಂಘರ್ಷದಂಥ ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿರುವ ನಮ್ಮ ಸಮಾಜಕ್ಕೆ ಬಸವಣ್ಣನವರ ವಚನಗಳಲ್ಲಿ ಪರಿಹಾರವಿದೆ.ಈ ಕಾರಣದಿಂದಲೇ ನಾವೆಲ್ಲರೂ ವಚನಗಳ ಅಧ್ಯಯನ ಮಾಡುವ ಹಾಗೂ ನಿತ್ಯ ಬದುಕಿನಲ್ಲಿ ವಚನಗಳ ಸಾರವನ್ನು ಅಳವಡಿಸಿಕೊಳ್ಳುವ ಅಗತ್ಯತೆ ಇಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.ಈ ನಿಟ್ಟಿನಲ್ಲಿ ಸಾಮುದಾಯಿಕ ಪ್ರಯತ್ನಗಳಾಗುವುದು ಹೆಚ್ಚು ಉಚಿತವೆನಿಸಿದೆ.
ಬಸವ ಮೀಡಿಯಾ ಬಳಗಕ್ಕೆ ಧನ್ಯವಾದಗಳು.
ವಾಜಿದ್ ಖಾದ್ರಿ ಯವರಿಗೆ ಮತ್ತು ವಿಷಯ ತಿಳಿಸಿದ ಬಸವ ಮೀಡಿಯಾಕ್ಕೂ ಹೃತ್ಪೂರ್ವಕ ಧನ್ಯವಾದಗಳು